ಕತ್ತಲಲ್ಲಿ ಬೆಳಕೇ ಇಲ್ಲ, ಜಗಕೆ ಬೆಂಕಿ ಹತ್ತಿದೆ
ಕೂಸುಗಳಿಗೆ ಹಾಲು ಇಲ್ಲ, ಪಶುಬಲಿಯೇ ನಡೆದಿದೆ.
ಕಾಳು ಇದೆ ಕೂಳು ಇಲ್ಲ, ಹಣದ ಹುಚ್ಚು ಹಿಡಿದಿದೆ.
ಕತ್ತಲಲ್ಲಿ ಬೆಳಕೇ ಇಲ್ಲ, ಜಗಕೆ ಬೆಂಕಿ ಹತ್ತಿದೆ,
ಎಲ್ಲ ಇದೆ ಎಲ್ಲಿ ಇಲ್ಲ, ಇಲ್ಲೇ ಸುತ್ತುಮುತ್ತಿದೆ.
ಸಾಕು ಎಂಬುವಂತೆ ನೀಡು, ಬೇಕು ಎಂಬ ಹೊತ್ತಿಗೆ,
ಬೆಣ್ಣೆ ಎಣ್ಣೆ ಎರೆಯಬನ್ನಿ, ಹಸಿದ ಹೊಟ್ಟೆ- ನೆತ್ತಿಗೆ.
ಬರುವ ಸಾವ ನೆನೆದು ಕೆಲವು ತಿನ್ನುತಿಹವು ಹೆಚ್ಚಿಗೆ,
ಕಾಳು ಸಾಲದೀಗ ಜನದ ಇರುವ ಹೊಟ್ಟೆ ಕಿಚ್ಚಿಗೆ,
ಇದ ಕಂಡೂ ಕಂಡು ಕೂಡ ಏಳಬೇಡ ರೊಚ್ಚಿಗೆ,
ಇದರ ಹೊಟ್ಟೆಯಲ್ಲಿ ಹುಟ್ಟಿತೀ ಪಿಶಾಚಿ ಹುಚ್ಚಿಗೆ,
ಬಾಳ್ಮೆಯಲ್ಲಿ ತಾಳ್ಮೆ ಬೇಕು ಬದುಕಬೇಕು ಎಂದರೆ,
ಜೀವವೇ ಸಾವಾಗಬಹುದು ಬಚ್ಚ ಬರಿಯೆ ನೊಂದರೆ.
ಖಣವು ರಣವು, ಜನವು ಹೆಣವು, ಸಾವಿಗಾಗಿ ದುಡಿವರೇ?
ಯಾರ ಬಾಳಿಗಾಗಿ ಯಾರೋ ಯಾವೋ ಕೈಗೆ ಮಡಿವರೇ?
ಕಾವ ಕೈಯೇ ಕೊಲ್ಲುತಿಹವು! ಮರಣದತ್ತ ನಡೆವರೇ?
ಸಾವಿಗಾಗಿ ತಪಿಸುವವರು ಬಾಳ-ಬೀಜ ಹಿಡಿವರೇ?
ಕಣ್ಣೀರಿನ ಕಡಲ ನಡುವೆ ತೇಲುತಿಹವು ನೆಲಗಳು,
ತಾಯಿ- ಹಾಲ ಕುದಿಯುತಿಹುದು ಕೆಂಪೇರಲು ಜಲಗಳು.
ಇದ್ದ ನೆಲವ ಹೊಲವ ಮಾಡಿ ಬಿತ್ತಬೇಕು ಕಾಳನು.
ಬದುಕಲಿರುವ ಬಾಯಿಗಳಿಗೆ ತುತ್ತಬೇಕು ಕೂಳನು.
ಅನ್ನದಾನ ಮಹಾಯಜ್ಞ! ಅನ್ನ ಹೀನ ಆಳನು.
ಅನ್ನಮುಚ್ಚಿ ಬಾಳಲೆಳಸುವವನು ಮಹಾ ಖೂಳನು.
ನೆಲದ ಹುರುಡಿನಲ್ಲಿ, ಹುರುಳಿಗಿಂತ ಜೊಳ್ಳೇ ಹೆಚ್ಚಿಗೆ,
ಗೆದ್ದು ಸತ್ತು ಪಡೆಯುವವರು ಹುಚ್ಚ ಜನರ ಮೆಚ್ಚಿಗೆ.
ಮತ್ತೆ ನೆಲದ ಎದೆಯ ಮೇಲೆ ತೆನೆಯ ಧ್ವಜವು ನಿಲ್ಲಲಿ.
ಸಾವಿಗಿಂತ ಬಾಳು ಮೇಲು ಎಂಬ ಮಾತು ಗೆಲ್ಲಲಿ.
ವಿಷದ ಒಡಲಿನಿಂದ ರಸದ ಊಟೆ ಚಿಮ್ಮಿ ಚೆಲ್ಲಲಿ.
ಪ್ರೇಮವೇ ಹಣ್ಣಾಗಿ ಬರಲಿ ಕವಿಯ ಬಲ್ಲ ಸೊಲ್ಲಲಿ.
ಹೊನ್ನ ನೆಕ್ಕಿ ಬಾಳ್ವರಿಲ್ಲ ಅನ್ನ ಸೂರೆ ಮಾಡಿರಿ.
ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ.
✍🏿 ವರಕವಿ ದ.ರಾ.ಬೇಂದ್ರೆ
ಬೇಂದ್ರೆಯಜ್ಜ ಎಂದೋ ಬರೆದದ್ದು ಇಂದಿಗೂ ಪ್ರಸ್ತುತವಾಗಿದೆ ಅನ್ನಿಸುತ್ತಿದೆ😥