ಶರಣರು ಕಾಯಕಕ್ಕೆ ಕೊಟ್ಟ ಮಹತ್ವ ಮತ್ತು ಕಾಯಕ ಸಮಾನತೆ

ಶರಣರು ಕಾಯಕಕ್ಕೆ ಕೊಟ್ಟ ಮಹತ್ವ ಮತ್ತು ಕಾಯಕ ಸಮಾನತೆ

(ಕಾರ್ಮಿಕ ದಿನಾಚರಣೆಯ ಪ್ರಯುಕ್ತವಾಗಿ ಈ ಒಂದು ಲೇಖನ.)

“ದೇವ ಸಹಿತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ.”

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ. ಅಂದರೆ ಅವರು ಕಾಯಕದಲ್ಲಿ ಭೇದವ ಕಾಣಲಿಲ್ಲ.
“ಮನೆ ನೋಡಾ ಬಡವರು, ಮನ ನೋಡಾ ಘನ ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು.” ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರು ಪರಿಶುದ್ಧರು ಸ್ವತಂತ್ರ ಧೀರರು ಆಗಿದ್ದಾರೆ.

“ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ”
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.

“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು”
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ.

ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.
“ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.”
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

“ಆವ ಕಾಯಕವಾದರೂ ಸ್ವ ಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.”
ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಎಲ್ಲ ಸವಾಲುಗಳನ್ನು ಎದುರಿಸುತ್ತ ಪರಮಾನಂದವನ್ನು ಅನುಭವಿಸಿದ್ದಾರೆ.

“ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.” ಎಂದು ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.

ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲ ಬಾರಿಗೆ ಯಾವ ರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಆ ಅರಿವು ನಮಗಾಗಬೇಕಾಗಿದೆ.

ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭವದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಬಿತ್ತುವ ಮೂಲಕ ಕಾಯಕ ಮಹತ್ವವನ್ನ ನಮ್ಮ ಶರಣರು ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಾರೆ. ನಾವೆಲ್ಲ ಆ ಕಾಯಕ ಸಂಸ್ಕೃತಿಯನ್ನ ಅರ್ಥ ಮಾಡಿಕೊಂಡು ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಕಾಯಕ ಮಾಡೆ ಉಣ್ಣಬೇಕೆಂಬುದೆ ಶರಣರ ವಾಣಿಯಾಗಿದೆ.

ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.

Don`t copy text!