ಕಾಯಕವ ಕಲಿಸುದಕ….

ಕಾಯಕವ ಕಲಿಸುದಕ….

ಕಾಯಕವ ಕಲಿಸುದಕ ನಾಯಕನು ಬಸವಯ್ಯ
ಎಂದು ಜನಪದರು ಬಸವಣ್ಣ ಕಾಯಕದ ಜನಕ ಎಂದು ಹಾಡಿ ಹೊಗಳಿದ್ದಾರೆ. ಕಾಯಕದ ಪರ್ಯಾಯ ಪದ ಕೆಲಸ ಅಥವಾ ವೃತ್ತಿ ಅಲ್ಲ. ಆದ್ದರಿಂದ ಇದರ ಪರ್ಯಾಯ ಪದ ಸಿಗುವುದಿಲ್ಲ. ಅದಕ್ಕದೇ ಸಾಟಿ. ಬಹಿರಂಗದ ಬೇಲಿ ಅಂದರೆ ಕಾನೂನು ಕಟ್ಟೆಳೆ ಶಿಕ್ಷೆ ಇವು ಭ್ರಷ್ಟತೆಯನ್ನು ಮಟ್ಟ ಹಾಕಲಾರವು, ಆದ್ದರಿಂದ ಶರಣರು ಆಧ್ಯಾತ್ಮ ಮತ್ತು ನೈತಿಕ ನೆಲೆಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಂಡರು. ಪ್ರಾಮಾಣಿಕತೆ, ಪರಿಶುದ್ಧತೆ, ಸಮಾನತೆ, ನಿಷ್ಠೆ ಹಾಗೂ ಶ್ರದ್ಧೆ ಇವು ಕಾಯಕದ ಜೀವಾಳ ಕಾಯಕ ಶರಣ ಜೀವಾಳ.

ಆವಾವ ಜಾತಿ ಗೋತ್ರದಲ್ಲಿ ಬಂದಡೂ, ತಮ್ಮ ತಮ್ಮ ಕಾಯಕಕ್ಕೆ ಭಕ್ತಿಗೆ ಸೂತಕವಿಲ್ಲದಿರಬೇಕು.

ಕನ್ನಡಿ ಕಾಯಕದ ಅಮ್ಮಿದೇವಯ್ಯ

ಎಲ್ಲರೂ ತಮ್ಮತಮ್ಮ ಆಸಕ್ತಿಯ ಪ್ರಕಾರ ಕಾಯಕವನ್ನು ಆರಿಸಿಕೊಳ್ಳಬಹುದು ಅದರಲ್ಲಿ ಮೇಲಿಲ್ಲ ಕೆಳಗಿಲ್ಲ ಶ್ರದ್ಧೆ ಮತ್ತು ನಿಷ್ಠೆ ಯಿಂದ ಮಾಡಿದರೆ ಸಾಕು. ಯಾವ ಜಾತಿಗೂ ಅದು ಸೀಮಿತವಲ್ಲ. ಕಾಯಕಗಳಿಂದ ಜಾತಿಯಾಗಿವೆ ವಿನಃ ಜಾತಿಯಿಂದ ಕಾಯಕಗಳಲ್ಲ.

ಗೆದ್ದಲು ಮನೆಯ ಮಾಡಿ ಸರ್ಪಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ ನನಗಿನ್ನೆತ್ತಣ ಮುಕ್ತಿ ಅಮರೇಶ್ವರ ಲಿಂಗ

ಆಯ್ದಕ್ಕಿ ಮಾರಯ್ಯ

ಶ್ರಮವಿಲ್ಲದೆ ದಲ್ಲಾಳಿ ವ್ಯವಹಾರ ಅಥವಾ ಬಡ್ಡಿ ವ್ಗವಹಾರ ಇವನ್ನು ಕಾಯಕ ತತ್ವ ನಿಷೇಧಿಸಿದೆ. ಇವು ಸಮಾಜದ ಸ್ವಾಸ್ಥ್ಯ ವನ್ನು ಕೆಡಿಸುವವು.ಅಂಥವು ಕಾಯಕವಾಗಲಾರವು.

ಬೇಡುವ ಭಂಡನ ಕೊಡದೆ ಹೋಗುವ ಲಂಡನ
ಉಭಯದ ದ್ರವ್ಯವ ತಂದು, ಅಲ್ಲಿ ಉಂಡು
ಸುಖಿಯಾದಿಹೆನೆಂಬ ಉಭಯ ಭಂಡನ ದಿಂಡಿಕೆ ಕೆಡೆಯದು
ಮೇಖಲೇಶ್ವರ ಲಿಂಗದ ಅಂಗವೇಕೆ ತಿಳಿಯದು

ಶರಣ ಕಲಕೇತಯ್ಯ

ಬೇಡುವ ಭಂಡ ಅಂದರೆ ಹೆಚ್ಚಿನದನ್ನು ಆಶಿಸುವ ಕೊಡದೆ ಹೋಗುವ ಎಂದರೆ ಕೊಡಬೇಕಾದಷ್ಟನ್ನು ಕೊಡದಿರುವ ಲಂಡ ಎರಡನ್ನು ಅಲ್ಲಗಳೆಯುವುದು ಕಾಯಕದ ಆಶಯ. ಇಂತಹ ಅತ್ಯಮೂಲ್ಯ ಮೌಲ್ಯಗಳನ್ನು ಸಮೀಕರಿಸಿ ಕೊಂಡಿದ್ದು ಕಾಯಕ.

ಈ ಸೃಷ್ಟಿ ಕಾಯಕಕ್ಕೆ ಪ್ರೇರಣೆ. ಬೀಸುವ ಗಾಳಿ, ಹರಿವ ನದಿ, ನಿತ್ಯ ಉದಿಸುವ ಸೂರ್ಯ, ಗಿಡ ಮರ ಎಲ್ಲವು ಕಾರ್ಯನಿರತವಾಗಿವೆ ನಿಶ್ಯಬ್ದ ವಾಗಿ.ಸಕಲ ಚರಾಚರವು ಕಾಯಕ ತನ್ಮಯ. ಆತ್ಮ ಇದೆ ಎಂದು ಮೇಲೆ ಕಾಯಕ ಮಾಡಲೆಬೇಕು. ಕಾಯಕ ಮಾಡಿದ್ದಲ್ಲದೆ ತನ್ನೊಳಡಗಿರುವ ಸಿಹಿಯನ್ನು ಕಾಣಲು ಸಾಧ್ಯವೆ ಎಂದು ಅನುಮೋದಿಸುತ್ತಾರೆ ಅಲ್ಲಮರು…..

ಕ್ರಿಯಾಮಥನವಿಲ್ಲದೆ ಕಾಣಬಹುದೆ ಇಕ್ಷುವಿನೊಳಗಣ ಮಧುರ
ಕ್ರಿಯಾ ಮಥನವಿಲ್ಲದೆ ಕಾಣಬಹುದೆ ತಿಲದೊಳಗಣ ತೈಲ
ಕ್ರಿಯಾ ಮಥನವಿಲ್ಲದೆ ಕಾಣಬಹುದೆ ಕ್ಷೀರ ದೊಳಗಣ ಘೃತ
ಕ್ರಿಯಾ ಮಥನವಿಲ್ಲದೆ ಕಾಣಬಹುದೆ ಕಾಷ್ಠದೊಳಗಣ ಅಗ್ನಿ
ಇದು ಕಾರಣ ನಮ್ಮ ಗುಹೇಶ್ವರಲಿಂಗವ ತನ್ನೊಳನರಿದೆನೆಂಬ ಮಾತಿಗೆ
ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೊ

ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆ ಬೇಡ
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ

ಮನಸಂದ ಮಾರಿ ತಂದೆ

ಮಾರಿ ತಂದೆಯವರು ಆತ್ಮಗೌರವದ ಕಾಯಕವಿರುವಾಗ ನಿರ್ಲಜ್ಜೆಯಿಂದ ಬೇಡುವುದನ್ನು ಅಲ್ಲಗಳೆದಿದ್ದಾರೆ.

ಆಯ್ದಕ್ಕಿ ಮಾರಯ್ಯ ನವರು, ಕೂಡಾ ,” ಬೇಡಿ ತಂದು ದಾಸೋಹವ ಮಾಡುವಡೆ ಪಂಗುಳನ ಪಯಣದಂತೆ ಯಾಚಕತ್ವ ಭಕ್ತಂಗುಂಟೆ “

“ಭಕ್ತನಾಗಿ ಹುಟ್ಟಿ ಭಕ್ತರ ಬೇಡಿ ತಂದು ಮಾಡಿ ಮುಕ್ತಿಯನರಸಲುಂಟೆ ?
ಅದು ಅಮುಗೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು”

ಆಯ್ದಕ್ಕಿ ಮಾರಯ್ಯ

ಎಂದು ಆತ್ಮ ಗೌರವದ ಬದುಕಿಗೆ ಕಾಯಕದ ಕೀಲನ್ನಿತ್ತಿರುವರು. ಅದಕ್ಕಾಗಿ ಅಪ್ಪ ಬಸವಣ್ಣನವರು ಬೇಡುವವರಿಲ್ಲದೆ ಬಡವನಾದೆನಯ್ಯಾ ಎಂದು ಹೇಳುವುದೆಂದರೆ ಎಂತಹ ಬದುಕನ್ನು ನಮ್ಮ ಶರಣರು ಬದುಕಿದರು ಇಂದು ಆದರೆ ಮೌಲ್ಯಗಳನ್ನು ಅಪ್ಪಿ ಕೊಳ್ಳಲಾದೀತೆ? ಆತ್ಮಾವಲೋಕನಗೈಯ್ಯುತಿದೆ ಮನಸ್ಸು

-ಸುನಿತಾ ಮೂರಶಿಳ್ಳಿ
ಧಾರವಾಡ
9986437474

Don`t copy text!