ವಚನಗಳು ಲಿಂಗಾಯತರು ಮತ್ತು ನಾವು.
ಜಗವು ಕಂಡ ಮೊದಲ ಬಂಡಾಯ ಸಾಹಿತ್ಯ ವಿದ್ರೋಹಿ ಸಾಹಿತ್ಯ ದೇಸಿ ಸಾಹಿತ್ಯವೇ ಶರಣ ಸಾಹಿತ್ಯ ವಚನ ಸಾಹಿತ್ಯ .
ಆರು ಮುನಿದು ನಮ್ಮನೇನು ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ, ನಮ್ಮ ಸೊಣಗಂಗೆ ತಳಿಗೆಯನ್ನಿಕ್ಕಬೇಡ,
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೇ?
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನಕ್ಕ.
ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿ ಭಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ .
“ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ -*Karl Marx has taught us the dignity of labor but Basavanna has taught us dignity and divinity of labor* ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ* ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣ ಹೊಸ ಚೇತನ ನೀಡಿದರು . ಬತ್ತಿ ಹೋಗಿದ್ದ ಬದುಕಿಗೆ ಬರವಸೆ ಬಳ್ಳ ಬಸವಣ್ಣ .
ಸಂಸ್ಕೃತ ಭೂಯಿಷ್ಟವಾದ ಸಾಹಿತ್ಯದ ಹಿಡಿತದ ಮೇಲೆ ಅಪ್ಪಟ ಕನ್ನಡದ ದೇಸಿ ಭಾಷೆ ಸವಾರಿ ನಡೆಯಿತು .
ವಚನಗಳು ಯಾವುದೇ ಪೂರ್ವಬಾವಿ ತಯಾರಿಲ್ಲದೆ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಕ್ರಾಂತಿ ಪ್ರವಾಹ .ಕನ್ನಡದಲ್ಲಿ ಚಂಪೂ ಕಾವ್ಯ ಅತ್ಯಂತ ಉತ್ತುಂಗದಲ್ಲಿರುವಾಗಲೇ
ವಚನಗಳೆಂಬ ಕನ್ನಡ ಸಾಹಿತ್ಯದ ಹೊಸ ಪರಿಕರವನ್ನು ಕೊಂಡು ,ಪರ್ಯಾಯ ಮಾಧ್ಯಮದ ವ್ಯವಸ್ಥೆಗೆ ನಾಂದಿ ಹಾಡಿ, ನಾಡಿನ ಸಾಹಿತ್ಯ ಲೋಕದ ಹಿರಿಮೆ ಗರಿಮೆ ಹೆಚ್ಚಿಸಿದ ಕೀರ್ತಿ ಶರಣರಿಗೆ ಸಲ್ಲಬೇಕು.
ಬಸವಣ್ಣನವರು ವಚನ ಚಳುವಳಿಯ ನೇತಾರ . ಶರಣರು ಜಾಗವು ಕಂಡ ಮೊದಲನೆಯ ಸಂಸದರು.. ತಾವು ಕಂಡು ಕೊಂಡ ಸತ್ಯವನ್ನು ಲೌಕಿಕ ಅಲೌಕಿಕ ಚಿಂತೆನೆಗೆ ವಿಮರ್ಶೆಗೆ ಒಳಪಡಿಸಿ ಜೀವನದಲ್ಲಿ ಅಳವಡಿಸುವ ಶ್ರೇಷ್ಠ ಸಾಧನ ಶರಣ ಪಥದ ಮಾರ್ಗ ಕೈಕೊಂಡರು .
ಲಿಂಗಾಯತರು – ಲಿಂಗಾಯತ ಒಂದು ಜಾತಿ ವರ್ಗವಲ್ಲ.
ಬಸವಣ್ಣನವರು ಸ್ಥಾಪಿಸಿದ ಮಾನವ ಮೌಲ್ಯಗಳ ಸಂಪುಟವೇ ಲಿಂಗಾಯತ ಧರ್ಮ -ಇದು ಒಂದು ದಿಟ್ಟ ಚಳುವಳಿ. ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ ತನ್ನಂತೆ ಪರರು ಎನ್ನುವ ನಂಬಿಕೆ .ವಿಚಾರ ಶರಣರದು.ಜಡ ಸ್ಥಾವರಗಳನ್ನು ಹೊರತು ಪಡಿಸಿ ಜೀವ ಜಾಲಗಳು ಒಂದೇ ಎಂದು ತಿಳಿದಿರುವ ಮತ್ತು ಅವುಗಳ ಚೈತನ್ಯವೇ ದೇವರು ಎಂದು ಹೊಸ ತತ್ವ ಪ್ರತಿಪಾದನೆ ಮಾಡಿದ ಜಗತ್ತಿನ ಮೊದಲ ದರ್ಶನ ಸಿದ್ಧಾಂತವೇ ಲಿಂಗಾಯತ ಧರ್ಮ. ಇಲ್ಲಿ ಯಾವುದೇ ಶ್ರೇಣೀಕೃತ ವ್ಯವಸ್ಥೆಯಿಲ್ಲ.ಭಕ್ತಿ ಎನ್ನುವುದು ಜ್ಞಾನ ವೈರಾಗ್ಯ ಉದಾತ್ತೀಕರಣದ ಮಾರ್ಗಗಳಿಂದ ಭಕ್ತ ತನ್ನ ಮತ್ತು ದೇವರ ಮಧ್ಯೆ ಯಾವುದೆ ದಲಾಲರನ್ನು ಇಟ್ಟು ಕೊಳ್ಳುವದಿಲ್ಲ. ತಾನೇ ಅರಿವು ತಾನೇ ಗುರು ಲಿಂಗ ಜಂಗಮವಾಗುವ ಸುಂದರ ಹೊಸ ಕ್ರಾಂತಿಯ ಭಾಷೆ ಬಸವ ತತ್ವವು.
ಬಸವಣ್ಣನವರ ಕ್ರಾಂತಿ ಇಂದು ವಿಶ್ವ ಮಟ್ಟಕ್ಕೆ ಹರಡಲು ತನ್ನಲ್ಲಿರುವ ಅಂತಃಶಕ್ತಿ ಮಾನವೀಯ ಮೌಲ್ಯಗಳ ಅವಲೋಕನವೇ ಕಾರಣ.ಪಾಶ್ಚಿಮಾತ್ಯರಿಂದ ಪ್ರಶಂಸೆಗೆ ಒಳಪಟ್ಟ ಬಸವ ತತ್ವವು ಇಂದು ನಾವು ಅಂದರೆ ಆ ಧರ್ಮದ ವಾರಸುದಾರರು ಬಸವ ತತ್ವವನ್ನು ನಮಗೆ ಬೇಕಾ ಬಿಟ್ಟಿಯಾಗಿ ಬಳಸಿ ನಮ್ಮ ಹಕ್ಕು ಯಜಮಾನಿಕೆ ಪರೋಡಿತನ ಪ್ರದರ್ಶಿಸುತ್ತಾ ಬಂದಿದ್ದೇವೆ.
ಧರ್ಮ ಪ್ರಚಾರಕ್ಕೆ ಯಾವುದೆ ಪ್ರಚಾರ ವ್ಯವಸ್ಥೆಯನ್ನೂ ಬಯಸದ ಬಸವಣ್ಣನವರು ಮತ್ತು ಶರಣರ ಕನಸು .ನಂತರ 15 ನೇ ಶತಮಾನದಲ್ಲಿ ಮಠಗಳ ವ್ಯವಸ್ಥೆ ಲಿಂಗಾಯತ ಧರ್ಮದಲ್ಲೂ ಹುಟ್ಟಿ ಕೊಂಡಿತು. ಬಸವಣ್ಣನವರನ್ನು ಕಾಪಾಲಿಕ ಶೈವರು ಕಾಳಾಮುಖಿಗಳು ಅತ್ಯಂತ ವ್ಯವಸ್ಥಿತವಾಗಿ ಬಂಡವಾಳವನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಇಂದಿನ ಬಹುತೇಕ ಮಠಗಳು ವ್ಯಾಪಾರಿ ಕೇಂದ್ರಗಳಾಗಿವೆ.
ಶಾಲೆ ಕಾಲೇಜು ಉದ್ಧಿಮೆ ಕೃಷಿ ಹೀಗೆ ಎಲ್ಲಾ ವ್ಯವಹಾರಗಳನ್ನು ಮಾಡಿ ಇಂದು ಅನೇಕ ಮಠಗಳು ಕೋಟಿ ಕೋಟಿ ಸಂಪಾದನೆ ಮಾಡಿ ದೇಶದ ಬಂಡವಾಳ ಶಾಹಿಗಳಿಗಿಂತ ಹೆಚ್ಚಿನ ಹಣ ಸಂಗ್ರಹಣೆ ಮಾಡಿದ್ದಾರೆ. ಇಂದು ಟಾಟಾ ಬಿರ್ಲಾ ಅಂಬಾನಿ ಅದಾನಿಯವರಂತೆ ನಮ್ಮ ಅನೇಕ ಮಠಾಧೀಶರು ಶ್ರೀಮಂತ ವ್ಯಕ್ತಿಗಳು. ವೈರಾಗ್ಯ ಒಂದು ತೋರಿಕೆ .ಅನೇಕ ಮಠಾಧೀಶರು ಬುಲ್ಲೆಟ್ ಪ್ರೂಫ್ ಕಾರ್ ಹವಾ ನಿಯಂತ್ರಿತ ಮಠ ಆಶ್ರಮ ಆರಾಮಿ ಬಂಗಲೆಗಳು .ಅತ್ಯಂತ ವೈಭಯುತ ವೈಭವದ ಮೆರವಣಿಗೆ ಇವರದ್ದಾಗಿದೆ.
ಬಸವ ತತ್ವವು ಇಂದು ಬೀದಿ ಪ್ರದರ್ಶನಕ್ಕೆ ವಸ್ತು ವಿಷಯವಾಗಿದ್ದು ಶೋಚನೀಯ . ಬಸವಣ್ಣನವರ ಹೆಸರು ಹೇಳಿದರೆ ಸಾಕು ಹಣ ,ಕನಕ, ಧಾನ್ಯ, ಬೆಳ್ಳಿಕಿರೀಟ, ಗಧೆ ಮುಂತಾದ ವಸ್ತುಗಳನ್ನು ಗಳಿಸುವ ಪಡೆಯುವ ಆಮಿಷಕ್ಕೆ ನಾವೆಲ್ಲಾ ಒಳಗಾಗಿದ್ದೇವೆ.
ಒಂದು ಕಡೆ ಬಸವ ತತ್ವ ಸಾರುವ ಪ್ರಹಸನ ,ಇನ್ನೊಂದೆಡೆಗೆ ಬಸವಣ್ಣನವರನ್ನು ಬಂಡವಾಳ ಮಾಡಿಕೊಂಡು ಬದುಕುವ ಅನೇಕ ಮಾರ್ಗಗಳು.
ಮಠಗಳು ಆಶ್ರಮಗಳು ,ಪ್ರತಿಷ್ಠಾನ , ಮಂಟಪ ,ಕೇಂದ್ರ , ದಳ ,ಬಳಗ ಪುಸ್ತಕ ಪ್ರಕಟಣೆ ವ್ಯಾಪಾರ ಮಾಡಿಕೊಂಡ ಅತ್ಯಂತ ಭ್ರಷ್ಟ ಮನಸುಗಳು ನಮ್ಮವಾಗಿವೆ.
ಜಾತಿಗೊಬ್ಬ ಜಗದ್ಗುರು, ಒಳಪಂಗಡ ಸಮಾವೇಶ ,ಜಾತಿ ಮತ್ತು ರಾಜಕೀಯ ಲೆಕ್ಕಾಚಾರ ಸ್ವಜನ ಪಕ್ಷ ಪಾತ ಲಂಚಗುಳಿತನ ವಂಚನೆ ಮುಂತಾದ ಕ್ರಿಮಿನಲ್ ಮನಸ್ಸುಗಳು ಇಂದು ಬಸವ ತತ್ವದ ಒಡೆತನಕ್ಕೆ ಜೋತುಬಿದ್ದಿವೆ.
ಬಸವ ತತ್ವದಂತೆ – ಲಕ್ಷ್ಮಿ ,ಸರಸ್ವತಿ .ಗಣಪತಿ ,ಕಾಳಿ ,ಮಾರಿ, ಹೀಗೆ ಬಹುದೇವೋಪಾಸನೆ ಬಿಟ್ಟು ಆ ಸ್ಥಳದಲ್ಲಿ ಈಗ ಬಸವಣ್ಣನವರ ಭಾವ ಚಿತ್ರವಿಟ್ಟು ಕಾಯಿ ಕರ್ಪುರ ಪೂಜೆ ಪುನಸ್ಕಾರ ನಡೆದಿವೆ . ಸನಾತನದ ಪುರೋಹಿತ ವ್ಯವಸ್ಥೆ ಅಲ್ಲಗಳೆದ ನಾವು -ಸ್ವಾಮಿಗಳು ,ಶಾಸ್ತ್ರಿಗಳು , ಆರಾಧ್ಯರು ಜಾತಿ ಜಂಗಮರನ್ನು ಒಪ್ಪಿಕೊಂಡು ಬಸವ ಧರ್ಮವನ್ನು ಮತ್ತೆ ಸನಾತನ ಧರ್ಮ ಮಾಡುವುದಕ್ಕೆ ನಾವು ಬಸವ ತತ್ವ ಎನ್ನುತ್ತೇವೆ. ಇದು ಖಂಡನೀಯ ಮತ್ತು ಅಪಾಯಕಾರಿ ಬೆಳವಣಿಗೆ .
ಇದು ಆಷಾಡಭೂತಿಗಳ ಷಡ್ಯಂತ್ರ ಬಸವ ಧರ್ಮವನ್ನು ಕಸುಬು ಮಾಡುವ ಬಹಿರಂಗ ಪರೋಡಿತನಕ್ಕೆ ,ತತ್ವ ಹರಾಜು ಹಾಕುವದಕ್ಕೆ ನಾವು ಉಗ್ರವಾಗಿ ವಿರೋಧಿಸಲೇ ಬೇಕು.
ಬಸವಣ್ಣ ಮತ್ತು ವಚನಗಳು ನಮ್ಮ ಆಸ್ತಿ .ಅವುಗಳನ್ನು ವಿರೂಪಗೊಳಿಸುವ ವಿಕಾರಗೊಳಿಸುವ ಕೆಲಸ ನಿರಂತರ ನಡೆದಿದೆ.ವಚನಾಂಕಿತ ತಿದ್ದುಪಡಿ ಒಬ್ಬರು ಇಬ್ಬರು ಮಾಡಿದರೆ , “ಗುರು ವಚನ” ಧರ್ಮ ಗ್ರಂಥ ಸಂಪಾದನೆ ಎಂದು ಇನ್ನೊಬ್ಬರು ಬೊಗಳೆ ಬಿಡುತ್ತಾರೆ..ಕದಿಯುವ ತಿದ್ದುವ ಕ್ರೂರ ಕೆಲಸವನ್ನು ಬಿಟ್ಟು ಪ್ರತಿಯೊಬ್ಬರು ತಮ್ಮ ತಮ್ಮ ತಪ್ಪು ತಿದ್ದಿಕೊಳ್ಳಲಿ . ಬಸವಣ್ಣನವರ ಮೂರ್ತಿಗೆ ಕೋಟಿ ಕೋಟಿ ಸುರಿಯುವ ಅನೇಕ ಮಠಗಳು ಸ್ವಾಮಿಗಳು ಮಾತೆಯರು ಅಕ್ಕ ಅಣ್ಣನವರು ಸ್ಥಾವರದಿಂದ ನಿಜ ಜಂಗಮಕ್ಕೆ ಹೆಜ್ಜೆ ಹಾಕಿ ಬಸವ ಭಕ್ತರಿಗೆ ಆದರ್ಶಪ್ರಾಯವಾಗಲಿ.
ಬಸವಣ್ಣನವರ ಮತ್ತು ಶರಣರ ತ್ಯಾಗ ಬಲಿದಾನ ವ್ಯರ್ಥವಾಗಬಾರದು.ವಚನಗಳೇ ಧರ್ಮ ಗ್ರಂಥಗಳು. ಬಸವ ಭಕ್ತರ ಮನಸ್ಸನ್ನು ಕೆರಳಿಸುವ ನೋಯಿಸುವ ಯಾವುದೆ ಕೆಲಸವನ್ನು ಯಾರೂ ಮಾಡಬಾರದು. ಇಲ್ಲದಿದ್ದರೆ ನಾವು ಊಸರವಳ್ಳಿಯಂತೆ ಸಂದರ್ಭಕ್ಕನುಗುಣವಾಗಿ ಬದಲಾಯಿಸುವ ಸೋಗಲಾಡಿಗಳಾಗುತ್ತೇವೆ.
ಬಸವಣ್ಣಂಗೆ ಜೋತುಬಿದ್ದರೆ…
ಅರಿವೇ ಗುರುವಾಗುವುದು.
ಆಚಾರವೇ ಲಿಂಗವಾಗುವುದು.
ಅನುಭಾವವೇ ಜಂಗಮವಾಗುವುದು.
ದೇಹವೇ ದೇವಾಲಯವಾಗುವುದು.
ದಯವೇ ಧರ್ಮದ ಮೂಲವೆಂಬ
ಅರಿವು ಮೂಡುವುದು.
ಮನ ಮಹಾದೇವನಾಗುವುದಾದ ಕಾರಣ
ಸಕಲ ಜೀವಾತ್ಮರಿಗೆ ಲೇಸ ಬಯಸುವುದು.
ಒಮ್ಮೆ ಬಸವಣ್ಣಂಗೆ ಜೋತುಬಿದ್ದು ನೋಡಿರಿ…
ಯಾರಿಗ್ಗೊತ್ತು!!!
ನೀವು ಈ ಶತಮಾನದ
ಮಹಾತ್ಮರಾದರೂ ಆಗಬಹುದು
ಶರಣು ಶರಣಾರ್ಥಿ….
–ಡಾ .ಶಶಿಕಾಂತ.ಪಟ್ಟಣ.ಪೂನಾ