e- ಸುದ್ದಿ, ಮಸ್ಕಿ
ಕರೊನಾ ಎಡರನೇ ಅಲೆ ದಿನದಿಂದ ದಿನಕ್ಕೆ ನಾಗಲೋಟಕ್ಕೆ ನೆಗೆಯತೊಡಗಿದೆ. ಕಳೆದ ವರ್ಷ ಕರೊನಾ ಹಾವಳಿಯಿಂದ ಕಂಗಾಲಗಿದ್ದ ಜನ ಈಗೀಗ ಚೇತರಿಸಿಕೊಳ್ಳುವ ಮುನ್ನವೇ ಲಗ್ಗೆ ಇಟ್ಟು ಸಾರ್ವಜನಿಕರು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆ ಮುಕ್ತಾಯದ ಬಳಿಕ ಕೋವಿಡ್-19 ಕೇಸ್‍ಗಳ ಸಂಖ್ಯೆ ಹೆಚ್ಚಿದೆ. ಬೈ ಎಲೆಕ್ಷನ್ ಪ್ರಚಾರಕ್ಕೆ ರಾಜಕೀಯ ಮುಖಂಡರಲ್ಲಿ ಕರೊನಾ ಕಾಣಿಸಿಕೊಂಡು ತಳ ಊರಲು ಸಾಧ್ಯವಾಗಿತ್ತು. ಈಗ ರಾಜಕೀಯ ನಾಯಕರು ಮಾತ್ರವಲ್ಲ ಸಾಮಾನ್ಯ ಜನರಲ್ಲೂ ಕರೊನಾ ಸೋಂಕು ವ್ಯಾಪಿಸಿದ್ದು, ಜನರ ತಳಮಳಕ್ಕೆ ಕಾರಣವಾಗಿದೆ!.
ಏ.17ರಂದು ಮಸ್ಕಿ ಕ್ಷೇತ್ರದ ಉಪಚುನಾವಣೆ ಮತದಾನ ದಿನಾಂಕ ನಿಗದಿಯಾಗಿತ್ತು. ಹೀಗಾಗಿ ಮತದಾರರನ್ನು ಸೆಳೆಯಲು ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಹಲವು ಮಂತ್ರಿಗಳು, ಶಾಸಕರು, ಹಾಲಿ-ಮಾಜಿ ಸಚಿವರು, ಶಾಸಕರುಗಳ ದಂಡು ಪ್ರಚಾರಕ್ಕೆ ಆಗಮಿಸಿತ್ತು. ಮಸ್ಕಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆಯೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೋವಿಡ್-19 ದೃಢವಾಗಿತ್ತು. ಇದಾದ ಬಳಿಕ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, ಸುರುಪುರ ಶಾಸಕ ರಾಜುಗೌಡ, ಬಿಜೆಪಿ ಮುಖಂಡರಾದ ತಮ್ಮೇಶಗೌಡ, ಪ್ರತಾಪಗೌಡ ಪಾಟೀಲ್ ಕುಟುಂಬದ ಐವರು ಸದಸ್ಯರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಆದರೆ ಈ ಸಂಖ್ಯೆ ಇಷ್ಟಕ್ಕೆ ನಿಲ್ಲಲಿಲ್ಲ. ಮಾಜಿ ಶಾಸಕ ಶಿವರಾಜ ತಂಗಡಗಿ ಸೇರಿ ಕಾಂಗ್ರೆಸ್‍ನ ಹಲವು ನಾಯರಿಗೂ ಸೋಂಕು ಹರಡಿತ್ತು. ವರದಿಗಾರಿಕೆಗೆ ಆಗಮಿಸಿದ ದೃಶ್ಯ, ಮುದ್ರಣ ಮಾಧ್ಯಮದ ಹಲವೂ ಪತ್ರಕರ್ತರಲ್ಲೂ ಕೋವಿಡ್-19 ಪತ್ತೆಯಾಗಿತ್ತು. ಆದರೆ ಇವರೆಲ್ಲ ಐಸೋಲೆಶನ್‍ಗೆ ಒಳಗಾಗಿ ಗುಣಮುಖರಾಗುವ ವೇಳೆಗೆ ಜನಸಾಮಾನ್ಯರಲ್ಲಿ ಹರಡಿದೆ.
ಪರೀಕ್ಷೆ ಬಳಿಕ ದೃಢ: ಮಸ್ಕಿ ಉಪಚುನಾವಣೆ ಬಳಿಕ ಮಸ್ಕಿ, ತುರುವಿಹಾಳ, ಬಳಗಾನೂರು ಸೇರಿ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಕುರಿತಾಗಿ ಟೆಸ್ಟ್‍ಗಳನ್ನು ಮಾಡಲಾಗುತ್ತಿದೆ. ಜಿಲ್ಲಾಡಳಿತ ನಿತ್ಯ 250 ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲು ಗುರಿ ನೀಡಿದೆ. ಆದರೆ 100-120 ಜನರು ಮಾತ್ರ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಲ್ಲಿ ಶೇ.35ರಷ್ಟು ಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಕೋವಿಡ್-19ಗೆ ಒಳಗಾದವರ ಸಂಖ್ಯೆ ಆತಂಕ ಹುಟ್ಟಿಸುವಂತೆ ಮಾಡಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 28 ಕೇಸ್‍ಗಳು ಪತ್ತೆಯಾಗಿದ್ದರೆ, ಸೋಮುವಾರ ಈ ಸಂಖ್ಯೆ 10ರ ಗಡಿ ದಾಟಿದೆ. ಇನ್ನು ಏ.17 ಮತದಾನ ಮುಗಿದ ದಿನದಿಂದ ಹಿಡಿದು ಇಲ್ಲಿಯವರೆಗೆ (ಏ.26) ಒಟ್ಟು 90ಕ್ಕೂ ಹೆಚ್ಚು ಜನರಲ್ಲಿ ಕೋವಿಡ್-19 ಇರುವುದು ಪತ್ತೆಯಾಗಿದೆ.
ಶಿಬಿರ ಅಗತ್ಯ: ಉಪಚುನಾವಣೆ ಮುಕ್ತಾಯದ ಬಳಿಕ ಮಸ್ಕಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಆರೋಗ್ಯ ಇಲಾಖೆ ಲೆಕ್ಕಚಾರವಾಗಿದೆ. ಹೀಗಾಗಿ ಮಸ್ಕಿಯಲ್ಲಿ ಕೋವಿಡ್-19 ಪರೀಕ್ಷೆ, ಚಿಕಿತ್ಸೆಗಾಗಿ ಪ್ರತ್ಯೇಕ ಶಿಬಿರಗಳ ಆಯೋಜನೆ ಅತ್ಯಗತ್ಯವಾಗಿದೆ. ಈ ಹಿಂದೆ ಜಿಲ್ಲಾಡಳಿತವೇ ಹೇಳಿದಂತೆ ಚುನಾವಣೆ ಮುಕ್ತಾಯದ ಬಳಿಕ ರಾಜಕೀಯ ಪಕ್ಷಗಳು ನಡೆಸಿದ್ದ ಬೃಹತ್ ರ್ಯಾಲಿ, ಸಮಾವೇಶದ ಸ್ಥಳಗಳಲ್ಲಿ ರ್ಯಾಂಡಂ ಆಗಿ ಕೋವಿಡ್-19 ಪರೀಕ್ಷೆ ಮಾಡುವುದು ಅಗತ್ಯವಾಗಿದೆ. ಈ ರೀತಿ ಪರೀಕ್ಷೆ ನಡೆಸಿದರೆ ಎಷ್ಟು ಜನರಿಗೆ ಸೋಂಕು ಹರಡಿದೆ? ಎನ್ನುವುದು ನಿಖರವಾಗಿ ಗೊತ್ತಾಗಲಿದೆ.
………..
ತಹಸೀಲ್ದಾರ್‍ಗೂ ಸೋಂಕು
ಚುನಾವಣೆ ಸಮಯದಲ್ಲಿ ಕರ್ತವ್ಯದ ಮೇಲೆ ಓಡಾಡಿದ ಮಸ್ಕಿ ತಹಸೀಲ್ದಾರ್ ಮಹೇಂದ್ರಕುಮಾರ್ ಅವರಿಗೂ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಮೂರು ದಿನಳ ಹಿಂದೆ ಕೋವಿಡ್-19 ಪತ್ತೆಯಾಗಿದ್ದು, ಹೋಮ್‍ಐಸೋಲೇಶನ್‍ಗೆ ಒಳಗಾಗಿದ್ದಾರೆ. ತಹಸಿಲ್ ಕಚೇರಿಯ ಇನ್ನಿತರ ಇಬ್ಬರು ಸಿಬ್ಬಂದಿಗಳಲ್ಲು ಕೋವಿಡ್-19 ದೃಢವಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರು ಮುಂಜಾಗೃತವಾಗಿ ಕ್ವಾರಂಟೈನ್ ಆಗಿದ್ದಾರೆ.