5 ದಿನಕ್ಕೆ ಕಾಲಿಟ್ಟ ಜನತಾ ಕಫ್ರ್ಯೂ, ಜನತಾ ಕಫ್ರ್ಯೂ ಉಲ್ಲಂಘನೆ, ಬೀದಿಗಿಳಿದ ಸಿಪಿಐ ದೀಪಕ್ ಬೂಸರಡ್ಡಿ

e- ಸುದ್ದಿ, ಮಸ್ಕಿ
ತಾಲೂಕಿನಲ್ಲಿ ದಿನೇ ದಿನೇ ಕರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊವೀಡ್ ತಡೆಗಟ್ಟುವುದಕ್ಕಾಗಿ ಸರ್ಕಾರ ಜನತಾ ಕಫ್ರ್ಯೂ ಜಾರಿಗೆ ಮಾಡಿದೆ. ಸಾರ್ವಜನಿಕರಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಅನೂಕೂಲ ಕಲ್ಪಿಸಿದರೆ ಅನಗತ್ಯವಾಗಿ ಬಟ್ಟೆ, ಸ್ಟೇಷನರಿ, ಮೊಬೈಲ್, ಬಾಂಡಿ, ಮದುವೆ ವಸ್ತುಗಳ ಮಾರಾಟ ಮಳಿಗೆಗಳು 11 ಗಂಟೆಯವರೆಗೆ ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂತು.
ಜನರು ಸಾಮಾನ್ಯ ದಿನಗಳಂತೆ ಕರೊನಾ ಭಯವಿಲ್ಲದೇ ಸಾರ್ವಜನಿಕರು ಕೂಡ ಅಗತ್ಯವಸ್ತುಗಳ ಖರೀದಿಗಿಂತ ಇತರೆ ಅಂಗಡಿಗಳಲ್ಲಿ, ರಸ್ತೆಗಳಲ್ಲಿ ಮಾಸ್ಕ್ ಧರಿಸದೆ ಎಗ್ಗಿಲ್ಲದೆ ತಿರುಗಾಡುತ್ತಿದ್ದು ಕರೊನಾ ಭೀತಿ ಇಲ್ಲದಂತೆ ವರ್ತಿಸುತ್ತಿರುವುದರಿಂದ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಅಂಗಡಿಗಳು ಸೀಜ್: ಮಸ್ಕಿ ಪಟ್ಟಣದಲ್ಲಿ ಸಿಪಿಐ ದೀಪಕ ಬೂಸರಡ್ಡಿ ಶನಿವಾರ ರಸ್ತೆಗಿಳಿದು ಹೊಟೆಲ್, ಕಿರಾಣಿ, ಬಟ್ಟೆ, ಹಣ್ಣಿನ, ತರಕಾರಿ, ಖಾನವಳಿ, ಮಾಂಸದ ಹೊಟೆಲ್‍ಗಳನ್ನು ಬಂದ್ ಮಾಡಿಸಿದರು. ಸಾರ್ವಜನಿಕರಿಗೆ ಲಾಠಿಯ ಬಿಸಿ ಮುಟ್ಟಿಸಿದರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಬೀಗದ ಕೀಗಳನ್ನು ವಶಪಡಿಸಿಕೊಂಡು ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.
ಬೈಕ್ ವಶ: ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಸಹ ಅನಗತ್ಯವಾಗಿ ರಸ್ತೆ ಮೇಲೆ ಇಳಿದಿದ್ದ ಬೈಕ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿದರು.
ಪುರಸಭೆಯಿಂದ ದಂಡ ಅಸ್ತ್ರ: ಪುರಸಭೆಯ ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಸಿದರು ಅಂಗಡಿ ಮಾಲಿಕರು ಕ್ಯಾರೆ ಎನ್ನುತ್ತಿಲ್ಲ. ಪ್ರತಿದಿನ ನಿಗದಿತ ಅವಧಿ ಮೀರಿ ಅಂಗಡಿ ತೆಗೆದಿರುವವರಿಗೆ ದಂಡ ಹಾಕಿದರು ಜಪ್ಪಯ್ಯ ಎನ್ನುತ್ತಿಲ್ಲ. ದಂಡ ಕಟ್ಟಿ ಅಂಗಡಿ ತೆಗೆಯುವ ಪರಿಪಾಠ ಬೆಳಸಿಕೊಂಡಿದ್ದಾರೆ. ಹಲವು ಅಂಗಡಿ ಮಾಲಿಕರಿಗೆ ಕರೊನಾ ಸೊಂಕು ತಗುಲಿದ್ದರು ಇತರರು ಎಚ್ಚರಗೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಕಳೆದ ಬಾರಿ ಲಾಕ್‍ಡೌನ್ ಸಂದರ್ಭದಲ್ಲಿ ತಾಲೂಕು ಆಡಳಿತ ಕೊವೀಡ್ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿ ಅಧಿಕಾರಿಗಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ ಈ ಬಾರಿ ತಾಲೂಕು ಆಡಳಿತದ ಅಧಿಕಾರಿಗಳಲ್ಲಿ ಮೇಲ್ನೋಟಕ್ಕೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಆದ್ದರಿಂದ ಕರೊನಾ ನಿಯಂತ್ರಣ ಮಾಡುವಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ

Don`t copy text!