e-ಸುದ್ದಿ, ಮಸ್ಕಿ
ಉಪಚುನಾವಣೆ ಮುಗಿದು ಹತ್ತು ಹಲವು ಲೆಕ್ಕಾಚಾರದ ಹಾಕಿದವರಿಗೆ ಭಾನುವಾರ ಫಲಿತಾಂಶ ಪ್ರಕಟವಾಗಲಿದ್ದು ವಿಜಯಮಾಲೆ ಪ್ರತಾಪಗೌಡ ಪಾಟೀಲ ಅಥವಾ ಬಸನಗೌಡ ತುರ್ವಿಹಾಳ ಇಬ್ಬರಲ್ಲಿ ಯರ ಕೊರಳಿಗೆ ಎಂಬುದು ನಿಚ್ಛಳವಾಗಲಿದೆ.
ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಳೆದ 18 ತಿಂಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಪರಿಣಾಮ ಏ.17 ರಂದು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಜಿದ್ದಾಜಿದ್ದಿ ನಡೆಸಿ ಎರಡು ಪಕ್ಷದ ರಾಜ್ಯ ಮುಖಂಡರು ಮಸ್ಕಿ ಕ್ಷೇತ್ರದಲ್ಲಿ ಬಿಡುಬಿಟ್ಟು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ನಾನ ಕಸರತ್ತು ನಡೆಸಿದ್ದರು.
ಜಿಲ್ಲೆಯಲ್ಲಿ ಇದುವರೆಗೆ ಸಾರ್ವತ್ರಿಕ ಮತ್ತು ಉಪಚುನಾವಣೆ ನಡೆದಿದ್ದರೂ ಈ ಬಾರಿಯ ಮಸ್ಕಿ ಉಪ ಚುನಾವಣೆ ರಾಜಕೀಯ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡುವ, ಯಾರ ನೀರಿಕ್ಷೆಗೂ ತಾಕದ ರೀತಿಯಲ್ಲಿ ನಡೆದು ಹೋಗಿದೆ.
ಬಿಜೆಪಿ ಮಸ್ಕಿ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿಸಿಕೊಂಡು ಮುಖ್ಯಮಂತ್ರಿಯ ಮಗ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಠಿಕಾಣಿ ಹೂಡಿ ರಾಜಕೀಯ ತಂತ್ರಗಾರಿಕೆ ಮೆರೆದು ಅಬ್ಬರದ ಅಲೆ ಸೃಷ್ಠಿಸಿ ಹೋಗಿದ್ದಾರೆ.
ಕಾಂಗ್ರೆಸ್‍ನವರು ಕೂಡ ಕೈ ಕಟ್ಟಿಕೊಂಡು ಕೂಡದೆ ಮಜಿ ಸಂಸದ, ಕೆಪಿಸಿಸಿ ರಾಜ್ಯ ಅಧ್ಯಕ್ಷ ದೃವನಾರಯಣ ನೇತೃತ್ವದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರು, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ ಮಾಜಿ ಎಂಎಲ್ಸಿಗಳಾದ ಎನ್.ಎಸ್.ಬೊಸರಾಜ, ಶರಣಪ್ಪ ಮಟ್ಟೂರು, ಕಾಂಗ್ರೆಸ್ ಪಕ್ಷವನ್ನು ಮತ್ತೆ ತನ್ನ ತೆಕ್ಕೆಗೆ ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬಿಜೆಪಿಗೆ ಮರ್ಮಘಾತ ನೀಡಲು ತಂತ್ರ ಹೆಣಿದಿದ್ದರು.
ಬಿಜೆಪಿಯ ಪ್ರತಾಪಗೌಡ ಪಾಟೀಲ ಮತ್ತು ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಇಬ್ಬರಿಗೂ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಪ್ರತಾಪಗೌಡ ಪಾಟೀಲ ಶಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪಕ್ಷ ಬದಲಾಯಿಸಿ ಜನರ ಮುಂದೆ ಐತಿಹಾಸಿಕ ತೀರ್ಪಿಗಾಗಿ ಚುನಾವಣೆ ಎದುರಿಸಿದ್ದಾರೆ. ಈ ಸಲ ಗೆದ್ದರೆ ಮಂತ್ರಿಯಾಗುವ ಸೌಭಾಗ್ಯ ಸಿಗುತ್ತದೆ ಎಂದು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಫಲಿತಾಂಶ ಉಲ್ಟಾ ಹೊಡೆದರೆ ಇದ್ದ ಶಾಸಕ ಸ್ಥಾನ ಕಳೆದುಕೊಂಡು ಯಾರನ್ನೊ ಪಟ್ಟ ಕಟ್ಟಲು ಹೋಗಿ ತಾವು ಚಟ್ಟ ಕಟ್ಟಿಕೊಂಡಂತಾಗುತ್ತದೆ.
ಬಸನಗೌಡ ತುರ್ವಿಹಾಳ ಕೂಡ ಇದು ಅಗ್ನಿ ಪರೀಕ್ಷೆ. ಕಳೆದ ಬಾರಿ ಪ್ರತಾಪಗೌಡ ಪಾಟೀಲ ವಿರುದ್ಧ ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಮತ್ತೆ ಪ್ರತಾಪಗೌಡ ಪಾಟೀಲ ವಿರುದ್ಧ ಸ್ಪರ್ಧೆ ಮಾಡಿ ಗೆದ್ದು ಶಾಸಕರಾಗಬೇಕೆಂದು ಕನಸು ಕಂಡಿದ್ದಾರೆ. ಅವರ ಕನಸು ನನಸು ಮಾಡಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಗಲಿರುಳು ಟೊಂಕ ಕಟ್ಟಿ ದುಡಿದಿದ್ದಾರೆ. ಗೆದ್ದರೆ ಶಾಸಕರಾಗುತ್ತಾರೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ಆಗುತ್ತಾರೆ. ಇಲ್ಲದಿದ್ದರೆ ಫಲಿತಾಂಶ ಉಲ್ಟಾ ಆಗಿ ಬಸನಗೌಡ ತುರ್ವಿಹಾಳ ಸೋತರೆ ರಾಜಕೀಯವಾಗಿ ಮತ್ತೇ ಮೇಲೆ ಬರಲು ಕಷ್ಟವಾಗಿದ್ದು ಸಾರ್ವತ್ರಿಕ ಚುನಾವಣೆ ವರೆಗೆ ಕಾಯುವ ಅನಿವಾರ್ಯತೆ ಉಂಟಾಗುತ್ತದೆ.
ಹೀಗಾಗಿ ಮಸ್ಕಿ ಕ್ಷೇತ್ರದ ಉಪಚುನಾವಣೆ ಪ್ರತಾಪಗೌಡ ಪಾಟೀಲ ಮತ್ತು ಬಸನಗೌಡ ತುರ್ವಿಹಾಳ ಇಬ್ಬರಿಗೂ ರಾಜಕೀಯ ಪುನಃಶ್ಚೇತನಕ್ಕೆ ದಾರಿ ಮಾಡಿಕೊಟ್ಟಿದೆ. ಮತದಾರ ಪ್ರಭುಗಳು ಏ.17 ರಂದು ಮತದಾನ ಮಾಡುವ ಮೂಲಕ ಒಬ್ಬರಿಗೆ ಶಾಸಕ ಸ್ಥಾನ ಲಭಿಸುವಂತೆ ಮಾಡಿದ್ದಾರೆ. ವಿಜಯದ ಮಾಲೆ ಪ್ರತಾಪಗೌಡ ಪಾಟೀಲ ಅಥವಾ ಬಸನಗೌಡ ತುರ್ವಿಹಾಳ ಕೊರಳಿಗೆ ಎಂಬುದು ಬಯಲಾಗಲಿದೆ.