e-ಸುದ್ದಿ, ಮಸ್ಕಿ
ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಗೆಲವು ಶತಸಿದ್ಧ. ಪ್ರತಿ ಗ್ರಾಮದಲ್ಲಿ ಬಿಜೆಪಿ ಪರ ಜಯಘೋಷ ಕೇಳಿ ಬುರುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಪರ ಮತಯಾಚನೆ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಮುಖಂಡರಿಗೆ ಎಲುಬಿಲ್ಲದ ನಾಲಿಗೆ ಇದೆ ಎಂದು ಏನು ಬೇಕಾದರು ಮಾತಾಡುತ್ತಾರೆ. ಕುಣಿಯಲು ಬಾರದವರು ನೆಲ ಡೊಂಕು ಎಂದರಂತೆ ಕಾಂಗ್ರೆಸ್‍ನವರಿಗೆ ಸರ್ಕಾರ ನಡೆಸಲು ಯೊಗ್ಯತೆ ಇರಲಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಜನ ಶಾಸಕರು ರಾಜಿನಾಮೆ ನೀಡಿ 15 ಜನ ಗೆದ್ದು ಬಂದಿದ್ದಾರೆ. ಹೀಗಾಗಿ ಮಸ್ಕಿಯಲ್ಲಿ ಕೂಡ ಪ್ರತಾಪಗೌಡ ಪಾಟೀಲ ಗೆಲ್ಲುತ್ತಾರೆ. ಬಿಜೆಪಿ ಅನುಕಂಪದ ಮೇಲೆ ಚುನಾವಣೆ ನಡೆಸುತ್ತಿಲ್ಲ. ಅಭಿವೃದ್ಧಿ, ಸಾಧನೆ ಆಧಾರದ ಮೇಲೆ ನಾವು ಮತ ಕೇಳುತ್ತಿದ್ದೇವೆ ಎಂದರು.
ಪ್ರಧಾನಿ ಮೋದಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಧನೆಗಾಗಿ ಮತ ನೀಡಿ ಅಂತ ಪ್ರಚಾರ ಶುರು ಮಾಡಿದ್ದೇವೆ. ಉಪ ಚುನಾವಣೆಯಲ್ಲಿ ಯಾವುದೇ ಪ್ರಕರಣಗಳು ಪರಿಣಾಮ ಬೀರಲ್ಲ. ನೀರಾವರಿ ಯೋಜನೆಗಳು ಅಭಿವೃದ್ಧಿ ಕೆಲಸಗಳಿಗಾಗಿ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಮಸ್ಕಿ ಕ್ಷೇತ್ರಕ್ಕೆ ಯಾವುದೇ ಲಾಭವಿಲ್ಲ. ವಿರೋಧ ಪಕ್ಷದಲ್ಲಿ ಒಬ್ಬ ಶಾಸಕರಾಗಿ ಕುಳಿತುಕೊಳ್ಳುತ್ತಾರೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.