e-ಸುದ್ದಿ, ಮಸ್ಕಿ
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಪಿಡಿಓಗಳು ಕರೊನಾ ನಿಯಂತ್ರಿಸಲು ಕೂಡಲೇ ಆಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಸಿದರು.
ಪಟ್ಟಣದ ತಾಲೂಕ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಶಾಸಕ ಬಸನಗೌಡ ತುರ್ವಿಹಾಳರ ಅವರು ಕೋವಿಡ್-19 ನಿಯಂತ್ರಣ ಕುರಿತು ತಾಲೂಕು ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಆಯಾ ಗ್ರಾಪಂ ಅಧಿಕಾರಿಗಳು ಟಾಸ್ಕ್ ಪೋರ್ಸ ಸಮಿತಿಯನ್ನು ರಚಿಸಿಕೊಂಡು ಕರೊನಾ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಪಟ್ಟಣದಲ್ಲಿ 30 ಹಾಸಿಗೆ ಸಮುದಾಯ ಆಸ್ಪತ್ರೆಯ ಕಟ್ಟಡ ಯಾಕೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಎಂದು ಶಾಸಕರು ಪ್ರಶ್ನಿಸಿದರು. ವೈದ್ಯಾಧಿಕಾರಿ ಅಮರೇಶ ಪಾಟೀಲ ಮಾತನಾಡಿ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಸ್ಥಳ ಖಾಸಗಿ ವ್ಯಕ್ತಿಗೆ ಸಂಬಂಧಪಟ್ಟಿದ್ದರಿಂದ ಕಟ್ಟಡವನ್ನು ನಿರ್ಮಾಣ ಮಾಡದಂತೆ ಕೋರ್ಟ್‍ನಿಂದ ಸ್ಟೇ ತರಲಾಗಿದೆ. ಆದ್ದರಿಂದ ಕಟ್ಟಡ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದರು. ಕಟ್ಟಡ ನಿರ್ಮಾಣ ಮಾಡುವ ಮೊದಲು ಜಾಗ ಯಾರದೆಂದು ಗೊತ್ತಿರಲಿಲ್ಲವೇ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಿ. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ರ್ದಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆಯೇ ಎಂದರು. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರಕಾರ ಮಟ್ಟದಲ್ಲಿ ನಿರ್ಧಾರವಾಗಬೇಕಾಗಿದೆ ಎಂದು ವೈದ್ಯಾಧಿಕಾರಿಗಳು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯಾಧಿಕಾರಿಗಳ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಶಾಸಕರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಸ್ಕಿ ಆಸ್ಪತ್ರೆಗೆ ಒಬ್ಬ ಎಂಬಿಬಿಎಸ್ ವೈದ್ಯಾಧಿಕಾರಿಗಳನ್ನು ತುರ್ತಾಗಿ ನೇಮಿಸಲು ಸೂಚಿಸಿದರು.
ಕರೊನಾ ಪಾಸಿಟಿವ್ ವ್ಯಕ್ತಿಗಳಿಗಾಗಿ ಲಿಂಗಸುಗೂರಿನಲ್ಲಿ ಕೋವಿಡ್ ಸೆಂಟರ್‍ನ್ನು ತೆರೆಯಲಾಗಿದೆ ಎಂದು ತಾಲೂಕ ವೈದ್ಯಾಧಿಕಾರಿಗಳು ತಿಳಿಸಿದರು. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಕಾಗಿರುವ ಸೌಲಭ್ಯಗಳನ್ನು ಕೊರತೆಯಾಗದಂತೆ ಜಾಗೃತಿವಹಿಸಬೇಕೆಂದು ಶಾಸಕರು ಸೂಚಿಸಿದರು.
ನಂತರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಗ್ರಾ.ಪಂ ಸದಸ್ಯರೊಳಗೊಂಡು ಗ್ರಾ.ಪಂ ಸಿಬ್ಬಂದಿ ಮತ್ತು ಬಿಟ್ ವ್ಯವಸ್ಥೆಯ ಪೋಲಿಸ್ ಸಿಬ್ಬಂದಿಯನ್ನು ಸೇರಿಸಿಕೊಂಡು ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯೂ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದರ ಜೋತೆಗೆ ಸಾಮಾಜಿಕ ಅಂತರ ಕಾಯ್ದಕೊಳ್ಳದ ಮತ್ತು ಕರೊನಾ ನಿಯಮಗಳನ್ನು ಪಾಲಿಸದವರಿಗೆ ದಂಡವನ್ನು ವಿಧಿಸುವ ಕೆಲಸ ಮಾಡುತ್ತಿದೆ. ಲಾಕ್‍ಡೌನ್ ಆಗಿರುವದರಿಂದ ಕೂಲಿಗಾರರಿಗೆ ನರೇಗಾ ಯೋಜನೆಯ ಅಡಿಯಲ್ಲಿ ಸಾಮಾಜಿಕ ಅಂತರ ಕಾಯ್ದಕೊಂಡು ಗಿಡ ಹಚ್ಚುವ ಕೆಲಸವನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಟೋಡ್, ಪವನಕುಮಾರ, ಪಿಎಸ್‍ಐ ಸಿದ್ರಾಮಪ್ಪ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ, ಸೇರಿದಂತೆ ತಾಲೂಕಿನ ಗ್ರಾ.ಪಂಗಳ ಪಿಡಿಒಗಳು ಸೇರಿದಂತೆ ಇನ್ನಿತರೆ ಇಲಾಖೆ ಅಧಿಕಾರಿಗಳಿದ್ದರು.