ಗಜಲ್

ಗಜಲ್

ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆಯೆನಿಸುತ್ತಿದೆ ಕೇಳು ಸಖ
ಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆಯೆನಿಸುತ್ತಿದೆ ಕೇಳು ಸಖ

ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನ
ಮನವರಿತ ಮುಂಗುರುಳು ಸ್ಪರ್ಶಕ್ಕೆ ಸಡಗರಿಸುತ್ತಿದೆ ಕೇಳು ಸಖ

ಸದ್ದಿಲ್ಲದ ಮೌನದೊಳಗೆ ಒಲವಿನದೊಂದೇ ಮಾತು
ಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿದೆ ಕೇಳು ಸಖ

ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸ
ಗೆಲುವಿನ ನಗೆ ನೀ ಬೀರುವಾಗ ಸೊಗಸೆನಿಸುತ್ತಿದೆ ಕೇಳು ಸಖ

ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ
‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ

ಸರೋಜಾ ಶ್ರೀಕಾಂತ್ ಅಮಾತಿ,ಕಲ್ಯಾಣ್ ಮುಂಬೈ

Don`t copy text!