ನನ್ನವ್ವ

ನನ್ನವ್ವ

ಒಡಲ ತುಂಬ ಕಿಚ್ಚಿದ್ದರೂ
ಒಂದಿನಿತು ಉರಿಯ ಬಡಿಸದವಳು

ಕಂಗಳ ತುಂಬ ಹನಿಗಳಿದ್ದರೂ
ಕಾಣದಂತೆ ಮರೆಮಾಚಿದವಳು

ತನ್ನ ಛಳಿಯ ರಾತ್ರಿಗಳನೆ ಮರೆತು
ಸೆರಗಿನಲ್ಲಿ ಬೆಚ್ಚಗಿರಿಸಿದವಳು

ತನ್ನ ಬೆವರ ಹನಿಯ ಇಳಿಸಿ
ಬೀಸಿ ಬೀಸಿ ಗಾಳಿ ಹಾಕಿದವಳು

ಮೊಗದ ಒಂದು ನಗುವಿಗೆ
ತನ್ನ ಸೂರೆ ಮಾಡಿದವಳು

ಕತ್ತಲೆಯ ಮಡಿಲಲಿದ್ದರೂ
ಮುತ್ತದಂತೆ ಬೆಳಕಾದವಳು

ತಾನು ಗಂಧದಂತೆ ತೇದು
ನನ್ನ ಮೂರ್ತಿ ಮಾಡಿದವಳು

ಅಪ್ಪನ ಅಪ್ಪುಗೆಯನೂ
ತಾನೆ ನೀಡಿ ಹರಸಿದವಳು

ಅಪ್ಪನಿಲ್ಲದ ಸಪ್ಪೆ ಬದುಕಲು
ರಸವ ತುಂಬಿ ಉಣಿಸಿದವಳು

ಜಗದ ಅಣಕು ಕುಹಕಗಳಿಗು
ತನ್ನ ಎದೆಯನೊಡ್ಡಿ ನಿಂತವಳು

ವಿಷದ ಪಾಲು ತಾನು ಉಂಡು
ಅಮೃತ ವನುಣಿಸಿ ಬದುಕಿಸಿದವಳು

ಯಾರ ಋಣವು ಇರದ ನಾನು
ನಿನ್ನ ಋಣದ ಬಂಧಿಯು

ಸುನಿತಾ ಮೂರಶಿಳ್ಳಿ,ಧಾರವಾಡ
*9986437474*

Don`t copy text!