ಮಸ್ಕಿ : ಪ್ರಧಾನಿ ಮೋದಿ ಕಳೆದ ಚುನಾವಣೆಯಲ್ಲಿ ಸಿದ್ಧರಾಮಯ್ಯ ಸರ್ಕಾರವನ್ನು ೧೦℅ ಪರ್ಸಂಟ್ ಸರ್ಕಾರ ಎಂದು ಪ್ರಚಾರ ಮಾಡಿದ್ದರು. ಈಗ ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ, ಅಧಿಕಾರಿಗಳಿಂದ 30% ಪರ್ಸಂಟ್ ಹೊಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅರೋಪಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಗೆ ಕೈಕೊಟ್ಟು ಹೋದ ಪ್ರತಾಪಗೌಡ ಪಾಟೀಲ್ ಅವರನ್ನು ಸೋಲಿಸುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದರು.
ಕೆಪಿಸಿಸಿ ಮತ್ತೊಬ್ಬ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ ನಮ್ಮ ಪಕ್ಷದ ಮುಖಂಡರಿಗೆ ದುಂಬಾಲು ಬಿದ್ದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದ ಪ್ರತಾಪಗೌಡ ಪಾಟೀಲ ದುರಾಸೆಗೆ ಬಿದ್ದು ಬಿಜೆಪಿಗೆ ಹೋಗಿದ್ದಾರೆ. ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ಶಾಸಕ ಎನ್.ಎಸ್.ಬೋಸರಾಜ್ ಮಾತನಾಡಿ ರಾಜಕೀಯದಲ್ಲಿ ಕೆಲವರು ವ್ಯಾಪಾರ ದೃಷ್ಟಿಯಿಂದ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾರೆ, ಅವರಿಗೆ ಪಕ್ಷ ನಿಷ್ಟೆ ಇಲ್ಲಾ ಎನ್ನುವ ಮೂಲಕ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಕುಟುಕಿದರು.
ಸ್ವಾರ್ಥಕ್ಕಾಗಿ, ಪಕ್ಷದ ಕಾರ್ಯಕರ್ತರಿಗೆ ಹೇಳದೆ, ಕೇಳದೆ ಕಾಂಗ್ರೆಸ್ ಗೆ ವಿಸ್ವಾಸ ದ್ರೋಹ ಮಾಡಿ ಅಫರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ ಎಂದು ವಾಗ್ದಾಳಿ ನೆಡೆಸಿದರು.
ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ ಪಕ್ಷಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ, ಪ್ರತಾಪಗೌಡ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಕ್ತಿ ತೋರಿಸಬೇಕು ಎಂದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸುಳ್ಳು ಸುದ್ದಿ ಹಬ್ಬಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ ಎಂದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಮಾತನಾಡಿದರು.
ಮಾಜಿ ಶಾಸಕ ಹಂಪಯ್ಯ ನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಚ ಬಿ.ವಿ.ನಾಯಕ, ಮಾಜಿ ಅಧ್ಯಕ್ಷ ವಸಂತಕುಮಾರ, ಜಿ.ಪಂ.ಮಾಜಿ ಸದಸ್ಯರಾದ ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಸಿಂಧನೂರಿನ ಕರಿಯಪ್ಪ, ಬಸನಗೌಡ ಬಾದರ್ಲಿ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ರಾಘವೇಂದ್ರ ನಾಯಕ ಹಾಗೂ ಇತರರು ಭಾಗವಹಿಸಿದ್ದರು.