ನರಕ’ ಯಾವುದಯ್ಯಾ!

ನರಕ’ ಯಾವುದಯ್ಯಾ!

ಜೀವ ಕೈಯಲ್ಲಿ,
ಎದೆಯೊಳಗೆ ಆತಂಕ
ಪ್ರತಿಕ್ಷಣವೂ ಉಸಿರು
ನಿಂತ ಭಯ, ಎದೆಬಡಿತ
ಇನ್ನೇನು ‘ಉಳಿದಿದೆ’ ಜೀವನಕ್ಕೆ

ಜೀವ ಉಳಿವಿಗೆ ಹಾಸಿಗೆ ಕೊರತೆ
ಉಸಿರು ಖರೀದಿಗೆ ಸಾಲು ಸಾಲು
ಸ್ಮಶಾನ ಕೂಡ ಸೋತು ನಿಂತಿದೆ
ಹೆಣಗಳ ಭಾರ ತಾಳಲಾರದೆ
ಇನ್ನೇನು ‘ಬೇಕಾಗಿದೆ’ ಬದುಕಿಗೆ

ಸಾವಿನ ಮನೆಯಲ್ಲಿ ಆಕ್ರಂದನ
ಕಾಣದ ವೈರಸ್ಸಿನ ಕರಾಳ ನರ್ತನ
ಬಂಧಿಯಾಗಿದೆ ಬದುಕು ಮುಷ್ಠಿರೊಳಗೆ
ಕಳೆದು ಹೋಗಿವೆ ಅದೆಷ್ಟೋ ಜೀವಗಳು
ಇನ್ನೇನು ‘ಹೇಳಬೇಕಾಗಿದೆ’ ಪ್ರಭುತ್ವಕ್ಕೆ

ಬಡವರ ಕಣ್ಣೀರು ರಕ್ತವಾಗಿ ಹರಿದಾಗ
ಬೀದಿಯಲ್ಲಿ ಜೀವಕ್ಕಾಗಿ ನರಳಾಟ
ಮೌನ ಮುರಿಯದೆ ಕಣ್ಮುಚ್ಚಿ ಕುಳಿತಾಗ
ಜೀವ ಉಳಿಸದವರು ಜೀವನ ಉಳಿಸಿದಾರೆ?
ಇನ್ನೇನು ‘ಹುಡುಕಬೇಕಾಗಿದೆ’ ಸ್ವರ್ಗದ ದಾರಿ

ಹಾಸಿಗೆಯ ಜಾಗ ಕೊರತೆಯಾದಾಗ
ಸ್ಮಶಾನ ಜಾಗಕ್ಕೆ ಬೇಡಿಕೆ ಬಂದಿತೇ!
ಚಿತೆಯ ಬೂದಿಯ ಕೆಂಡ ಆರ್ಭಟಿಸುವಾಗ
ಎಲ್ಲೆಡೆ ಸೂತಕ ಮೌನದ ಕತ್ತಲು ಆವರಿಸಿದೆ
ಇನ್ನೇನು ‘ನೋಡಬೇಕಾಗಿದೆ’ ನರಕ ದರ್ಶನ

ಬಾಲಾಜಿ ಕುಂಬಾರ,ಚಟ್ನಾಳ

Don`t copy text!