ಪುಸ್ತಕ ಪರಿಚಯ
ಬೆಳಕಿನ ಬಿತ್ತನೆ
ಬಾ.ಕವಿತಾ ಕುಸುಗಲ್ಲ ಅವರ ಕವನ ಸಂಕಲನ ಬೆಳಕಿನ ಬಿತ್ತನೆ ಹೆಣ್ಣಮನದ ಭಾವನೆಗಳನ್ನು ವಿಭಿನ್ನ ರೂಪದಲ್ಲಿ ಬಿಂಬಿಸಿದ ವಿಶಿಷ್ಟ ಕವನ ಸಂಕಲನವಾಗಿದೆ. ಕವಿಯಿತ್ರಿ ತಮ್ಮ ೭೭ ಕವನಗಳಲ್ಲಿ ತಮ್ಮನ್ನು ತಾವೆ ಬೇರೆ ಬೇರೆ ರೂಪಗಳಲ್ಲಿ ಚಿತ್ರಿಸಿಕೊಂಡಿದ್ದಾರೆ.
ಬದುಕಿಗೆ ಜೊತೆಯಾದ ನಂಟುಗಳೆಲ್ಲದರೊಂದಿಗೆ
ತಮ್ಮ ಅನುಬಂಧಗಳನ್ನು ಈ ಕವನಗಳಲ್ಲಿ ಅನಾವರಣಗೊಳಿಸಿದ್ದಾರೆ.
ಒಂದು ಹೆಣ್ಣು ತನ್ನ ಜೀವನದಲ್ಲಿ ನಿರ್ವಹಿಸುವ ಎಲ್ಲಾ ಪಾತ್ರಗಳಿಗೆ
ಸರಿಯಾಗಿ ನ್ಯಾಯಒದಗಿಸುವಲ್ಲಿ
ಮಾಡುವ ಹೋರಾಟದ ಸೂಕ್ಷ್ಮ ಸಂವೇದನೆಗಳನ್ನೆಲ್ಲಾ ಪುಟ್ಟ ಪುಟ್ಟ ಸಾಲುಗಳ ಹನಿಗವನಗಳಾಗಿ
ಭಾವದೊತ್ತಡದಲಿ ಸ್ಫೋಟಿಸಿದ ಪದಗಳನ್ನೆಲ್ಲಾ ಚೆಲ್ಲಾಪಿಲ್ಲಿ ಆಗದಂತೆ ತಾಳ್ಮೆ ಇಂದ ಒಂದೊಂದೆ ಪದಗಳನ್ನು ಹೆಕ್ಕಿ ಸಮತೂಕದಲ್ಲಿ ಜೋಡಿಸಿಟ್ಟ ನೀಳ್ಗವನಗಳು ಇವೆ. ಅವರೆ ಹೇಳುವಂತೆ ಸೃಷ್ಟಿ ಯಲ್ಲಿರುವ ನಾಲ್ಕು ಋತುಗಳಂತೆ ಇವರ ಕವನಗಳು ನಾನು,ನೀನು,ಆನು,ತಾನು ಎಂಬ
ನಾಲ್ಕು ವಿಭಾಗಗಳಲ್ಲಿ ಕವಿಯಿತ್ರಿತಮ್ಮ ಬದುಕಿನ ಅನುಭವ ಕಲಿಸಿ ಕಲಿತ ಪಾಠ ಸಂಭಂಧಗಳ ಒಳಸುಳಿಗಳನು ಬಲು ನವಿರಾದ ಪದಗಳಲ್ಲಿ ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ.
ನೋವಿದ್ದರು ಪದಗಳಲಿ ಚಿತ್ಕಾರವಿಲ್ಲಾ, ಖುಷಿಯನ್ನು ತೀರಾ ಸರಳವಾಗಿ ಸ್ವೀಕರಿಸಿ, ಮನದಾಳದ ಆಕ್ರೋಶವನ್ನು
ತೀರಾ ತಣ್ಣಗಿನ ಮಾತಿನಲಿ ಹೇಳಿರುವುದು ತಾಳಲಾರದ ಭಾವಗಳನು ಹೇಳಿ ಹಗುರಾಗಿಸಿಕೊಳ್ಳಲು ಬರೆದ ಕವನಗಳು ಓದುಗರಿಗೆ ಥಟ್ಟನೆಯೆ, ಕವನದ ಆಶಯಗಳನ್ನು ಪರಿಚಯಿಸಿ ಬಿಡುವಷ್ಟು ಸರಳವಲ್ಲ ದಿದ್ದರೂ ಮತ್ತೆ ಮತ್ತೆ ಓದಿದಾಗ ತಿಳಿಯಲಾದಷ್ಠು ಸಂಕೀರ್ಣವೇನು ಇಲ್ಲದ ಕವನಗಳು,
ಕವನ ರಚನೆಯ ನಿಯಮಗಳ ಚೌಕಟ್ಟಿನಲ್ಲಿ ಬಂಧಿಆಗಿಲ್ಲ. ಹೇಳಬೇಕೆನಿಸಿದ್ದನ್ನು ಯಾವುದೆ ಮಿತಿಗೆ
ಒಳಪಡಿಸಿದೆ ಮುಕ್ತವಾಗಿ ಬರೆದ ಕವನಗಳಲ್ಲಿ ಬಹುತೇಕ ಕವನಗಳು ಸಶಕ್ತವಾಗಿವೆ .ಓದುಗರನ್ನು ಚಿಂತನೆಗೆ ಹಚ್ಚುವ ಅಂಶಗಳನ್ನು ಒಳಗೊಂಡಿವೆ.
ಸಂಕಲನದ ಮೊದಲನೆ ಕಿರುಗವನ
ಮಗಳಾಗಿ ಬಾ ಕೇವಲ ನಾಲ್ಕು ಸಾಲಿನಲ್ಲಿ ಹೆಣ್ಣೆಂದರೆ ಏನು ಎಂಬುದನ್ನು ಪುರುಷನಿಗೆ ಪ್ರಾಯೋಗಿಕವಾಗಿ ತೋರಿಸಲು ತನ್ನ ಒಡಲಿಗೆ ಕರೆವ ಭಾವ ತುಂಬಾ ಚೆನ್ನಾಗಿ ಮೂಡಿಬಂದಿದೆ.
“ರಾಮ” ಶೀರ್ಷಿಕೆಯ ಕವನದಲ್ಲಿ ಸೀತೆಯನ್ನು ಎಲ್ಲಾ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನಿಲ್ಲಿಸಿ ಸತಿಗೆ ಪತಿಯ ಎದೆಯಲೊಂದು ಪ್ರೀತಿಯಪುಟ್ಟ ಸ್ಥಾನ ಸಾಂಗತ್ಯವು ಎಲ್ಲ ಅಧಿಕಾರ ಐಶ್ವರ್ಯ ಗಳಿಗಿಂತ ದೊಡ್ಡದೆಂಬುದನ್ನು ಬಹಳ ನವಿರಾದ ಸಾಲುಗಳಲ್ಲಿ ಸಹಜ ಧ್ವನಿಯಲ್ಲಿ ಕೇಳಿರುವಂತಿದೆ.
” ನಾನು” ಎಂಬಲ್ಲಿನ ಸಂಕಲನ ಹೊತ್ತಿಗೆಗೆ ಹೆಸರಾದ ಕವನ “ಕತ್ತಲೆಯಲ್ಲಿ ಬೆಳಕಿನ ಬಿತ್ತನೆ”ಕವಿಯತ್ರಿಯ ಸೂಕ್ಷ್ಮ ಮನದ ಸಂವೇದನೆಗೆ ಹಿಡಿದ ಕನ್ನಡಿಯಂತಿದೆ.
ಹೆಣ್ಣಾಗಿ ನಿಂತು ನೋಡುವ ಪಾತ್ರದಲ್ಲಿ ಈ ಕವನ ಬಹಳ ಪ್ರಮುಖ ಎನ್ನಿಸುತ್ತದೆ.ತನ್ನೆಲ್ಲಾ ಕರ್ತವ್ಯ ಗಳನು
ಹಗಲಿರುಳು ಪೂರೈಸಿ ಒಂದಿಷ್ಟು ವಿಶ್ರಮಿಸುವಷ್ಟರಲ್ಲಿ ಬೆಳಕಾಗುವ ದಿನದ ಪ್ರಾರಂಭಕ್ಕೆ ತನ್ನನ್ನೇ ಒಡ್ಡಿಕೊಳ್ಳುವ ಪ್ರತಿ ಹೆಣ್ಣಿನ ದಿನಚರಿಯ ಪುಟಬರಹದಂತಿದೆ.
“ನಾನೀಗ…” ಎನ್ನುವ ಕವನವು
ಹೆಣ್ಣಿನ ಬದುಕಿನ ಬದಲಾವಣೆಯ
ಹಂತಗಳಲ್ಲಿ ಆಗುವ ಆಕೆಯ ದೈಹಿಕ ಮಾನಸಿಕ ಬದಲಾವಣೆ ಚಿತ್ರಣವನ್ನು ಇಲ್ಲಿ ಚಿತ್ರಿಸಲಾಗಿದೆ.
ಎರಡನೆ ಭಾಗ” ನೀನು”ವಿನಲ್ಲಿ ಕವಿಯಿತ್ರಿಇಲ್ಲಿ ತನ್ನ ಮಗ ಮಗಳು ಗಂಡನನ್ನು ಸಂಭೋಧಿಸಿ ಬರೆದ ಕವನಗಳಲ್ಲಿ ಥಟ್ಟಂತಾ ಗಮನ ಸೆಳೆವ ಕವನ “ನನ ಕಂದಾ” ಮಡಿಲ ಕಂದನ ಪ್ರೀತಿಯಲಿ ತೇಲಿ ಹೋಗುವ ತಾಯಿಯ ಮಮತೆಯ ಐಸಿರಿಯನು ಅನಾವರಣ ಗೊಳಿಸಿದ ಕವನದ ಒಂದು ಚಂದದ ಸಾಲು” ಕಾಪಿಟ್ಟ ಕನಸುಗಳಿಗೆ ವಾರಸುದಾರ” ಮಗುವಿನ ಮೇಲೆ ತಾಯಿ ಕಟ್ಟಿದ ಭರವಸೆಯ ಕನಸುಗಳ ಸುಂದರ ಹಂದರದಂತಹಾ ಕವನವಿದು.”ಹಾರೈಕೆ” ಎಂಬ ಕವನದಲ್ಲಿ ಯಶೋಧೆಯ ಮಮತೆ
ಎದ್ದು ಕಾಣುತ್ತದೆ. ಇಲ್ಲಿನ ಬಹಳಷ್ಟು ಕವನಗಳು ತಾಯಿ ಮಮತೆ ಸೆಲೆಯಲ್ಲಿ
ಚಿಮ್ಮಿದ ತುಂತುರು ಹನಿಗಳಂತಿವೆ.
ಮೂರನೆಯ ಭಾಗ “ಆನು“ವಿನಲ್ಲಿ
ವಾಸ್ತವಿಕ ಬದುಕಿನ ಅನುಭವಗಳೆ ಕವನದ ಸಾಲುಗಳಾಗಿವೆ ಅಂದರೆ
ತಪ್ಪಿಲ್ಲಾ. “ಪ್ರೀತಿಯೆಂದರೆ…..” ಈ ಕವನದಲ್ಲಿ ಪ್ರೀತಿಯನು ಕಾವ್ಯಕ್ಕೂ ಧ್ಯಾನಕ್ಕೂ ಅರ್ಥೈಸಿ ,ಮಾತಿನ ಆವಾಂತರ ಮೌನದ ಅವಿರ್ಭಾವತೆಯನ್ನು ತಿಳಿಸುತ್ತಾ
ಎಲ್ಲದಕ್ಕೂ ಮಿತಿಯ ಚೌಕಟ್ಟು ಇರುವಂತೆ ಮನದ ಆಳವನರಿಯಲು
ಏಣಿ ಬೇಕೆ ಎಂಬ ಪ್ರಶ್ನೆಗೆ ಪ್ರೀತಿಯಲ್ಲೆ
ಉತ್ತರಿಸಿದ ಕವನ ಸೊಗಸಾಗಿದೆ. ” ಕಲ್ಲುಕರಗುವ ಸಮಯ” ಈ ಕವನದಲ್ಲಿ ಕಲ್ಲಿಗಿಂತ ಮನಕಠೋರವಾದರೆ ಹಾಲು ಕೂಡಾ ವಿಷವಾಗಿ,ನೆರಳು ಸುಡುಬಿಸಿಲಾದಾಗ
ಕಳೆದು ಹೋಗುವ ನಂಬಿಗೆ ಬಿಕ್ಕಳಿಸುವ ಪ್ರೀತಿ ಅಹಂಮಿಕೆಯಲ್ಲಿ ಬೆಂದು ಬಸವಳಿದಾಗಬದುಕು ಭಾರವಾಗುವುದು ಸಹಜ ,ಅದಕ್ಕೆ ಕವಿಯಿತ್ರಿ ಈ ಕವನದ ಕೊನೆಯ ಸಾಲಿನಲ್ಲಿ ಹೇಳುವಂತೆ ” ನೀರಮೇಲಿನ ಗುಳ್ಳಿ ಇದ್ದಷ್ಟು ಸೊಗಸಿರಲಿ” ಎಂದು ಈ ಕ್ಷಣಿಕ ಬದುಕನ್ನು ಪಾರಮಾರ್ಥಿಕ ನೆಲೆಗಟ್ಟಿನಲ್ಲಿ ಅರ್ಥೈಸಿದ್ದಾರೆ. ನೆನಪಿನಂಗಳದಿ ಉಳಿದ ಸುಂದರ ನೆನಹುಗಳನ್ನು ದಾಖಲಿಸಿದ ಕವನ”ಕಾಲೇಜು ದಿನಗಳು” ಈ ಕವನ
ವಿದ್ಯಾರ್ಥಿ ಬದುಕಿನ ಅವಿಸ್ಮರಣೀಯ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಆಟ ಪಾಠ ನಾಟಕ ಗುರುವೃಂದ ಪ್ರವಾಸ
ಕೊನೆಗೆ ಕ್ಯಾಂಪಸ್ಸಿನಲ್ಲಿರುವ ಹಕ್ಕಿಗಳ
ಕಲರವವನ್ನು ಮನದಲ್ಲಿ ತುಂಬಿರಿಸಿಕೊಂಡು ಕವನದಲ್ಲಿ ದಾಖಲಿಸಿದ್ದು ಅವರನಡುವಿದ್ದ ಅವಿನಾಭಾವ ಸಂಬಂಧಕೆ ಸಾಕ್ಷಿ ಯಂತಿದೆ.
ಸಂಕಲನದ ಕೊನೆಯ ಭಾಗ ತಾನು
ಕವಿಯತ್ರಿ ತನ್ನ ಸುತ್ತಲಿನ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತ ಕೆಲ ಕವನಗಳಲ್ಲಿ ವ್ಯವಸ್ಥೆ ವಿರುದ್ಧ ಪ್ರತಿಭಟನೆ , ಪ್ರಶ್ನೆ, ಕಳಕಳಿ ,ನ್ಯಾಯ ಎಲ್ಲವನ್ನು ಎದುರಿಗೆ ನಿಂತು ಕೇಳುವ
ಹಕ್ಕನ್ನು ಚಲಾಯಿಸಿದ್ದು ಇದೆ. ಆದರೆ ಒಂದಂತು ನಿಜ ಪ್ರತಿಭಟನೆ ಧ್ವನಿ ಪ್ರತಿಧ್ವನಿಸುವಷ್ಟು ಗಟ್ಟಿ ಇರದಿದ್ದರೂ
ಒಂದು ಹದದ ಬಿಸಿಯಲ್ಲಿದೆ.
“ಕನಕನ ಕಿಂಡಿಯ ಬೆಳಕು” ಈ ಕವನ ಥಟ್ಟನೆ ದಾಸರಪವನ್ನು ನೆನಪಿಸುವ ಆರಂಭದ ಸಾಲುಗಳು ಕನಕನನ್ನೆ ಕುರಿತು ಪ್ರಸ್ತುತೆಗೆ ಹೊಂದಿಸಿಕೊಂಡು ಬರೆದ ಈ ಕವನ ಕೊನೆಯ ಸಾಲು ಮಾತ್ರ ಕವನದ ಜೀವಾಳದಂತೆ “ನಕಲಿ ಬದುಕಿಗೆ ಅಸಲಿ ಉತ್ತರ ನೀ” ಎಂಬ ವ್ಯಂಗದಲ್ಲಿ ಕೊನೆಗೊಂಡು ಗಮನ ಸೆಳೆಯುತ್ತದೆ. ” ಮನದ ಗುಡಲಿ ಗುಬ್ಬಿ” ಎಂಬ ಇನ್ನೊಂದು ಕವನದಲ್ಲಿ ಇಂದಿನ ತಾಂತ್ರಿಕ ಯುಗದಲ್ಲಿ ಸಹಜತೆಯ ಎಲ್ಲವಕ್ಕೂ ಸುಂಕದ ಬೆಲೆ ನಿಗದಿಸಿ ಕೃತಕ ಆವಿಷ್ಕಾರ ಗಳನು ಕಂಡು ಋತುಗಳೆ ತಬ್ಬಿಬ್ಬು ಎನ್ನುವ ಕವಿಭಾವ ಮಂಗಳನ ಅಂಗಳದಿ ರಂಗೋಲಿ ಇಡುವಷ್ಟು ಮುದುವರೆದರು ನಿಜ ಬದುಕಲಿ ಪಕ್ಕದವರ ಮನದ ಮಾತು
ತಿಳಿಯಲಾರದಷ್ಟು ಬಂಧ ಸಂಬಂಧಗಳು ದೂರವಾಗಿವೆ ಎಂಬ ಅಳಲು ಈ ಕವನದಲ್ಲಿ ಎದ್ದುಕಾಣುತ್ತದೆ.
ಜಗತ್ತೆ ಎದುರಿಸಿದ “ಕರೋನಾ ಜ್ವರ” ಕುರಿತು ಆ ದುರಿತದಿನಗಳ ಕಹಿನೆನಪನ್ನು ದಾಖಲಿಸಲೆಂದೆ ಬರೆದು. ಈ ಕವನದಲ್ಲಿ ಯಾರು ತನ್ನವರು ಯಾರು ಅಲ್ಲರು ಎಂಬುದನ್ನು ಸ್ಪಷ್ಟ ಪಡಿಸಿದ
ಅನುಭಾವದ ಸಾಲುಗಳಲ್ಲಿ ಈ ಜಗ ಇಂಥ ರೋಗದಿಂದ ಕೊನೆಯಾಗದೆ ಮಾನವೀಯ ನೆಲೆಗಟ್ಟಿನಲ್ಲಿ ಸಿಗುವ ಪ್ರೀತಿಯನುಂಡು ಜಗದ ನಂಟಿಗೆ ವಿದಾಯ ಹೇಳುವುದು ಲೇಸೆಂದ ತಿಳಿಸಿದ ಕವನ ಚಂದವೆನ್ನಿಸುತ್ತದೆ.
ಮತ್ತೋಂದು ಕವನ ” ಅಪ್ಪಿ ನಡೆ”
ಯಲ್ಲಿ ಸಾವು ಬರುವ ಕ್ಷಣಯಾವುದೊ ಗೊತ್ತಿಲ್ಲಾ. ಈ ಕ್ಷಣದ ಉಸಿರು ಯಾವ ಕ್ಷಣದಲ್ಲಾದರೂ ನಿಲ್ಲಬಹುದು ಇಂತಹ ಕ್ಷಣಿಕ ಬದುಕಿನಲ್ಲಿ ಬೀಗಿ ಅಹಮಿಕೆಯಲ್ಲಿ ಬಾಳದೆ ಬಾಗಿ ವಿನಯದಿಂದ ಪ್ರೀತಿ ಮಮತೆಯಲ್ಲಿ ಅಪ್ಪಿ ಬದುಕಿದರೆ ಕರಕಿಯ ಹಾಗೆ ಬದುಕು ರಸಬಳ್ಳಿತರಹಹಬ್ಬಿ ಹರಡಬಹುದು ಎಂಬ ಸದಾಶಯ ಹೊಂದಿದ ಕವನ ಬದುಕಿನ ಅರ್ಥವನ್ನು ಅವರ ವಿವರಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಾರೆ ಈ ಸಂಕಲನದ ಎಲ್ಲಾ ಕವನಗಳಲ್ಲಿ ಪ್ರೀತಿ,ನೋವು, ಹತಾಶೆಯ, ಸಂಘರ್ಷ, ಗೆಲುವು
ಹೀಗೆ ಮನದ ಎಲ್ಲಾ ಭಾವನೆಗಳನ್ನು
ಬಿಂಬಿಸಿ ಓದುಗರಿಗೆ ಹೊಸತನದೊಂದಿಗೆ ನಿಜ ಬದುಕಿನ ಅರ್ಥ ಅರಹುವಲ್ಲಿ ಸಮರ್ಥವಿಗಿದೆ ಎಂದರೆ ತಪ್ಪಿಲ್ಲಾ. ಅದುರೆ ಕವಿಯಿತ್ರಿಯು ಹೇಳಬೇಕಾದ ಎಲ್ಲವನ್ನು ಸೂಕ್ಷ್ಮವಾಗಿ ಸಹಜವಾಗಿ ಹೇಳಿ ಆಕ್ರೋಶವನ್ನು ತಣ್ಣನೆ ದನಿಯಲ್ಲಿ ವರದಿಸಿ ಸಮಾಧಾನಗೊಂಡಂತಿದೆ.
ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೆ ವಿಶಿಷ್ಟ ಶೈಲಿಯ ಬರಹದ ಮೂಲಕ ತಮ್ಮನ್ನು ಈ ಕೃತಿಯ ಮೂಲಕ ಪರಿಚಯಿಸಿಕೊಂಡ ಕವಿಯಿತ್ರಿ ಇಂದು ಇನ್ನು ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿಗಳು ಸಾಲಾಗಿ ಬರೆಸಿಕೊಂಡು ಬರಲಿ ಎಂಬ ಆಶಯ ವ್ಯಕ್ತಪಡಿಸುವೆೆ.
–ಶ್ರೀ ಮತಿ ಆಶಾ ಎಸ್ ಯಮಕನಮರಡಿ