ಸೋಲಿನ ಹತಾಸೆಗೆ ಬಿಜೆಪಿಗರಿಂದ ಗೂಂಡಾಗಿರಿ: ಆರ್.ಬಸನಗೌಡ ತುರ್ವಿಹಾಳ
e-ಸುದ್ದಿ, ಮಸ್ಕಿ
ಮಸ್ಕಿ: ಸೋಲಿನ ಹತಾಸೆಯಿಂದ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‍ನವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದಕ್ಕೆ ಸ್ವತಃ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರೇ ಪ್ರಚೋದನೆ ನೀಡುತ್ತಿದ್ದಾರೆ ಎಂದು ನೂತನ ಶಾಸಕ ಆರ್.ಬಸನಗೌಡ ತುರುವಿಹಾಳ ಆರೋಪಿಸಿದ್ದಾರೆ.
ಮಂಗಳವಾರ ಸಂಜೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಬಸನಗೌಡ ತುರ್ವಿಹಾಳ, ಮೇ.2ರಂದು ಉಪಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಬಿಜೆಪಿಗರು ಗೂಂಡಾ ವರ್ತನೆಗೆ ಇಳಿದಿದ್ದಾರೆ. ಮಸ್ಕಿ ಪಟ್ಟಣ ಸೇರಿ ಹಳ್ಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮುಗಿಬಿದ್ದು ಹಲ್ಲೆ ಮಾಡುತ್ತಿದ್ದಾರೆ. ಈ ಬೆಳವಣಿಗೆ ಸರಿಯಲ್ಲ ಎಂದಿದ್ದಾರೆ.
ಕೆಲವು ಕಡೆ ಸ್ವತಃ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‍ರೇ ಖುದ್ದು ತೆರಳಿ ಬಿಜೆಪಿ ಕಾರ್ಯಕರ್ತರು ಗಲಾಟೆಗೆ ಇಳಿಯುವಂತೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೇ.3 ರಂದು ಮಸ್ಕಿಯ ದೈವದ ಕಟ್ಟೆಯಲ್ಲಿ ನಡೆದ ಅವರ ಮಕ್ಕಳು, ಸಂಬಂಧಕರ ಗೂಂಡಾ ವರ್ತನೆ ಇಡೀ ಮಸ್ಕಿಯೇ ನೋಡಿದೆ. ಅನಗತ್ಯವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಿ.ಜಿ.ನಾಯಕ, ಸಿದ್ದಣ್ಣ ಹೂವಿನಬಾವಿ ಅವರ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಇಷ್ಟಲ್ಲದೇ ಹಲ್ಲೆಗೆ ಒಳಗಾದವರ ವಿರುದ್ದವೇ ಸುಳ್ಳು ಪ್ರತಿ ದೂರು ದಾಖಲು ಮಾಡಿದ್ದಾರೆ ಈ ರೀತಿ ನಡೆದುಕೊಳ್ಳುವುದು ಬಿಜೆಪಿಗರಿಗೆ ಶೋಭೆ ಅಲ್ಲ. ಜನರ ತೀರ್ಪನ್ನು ಒಪ್ಪಿಕೊಂಡು ಅನಗತ್ಯ ದಾಂದಲೆ ಎಬ್ಬಿಸುವುದು ಬಿಡಬೇಕಿದೆ. ಇನ್ನು ಮಾಜಿ ಶಾಸಕರ ಪುತ್ರರು ಹಲ್ಲೆ ಮಾಡಿದ ಸಂಗತಿ ನೈಜವಾಗಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡುವುದಲ್ಲದೇ ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಏನಾದರೂ ಅನಾಹುತ ಘಟನೆಗಳು ನಡೆದರೆ ಇದಕ್ಕೆ ಪೊಲೀಸ ಇಲಾಖೆಯೇ ಕಾರಣವಾಗಲಿದೆ ಎಂದು ಆರ್.ಬಸನಗೌಡ ತುರುವಿಹಾಳ ಪ್ರಕಟಣೆಯಲ್ಲಿ ಹೇಳಿದ್ದಾರೆ.