e-ಸುದ್ದಿ, ಮಸ್ಕಿ
ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಕೇವಲ ಶಾಸಕರಾಗುತ್ತಾರೆ ಆದರೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಗೆದ್ದರೆ ಮಂತ್ರಿಯೇ ಆಗುತ್ತಾರೆ. ಕ್ಷೇತ್ರದವರೇ ಮಂತ್ರಿ ಇದ್ದರೆ ಇಡೀ ಜಿಲ್ಲೆಯೇ ಅಭಿವೃದ್ಧಿ ಆಗಲಿದೆ ಎಂದು ಶಾಸಕ ಎ.ಎಸ್. ನಡಹಳ್ಳಿ ಹೇಳಿದರು.
ಮಸ್ಕಿ ಪಟ್ಟಣದ ಬಿಜೆಪಿ ಮುಖಂಡ ವೀರೇಶ ಕಮತರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ರಾಷ್ಟ್ರದಲ್ಲಿ, ರಾಜ್ಯದಲ್ಲೂ ಬಿಜೆಪಿ ಆಡಳಿತವಿದೆ. ಆಡಳಿತ ಪಕ್ಷದಲ್ಲಿರುವ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಹಜವಾಗಿಯೇ ಕ್ಷೇತ್ರಕ್ಕೆ, ಇಡೀ ಜಿಲ್ಲೆಗೆ ಅನುದಾನ ಹರಿದು ಬರಲಿದೆ. ಇದರಿಂದ ಜಿಲ್ಲೆಯೂ ಮಾದರಿ ಜಿಲ್ಲೆಯಾಗಲಿದೆ. ಇಂತಹ ಒಳ್ಳೆಯ ದೃಷ್ಠಿಯಲ್ಲಿ ಮತದಾರರು ಆಲೋಚನೆ ಮಾಡಬೇಕು. ಕಳೆದ ಮೂರು ಅವಧಿಯಲ್ಲಿ ಕೇವಲ ಶಾಸಕರಾಗಿದ್ದಾಗಲೇ ಪ್ರತಾಪಗೌಡ ಪಾಟೀಲ್ ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದಾರೆ. ಈಗ ಮಂತ್ರಿಗಳಾದರೆ ಕ್ಷೇತ್ರಕ್ಕೆ ಸಾವಿರಾರು ಕೋಟಿ ತರುವ ಶಕ್ತಿ ಇದೆ. ಇಂತಹ ಅವಕಾಶವನ್ನು ಮಸ್ಕಿ ಮತದಾರರು ಕಳೆದುಕೊಳ್ಳಬಾರದು. ಪ್ರತಾಪಗೌಡ ಪಾಟೀಲ್ ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದೆ ವೀರಶೈವ ಲಿಂಗಾಯತ ಸಮುದಾಯದ ನಾಯಕ, ಸಮಾಜದ ಒಬ್ಬ ಹಿರಿಯ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ರಾಜೀನಾಮೆ ನೀಡಿದ್ದಾರೆ. ಈ ಋಣ ಎಲ್ಲ ವೀರಶೈವ ಲಿಂಗಾಯತ ಮತದಾರ ಮೇಲಿದೆ. ಇದನ್ನು ಪ್ರತಾಪಗೌಡ ಪಾಟೀಲ್‍ಗೆ ವೋಟು ಹಾಕುವ ಮೂಲಕ ತೀರಿಸಬೇಕು ಎಂದು ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.