ಬಸವ ನಿಧಿ

ಬಸವ ನಿಧಿ

ಬಸವಾ ಬಾರಯ್ಯಾ
ತವನಿಧಿಯ ತಾರಯ್ಯಾ
ಮೌಢ್ಯವನು ಮರೆಸುವಾ
ಅಜ್ಞಾನ ತೊಲಗಿಸುವಾ ||

ತ್ರಾಟಕದಿ ನೆಲೆನಿಂತು
ಕಣ್ಣೊಟ ಕಲೆ ಅರಿತು
ಲಿಂಗ ಅಂಗದಿ ಬೆರೆತು
ಲಿಂಗಾಂಗ ಸಮರಸದಿ ||

ಮಂಗ ಮನವನು ನಿಲಿಸಿ
ಅಂಗತ್ರಯಗಳ ಬೆರೆಸಿ
ಅಂಗನೆಯು ನಾನಿನಗೆ
ಕರದಿಷ್ಠ ಲಿಂಗವೆ ||

ಸಂಗದಲಿ ಸವಿಜೇನು
ಅಂಗದೊಡೆಯಗೆ ನಮಿಸಿ
ಭೋಗಾಂಗದಲಿ ಇರಿಸಿ
ಸಮರಸದಿ ಇಂಬಿಡುವೆ ||

ಮಹಾಂತತೆಗೆ ಮನ ಬಯಸಿ
ಸತತ ಶ್ರಮ ವಹಿಸಿ
ನಿರುತ ನಿನ್ನನೆ ಭಜಿಸಿ
ಅನವರತ ಪೂಜಿಸುವೆ ||

ಭಕ್ತಿಯಲಿ ಭವ ಗೆಲಿದು
ಯುಕ್ತಿಯಲಿ ಅರಿವರಿತು
ಶಕ್ತಿಯಲಿ ಮರೆವು ಮರೆತು
ಮುಕ್ತಿ ಮಾರ್ಗದಿ ಬೆರೆತು ||

ಬಸವಾದಿ ಶರಣರಾ
ನುಡಿ ಗಡಣ ನಡೆ ಗಡಣ
ಅಡಿಗಡಿಗೆ ನೆನೆಯುತಾ
ಕಡೆಹಾಯ್ವ ತೆರದಿ ||

ಮೃಢ ನಿಮ್ಮ ನೆನೆಯುವಾ
ಧೃಢ ಮನವು ಎನಗಿರಲಿ
ಕಡು ಕಷ್ಟ ಬಂದರು
ಸುಡು ಅದನು ನೀನು ||

ಲಿಂಗವೆ ನಾನಾಗಿ
ಬಿಚ್ಚಿ ಬೆರೆಸದೆ ಇರುವೆ
ಅಂಗ ಲಿಂಗದ ಬಂಧ
ಜಂಗಮ ತತ್ವದ ಸಂಬಂಧ ||

ಕಡಲು ಉಕ್ಕಿದರೆ ದಡವು ಅಂಜುವುದೆ
ಮಾಯಾ ಮೋಹದ ಅಲೆಗೆ
ನಿಮ್ಮ ನಂಬಿದ ಮನವು ಬೆಚ್ಚುವುದೆ
ಎನ್ನ ತವನಿಧಿ ವಿಜಯಮಹಾಂತೇಶ ||

ಸವಿತಾ ಮಾಟೂರು, ಇಲಕಲ್ಲ

Don`t copy text!