ಬಸವಣ್ಣ ಕಾಲದ ಜಾಗೃತ ಘಂಟೆ

ಬಸವಣ್ಣ ಕಾಲದ ಜಾಗೃತ ಘಂಟೆ

ಶರಣ ಧರ್ಮವು ದಾಂಪತ್ಯ ಧರ್ಮ ಸಂಸಾರಸ್ಥರ ಧರ್ಮ ಹದಿನಾರನೆಯ ಶತಮಾನದಲ್ಲಿ ಕಟ್ಟಿಗೆ ಹಳ್ಳಿಯ ಶ್ರೀ ಸಿದ್ಧಲಿಂಗ ಸ್ವಾಮಿಗಳು ಚಿಲ್ಲಾಳ ಸಮಯ ಮುರುಘಿ ಸಮಯ, ಕೆಂಪಿ ಸಮಯ ಹಾಗೂ ಕುಮಾರ ಸಮಯವೆಂಬ ಸಮಯ ಭೇದ ಹೊಂದಿರುವ ಮಠೀಯ ಪರಂಪರೆಯನ್ನು ಲಿಂಗಾಯತ ಧರ್ಮದಲ್ಲಿ ತಮ್ಮ ಪೌರೋಹಿತ್ಯ ಅಧಿಪತ್ಯಕ್ಕೆ ಸಾಮ್ರಾಜ್ಯಶಾಹಿ ಅಧಿಕಾರ ವ್ಯವಸ್ಥೆಯನ್ನು ಇನ್ನೊಬ್ಬರ ಮೇಲೆ ಹೇರಲು ಶೋಷಣೆಯ ಸಂಚು ರೂಪಿಸಿ ಸುಲಿಗೆ ದೇಣಿಗೆ ಎತ್ತಿ ಸುಖ ಜೇವನ ನಡೆಸುವ ಹುನ್ನಾರದಿಂದ ಮಠಗಳು ನಿರ್ಮಾಣವಾದವು .
ಮಠಗಳು ಅಧ್ಯಯನ ಕೇಂದ್ರಗಳಾದವು ಪಾಠ ಶಾಲೆಗಳಾದವು ಅಕ್ಷರ ತರಬೇತಿ ಕೇಂದ್ರಗಳಾದವು . ಒಳ್ಳೆಯ ಉದ್ಧೇಶವನ್ನು ಮುಂದಿಟ್ಟು ಸಾಂಸ್ಥಿಕರಣದ ವಿಸ್ತಾರಕ್ಕೆ ಹಳ್ಳಿ ಪಟ್ಟಣ ಗ್ರಾಮ ಹೀಗೆ ಎಲ್ಲ ಪ್ರದೇಶಗಳಲ್ಲಿ ತಮ್ಮ ತಮ್ಮ ಶಾಖಾ ಮಠಗಳು ರೂಪಗೊಂಡವು . ಒಂದೇ ವೀರ ಮಾಹೇಶ್ವರ ವರ್ಗಕ್ಕೆ ಸೇರಿದ ಜನಾಂಗದವರು ಮಠಾಧಿಪತಿಗಳಾದರು .
ಅದಕ್ಕೆ ಅಧಿಕೃತ ಮುದ್ರೆ ಒತ್ತಿದವರು ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು .1910 ರಲ್ಲಿ ಬಾದಾಮಿ ತಾಲೂಕಿನಲ್ಲಿ ಶಿವಯೋಗ ಮಂದಿರ ನಿರ್ಮಿಸಿ ಒಂದೇ ವರ್ಗಕ್ಕೆ ಸೇರಿದ ಗುರು ಮತ್ತು ವಿರಕ್ತ ಪರಂಪರೆಯ ಮಠಗಳ ವಟುಗಳನ್ನು ತಯಾರಿಸುವ ಕಾರ್ಖಾನೆಯೊಂದು ನಿರ್ಮಾಣವಾಯಿತು . ಇಲ್ಲಿ ಈಗಲೂ ವೈದಿಕ ಪರಂಪರೆಯ ಶೈವ ಸಂಸ್ಕೃತಿ ಆಚರಣೆಯನ್ನು ಭೋದಿಸುತ್ತಾರೆ .
ಮಠೀಯ ವ್ಯವಸ್ಥೆಯನ್ನು ಎಲ್ಲ ಶರಣರು ತಿರಸ್ಕರಿಸಿದ್ದಾರೆ.

ಸಟೆ ದಿಟವಾದಲ್ಲಿ ಮುಟ್ಟಿಯೂ ಮುಟ್ಟದೆ ಇರಬೇಕು.
ಅತಿರತಿ ಗತಿಮತಿಗೆ ಮಂದವಾಯಿತ್ತು.
ಎಂಟು ಹಿಟ್ಟು ಪಂಚಮಠವುಂಟು ಧರೆಯ ಮೇಲೆ.
ನರಸುರಾದಿಗಳೆಲ್ಲ ಸಭಾರವ ಹೊತ್ತು ಬಂದೈದಾರೆ.
ಹಿಟ್ಟು ನಷ್ಟ, ಮಠ ಹಾಳು, ಊರಿಗುಪಟಳ,
ಮಠವ ಸುಟ್ಟು ಗುಹೇಶ್ವರ ಬೀದಿಗರುವಾದ.ಎಂದೆನ್ನುವ ಅಲ್ಲಮಪ್ರಭುದೇವರು ಅತ್ಯಂತ ಉಗ್ರವಾಗಿ ಮಠಗಳ ವ್ಯವಸ್ಥೆಯನ್ನು ಖಂಡಿಸಿದ್ದಾರೆ.

ಆದರೆ ಇಂದು ಶೂನ್ಯ ಸಿಂಹಾಸನ ಅಲ್ಲಮಪ್ರಭುಗಳ ಪರಂಪರೆಯೆಂದು ಸುಳ್ಳು ಹೇಳಿ ಜನರನ್ನು ಮೋಸ ಮಾಡುವ ಸ್ವಾಮಿಗಳು ಮಠಗಳನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಿದ್ದಾರೆ.
ಶಾಲೆ ಕಾಲೇಜು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಉದ್ಯಮಗಳು ಮಠಗಳಲ್ಲಿ ತಲೆ ಎತ್ತಿವೆ .
ತಮ್ಮ ತಮ್ಮ ಗುರುಗಳ ಜಯಂತಿ ಸ್ಮರಣೆಯಲ್ಲಿ ಕಾಲ ಕಳೆಯುವ ಸ್ವಾಮೀಜಿಯವರು ಈಗೀಗ ನೈತಿಕ ಪಾಠ ಹೇಳುತ್ತಿದ್ದಾರೆ.
ಯಾವ ಮಂತ್ರಿಗೂ ಕಡಿಮೆ ಇರದ ಸ್ವಾಮಿಗಳ ಕಾರು ಬಂಗಲೆ ಐಶ್ವರ್ಯದ ಜೀವನ ಮಧ್ಯೆ ಶರಣರ ಜಯಂತಿಗೆ ತಡವಾಗಿ ಬಂದಾದರೂ ನೀತಿ ಪಾಠ ಹೇಳುತ್ತಾರೆ.
ಇತ್ತೀಚಿಗೆ ಗಂಗಾವತಿ ಹಾಗೂ ಹಳೆ ಮೈಸೂರಿನ ಭಾಗದ ಶ್ರೇಷ್ಠ ಮಠದ ಸ್ವಾಮಿಗಳು ಲಾಜಿನಲ್ಲಿ ಮಂಚದ ಪ್ರಸಂಗವನ್ನು ರಾಸಲೀಲೆಯನು ನೋಡಿದರೂ ತಮ್ಮ ಮೌನ ಮುರಿಯದ ಸ್ವಾಮಿಗಳು,
ವಿಜಯಪುರದಲ್ಲಿ ದಾನಮ್ಮಳ ಮೇಲೆ ಬಲಾತ್ಕಾರ ಮಾಡಿ ಕೊಂದು ಹಾಕಿದಾಗ ಪ್ರತಿಭಟಿಸದ ಗುರುಗಳು ಆಸಿಫಾಳ ಮೇಲೆ ಕ್ರೌರ್ಯ ನಡೆದರೂ ಉಸಿರು ಬಿಡದ ಧರ್ಮ ಗುರುಗಳು- ತನುವಿನಲ್ಲಿ ನಿರ್ಮೋಹ ಮನದಲ್ಲಿ ನಿರಹಂಕಾರ ತನು ಮನ ಶುಚಿ ಇಡಬೇಕು ಎಂದು ಉಪದೇಶ ಮಾಡುತ್ತಾರೆ. ಕಾವಿ ಸನ್ಯಾಸತ್ವ ಬಸವ ಧರ್ಮದ ವಿರೋಧವೆಂಬುದನ್ನು ಮರೆತು
ಭಕ್ತರಿಗೆ ನೈತಿಕ ಚಾರಿತ್ರಿಕ ಉಪದೇಶ ಮಾಡುವವರಿಂದ ನೈಜ ಬಸವ ಭಕ್ತರಿಗೆ ನೈತಿಕ ಪ್ರಮಾಣ ಪತ್ರ ಬೇಕಿಲ್ಲ .ಬಹುತೇಕ ಸ್ವಾಮಿಗಳು ಹಿತ್ತಾಳೆಯ ಕಿವಿಗಳನ್ನು ಹೊಂದಿದ್ದಾರೆ. ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯನ್ನು ಇಂತಹ ದುಷ್ಟ ಕೂಟವೇ ಮಾಡಿದೆ . ಬಸವರಾಜ ಕಟ್ಟಿಮನಿ ಅವರ ಮೇಲೆಯೂ ಗುಂಡಿನ ದಾಳಿ ನಡೆದಿತ್ತು .ಇಂತಹ ವೀರಮಾಹೇಶ್ವರ ಹಿತಕಾಪಾಡುವ ಧಾರ್ಮಿಕ ಮುಖಂಡರು ಬಸವಣ್ಣನವರ ಆಶಯಗಳನ್ನು ಸಮಾಜಕ್ಕೆ ಮುಟ್ಟಿಸಬಲ್ಲರೇ .ಕೆಲವೇ ಕೆಲವು ಮಠಗಳು ಸಮಾಜಮುಖಿ ಕೆಲಸ ಮಾಡುತ್ತಿವೆ ಅವುಗಳಲ್ಲಿ ಸಿದ್ಧಗಂಗೆಯ ಮಠವು ಒಂದು .
ಭಕ್ತರು ಲಿಂಗಾಯತ ಧರ್ಮದ ಒಡೆಯರು ಗುಲಾಮರಲ್ಲ. ಮಠಗಳು ಧಾರ್ಮಿಕ ದಾಸ್ಯತ್ವವನ್ನು ಸೃಷ್ಟಿಸುತ್ತಿವೆ ಪಾದಪೂಜೆ ದಕ್ಷಿಣೆ ಭಿಕ್ಷೆ ಶ್ರೀಮಂತರ ಮನೆಯಲ್ಲಿಯೇ ವಾಸ . ಇವರಿಗೆ ಜಂಗಮ ತತ್ವವು ಹೇಗೆ ಅರಿವಾದೀತು. ಬಸವಣ್ಣ ಕಾಲದ ಜಾಗೃತ ಘಂಟೆ , ಇಂದಲ್ಲ ನಾಳೆ ಬಸವಣ್ಣನವರ ಆಶಯಗಳ ವಿರುದ್ಧವಾಗಿರುವ ಸಂಸ್ಥೆಗಳನ್ನು ಭಕ್ತರು ಧಿಕ್ಕರಿಸುತ್ತಾರೆ .
ಅಥವಾ ಇಂತಹ ಆಷಾಡಭೂತಿತನವನ್ನು ಇನ್ನು ಮೇಲಾದರೂ ಬಿಟ್ಟು ಸಹಜ ಬದುಕಿನ ಶರಣ ತತ್ವಗಳನ್ನು ಪಾಲಿಸಲಿ.
ಮಠಗಳಲ್ಲಿ ಭಟ್ಟಂಗಿಗಳ ಹೊಗಳು ಭಟ್ಟರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೆಲ ಮಠಗಳಲ್ಲಿ ಒಂದೇ ವರ್ಗದ ಆಡಳಿತ ಸದಸ್ಯರಿದ್ದಾರೆ , ಆಡಳಿತಾಧಿಕಾರಿ ಮಠವನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಮಠಗಳ ಸಂಪನ್ಮೂಲಗಳನ್ನು ಬಳಸುತ್ತಾರೆ . ಜಗದ್ಗುರುಗಳು ಸ್ವಾಮಿಗಳು ಹಣ ಮಾಡುವ ಕಾಳ ಧನಿಕರನ್ನು ವಿಷಯ ಲಂಪಟರನ್ನು ವರ್ಷಕ್ಕೊಮ್ಮೆ ಕರೆದು ಸತ್ಕಾರ ಮಾಡುತ್ತಾರೆ .ಮುಖವಾಡಗಳನ್ನು ಕಳಚಿಟ್ಟು ವಸ್ತು ಸ್ಥಿತಿಯ ಅಧ್ಯಯನ ಮಾಡದಿದ್ದರೆ ಜಂಗಮ ವ್ಯವಸ್ಥೆಗೆ ಮಾಡುವ ದ್ರೋಹ ಮತ್ತು ಬಸವ ತತ್ವಕ್ಕೆ ಮಾಡುವ ಅಪಚಾರಕ್ಕೆ ಬಸವಣ್ಣನೇ ಶಿಕ್ಷೆ ನೀಡುತ್ತಾನೆ .
ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ .
ಇಂತಹ ವೇಷಧಾರಿಗಳಿಗಿಂತ ಕಷ್ಟ ಪಟ್ಟು ದುಡಿವ ಕಾರ್ಮಿಕ ರೈತರೇ ಪಾವನರು .
ಬಸವಣ್ಣನವರ ತತ್ವಗಳು ಇಂದು ಜಗತ್ ವ್ಯಾಪಕವಾಗಬೇಕಿದ್ದರೆ ಇಂತಹ ಸಾಂಸ್ಥಿಕ ವಿಸ್ತಾರದ ಶಾಖೆಗಳನ್ನು ಹೊರತು ಪಡಿಸಿ ವಚನ ಸಾಹಿತ್ಯದ ನಿರಂತರ ಅಧ್ಯಯನವನ್ನು ಮಾಡಿದರೆ ಭಕ್ತನ ಅಂಗಳವೇ ಕೈಲಾಸ ಹಾಗೂ ಆತನ ಕಾಯವೇ ಲಿಂಗಮಯವಾಗುವುದು.

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

Don`t copy text!