ಗಜಲ್
ಉದುರಿದ ಎಲೆಗಳ ಮೆರವಣಿಗೆ ಮಸಣದ ಕಡೆ ಸಾಗಿದೆ ಸಾಕಿ
ಹೆರಿಗೆಯಾದ ಹಸಿರಿಗೆ ಹೆಸರಿಡಲು ಯುಗಾದಿ ಬಂದಿದೆ ಸಾಕಿ
ಇಳೆಯ ನಿಟ್ಟುಸಿರ ಬಿಸಿ ತಾಪಕೆ ಜಗದ ಜೀವಿಗಳು ದಣಿದಿವೆ
ಹಂದರದ ಮೊಗ್ಗು ಬಿರಿದು ಒಲವಿನ ಲಾಲಿ ಹಾಡುತಿದೆ ಸಾಕಿ
ಪ್ರಕೃತಿ ಪುರುಷರ ಹಣೆಗೆ ಮಾವು ಬೇವಿನ ಹೂ ಬಾಸಿಂಗ
ದುಂಬಿಗಳ ಝೇಂಕಾರದ ಗಟ್ಟಿ ಮೇಳ ಕೇಳುತಿದೆ ಸಾಕಿ
ಆದಿ ಅಂತ್ಯ ವಿಲ್ಲದ ಯುಗಾದಿ ನವ ಚೈತನ್ಯ ತಂದಿದೆ
ಬುವಿ ಬಾನು ಸೂರ್ಯ ಚಂದ್ರರ ಬಾಳು ಹೊಸದಾಗಿದೆ ಸಾಕಿ
ಮಲ್ಲಿಗೆಯ ಕಂಪು ಸಕಲ ಜೀವಿಗಳಿಗೆ ಕಳೆತಂದಿದೆ “ಪ್ರಭೆ”
ಬೇವಿನ ಕಹಿ ಬೆಲ್ಲದ ಸಿಹಿ ಬಾಳಿನಲಿ ಜೊತೆಯಾಗಿದೆ ಸಾಕಿ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ