ಅಲೆಮಾರಿ ಅಲ್ಲಮ – ಬಯಲಾದ ಹೆಜ್ಜೆ ಗುರುತು
ಕನ್ನಡ ನಾಡಿನಲ್ಲಿ ವಚನ ಸಾಹಿತ್ಯದ ಮೇರು ಚಳುವಳಿಯಲ್ಲಿ ಅಗ್ರ ನಾಯಕ ಅಲ್ಲಮ . ಅಲ್ಲಮರ ಕಲ್ಯಾಣಕ್ಕೆ ಆಗಮನ ಮತ್ತು ನಿರ್ಗಮನ ಒಂದು ಮಹತ್ತರ ಘಟ್ಟವೆಂದೇ ಹೇಳಬಹುದು..ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕ್ಕೆ ಅಧ್ಯಕ್ಷನನ್ನಾಗಿ ಮಾಡಲು ಯೋಗ್ಯ ಮತ್ತು ಅರ್ಹ ವ್ಯಕ್ತಿಯನ್ನು ಹುಡುಕುತ್ತಿರುವಾಗಲೇ ಅಲ್ಲಮರು ಬಸವಣ್ಣನವರ ಭೇಟಿಗೆ ಕಲ್ಯಾಣಕ್ಕೆ ಬರುತ್ತಾರೆ ಬರುವಾಗ ಸೋಲಾಪುರದ ಶ್ರೀ ಸಿದ್ಧರಾಮ ಸಾಧಕರನ್ನು ಕಲ್ಯಾಣಕ್ಕೆ ಕರೆ ತರುವ ಕಾರ್ಯವನ್ನು ಮಾಡುತ್ತಾರೆ..
ಅಲ್ಲಮರು ಕಲ್ಯಾಣದ ಬಹುದೊಡ್ಡ ಅನುಭಾವಿ ವಚನಕಾರರು .ಕಾಲಜ್ಞಾನ ಮಂತ್ರ ಗೌಪ್ಯ ಟೀಕಿನ ಬೆಡಗಿನ ವಚನಗಳಿಂದ ಅನುಭಾವಿಗಳನ್ನು ಸಾಧಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಧೀಮಂತ ವ್ಯಕ್ತಿತ್ವವು.
ಹುಟ್ಟಿದ ಸ್ಥಳ: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ
ಪರಿಚಯ: ಕಾಲ, ಹನ್ನೆರಡನೆಯ ಶತಮಾನ ಬಸವಣ್ಣನವರ ಸಮಕಾಲೀನರು .
ಊರು: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ.
ಇವನ ಬದುಕನ್ನು ಕುರಿತು ಹರಿಹರ ಮತ್ತು ಚಾಮರಸ ಎರಡು ಬೇರೆ ಬೇರೆಯ ರೀತಿಯ ಕಥೆಗಳನ್ನು ಹೇಳಿದ್ದಾರೆ. ಅಲ್ಲಮನ ತಂದೆ ನಿರಹಂಕಾರ, ತಾಯಿ ಸುಜ್ಞಾನಿ, ಗುರು ಅನಿಮಿಷ. ಇನ್ನೊಂದು ದಾಖಲೆಯ ಪ್ರಕಾರ ತಂದೆ ‘ನಾಗವಾಸಾಧಿಪತಿ’. ಅಲ್ಲಮ ದೇವಸ್ಥಾನದಲ್ಲಿ ಮದ್ದಳೆಯನ್ನು ನುಡಿಸುತ್ತಿದ್ದ. ಅವನನ್ನು ಕಾಮಲತೆ ಎಂಬ ಹೆಣ್ಣು ಮೆಚ್ಚಿ ಮದುವೆಯಾದಳು. ಅವಳು ಜ್ವರಬಾಧೆಯಿಂದ ತೀರಿಕೊಂಡಳು. ತಾನೂ ಸಾಯಲು ಬಯಸಿದ ಅಲ್ಲಮ ಗುಹೆಯನ್ನು ಪ್ರವೇಶಿಸಿದಾಗ ಅಲ್ಲಿ ಅನಿಮಿಷನ ದರ್ಶನವೂ ದೀಕ್ಷೆಯೂ ದೊರೆಯಿತು ಅನ್ನುವುದು ಹರಿಹರ ತನ್ನ ರಗಳೆಯಲ್ಲಿ ಹೇಳುವ ಕಥೆ. ಅಲ್ಲಮನು ಪರಮ ವಿರಾಗಿ. ಅವನನ್ನು ಮೆಚ್ಚಿಬಂದ ಕಾಮಲತೆಯನ್ನು ಸೋಲಿಸಿ ಗೆದ್ದ ಎಂಬುದು ಚಾಮರಸ ‘ಪ್ರಭುಲಿಂಗಲೀಲೆ’ಯಲ್ಲಿ ಹೇಳುವ ಕಥೆ. ಅಲ್ಲಮ ದೇಶಸಂಚಾರಿಯಾಗಿ ಅನೇಕ ಸಾಧಕರನ್ನು ಭೇಟಿಯಾಗಿ, ಅವರೊಡನೆ ಸಂವಾದ ನಡೆಸಿ ಮಾರ್ಗದರ್ಶನ ಮಾಡುತ್ತ ಕಲ್ಯಾಣಕ್ಕೆ ಬಂದು ಅಲ್ಲಿನ ಅನುಭವ ಮಂಟಪದ ಮುಖ್ಯಸ್ಥನಾಗಿ, ನಂತರ ಶ್ರೀಶೈಲಕ್ಕೆ ತೆರಳಿ ಮತ್ತೆ ಮರಳಿದ್ದನ್ನು ‘ಶೂನ್ಯಸಂಪಾದನೆ’ಗಳು ಹೇಳುತ್ತವೆ. ಅಲ್ಲಮನ 1670 ವಚನಗಳು ದೊರೆತಿವೆ. ಇವುಗಳಲ್ಲಿ ಹನ್ನೆರಡನೆಯ ಶತಮಾನದ ವೈಚಾರಿಕ ವಾಗ್ವಾದದ ಚರಿತ್ರೆಯನ್ನು ಕಾಣಬಹುದೆಂದು ಸಂಸ್ಕೃತಿ ಚಿಂತಕರು ಭಾವಿಸುತ್ತಾರೆ.. ಶೂನ್ಯ ಸಂಪಾದನೆಯಲ್ಲಿ ಅಲ್ಲಮರೆ ಅಗ್ರ ನಾಯಕರು .
ಅಲ್ಲಮನನ್ನು ಕುರಿತ ದೊಡ್ಡಾಟ, ಬಯಲಾಟಗಳಿವೆ. ಅಲ್ಲಮನ ಸಮಾಧಿಸ್ಥಳವೆಂದು ಗುರುತಿಸುವ ಇಪ್ಪತ್ತಕ್ಕೂ ಹೆಚ್ಚು ಸ್ಥಳಗಳು ಕರ್ನಾಟಕದಲ್ಲಿವೆ. ತೇರದಾಳ ಅವುಗಳಲ್ಲಿ ಪ್ರಮುಖವಾಗಿದೆ, .ಗದಗ ಅಲ್ಲೀಪುರ ( ಲಕ್ಷ್ಮೇಶ್ವರ ) ಕಣವಿ ,ಕಪ್ಪತಗುಡ್ಡ ಮುಳಗುಂದ ನೀಲಗುಂದ ಮುಂದೆ ಕಿರೇಸೂರು ಸೊನ್ನಲಪುರ ಮಾರ್ಗವಾಗಿ ಕಲ್ಯಾಣಕ್ಕೆ ಬರುತ್ತಾರೆ..ಕಲ್ಯಾಣ ಕ್ರಾಂತಿಯ ನಂತರ ಬನಹಟ್ಟಿ ರಬಕವಿ ತೇರದಾಳ ಚಿಮ್ಮಡದಲ್ಲಿ ಅಲ್ಲಮರು ಬಹುದಿನಗಳವರೆಗೆ ವಾಸವಾಗಿದ್ದರು..
ಕವಿ ದರಾ ಬೇಂದ್ರೆಯವರು ಅಲ್ಲಮನನ್ನು ಕನ್ನಡ ಸಂಸ್ಕೃತಿಯ ನಾಲ್ಕು ನಾಯಕರತ್ನರಲ್ಲಿ ಒಬ್ಬನು ಎಂದಿದ್ದಾರೆ. ಅಲ್ಲಮ, ನಾಗಚಂದ್ರ ಚಿತ್ರಿಸಿದ ರಾವಣ, ಕುಮಾರವ್ಯಾಸನ ಕೃಷ್ಣ, ರತ್ನಾಕರ ಚಿತ್ರಿಸಿದ ಭರತ ಚಕ್ರವರ್ತಿ ಇವರು ನಾಲ್ಕು ಜನ ಕನ್ನಡ ಬದುಕಿನ ನಾಲ್ಕು ಸಾಧ್ಯತೆಗಳನ್ನು ತೋರಿದವರು ಎನ್ನುತ್ತಾರೆ. ಅನುಭಾವ, ಆಧ್ಯಾತ್ಮಗಳ ಚಿಂತನೆ ಅಲ್ಲಮ ವಚನಗಳ ಮುಖ್ಯ ವಸ್ತು. ಅನಿರೀಕ್ಷಿತವಾದ ಅರ್ಥಗಳ ನಿರ್ಮಾಣ, ಮತ್ತು ಅರ್ಥಗಳ ನಿರಾಕರಣೆ ಅಲ್ಲಮನ ದಾರಿ. ಉಜ್ವಲವಾದ ರೂಪಕಗಳನ್ನು ಬಳಸಿ ಅವನು ಹೇಳುವ ಮಾತುಗಳು ವ್ಯಕ್ತಿ ವಿಕಾಸ, ಧರ್ಮಚಿಂತನೆ, ಸಂಸ್ಕೃತಿ ಚಿಂತನೆಗಳ ದೃಷ್ಟಿಯಿಂದ ಮುಖ್ಯವಾಗಿವೆ. ಶಿಶುನಾಳ ಶರೀಫರು ಎಡೆಯ ಒಯುನ ಬಾರೆ ದೇವರಿಗೆ ಎಡೆಯ
ಎಡೆಯ ಒಯುನ ಬಾರೆ ಮಾಡಿ ಹುಡಿಯಿಂದಲೇ ಪೊಡವಿಗೆ ಅಧಿಕೆನ್ನ ಒಡೆಯ ಅಲ್ಲಮನಿಗೆ ಎಂದಿದ್ದಾರೆ..
ಬಸವಣ್ಣನವರ ವೈಚಾರಿಕ ಕ್ರಾಂತಿಗೆ ಭಾಷೆ ಬರೆದು ಪರಾಮರ್ಶೆ ಮಾಡಿ ಪ್ರಮಾಣೀಕರಣಗೊಳಿಸಿದ ಕೀರ್ತಿ ಅಲ್ಲಮರಿಗೆ ಸಲ್ಲಬೇಕು. ಅಲ್ಲಮ ಆದಯ್ಯ ಅರಿವಿನ ಮಾರಿತಂದೆ ಹಡಪದ ಅಪ್ಪಣ್ಣ ಚೆನ್ನ ಬಸವಣ್ಣ ಲಿಂಗಮ್ಮ ಮುಕ್ತಾಯಕ್ಕ ಮುಂತಾದ ಶರಣರು ವಚನಕಾರರುಅನುಭಾವ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಶರಣರ ಷಟಸ್ಥಲವನ್ನು ಗಟ್ಟಿಗೊಳಿಸಿದರು.
ಅಲ್ಲಮರು ಬಯಲು ಶೂನ್ಯ ಸಿದ್ಧಾಂತವನ್ನು ಪ್ರತಿಪಾದಿಸಿದವರು . ಪಂಚ ಮಹಾಭೂತಗಳಿಂದ ಸಂಚಯಗೊಂಡ ಶಕ್ತಿಯು ಪಂಚೇಂದ್ರಿಗಳ ಮೂಲಕ ಕಾಯಗುಣವಾಗುತ್ತವೆ ನಂತರ ಈ ಶರೀರವು ಪಂಚ ಮಹಾಭೂತಗಳಲ್ಲಿ ಸಹಜವಾಗಿ ಲೀನವಾಗುವುದು .
ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ.
ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ.
ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
*ಅಲ್ಲಮಪ್ರಭುದೇವರು*. ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 822
ಅಲ್ಲಮ ಪ್ರಭುಗಳು ಅತ್ಯಂತ ಉನ್ನತವಾದ ಆಧ್ಯಾತ್ಮಿಕ ಹಾಗೂ ವಾಸ್ತವಿಕ ನಿಲುವನ್ನು ಹೊಂದಿದವರು. ಯಾರು ತಮಗೆ ಇದೆ ಜನ್ಮ ಬೇಕು ತಾನು ಪ್ರಾಣಿ ಪಕ್ಷಿ ಅಥವಾ ಮನುಷ್ಯನಾಗಬೇಕೆಂದು ಅರಿತು ಜನ್ಮ ತಾಳಿದವರಿಲ್ಲ. ಅದೇ ರೀತಿ ಸತು ಮರಳಿ ಭೂಮಿಗೆ ತಮ್ಮ ರೂಪವ ತೋರಿದವರಿಲ್ಲ.ಪುನರ್ಜನ್ಮವನು ಸ್ಪಷ್ಟವಾಗಿ ನಿರಾಕರಿಸುವ ಹಾಗೂ
ಕರ್ಮ ಸಿದ್ಧಾಂತವನ್ನು ತಳ್ಳಿ ಹಾಕಿ ,ಮುಕ್ತ ಭಯರಹಿತ ಸಮಾಜವನ್ನು ನಿರೀಕ್ಷಿಸಿ ಅಂತಹ ಒಂದು ಸುಂದರ ಸಮಾಜವನ್ನು ಕಟ್ಟಿದ ಧೀರರು ಶರಣರು .
ದುರಭಿಮಾನವನ್ನು ಹೊತ್ತು ಅಘಟಿತವಾದ ಸಂಗತಿಗಳನ್ನು ಘಟಿತವಾಗುವದೆಂದು ತಾರಾ ಬಲ ಜ್ಯೋತಿಷ್ಯ ಕುಂಡಲಿನಿ ಮಂತ್ರ ಮುಂತಾದ ಕೃತಕ ಸಾಧನಗಳಿಂದ ಸುಳ್ಳು ಹೇಳುವ ಮನುಜರನ್ನು ಸನಾತನಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಲ್ಲಮ ಪ್ರಭುಗಳು ಈ ನಿಸರ್ಗದತ್ತವಾದ ಸಹಜವಾದ ದೇಹವನ್ನು ಹಿಡಿದು ಸುಳ್ಳು ಹೇಳುವ ಪ್ರಾಪಂಚಿಕರನ್ನು ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ.
ವಚನದಲ್ಲಿ ಪುನರ್ಜನ್ಮ ಕರ್ಮ ಸಿದ್ಧಾಂತ ಜ್ಯೋತಿಷ್ಯ ರಮಲ್ ವಿದ್ಯೆಯಂತಹ ಮೌಢ್ಯತನವನ್ನು ಅಲ್ಲಗಳೆದು.
ಯಾರೊಬ್ಬರೂ ತಮ್ಮ ಜನ್ಮದ ರಹಸ್ಯವನ್ನು ಅರಿತುಕೊಂಡು ಜನ್ಮ ತಾಳುವದಿಲ್ಲ ಹಾಗೂ ಸತ್ತು ಮತ್ತೆ ಹುಟ್ಟುವದಿಲ್ಲವೆಂದಿದ್ದಾರೆ.
ಇಂತಹ ವೈಚಾರಿಕ ಚಿಂತನೆ ಅಲ್ಲಮರದ್ದು. ಇಂದಿನ ಯುಗದಲ್ಲೂ ದೃಶ್ಯ ಮಾಧ್ಯಮಗಳಲ್ಲಿ ಟಿವಿ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ವ ಜನ್ಮ ವೃತ್ತಾಂತವನ್ನು ಕೊಚ್ಚುತ್ತಾರೆ ಪುನರ್ ಜನ್ಮದ ಭೀತಿ ಹುಟ್ಟಿಸುತ್ತಾರೆ ಕರ್ಮ ಸಿದ್ಧಾಂತವನ್ನು ಬೋಧಿಸಿ ಜನರನ್ನು ಶೋಷಣೆ ಮಾಡುವ ಜನರಿಗೆ ಚೀಮಾರಿ ಹಾಕುತ್ತಾರೆ ಅಲ್ಲಮ ಪ್ರಭುದೇವರು.
ಲಿಂಗವೆಂಬುದು ಅಲ್ಲಮರ ದೃಷ್ಟಿಯಲ್ಲಿ ಅರಿವಿನೊಂದಿಗೆ ನಡೆಸುವ ಅನುಸಂಧಾನ .
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ
ಎನಗಿದು ಸೋಜಿಗ ಎನಗಿದು ಸೋಜಿಗ
ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು.
ಅಲ್ಲಮ ಪ್ರಭುಗಳು
*ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ*
ಲಿಂಗವೆನ್ನುವುದು ಜ್ಞಾನ ಸಮಷ್ಟಿಯ ಭಾವ ಕಾಣಲಾಗದ ಆನುಪಮ ಅವಿರಳ ಅವ್ಯಕ್ತ ಪ್ರಜ್ಞೆ. ಅದು ಕಾಣಲಾಗದು ಕೇವಲ ಭಕ್ತನ ಮನುಷ್ಯನ ಅರಿವಿಗೆ ಬರುವ ಸೂಕ್ಷ್ಮ ಭಾವ .
ಅಂತಹ ಸ್ವಾನುಭಾವದ ಜ್ಞಾನ ಅರಿವಿನ ಕುರುಹು ಲಿಂಗವಾಗಿ ಕರಸ್ಥಲಕ್ಕೆ ಬಂದಡೆ .ಇಲ್ಲಿ ಕಾರಣ ತತ್ವವವು ಸೂಕ್ಶ್ಮ ತತ್ವವನ್ನು ಹೊತ್ತುಕೊಂಡು ಸ್ಥಾವರ ಅಥವಾ ಸ್ಥೂಲ ಲಿಂಗವಾಗುತ್ತದೆ . ಕಾರಣ ಸೂಕ್ಷ್ಮತೆಯ ಸಂಕೇತವಾಗಿ ಅರಿವಿನ ಕುರುಹಾಗಿ ಲಿಂಗವು ಕರಸ್ಥಲಕ್ಕೆ ಬಂದಿತು ಎಂದೆನ್ನುತ್ತಾರೆ ಅಲ್ಲಮರು.
*ಎನಗಿದು ಸೋಜಿಗ ಎನಗಿದು ಸೋಜಿಗ*
ಎನಗಿದು ಸೋಜಿಗ ಎನಗಿದು ಸೋಜಿಗ ತಮಗೆ ಲಿಂಗವೂ ಕೂಡಾ ಸ್ಥಾವರವಾಗುತ್ತದೆ ಜಡವಾಗುತ್ತದೆ ಲಿಂಗವೆಂಬ ಪ್ರಜ್ಞೆ ಅಂತರಂಗದಲ್ಲಿ ನಿರಂತರವಾಗಿ ಅನುಸಂಧಾನ ಮಾಡುವಾಗ ಹೊರಗಿನ ಕರಸ್ಥಲದ ಲಿಂಗವು ಬೇಕೇ ? ಎಂದು ಪ್ರಶ್ನಿಸುತ್ತಾ ನನಗೆ ಇದು ಸೋಜಿಗವೆನಿಸುತ್ತದೆ. ಅಲ್ಲಮರ ಇನ್ನೊಂದು ವಚನದಲ್ಲಿ ಹೊಟ್ಟೆಯೊಗರದ ಮೇಲೆ ಕಲ್ಲು ಕಟ್ಟಿದಡೆ ಅದು ಲಿಂಗವೇ ಕಟ್ಟಿದಾತ ಗುರುವೇ ಕಟ್ಟಿಸಿಕೊಂಡಾತ ಶಿಷ್ಯನೇ ? ಅಂದರಷ್ಟೇ ಲಿಂಗ ದೀಕ್ಷೆ ಷೋಡಶೋಪಚಾರಕ್ಕೆ ಮತ್ತೆ ಹತ್ತಿರವಾಗುವ ಆಚರಣೆಗಳನ್ನು ಅಲ್ಲಮರು ಸಂಪೂರ್ಣ ಅಲ್ಲಗಳೆದಿದ್ದಾರೆ. ಶರಣರು ಪ್ರಗತಿಪರರು ತಮ್ಮ ಕಾಲ ಘಟ್ಟದಲ್ಲೂ ಇಂತಹ ಚರ್ಚೆಗೆ ಮುಂದಾಗಿದ್ದರು.
*ಅಹುದೆನಲಮ್ಮೆನು ಅಲ್ಲೆನಲಮ್ಮೆನು*
ಇಷ್ಟಲಿಂಗವು ಅಪ್ರಮೇಯ ಅಪ್ರಮಾಣ ಅಪ್ರತಿಮ ಅಗೋಚರ ಅಗಮ್ಯ ಹೀಗೆ ಲಿಂಗ ಭಾವವನ್ನು ಶರಣರು ಮಹಾಗುರು ಬಸವಣ್ಣನವರು ಹೇಳಿ ಒಪ್ಪಿಕೊಂಡಾಗ ಈ ಸ್ಥೂಲ
ಗುಣ ಸಹಿತ ಇಂದ್ರಿಯ ವ್ಯವಹಾರಕ್ಕೆ ಒಳಪಡುವ ಲಿಂಗ ಕ್ರಿಯೆ ಲಿಂಗಾನುಭಾವವನ್ನು ಅಹುದು ಎಂದೆನ್ನಲಾಗದು ಅಥವಾ ಅಲ್ಲವೆಂದೆನ್ನಲಾಗದು.
ಅಲ್ಲಮರು ಬಸವಣ್ಣನವರು ಸೃಷ್ಟಿಸಿದ ಇಷ್ಟಲಿಂಗದ ಉದ್ದೇಶದಿಂದ ಲಿಂಗವನ್ನು ಒಪ್ಪಿಕೊಂಡರೂ ಸಹಿತ ಅದು ಆಚರಣೆಗೆ ಬಾಹ್ಯ ಆಡಂಭರಕ್ಕೆ ಸಿಲುಕಿದಾಗ ಅದು ತನ್ನ ಮೂಲ ಉದ್ದೇಶ ಹಾಗು ಸಾರ್ಥಕತೆಯನ್ನು ಕಳೆದುಕೊಳ್ಳುತ್ತದೆ ಎಂದೆನ್ನುವ ಅಲ್ಲಮರು ಒಮ್ಮೊಮ್ಮೆ ಕರಸ್ಥಲಕ್ಕೆ ಲಿಂಗವಾಗಿ ಬರುವ ಪ್ರಕ್ರಿಯೆಯನ್ನುಒಪ್ಪುವದಿಲ್ಲ ಅಲ್ಲಗಳೆಯುವರು .
ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ ! ಅರಿವು ಅನುಭವಿಸಿ ಅರಿಯದಂತಿರಬೇಕು ಅದನ್ನು ಮತ್ತೆ ಮತ್ತೆ ಅರಿಯಲು ಹೋದಾಗ ಅದು ಹೊರಗಿನ ಜಗತ್ತಿಗೆ ಕರಸ್ಥಲದ ಲಿಂಗವಾಗುತ್ತದೆ ಇಂತಹ ನಿಲುವನ್ನು ಅಲ್ಲಮರು ಸಾರಾಸಗಟಾಗಿ ಒಪ್ಪುವದಿಲ್ಲ. ಲಿಂಗಯೋಗದ ಆಶಯವನ್ನು ತುಂಬಿದ ಮನದಿಂದ ಬರಮಾಡಿಕೊಳ್ಳುವ ಅಲ್ಲಮರು ಅದರ ಜೊತೆಗೆ ಜೋತು ಬಿದ್ದು ಕಾಯಕ್ಕೆ ಲಿಂಗವಾಗಿ ಕಾಯಕ ಮರೆಯುವದನ್ನು ಅರಿವಿನ ಅನುಸಂಧಾನವನ್ನು ಮಾಡದಿದ್ದರೆ ಲಿಂಗವು ಕಲ್ಲಾಗುತ್ತದೆ ಅದನ್ನು ಒಪ್ಪಿಕೊಳ್ಳಲಾಗುವದಿಲ್ಲ ಎಂದಿದ್ದಾರೆ.
*ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು.*
ಕಾಣದ ವಸ್ತು, ವಿಷಯ ಅನುಭವ ಕೈಗೆ ಬರುವುದು ಎಷ್ಟು ಸೋಜಿಗವೋ ಅಷ್ಟೇ ಅದನ್ನು ನಿರಾಕಾರ ತತ್ವದಲ್ಲಿ ನೋಡಬೇಕೆನ್ನುವುದು ಅಲ್ಲಮರ ಹಂಬಲ. ಲಿಂಗವೆಂಬುದು ಅಂತರಂಗ ಬಹಿರಂಗ ಶುಚಿಗೊಳಿಸುವ ಸಾಧನವಾಗಿದೆ.ಇಂದ್ರಿಯ ಚಪಲತೆಯನ್ನು ನಿಗ್ರಹಿಸುವ ತನ್ನೊಳಗಿರುವ ಅಗಾಧವಾದ ಜಂಗಮಚೇತನವನ್ನು ಗಟ್ಟಿಗೊಳಿಸುವ ವ್ಯವಧಾನ . ಆಧ್ಯಾತ್ಮಿಕ ಸಾಧನೆ ಮಾಡುವವನಿಗೆ ಲಿಂಗವು ನಿರಾಕಾರ ನಿರಾಳ ಮತ್ತು ಬಯಲು. ನಿರಾಳವೆಂಬ ಕೂಸಿಂಗೆ ಬೆಣ್ಣಿಯನಿಕ್ಕಿ ಹೆಸರನ್ನಿಟ್ಟವರಾರು ಅಕಟಕಟಾ ಅದು ಶಬ್ದದ ಲಜ್ಜೆ ನೋಡಾ ಎಂದಿದ್ದಾರೆ ಅಲ್ಲಮರು .ಇದು ಜಗತ್ತಿನ ಅತ್ಯಂತ ಉತ್ಕೃಷ್ಟವಾದ ಅದಾತ್ತೀಕರಣದ ( *Sublimation* ) ಅನುಭಾವವು.
ಕರಸ್ಥಲದ ಇಷ್ಟಲಿಂಗವನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಅದರ ಹಿಂದಿನ ಆಶಯಕ್ಕೆ ಮುಖ ಮಾಡಲು ಭಕ್ತನಿಗೆ ಸೂಚಿಸಿದಂತಿದೆ ಈ ವಚನ .
ಅಲ್ಲಮರು ಕಾಲಜ್ಞಾನ ವಿಜ್ಞಾನ ಜಗತ್ತಿನ ಆವಿಷ್ಕಾರಗಳನ್ನು ಆಗು ಹೋಗುಗಳನ್ನು ತಮ್ಮ ವಚನಗಳಲ್ಲಿ ಸರಳವಾಗಿ ರೂಪಿಸಿದ್ದಾರೆ.
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದು ಕಂಡೆ
ಗಗನ ಮೇಲೆ ಮಾಮರವ ಕಂಡೆ .
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ ಕಂಡೆ ಗುಹೇಶ್ವರ
.(ಸ ವ ಸ೦ -292 ಆವೃತ್ತಿ 2 ಪುಟ 85.)
ಇದು ಮಹಾಜ್ಞಾನಿ ಅಲ್ಲಮ ಪ್ರಭುಗಳ ವಚನ , ಬಯಲಿನ ಎಲ್ಲ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಜೀವ ಕಳೆ ಮತ್ತು ಬಾಹ್ಯ ಪ್ರಪಂಚದ ಸ೦ಬದಗಳು ಅವುಗಳ ವಿಕಾಸ ಬೆಳವಣಿಗೆ,ಪ್ರಪಂಚದಲ್ಲಿ ಅಡಗಿರುವ ಅನೇಕ ಸತ್ಯಗಳನ್ನು ಅನಾವರಣ ಮಾಡಿದ್ದಾರೆ ಅಲ್ಲಮರು.
ಪ್ರಸ್ತುತ ವಚನದಲ್ಲಿ ನೀರಿನಲ್ಲಿ ಬೆಂಕಿಯ ಕಿಚ್ಚು ಹುಟ್ಟುತ್ತದೆ ಎಂದು ತಮ್ಮ ಕಾಲಜ್ಞಾನದ ಅನುಭಾವ ಹೇಳಿದರು ,ಕೆಲ ಶತಮಾನದ ನಂತರ ಗೊತ್ತಾಯಿತು ವಿದ್ಯುತ್ ನೀರಿನಿಂದ ಹುಟ್ಟುತದೆ ಎಂದು .ಗಗನ ಜನರಿಗೆ ನಿಲುಕದ ಕಾಯ ಎಂದು ನಂಬಿದ್ದ ಜನರಿಗೆ ,ಇಲ್ಲಿ ಗಗನವು ಬಯಲು ಅಲ್ಲಿಯ ಅನೇಕ ಗ್ರಹಗಳ ಮೇಲೆ ಜೈವಿಕ ವಿಕಾಸದ ಸಾಧ್ಯತೆ ಇದೆ.ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯ ಮತ್ತು ಅಭಿಮತಕ್ಕೆ ಬಂದಿದ್ದಾರೆ.ಗಗನದಲ್ಲಿ ಮಾಮರವನ್ನು ನೋಡುವ ಕಾಲ ದೂರ ಉಳಿದಿಲ್ಲ .ಇತ್ತೀಚಿಗೆ ನಾಸಾ ವಿಜ್ಞಾನಿಗಳು ಮಾವಿನ ಮರವನ್ನು ಬೇರೆ ಗ್ರಹದಲ್ಲಿ ನೆಡುವ ಪ್ರಯತ್ನದಲ್ಲಿದ್ದಾರೆ.
ಅದೇ ರೀತಿ ಪಕ್ಕವಿಲ್ಲದ ಹಕ್ಕಿ ,ಅಂದರೆ ಮನುಷ್ಯನ ಆತ್ಮ ,ಆತ್ಮವೆಂಬ ಪಕ್ಷಿಗೆ ರೆಕ್ಕೆಯಿಲ್ಲ ಪಕ್ಕವಿಲ್ಲಾ ,ಆದರೆ ದುರಾತ್ಮನ ವಿಚಾರದಿಂದ ಅಣು ವಿಕಿರಣ ಸಂಶೋದನೆ, ಯುದ್ಧಕಾಂಡ ,ಕ್ಷಿಪಣಿಗಳು ,ಬಾಂಬು ಇಂತಹ ಸ್ಪೋಟದಿಂದ ನಾಗಸಾಕಿ ಮತ್ತು ಹಿರೋಷಿಮಾ ೧೯೪೫ ರಲ್ಲಿ ನಲುಗಿ ಸುಟ್ಟು ಕರಕಲು ಆದಂತೆ ,ಇಡಿ ಭೂಮಿಯೇ ಸುಟ್ಟು ಹೋಗಬಹುದೆಂಬ ಆತಂಕವನ್ನು ಅಲ್ಲಮರು ವ್ಯಕ್ತ ಪಡಿಸಿದ್ದಾರೆ.ಇಂತಹ ಪ್ರಯತ್ನವನ್ನ ಒಸಾಮ ಬಿನ್ ಲಾಡೆನ್ ,ಹಿಟ್ಲರ್,ಮುಸುಲೋನಿ ,ಮುಂತಾದ ಅಧಿಕಾರಪ್ರಿಯ ರಕ್ತ ಪಿಪಾಸಿಗಳು ಬಯಸುತ್ತಾರೆ.ಇಂದು ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಕ್ಷಿಪಣಿಗಳನ್ನು ತಯಾರಿಸುತ್ತಿವೆ ,ಈ ವಿಜ್ಞಾನಿ ಎಂಬ ಪಕ್ಷಿಗಳು ಒಮ್ಮೆ ಈ ಭೂಮಿಯನ್ನು ನುಂಗಬಹುದು, ಇದಕ್ಕೆ ಬಸವ ಭಕ್ತಾರದ ನಾವು ಕೊನೆ ಹೇಳೋಣ.
ನೀರಿನಲ್ಲಿ ಬೆಂಕಿ ಅನ್ವೇಷಣೆ ಅನಿವಾರ್ಯ ಅಗತ್ಯ. ಗಗನದಲ್ಲಿ ಮಾಮರ ನೆಡುವುದು ಬೆಳವಣಿಗೆ. ಆದರೆ ದುರಾತ್ಮ ಪಕ್ಷಿಯು ಭೂವಿಯ ಬಯಲ ನುಂಗುವುದು ಆತಂಕದ ವಿಷಯ .ಆತಂಕವನ್ನು ಕಳೆದು ಆನಂದವನ್ನು ಹೆಚ್ಚಿಸೋಣ,ಎಂಬ ಭಾವ ಭದ್ರತೆಯನ್ನು ಅಲ್ಲಮರು ಕಲ್ಯಾಣದಲ್ಲಿ ಜನರ ಮನಸಿನಲ್ಲಿ ತುಂಬಿದರು.
*ಬಯಲಿನತ್ತ ಅಲ್ಲಮರ ನಡೆ*
ಕಲ್ಯಾಣ ಕ್ರಾಂತಿಯ ಮುನ್ಸೂಚನೆಯನ್ನು ಗ್ರಹಿಸಿದ ಅಲ್ಲಮರು ತಮ್ಮ ಕೆಲವೇ ಶರಣ ಸಂಘದಿಂದ ಕಲ್ಯಾಣ ತೊರೆದರು.ಅವರು ಕಲ್ಯಾಣ ಸೋಲಾಪುರ ವಿಜಯಪುರ ಜಮಖಂಡಿ ಬನಹಟ್ಟಿ ರಬಕವಿ ತೇರದಾಳ ಚಿಮ್ಮಡದಲ್ಲಿದ್ದು ಮುಂದೆ ಶ್ರೀಶೈಲಕ್ಕೆ ಬಯಲಿನಲ್ಲಿ ಬಯಲಾದರು. ತೇರದಾಳದಲ್ಲಿ ಅವರು ಉಣ್ಣುವ ಗಂಗಾಳವು ಊಟದ ತಟ್ಟೆ ಶ್ರೀ ಪ್ರಭು ಸ್ವಾಮಿಯ ಮಠದಲ್ಲಿದೆ. ಚಿಮ್ಮಡದಲ್ಲಿ ಬಹುದಿನಗಳಕಾಲ ಯೋಗಾಭ್ಯಾಸ ಮಾಡಿ ಏಕಾಂತದಲಿ ಅರಿವಿನೊಂದಿಗೆ ಅನುಸಂಧಾನ ಮಾಡಿ ಕಾಲಕಳೆದಿದ್ದಾರೆ . ಈಗಲೂ ಅಲ್ಲಿನ ಜನ ಅಲ್ಲಮನ ಗುಡ್ಡ ಎಂದು ಹೇಳುತ್ತಾ ಅಲ್ಲಮರು ಸಂಚರಿಸಿದ ಸ್ಥಳಗಳನ್ನು ಮೌಖಿಕವಾಗಿ ದಾಖಲಿಸುತ್ತಾರೆ.
ಕರ್ನಾಟಕದಲ್ಲಿ ಅಲ್ಲಮರು ಐಕ್ಯರಾಗಿದ್ದರೆಂದು ಅನೇಕ ಉಹಾಪೋಹಗಳಿದ್ದರೂ ಅವರು ನಡೆದಿದ್ದು ಶ್ರೀಶೈಲದ ದಟ್ಟ ಅಡವಿಯ ಕಡೆಗೆ . ಅಕ್ಕ ಮಹಾದೇವಿ ತನ್ನ ಐಕ್ಯವನ್ನು ಕದಳಿಯಲ್ಲಿ ಕಂಡರೆ ಅಲ್ಲಮರು ಶ್ರೀಶೈಲದ ಅರಣ್ಯದಲ್ಲಿ ಬಯಲು ಕಂಡರು. ಅವಿರಳ ಜ್ಞಾನಿ ಮಹಾ ಅನುಭಾವಿ ವಚನಕಾರ ಶರಣ ಸಂಸ್ಕೃತಿಯ ಮೇರು ವ್ಯಕ್ತಿತ್ವ ಅಲ್ಲಮರು ತಮ್ಮ ಅಲೆಮಾರಿತನದಿಂದ ಎಲ್ಲ ಶರಣರನ್ನು ಭೇಟಿಯಾದರು ಅವರಲ್ಲಿ ಶರಣರ ಕಾಯಕ ಸಿದ್ಧಾಂತವನ್ನು ಅರಿವು ಮಾಡಿಕೊಟ್ಟರು.ಬಯಲೊಳಗೆ ಬಯಲಾದರು ಅಲೆಮಾರಿ ಅಲ್ಲಮರು .
*ಡಾ.ಶಶಿಕಾಂತ.ರುದ್ರಪ್ಪ ಪಟ್ಟಣ ಪುಣೆ*