ಸತ್ಯ ಶೋಧಕಿ ಮರ್ತ್ಯ ಸಾಧಕಿ ಅಕ್ಕ ಮಹಾದೇವಿ

 

 

ಸತ್ಯ ಶೋಧಕಿ ಮರ್ತ್ಯ ಸಾಧಕಿ ಅಕ್ಕ ಮಹಾದೇವಿ

ಚಿಲಿಪಿಲಿ ಎಂದು ಓದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಕೊಳನತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಗಿರಿ ಗಹ್ವರದೊಳಾಡುವ ನವಿಲುಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ

*ಅಕ್ಕ ಮಹಾದೇವಿ ವಚನ* ಸಂಪುಟ -5 ಎರಡನೆಯ ಆವೃತ್ತಿ ಪುಟ 211

ಅಕ್ಕ ಮಹಾದೇವಿಯವರ ಜೀವನ, ಚರಿತ್ರೆ, ವಚನಗಳು ನಮಗೆ ಅತ್ಯಂತ ಕುತೂಹಲಕಾರಿ ಕಾಣುತ್ತವೆ . ಭಾರತದ ಮತ್ತು ಜಗತ್ತಿನ ಇತಿಹಾಸದಲ್ಲಿ ಮಹಿಳೆಯೊಬ್ಬಳು ತನ್ನ ಇಚ್ಛೆಯಂತೆ ಬದುಕಿ ತನ್ನ ಆಯ್ಕೆಯನ್ನು ತಾನೇ ಮಾಡಿ ತೋರಿದ ಮೊದಲ ಮಹಿಳೆ ಅಕ್ಕ ಮಹಾದೇವಿ. ಹರಣೆ ತನ್ನ ಗಂಡನಾಗಬೇಕೆಂದು ತಪಸಿದ್ದ ನೋಡಾ, ಪುರುಷ ಪ್ರಧಾನ ಸಮಾಜಕ್ಕೆ ಒಂದು ಕಠಿಣ ಸವಾಲಾದಳು ಅಕ್ಕ . ತಾನು ಸಾಯುವ ಗಂಡನನ್ನು ಇಚ್ಛಿಸುವದಿಲ್ಲ ಸಾವಿಲ್ಲದ ಕೇಡಿಲ್ಲದ ಗಂಡನನ್ನು ಮದುವೆಯಾಗುವದಾಗಿ ಹೇಳಿದ್ದಾಳೆ . ತನ್ನೊಳಗೆ ಇರುವ ಅಘಾಧವಾದ ಚೈತನ್ಯ ಆತ್ಮ ವಿಶ್ವಾಸ ,ಸ್ಫೂರ್ತಿ ಪ್ರೀತಿಯನ್ನು ಪಕ್ಷಿ ದುಂಬಿಗಳಲ್ಲಿ ಕಾಣುತ್ತಾಳೆ ಅಕ್ಕ,

ಚಿಲಿಪಿಲಿ ಎಂದು ಓದುವ ಗಿಳಿಗಳಿರಾ ನೀವು ಕಾಣಿರೆ ನೀವು ಕಾಣಿರೆ
ಗಿಳಿಗಳು ಓದುತ್ತವೆ ಎಂಬ ನಂಬಿಕೆ ಅಂತೆಯೇ ಈಗಲೂ ಅವುಗಳಿಗೆ ಗಿಳಿ ಶಕುನ , ಮಕ್ಕಳು ಪಾಠ ಮಾಡಬೇಕಾದಾಗಲೆಲ್ಲ ಗಿಳಿಪಾಠ ಎಂದೆನ್ನುತ್ತಾರೆ . ಗಿಳಿ ಜಗತ್ತಿನಲ್ಲಿ ಧ್ವನಿಗೆ ಅತ್ಯಂತ ತೀವ್ರವಾಗಿ
ಸ್ಪಂದಿಸಿ ಅನುಕರಣೆ ಮಾಡುವ ಜಾಣ ಪಕ್ಷಿ .ಹಿಂದಿನ ಕಾಲದಲ್ಲಿ ರಾಜರು ಮತ್ತು ರಾಜತಾಂತ್ರಿಕರು ಗಿಳಿಗೆ ಕೆಲ ಸಂದೇಶಗಳನ್ನು ಪಾಠ ಮಾಡಿಸಿ ತಮ್ಮ ನೆರೆಯ ಗುಪ್ತಚರರಿಗೆ ಗಿಳಿಯ ಮೂಲಕ ಸಂದೇಶಗಳನ್ನು ಕಳಿಸುತ್ತಿದ್ದರು .ಯುವ ರಾಜ ಮತ್ತು ರಾಜಕುಮಾರಿಯರ ಪ್ರೇಮ ಪ್ರಣಯ ಪ್ರಸಂಗಗಳಲ್ಲಿ ಗಿಳಿ ಸಹಕಾರಿಯಾಗಿದ್ದವು. ಅವುಗಳನ್ನು ಅಕ್ಕ ಕೇಳುತ್ತಾಳೆ ತಾವು ಇಷ್ಟೆಲ್ಲ ರಾಜ್ಯ ಕೋಶ ತಿರುಗಿ ಬರುತ್ತಿದ್ದಿರಲ್ಲ ತಾವು ಕಾಣುತ್ತಿರ . ಸತ್ಯದ ಶೋಧನೆಯಲ್ಲಿರುವ ಅಕ್ಕನ ಮನಸ್ಥಿತಿ ಅರ್ಥಪೂರ್ಣವಾಗಿದೆ . ಜೀವ ಜಲವಿರುವ ಎಲ್ಲ ಚೈತನ್ಯಗಳಲ್ಲೂ ಮಲ್ಲಿಕಾರ್ಜುನನಿದ್ದಾನೆ ಎಂದೆನ್ನುವ ಉದಾತ್ತೀಕರಣದ ಶೃದ್ಧೆ.

ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ ನೀವು ಕಾಣಿರೆ
ಚೈತ್ರವ ಬಂದಾಗ ವಸಂತದ ಅಚ್ಚ ಹಸುರಿನ ಮಧ್ಯೆ ರಾಗಬದ್ಧವಾಗಿ ಸ್ವರವೆತ್ತಿ ಹಾಡಲು ಬಂದ ಕೋಗಿಲೆಗಳನು ಪ್ರಶ್ನೆ ಮಾಡುವ ಅಕ್ಕ ,ಕೋಗಿಲೆಗಳೇ ತಾವೇನಾದರೂ ಕಂಡಿರಾ ಕಾಣಿರೆ ?
ತಾನು ಕಂಡುಕೊಳ್ಳಬಹುದಾದ ದರ್ಶನವನ್ನು ತನಗಿಂತ ಮುಂಚೆ ಯಾರಾದರೂ ಕಂಡಿದೀರಾ . ಹಾಗಿದ್ದರೆ ತನಗೆ ಹೇಳಿ ನಾನು ಆ ಚೆನ್ನ ಮಲ್ಲಿಕಾರ್ಜುನನನ್ನು ಹುಡುಕುತ್ತ ಹೊರಟಿದ್ದೇನೆ ಎಂದಿದ್ದಾಳೆ ಅಕ್ಕ ಮಹಾದೇವಿ . ಮತ್ತೆ ಮತ್ತೆ ಕಾಡುವ ಪ್ರಶ್ನೆ ಅಕ್ಕನಿಗೆ ಸತ್ಯ ಶೋಧನೆ , ದಿವ್ಯ ದರ್ಶನದ ಹುಡುಕಾಟ, ಅವುಗಳನ್ನು ಜಗತ್ತಿನ ಪಕ್ಷಿ ಕೀಟಗಳ ಮೂಲಕ ಕಾಣುವ ತವಕ .

ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೆ ನೀವು ಕಾಣಿರೆ
ಹೂವಿನಿಂದ ಹೂವಿಗೆ ಮಕರಂದ ಹೀರಿ ಝೇಂಕಾರದ ನಾದದಿ ಆಡುವ ಹಾಡುವ ದುಂಬಿಗಳನ್ನು ಅಕ್ಕ ಪ್ರಶ್ನೆ ಮಾಡುತ್ತಾಳೆ. ಎರಗಿ ಬಂದಾಡುವ ದುಂಬಿಗಳೇ ತಾವೇನಾದರೂ ಕಂಡಿದ್ದೀರಾ ?
ಸತ್ಯವನ್ನು ದರ್ಶನವನ್ನು ಪರಮಾತ್ಮನನ್ನು ತಾವೇನಾದರೂ ಕಾಣಬಯಸಿದ್ದೀರಾ ಎಂದು ಕೇಳುತ್ತಾಳೆ.

ಕೊಳನತಡಿಯೊಳಾಡುವ ಹಂಸೆಗಳಿರಾ ನೀವು ಕಾಣಿರೆ ನೀವು ಕಾಣಿರೆ
ತಿಳಿಗೊಳದ ನೀರಿನ ತಟದಲ್ಲಿ ದಂಡೆಯ ಮೇಲೆ ಸ್ವಚ್ಛ ನೀರಿನೊಳಗೆ ಮುಕ್ತವಾಗಿ ಈಜಾಡುವ ಹಂಸೆಗಳಿರಾ ಅಲ್ಲಿ ಏನಾದರೂ ನಿಮಗೆ ದೇವರ ದರ್ಶನವಾಯಿತಾ ಎಂದು ಕೇಳುತ್ತಾಳೆ ?
ಪಕ್ಷಿ ಪ್ರಾಣಿ ಸಸ್ಯಗಳ ಜೊತೆಗೆ ಸಂವಾದ ಡೆಸಿದ ಜಗತ್ತಿನ ಏಕೈಕ ಅನುಭವಿ ಅಕ್ಕ ಮಹಾದೇವಿ .ತನ್ನೊಳಗಿರುವ ಚೈತನ್ಯ ಸ್ಫೂರ್ತಿ ಎಲ್ಲ ಜೇವ ಜಾಲಗಳಲ್ಲಿ ಕಣದವಳು ಅಕ್ಕ.ಹಂಸೆ ಕೊಳದೊಳಗೆ
ನಿರಾಯಾಸವಾಗಿ ತೇಲುತಿದ್ದರು ಅವುಗಳ ಪದಗಳು ನಿರಂತರವಾಗಿ ಚಲಿಸಿ ನೀರಿನಲ್ಲಿ ಸಂಚಲನವನ್ನು ಉಂಟು ಮಾಡುತ್ತವೆ .ಹೊರಗೆ ಶಾಂತವಾಗಿ ಕಂಡರೂ ಕೆಲಿನ ಪಾದಗಳು ಸಂಘರ್ಷದಲ್ಲಿರುತ್ತವೆ .

ಗಿರಿ ಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೆ ನೀವು ಕಾಣಿರೆ
ಹುಲ್ಲು ಮರಡಿ ಗುಡ್ಡ ಗಿರಿ ಗವಿಗಳಲ್ಲಿ ತನ್ನ ಬಣ್ಣದ ಗರಿಗಳನ್ನು ಬಿಚ್ಚಿ ಸೌಂದರ್ಯವನ್ನು ತೋರುವ ನವಿಲಗಳನ್ನು ಅಕ್ಕ ಪ್ರಶ್ನಿಸುತ್ತಾಳೆ .ನವಿಲುಗಳಿರಾ ತಾವೇನಾದರೂ ದೇವರನ್ನು ಕಂಡಿದ್ದೀರಾ ? ನಿರಂತರವಾಗಿ ಕುಣಿಯುವ ತಣಿಯುವ ನವಿಲಿನಲ್ಲಿರುವ ಚೈತನ್ಯದ ಹಿಂದೆ ದೈವೀ ಶಕ್ತಿ ಇದೆ ಎಂದು ತಿಳಿದ ಅಕ್ಕಳು ಅವುಗಳನ್ನು ಮತ್ತೆ ಮತ್ತೆ ಕೇಳುತ್ತಾಳೆ ತಾವು ಸತ್ಯ ದರ್ಶನ ಮಾಡಿದ್ದೀರಾ ಎಂದು .

ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ
ಗಿಳಿ ಕೋಗಿಲೆ ಹಂಸೆ ನವಿಲು ದುಂಬಿಗಳ ಸಂತಸ ಆನಂದ ಚೈತನ್ಯದ ಹಿಂದೆ ದೇವರಿದ್ದಾನೆ . ಆ ದೇವರನ್ನು ಹುಡುಕುತ್ತ ಹೊರಟ ಬಾಲಕಿ ಅಕ್ಕ ಮಹಾದೇವಿ ಸೃಷ್ಟಿಯ ಜೊತೆಗೆ ತನ್ನ ಒಡನಾಟ ಮುಂದುವರೆಸಿ ಸೃಷ್ಟಿಯ ಕುರುಹೇ ದೇವರು ಎಂದು ನಂಬಿದವಳು .

ಸತ್ಯ ಶೋಧಕಿ ಅಕ್ಕ ಮಹಾದೇವಿ ತಾನು ಕಂಡ ಸುತ್ತಲಿನ ಚರಾಚರ ಜೀವಗಳಲ್ಲೂ ಚೈತನ್ಯವಿದೆ ಅವುಗಳ ಹಿಂದಿನ ಸೂತ್ರಧಾರನೆ ದೇವರು. ಅಂತಪ್ಪ ದೇವರನ್ನು ಕಾಣುವ ಪ್ರಯತ್ನದಲ್ಲಿ ಹೋರಾಟ ಅಕ್ಕ ಮಹಾದೇವಿ ಸಸ್ಯ ಪ್ರಾಣಿ ಪಕ್ಷಿ ದುಂಬಿಗಳನ್ನು ಪ್ರಶ್ನಿಸುತ್ತ ನಡೆಯುತ್ತಾಳೆ .

ಅಳಿ ಸಂಕುಲವೆ , ಮಾಮರವೆ
ಬೆಳದಿಂಗಳೆ, ಕೋಗಿಲೆಯೆ
ನಿಮ್ಮನೆಲ್ಲರನು ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನನ
ಕಂಡಡೆ ಕರೆದು ತೋರಿರೆ…

ಅಳಿ ಸಂಕುಲವನ್ನು ಮಾಮರವನ್ನು ಸೃಷ್ಟಿಯ ಪ್ರಸನ್ನ ಬೆಳದಿಂಗಳನ್ನು ,ಕೋಗಿಲೆಗಳನ್ನು ಸೆರಗೊಡ್ಡಿ ಬೇಡುವ ಅಕ್ಕ ಮಹಾದೇವಿ ತನ್ನೊಡೆಯ ಚೆನ್ನ ಮಲ್ಲಿಕಾರ್ಜುನ ಕಂಡರೆ ಅವಳನ್ನು ಕರೆದು ತೋರಲು ವಿನಮ್ರಿಸುತ್ತಾಳೆ.ಅಕ್ಕನ ಶೋಧನಾ ಜಗದ ಇತಿಹಾಸ ಪುಟದಲ್ಲಿ ಅತ್ಯದ್ಭುತವಾಗಿದೆ .ಇಂತಹ ನಡಿಗೆ ವಿರಳ .ಅಕ್ಕನ ವ್ಯಕ್ತಿತ್ವ ವಿಕಸನವನ್ನು ಮೂರು ಹಂತದಲ್ಲಿ ಕಾಣುತ್ತೇವೆ .

ಸತ್ಯ ಶೋಧನೆಗೆ ಹೊರಟ ಅಕ್ಕ ಮಹಾದೇವಿ ( PURGATION ) ಸೃಷ್ಟಿ ಯೊಳಗಿನ ಚೈತನ್ಯವನ್ನು ಅದರ ರಹಸ್ಯವನ್ನು ಭೇದಿಸುವ ಕಾರ್ಯದಲ್ಲಿ ಮಗ್ನಳಾಗಿದ್ದಾಳೆ . ತನ್ನ ಪ್ರಶ್ನೆ ತಾನೇ ಉತ್ತರ ಹುಡುಕುತ್ತ ಸರ್ವರಲ್ಲಿ ಸಂವಾದ ಮಾಡಿ ನಿರಂತರ ವೈಚಾರಿಕ ಚಿಂತನೆಗೆ ತನ್ನನು ತೊಡಗಿಸಿಕೊಂಡ ಶ್ರೇಷ್ಠ ಸಾಧಕಿ .ಅವಳ ಹೆಜ್ಜೆಗಳು ಕಲ್ಯಾಣದ ಕಡೆಗೆ .

ಕಲ್ಯಾಣ ಅಪ್ಪ ಬಸವಣ್ಣನವರ ನಾಯಕತ್ವದಲ್ಲಿ ಸಮತೆಯ ಸಂಘರ್ಷದ ಕೇಂದ್ರ ಬಿಂದು . ಅಲ್ಲಿ ಲಿಂಗ ತತ್ವ -ಗುರು ,ಜಂಗಮ, ಪ್ರಸಾದ, ಪಾದೋದಕ ತತ್ವಗಳ ಜೊತೆಗೆ ಸತ್ಯ ಶುದ್ಧ ಕಾಯಕ ಮಾಡುವ ಕಡ್ಡಾಯತನವಿತ್ತು. ಕಲ್ಯಾಣಕ್ಕೆ ಆಗಮಿಸಿದ ಅಕ್ಕ ಮಹಾದೇವಿ ಶರಣರ ನಡೆ ನುಡಿ ಆಚಾರ ವಿಚಾರಗಳಿಂದ ಪ್ರಭಾವಿತಳಾಗಿ ಅವರಲ್ಲಿ ಒಂದಾದಳು. ಪ್ರಭುದೇವರು ಒಡ್ಡುವ
ಪ್ರಶ್ನೆಗೆ ಸಮರ್ಥವಾಗಿ ದಿಟ್ಟವಾಗಿ ಉತ್ತರಿಸಿ ಶರಣರ ಸಂಗಮದಲ್ಲಿ ತಾನು ಕಾಣ ಬಯಸುವ ದರ್ಶನವನ್ನು ( ILLUMINATIOAN )ಕಾಣುತ್ತಾಳೆ .
ಅವಳ ಈ ವಚನದಲ್ಲಿ ಅವಳು ಕಂಡ ದರ್ಶನವನ್ನು ನಾವು ನೋಡಬಹುದು.

“ಗುರುವ ಕಂಡೆ ಲಿಂಗವ ಕಂಡೆ ಜಂಗಮವ ಕಂಡೆ ಪ್ರಸಾದವ ಕಂಡೆ ” ಯಾವ ಸತ್ಯವನ್ನು ಸೃಷ್ಟಿಯೊಳಗೆ ಪಕ್ಷಿ ಪ್ರಾಣಿ ದುಂಬಿ ಸಸ್ಯ ಹಂಸೆಗಳಲ್ಲಿ ಪ್ರಶ್ನಿಸಿದ್ದಳೋ ಅವುಗಳ ಉತ್ತರ ಶರಣ ಸತ್ಯ ಶುದ್ಧ ಬದುಕಿನಲ್ಲಿ ಕಂಡಳು .

ಕೆಲವು ವರ್ಷ ಕಲ್ಯಾಣದಲ್ಲಿದ್ದು ಮುಂದೆ ತನ್ನ ಮುಕ್ತಿ ಮಾರ್ಗಕ್ಕೆ ಬಯಲೊಗೆ ಬಯಲಾಗುವ ಕುಳಿಯೊಳಗೆ ಬೆರೆಯುವ ಉತ್ಕಟ ಆಶೆಯೊಂದಿಗೆ ತನ್ನ ಶರಣ ಸಂಕುಲವನ್ನು ಬಿನ್ನೈಸಿ ಕೇಳಿ ಕೊಳ್ಳುತ್ತಾಳೆ. ತಾನು ಬಂದ ಕಾರ್ಯವು ಕೈಗೂಡಿದೆ ,ತನಗೆ ಪರಮ ಸತ್ಯದ ಅರಿವಾಗಿದೆ . ಇನ್ನು ತನ್ನನ್ನು ಮುಕ್ತಗೊಳಿಸಬೇಕೆಂದು ಶರಣರಲ್ಲಿ ಕೇಳಿಕೊಳ್ಳುತ್ತಾಳೆ . ಆಗ ಶರಣಾಕ್ ಇಂತಹ ಎಳೆಯ ಬಾಲಕಿ ತಮ್ಮನ್ನು ಬಿಟ್ಟು ಹೇಗೆ ಹೋಗುವಳೆಂಬ ಆತಂಕದಲ್ಲಿರುವಾಗ . ಅಕ್ಕ ನಿಮ್ಮ ಮುಡಿಗೆ ಹೂವು ತರುವೆನಲ್ಲದೆ ಹುಲ್ಲು ತಾರೆನು ಎಂದಿದ್ದಾಳೆ .

ತಾನು ಕಲ್ಯಾಣ ಬಿಟ್ಟು ಕದಳಿಯ ಕಡೆಗೆ ಹೊರಟಾಗ .” ಲಿಂಗವೆನ್ನೆ ಲಿಂಗೈಕ್ಯವೆನ್ನೆ ,ಸಂಗವೆನ್ನೆ ಸಮರಸವೆನ್ನೆ ,ಆಯಿತ್ತೆನ್ನೆ ಆಗದೆನ್ನೆ, ಚೆನ್ನಮಲ್ಲಿಕಾರ್ಜುನ ನಿಮ್ಮೊಳಗಾದ ಬಳಿಕ ನಾನು ಏನೂ ಎನ್ನೆ.”
ಪ್ರಾಯಶ ಅಕ್ಕ ಸೃಷ್ಟಿಯ ರಹಸ್ಯ ಸತ್ಯವನ್ನು ಅರಿಯುತ್ತಾ ಅರಿಯುತ್ತಾ ತಾನೇ ಸೃಷ್ಟಿಯೊಳಗಿನ ಜಂಗಮ ಚೇತವಾದಳು ತಾನೇ ಲಿಂಗವಾದಳು ,ಅಂಗದ ಹಂಗು ತೊರೆದು ಲಿಂಗವಾದಳು ಅಕ್ಕ ಮಹಾದೇವಿ ಅಂಗ ಲಿಂಗವೊಂದಾದ ಬಳಿಕ ಲಿಂಗೈಕ್ಯವೆಂಬ ಪದಕ್ಕೆ ಅರ್ಥವುಂಟೆ ಎಂದು ಪ್ರಶ್ನಿಸಿ ಇಡೀ ಶರಣ ಸಮೂಹಕ್ಕೆ ಮಾದರಿಯಾಗಿ ನಿಲ್ಲುವಳು ಅಕ್ಕ ಮಹಾದೇವಿ. ತಾನೇ ಲಿಂಗವಾಗುವ ತಾನೇ ಚೆನ್ನ ಮಲ್ಲಿಕಾರ್ಜುನವಾಗುವ ಇಂತಹ ಸಾಧನೆಯನ್ನು ಸಂಗಮವೆಂದೆನ್ನುತ್ತೇವೆ . ಸಂಸ್ಕೃತದಲ್ಲಿ ಯುಜ್ ,ಕನ್ನಡದಲ್ಲಿ ಯೋಗ ಮತ್ತು ಅನುಭಾವಿಕ ಪದಗಳಲ್ಲಿ ಸಂಗಮ (UNIFICATION )
ಅಕ್ಕ ಮಹಾದೇವಿ ತನ್ನ ಕಲ್ಯಾಣದ ನೆನಪನ್ನು ಈ ರೀತಿಯಾಗಿ ಹೇಳುತ್ತಾಳೆ

ದೇವಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮೇರು ಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೇ ದೇವರು
ಚೆನ್ನ ಮಲ್ಲಿಕಾರ್ಜುನಯ್ಯಾ
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೇ ದೇವರು

ಬಸವಣ್ಣ ಮೌಲ್ಯಗಳ ಮೊತ್ತ .ಸತ್ಯ ಸಂದೇಶದ ಸಾರ .ಹೀಗಾಗಿ ದೇವರೆಂಬ ಭ್ರಮೆಯಿಂದ ಹೊರ ಬಂದು ಸೃಷ್ಟಿಯೊಳಗಿನ ಸತ್ಯ ಶುದ್ಧ ಜೀವನ ದರ್ಶನವನ್ನು ಹೊಂದುವ ಸಕಲ ಜೀವಾತ್ಮರ ಆತ್ಮವೇ ಚೈತನ್ಯ ದೇವರೆಂದು ಹೇಳಿದ ಗಟ್ಟಿ ಅನುಭವಿ ಸತ್ಯ ಶೋಧಕಿ ಮರ್ತ್ಯ ಸಾಧಕಿ ಅಕ್ಕ ಮಹಾದೇವಿ

*ಡಾ.ಶಶಿಕಾಂತ.ಪಟ್ಟಣ ಪುಣೆ* 9552002338

 

Don`t copy text!