e-ಸುದ್ದಿ, ಮಸ್ಕಿ
ಮಸ್ಕಿ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೇ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಮೂಲಕ ‘ನಗೆ’ ಅಲೆ ಎಬ್ಬಿಸಿದೆ. ರಾಜ್ಯದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಸ್ಕಿ ಕ್ಷೇತ್ರದ ಗೆಲವು ಆಕ್ಸಿಜನ್ ಸಿಕ್ಕಂತಾಗಿದೆ.
ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಸನಗೌಡಹಾಳ ತುರ್ವಿಹಾಳ 86,222 ಮತಗಳನ್ನು ಪಡೆದು ವಿಜಯ ಮಾಲೆ ಧರಿಸಿಕೊಂಡು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ 55,581 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಬಸನಗೌಡ ತುರ್ವಿಹಾಳ ಕಳೆದ ಬಾರಿ ಪ್ರತಾಪಗೌಡ ಪಾಟೀಲ ವಿರುದ್ದ 213 ಮತಗಳಿಂದ ಸೋತವರು ಈ ಬಾರಿ ಪ್ರತಾಪಗೌಡ ಪಾಟೀಲ ಅವರನ್ನು 30,666 ಮತಗಳಿಂದ ಸೋಲಿಸುವ ಮೂಲಕ ಸೆಡ್ಡು ಹೊಡೆದು ವಿಜೇತರಾಗಿದ್ದಾರೆ.
ಮಸ್ಕಿ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಹಿರೋ ಆಗಿದ್ದ ಪ್ರತಾಪಗೌಡ ಪಾಟೀಲರಿಗೆ ಸೋಲಿನ ರುಚಿ ಅಘಾತ ನೀಡಿದ್ದು ಅದರಿಂದ ಚೇತರಿಸಿಕೊಳ್ಳಲು ಕಷ್ಟಸಾಧ್ಯಗುತ್ತದೆ.
ಮಸ್ಕಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಮಾಡಿದ್ದರೂ ಮತದಾರರು ನನ್ನ ಕೈ ಹಿಡಿಯಲಿಲ್ಲ. ಮೇಲಾಗಿ ನಮ್ಮ ಪಕ್ಷದ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡದಿರುವದು ಸೋಲಿಗೆ ಕಾರಣವಾಗಿದೆ ಎಂದು ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿ ನಡೆಸಿ ಎರಡು ಪಕ್ಷಗಳಿಗೆ ಅಳಿವು ಉಳಿವಿಗಾಗಿ ಪಣಕ್ಕಿಟ್ಟದ್ದವು. ಅಂತಿಮವಾಗಿ ಮಸ್ಕಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿಯುವ ಮೂಲಕ ಕಾಂಗ್ರೆಸ್ ಭದ್ರಕೋಟೆ ಎನ್ನುವದನ್ನು ಸಾಭಿತು ಮಾಡಿದ್ದಾರೆ.
——————–
ಮತದಾರರ ತೀರ್ಪಿಗೆ ತಲೆ ಬಾಗುವೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಬರಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದೆ. ಉಪಚುನಾವಣೆಯಲ್ಲಿ ಮತದಾರರು ಹೊಸಬರಿಗೆ ಮಣೆ ಹಾಕಿದ್ದಾರೆ. ಮತದಾರರ ತೀರ್ಪುನ್ನು ಸ್ವಾಗತಿಸುವೆ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಸದಾ ಸ್ಪಂದಿಸುವೆ.
-ಪ್ರತಾಪಗೌಡ ಪಾಟೀಲ ಮಜಿ ಶಾಸಕ ಮಸ್ಕಿ
—————————————–
ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಈ ಬಾರಿ ಮಸ್ಕಿ ಕ್ಷೇತ್ರದ ಜನ ನನ್ನ ಕೈಹಿಡಿದು ವಿಧಾನಸಭೆಯವರೆಗೆ ಮುನ್ನಡೆಸಿದ್ದಾರೆ. ಅವರ ಅಭಿಮಾನಕ್ಕೆ ಋಣಿಯಾಗಿರುವೆ. ಕಾಂಗ್ರೆಸ್ ಕಾರ್ಯಕರ್ತರ ಅವಿರತ ಶ್ರಮ, ಮುಖಂಡರ ಒಗ್ಗಟ್ಟಿನ ಮಂತ್ರ ಮತ್ತು ಮತದಾರರ ಆಶೀರ್ವಾದದಿಂದ ಗೆದ್ದಿರುವೆ. ಮಸ್ಕಿ ಕ್ಷೇತ್ರದ ಅಭಿವೃದ್ದಿಗೆ ಪ್ರಮಾಣಿಕ ಪ್ರಯತ್ನ ಮಾಡುವೆ.
-ಬಸನಗೌಡ ತುರ್ವಿಹಾಳ, ನೂತನ ಶಾಸಕ ಮಸ್ಕಿ ಕ್ಷೇತ್ರ
—————————–