ಗವಿಸಿದ್ದಪ್ಪ ಕೊಪ್ಪಳ
” ಛಲಬೇಕು ಶರಣಂಗೆ ” ಎಂಬ ವಾಕ್ಯ ಇಂದಿನ ದಿನಗಳಲ್ಲಿ ಗವಿಸಿದ್ದಪ್ಪನವರಿಗೆ ಸಂಪೂರ್ಣ ಅನ್ವಯವಾಗುತ್ತದೆ ಛಲ ಬಿಡದ ತ್ರಿವಿಕ್ರಮ ಗವಿಸಿದ್ದಪ್ಪನವರು ವಹಿಸಿದ ಯಾವುದೇ ಕೆಲಸವಾಗಲಿ ಭಾವಿಸಿದ ಯಾವುದೇ ಕಾಯಕವಾಗಲಿ ಅದನ್ನು ಅನುಷ್ಠಾನಕ್ಕೆ ತರದೇ ನಿರ್ಗಮಿಸುವ ಮಾತೇ ಇಲ್ಲ ಅಂದುಕೊಂಡಿದ್ದನ್ನು ಸಾಧಿಸದೇ ವಿರಮಿಸುವ ವ್ಯಕ್ತಿತ್ವವೇ ಅಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ನಮ್ಮ ಹೆಮ್ಮೆಯ ” ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ”
ನಾಡಿನ ಬಹುತೇಕ ಸಮುದಾಯಗಳು ಸಂಘಟನೆಯ ದಿಕ್ಕಿನೆಡೆಗೆ ಸಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಗವಿಸಿದ್ದಪ್ಪನವರು ಐತಿಹಾಸಿಕ ಹಿನ್ನೆಲೆ ಸಾಮಾಜಿಕ ನೆಲೆ ಎರಡನ್ನೂ ಒಳಗೊಂಡ ನಮ್ಮ ಹೆಮ್ಮೆಯ ಸಮಾಜವೇಕೆ ಸಂಘಟಿತವಾಗಬಾರದು ಎಂದು ಅಂದುಕೊಂಡಿದ್ದೇ ತಡ
ಸದಾ ಸ್ಮರಣೀಯ ಶರಣ ಶ್ರೀ ಮಲ್ಲಣ್ಣ ಅಗಡಿ ಅವರನ್ನು ಕರೆದುಕೊಂಡು ಎಲ್ಲ ಜಿಲ್ಲೆಯ ಹಿರಿಯ ಮುಖಂಡರನ್ನು ಭೇಟಿಯಾಗಿ ಚರ್ಚಿಸಿ ಸಂಘವನ್ನು ಅಸ್ತಿತ್ವಕ್ಕೆ ತಂದೇ ಬಿಟ್ಟರು ತನ್ಮೂಲಕ ನಮ್ಮ ಸಮಾಜದ ಯುವಕರಿಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಸಮಾಜದ ಇತಿಹಾಸ ತಿಳಿಸುವ ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ದುಡಿದರು
” ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರ ನಾನಲ್ಲ ” ಎಂಬ ಮಾತಿಗೆ ಸಾಕ್ಷಿ ಪ್ರಜ್ಞೆ ಗವಿಸಿದ್ದಪ್ಪನವರು ಎಂದಿಗೂ ಯಾರಿಗೂ ಅಂಜದೇ ಅಳುಕದೇ ಸಮಾಜ ನನ್ನ ತಾಯಿ ನಾನವಳ ಮಗು ಅವಳ ಋಣ ತೀರಿಸುವುದಷ್ಟೇ ನನ್ನ ಕೆಲಸವೆಂದು ಭಾವಿಸಿ ಯಾರ ಕೊಂಕು ಮಾತಿಗೂ ಕಿವಗೊಡದೇ ಗಾಢ ನಿದ್ದೆಯಿಂದ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಿದರು ತುಂಬು ಕುಟುಂಬದ ನಿರ್ವಹಣೆ ಜೊತೆಗೆ ಪ್ರೌಢಶಾಲೆ ಶಿಕ್ಷಕ ವೃತ್ತಿ ಜೊತೆ ಜೊತೆಗೆ ಸಮಾಜದ ಸಂಘಟನೆ ವಿಶ್ರಾಂತಿಯೆಡೆಗೆ ಗಮನವಿಲ್ಲದಂತೆ ಯಾವ ರಂಗಕ್ಕೂ ಚ್ಯುತಿ ಬಾರದಂತೆ ದಣಿವರಿಯದೇ ದುಡಿದರು ಮೃದು ಸ್ವಭಾವದ ಹಿತ ಮಿತದ ಮಾತುಗಳಿಂದ ಸದಾ ನಿರ್ಲಿಪ್ತತೆಯಿಂದಿದ್ದ ಶರಣ ಶ್ರೀ ಮಲ್ಲಣ್ಣ ಅಗಡಿಯವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿ ತಾವು ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಆಗಿ ಜೋಡೆತ್ತಿನಂತೆ ದುಡಿದರು ನನ್ನಂತ ಅನೇಕರನ್ನು ಸಮಾಜ ಕಟ್ಟುವ ಕೆಲಸಕ್ಕೆ ತಂದವರು ಗವಿಸಿದ್ದಪ್ಪನವರು ಎಂದರೆ ಅತಿಶಯೋಕ್ತಿಯಾಗಲಾರದು ಮುಖಸ್ತುತಿಯಾಗಲಾರದು
ಎದುರಿನವ ಎಷ್ಟೇ ಬಲಾಢ್ಯನಿರಲಿ ರಾಜಕಾರಣಿ ಸ್ವಾಮಿ ಸಮಾಜಸೇವಕ ಅಧಿಕಾರಿ ಯಾರೇ ಇರಲಿ ತಮಗನಿಸಿದ್ದನ್ನು ನೇರವಾಗಿ ಸ್ಪಷ್ಟವಾಗಿ ಹೇಳುವ ಎದೆಗಾರಿಕೆ ಗವಿಸಿದ್ದಪ್ಪನವರಿಗೆ ನನ್ನೊಳಗಿನ ಅನೇಕ ಲೋಪಗಳನ್ನು ತಿದ್ದಿದ ಹಿರಿಯರೇ ಗವಿಸಿದ್ದಪ್ಪನವರು ಎಂಬುದನ್ನು ನಾನು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ ಸಿದ್ಧಗಂಗಾ ಶ್ರೀಗಳ ಒಂದು ಮಾತು ಗವಿಸಿದ್ದಪ್ಪನವರಿಗೆ ಅನ್ವಯ ” ಯಾವ ವ್ಯಕ್ತಿ ಪ್ರಾಮಾಣಿಕನಾಗಿರುತ್ತಾನೆ ಆತ ತನ್ನೆದುರು ನಡೆಯುವ ಅನ್ಯಾಯಗಳನ್ನು ಖಂಡಿಸಲು ಸಮರ್ಥನಾಗಿರುತ್ತಾನೆ ” ಗವಿಸಿದ್ದಪ್ಪನವರು ಪ್ರಾಮಾಣಿಕರೂ ಹೌದು ಅನ್ಯಾಯ ಖಂಡಿಸುವ ಸಾಮರ್ಥ್ಯವುಳ್ಳವರೂ ಹೌದು
ಬಸವತತ್ವದಲ್ಲಿ ಕೆಲವೊಬ್ಬ ಮಠಾಧೀಶರನ್ನೂ ಮೀರಿಸುವ ನಂಬಿಕೆ ಮತ್ತು ನಿಷ್ಠೆ ಗವಿಸಿದ್ದಪ್ಪನವರದ್ದು ಲಿಂಗಾಯತ ಧರ್ಮದ ಹೋರಾಟದಲ್ಲೂ ಮುಂಚೂಣಿ ಬಹುತೇಕ ಮಠಾಧೀಶರೊಂದಿಗೆ ಒಡನಾಟ ಆತ್ಮೀಯತೆಯ ಆನಂದಾನುಭೂತಿ ನನ್ನನ್ನು ಕಂಡರೆ ಪ್ರೀತಿ ಜೊತೆಗೆ ಗೌರವ ನನಗೂ ಅಷ್ಟೇ ಅವರೆಂದರೆ ತಂದೆಯಂತೆ ಬುದ್ಧಿ ಹೇಳುವ ಸ್ನೇಹಿತನಂತೆ ಕೈ ಹಿಡಿದು ಜೊತೆ ನಡೆಯುವ ತಾಯಿಯಂತೆ ಮಮತೆ ತೋರುವ ಸಿಟ್ಟಾದಾಗ ವಿಧ್ಯಾರ್ಥಿಗಳಿಗೆ ಬೆದರಿಸಿ ಭೋದಿಸುವ ಗುರುವಿದ್ದಂತೆ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಜೀವಂತವಿರುವವರೆಗೂ ಗವಿಸಿದ್ದಪ್ಪನವರ ಹೆಸರು ಅಜರಾಮರ
ಇಂದು ಅವರ ಜನ್ಮದಿನ ಸಮಾಜ ಸಂಘಟನೆಯಲ್ಲಿ ಬಸವತತ್ವ ನಿಷ್ಠೆಯಲ್ಲಿ ಗಟ್ಟಿತನ ಹೊಂದಿರುವ ಅವರಿಗೆ ಕರ್ನಾಟಕ ರಾಜ್ಯದ ಅಖಂಡ ಬಣಜಿಗ ಸಮಾಜದ ವತಿಯಿಂದ ಹಾಗೂ ನಮ್ಮ ಶ್ರೀಮಠದ ಪರವಾಗಿ ಜನ್ಮದಿನದ ಶುಭಾಶಯಗಳು ನಗು ನಗುತಾ ನೂರ್ಕಾಲ ಬಾಳಿ ಶ್ರೀ ಸಿದ್ಧಲಿಂಗೇಶ್ವರನ ಕರುಣೆ ಸದಾ ಕಾಲ ನಿಮಗಿರಲಿ ನಿಮ್ಮೆಲ್ಲ ಕನಸುಗಳು ನನಸಾಗಲಿ ನಿಮ್ಮಿಂದ ಸಮಾಜ ಕಟ್ಟುವ ಪ್ರೇರಣೆ ನನ್ನಂತ ಸಾವಿರಾರು ಯುವ ಸ್ನೇಹಿತರಿಗೆ ದೊರೆಯಲಿ ಎಂದು ಬಸವಾದಿ ಶರಣರಲ್ಲಿ ಅನಾದಿ ನಿರಂಜನ ಜಗದ್ಗುರು ಶ್ರೀ ತೋಂಟದ ಸಿದ್ಧಲಿಂಗ ಮಹಾಯತಿಯಲ್ಲಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತೇನೆ
–ಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಶ್ರೀ ತೋಂಟದಾರ್ಯ ಸಂಸ್ಥಾನಮಠ ಬಸವಾಪಟ್ಟಣ ಅರಕಲಗೂಡು ತಾಲ್ಲೂಕು ಹಾಸನ ಜಿಲ್ಲೆ