ಸಾವಿನಲ್ಲೂ ಧರ್ಮದ ಆಟ
ಮಾನವೀಯತೆ
ಗಡಿಪಾರು ಮಾಡಲಾಗಿದೆ ಇಲ್ಲಿ.
ಅದಕ್ಕೆ ಸಾವಿನಲ್ಲೂ ಧರ್ಮದ
ವಿಷ ಕಕ್ಕುವ ಆಟ ಶುರುವಾಗಿದೆ.
ಅಲ್ಲಿ ನೋಡಿ ಮಸಣದ ಬೆಂಕಿ ಕಂಡು
ದೇವರು ರಜೆ ಹಾಕುವ ಕಾಲ ಬಂದಿದೆ.
ಪ್ರತಿ ಮನೆಯ ಜಗುಲಿ ಮೇಲೆ ಬೆಕ್ಕು
ಉಪವಾಸ ಮಲಗುತ್ತಿದೆ ಈಗೀಗ.
ಊರಿಗೊಂದು ಹೊಸ ಸುಡುಗಾಡು,
ಹೆಣದ ಪೆಟ್ಟಿಗೆಗೂ ತೆರಿಗೆ ಕಟ್ಟಬೇಕು ಇಲ್ಲಿ!
ಯಾರದೋ ಹೆಗಲು ಯಾರದೋ ಕಣ್ಣೀರು.
ನೋಡು ನೋಡುತ್ತಿದ್ದಂತೆಯೇ ಸಾವು
ಕೇಕೆ ಹಾಕುತ್ತದೆ ಪ್ರತಿ ಮನೆ ಮನೆಯಲ್ಲಿ.
ಈಗೀಗ ಭಾರತದಲ್ಲಿ ಬಡವರಾಗಿ,
ಹುಟ್ಟುವುದೇ ಅಪರಾಧವಾಗಿ ಹೋಗಿದೆ.
ಏಕೆಂದರೆ ಇಲ್ಲಿ ಮಾನವೀಯತೆ ಗಡಿಪಾರು ಮಾಡಲಾಗಿದೆ.
ಸಾವಿನಲ್ಲೂ ಧರ್ಮದ ಆಟ ಶುರುವಾಗಿದೆ.
–— ಅಲ್ಲಾಗಿರಿರಾಜ್ ಕನಕಗಿರಿ.