e-ಸುದ್ದಿ, ಮಸ್ಕಿ
ದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಆಡಳಿತ ಮಾಡಿದ ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡು ಅವರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಮತ್ತು ರಾಜ್ಯದಲ್ಲಿ ದಲಿತರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಡಾ.ಬಾಬು ಜಗಜೀವನ್‍ರಾಮ್ ಅವರ 114ನೇ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ನೀಡಿದ್ದರು. ಅದನ್ನು ಡಾ.ಬಾಬು ಜಗಜೀವನ್‍ರಾಮ ಅನುಷ್ಠಾನಕ್ಕೆ ತಂದ ಕೀರ್ತೀಗೆ ಪಾತ್ರರಾದರು ಎಂದು ನೆನಪಿಸಿಕೊಂಡರು.
ಇಡೀ ವಿಶ್ವವೇ ಮೆಚ್ಚಿದ ಬಹುದೊಡ್ಡ ಜ್ಞಾನಿ ಡಾ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ಗೌರವಿಸಲಿಲ್ಲ. ಅವರು ನಿಧನರಾದಗ ದೆಹಲಿಯಲ್ಲಿ ಸಂಸ್ಕಾರ ಮಾಡಲು ಇಂದಿರಾಗಾಂಧಿ ಮತ್ತು ನೆಹರು ದೆಹಲಿ ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ವರ್ತಿಸಿ ಜಾಗ ಕೊಡದೆ ಅವಮಾನಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಕಾರಜೋಳ ಕಾಂಗ್ರೆಸ್‍ನ ದ್ವೀಮುಖ ನೀತಿಯನ್ನು ಖಂಡಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ದೀವಾಳಿಯಾಗಲು ದಲಿತರು ಕಾರಣಾರಾಗಿದ್ದಾರೆ. ದಲಿತರು ಇತ್ತೀಚಿಗೆ ವಿದ್ಯಾವಂತರಾಗಿ ರಾಜ್ಯದ ದೇಶದ ಆಗುಹೋಗುಗಳನ್ನು ಗಮನಿಸುವ ಬುದ್ದಿವಂತರಾಗಿದ್ದಾರೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದೆಹಲಿಯ ತಮ್ಮ ಕಾಂಗ್ರೆಸ್ ಮುಖಂಡರ ಮುಂದೆ ಒಪ್ಪಿಕೊಂಡಿರುವುದೇ ಸಾಕ್ಷಿ ಎಂದರು.
ಆಂದ್ರಪ್ರದೇಶದಲ್ಲಿ ಎನ್.ಟಿ.ಆರ್ ಸರ್ಕಾರ ಬಡ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆ ತೆರೆದಿತ್ತು. ಆಗ ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ. ಕರ್ನಾಟಕದಲ್ಲಿ ವಸತಿ ಶಾಲೆ ಆರಂಭಕ್ಕಾಗಿ ಆಂದ್ರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅರಿತು ಅಧ್ಯಯನ ವರದಿ ಆಧಾರದ ಮೇಲೆ ಕರ್ನಾಟಕದಲ್ಲಿ ವಸತಿ ಶಾಲೆಗಳು ಆರಂಭವಾಗಿವೆ.
ಇಂದು 826 ವಸತಿ ಶಾಲೆಗಳು ಆರಂಭವಾಗಿವೆ. ಅದರಲ್ಲಿ 1 ಲಕ್ಷ 71 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, 2 ಸಾವಿರಕ್ಕೂ ಅಧಿಕ ವಿವಿಧ ವಸತಿ ನಿಲಯಗಳಲ್ಲಿ 4 ಲಕ್ಷ ವಿದ್ಯಾರ್ಥಿಗಳು ಜ್ಞಾನ ಪಡೆಯುತ್ತಿದ್ದಾರೆ. ರಾಜ್ಯದ ಪ್ರತಿಷ್ಥಿತ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.
ನಿರ್ನಾಮವಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡದೆ ಬಿಜೆಪಿಯನ್ನು ಬೆಂಬಲಿಸಿ ರಾಷ್ಟ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಲು ಪ್ರತಾಪಗೌಡ ಪಾಟೀಲ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಎಂಎಲ್ಸಿ ಎನ್.ರವಿಕುಮಾರ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮನಾಂದ ಯಾದವ್, ಜಿ.ಪಂ.ಸದಸ್ಯ ದುರುಗಪ್ಪ ಗುಡಗಲದಿನ್ನಿ, ಮಾಜಿ ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಇದ್ದರು