ಇಷ್ಟಲಿಂಗ ಕೊಟ್ಟು ಅಷ್ಟ ತನುವ ಸಂತೈಸಿದ ಬಸವಾ
ಜಗಕೆಲ್ಲ ಜ್ಯೋತಿಯಾಗಿ ಬೆಳಗಿದೆ ಬಸವಾ
ಬಾಗೆವಾಡಿಯ ಭಾಗ್ಯದ ಪೂರ್ಣಚಂದ್ರ ಬಸವಾ
ಮಾದರಸ ಮಾದಲಾಂಬಿಕೆಯ
ಪೂಜೆಯ ಪ್ರತಿರೂಪ ಬಸವಾ
ಇಂಗಳೇಶ್ವರದಲಿ ಜನಿಸಿ
ಮನದಂಗಳವ ಬೆಳಗಿದ ಬಸವಾ ||
ವೈಚಾರಿಕತೆಯ ಮೂರ್ತ ರೂಪ ಮಹಾಶರಣ ಬಸವಾ
ಅಕ್ಕನಿಗಿರದ ಉಪನಯನ ತನಗೂ ಬೇಡವೆಂದ ಬಸವ
ಲಿಂಗ ಸಮಾನತೆಗೆ ಮುನ್ನುಡಿ ಬರೆದ ಬಸವಾ
ಅಂತರಂಗದ ಅಭಿವ್ಯಕ್ತಿಯ ವ್ಯಕ್ತ ರೂಪ ಬಸವಾ ||
ವಿದ್ಯಾಭ್ಯಾಸಕೆ ಅಕ್ಕನೊಡಗೂಡಿ ಕಪ್ಪಡಿಗೆ ಹೊರಟ ಬಸವಾ
ಮಾನವೀಯತೆಯ ಸಾಕಾರ ರೂಪದಿ ನಿರಂಜನನಾದ ಬಸವಾ
ಮಾವ ಬಲದೇವನೊಡಗೂಡಿ ಮಂಗಳವಾಡಕ್ಕೆ ತೆರಳಿದ ಬಸವಾ
ಬಿಜ್ಜಳನ ಭಂಡಾರದಧಿಪತಿಯಾದ ಮಂತ್ರ ಪುರುಷ ಬಸವಾ ||
ನೀಲಾಂಬಿಕೆ ಗಂಗಾಂಬಿಕೆಯ ವೈಚಾರಿಕ ಪತಿಯಾದ ಬಸವಾ
ಭಕ್ತಿ ಚಳುವಳಿಯ, ಕಲ್ಯಾಣ ಕ್ರಾಂತಿಯ ಹರಿಕಾರ ಬಸವಾ
ನೋಂದುಬೆಂದಜೀವಿಗಳ ಕಣ್ಣಿರೊರೆಸಲು ಬಂದ ಬಸವಾ
ಅನುಭಾವ ಮಂಟಪದ ಅರಿವಿನರಮನೆಯ ನಿರ್ಮಾತೃ ಬಸವಾ||
ಇಷ್ಟಲಿಂಗ ಕೊಟ್ಟು ಅಷ್ಟ ತನುವ ಸಂತೈಸಿದ ಬಸವಾ
ಅಂಗದ ಮೇಲೆ ಲಿಂಗವಿದ್ದವರೆಲ್ಲ ಸಂಗಯ್ಯನೆಂದ ಬಸವಾ
ಶರಣರಾ ಬರವೆಮಗೆ ಪ್ರಾಣಜೀವಾಳ ವೆಂದ ಬಸವಾ
ನಾಡಿನುದ್ದಗಲಕ್ಕೂ ಭಕ್ತಿ ಕಂಪ ಬೀರಿದ ಭವಹರ ಬಸವ||
ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ ಬಸವಾ
ಕಾಯಕವೇ ಕೈಲಾಸ ಎಂದರಿತ ಕಾಯಕಯೋಗಿ ಬಸವಾ
ದಯವೇ ಧರ್ಮದ ಮೂಲವೆಂದ ದಯಾ ಹೃದಯಿ ಬಸವಾ
ನಡೆನುಡಿಯೊಂದಾದ ಜಗಕೆ ಮಾದರಿಯಾದ ಮಹಾಮಹಿಮ ಬಸವಾ ||
ಚೆಲ್ವಕನ್ನಡದಿ ಸುಜ್ಞಾನ ದೀಪ ಬೆಳಗಿದ ಬಸವಾ
ವೈಚಾರಿಕ, ವೈಜ್ಞಾನಿಕ, ಮೃದುವಚನ ರಚನೆಗೈದ ಬಸವಾ
ಮೇಲುಕೀಳುಗಳ ಕಿತ್ತೆಸೆದು ಮನುಜರನ್ನು ಶರಣರಾಗಿಸಿದ ಬಸವಾ
ವರ್ಗ, ವರ್ಣ, ಲಿಂಗ ಸಮಾನತೆಯ ಸಾಧಿಸಿದ ಬಸವಾ||
ಇಂದಿಂಗೆ ನಾಳಿಂಗೆಂದು ಒಂದೆಳೆಯನು ಸಂಗ್ರಹಿಸದ ಬಸವಾ
ಎನಗಿಂತ ಕಿರಿಯರಿಲ್ಲ ಎಂದು ಕಿಂಕರದಿ ಶಂಕರನಾದ ಬಸವಾ
ಅಲ್ಲಮರಿಂದಲೆ ಭಕ್ತಿಭಂಢಾರಿ ಬಸವಣ್ಣನೆನಿಸಿಕೊಂಡ ಬಸವಾ
ಅಲ್ಲಮರನು ಶ್ಯೂನ್ಯ ಸಿಂಹಾಸನಾದ್ಯಕ್ಷರನ್ನಾಗಿಸಿದ ಬಸವಾ
ಜಾತ್ಯಾತೀತ ನಾಡ ಬೆಳಗಬಂದ ನಿಜಶರಣ ಬಸವಾ
ವ್ಯಷ್ಟಿ ಮರೆದು ಸಮಷ್ಟಿಯನಪ್ಪಿದ ಸಂಘಟಣಾಚತುರ ಬಸವಾ
ನಡೆನುಡಿಯೊಂದಾದ ಶುದ್ಧಾತ್ಮ ಶಿವರೂಪಿ ಬಸವಾ
ಭಕ್ತಿಯ ಮೂಲಕ ಮುಕ್ತಿಮಾರ್ಗವ ತೋರಿದ ಬಸವಾ ||
ಅರಿವು ಆಚಾರ ಅನುಭಾವದಿ ಸತ್ಪಥವ ತೋರಿದ ಬಸವಾ
ಕೂಡಲಸಂಗಮದಿ ಐಕ್ಯರಾಗಿ ಜಗಜ್ಯೋತಿಯಾದ ಬಸವಾ
ಸರ್ವಕಾಲ ಸರ್ವ ಜನಾಂಗವು ಒಪ್ಪಿ ಅಪ್ಪಿದ ಬಸವಾ
ದಿನದಿನವು ಅಣು ಅಣುವು ನೀವೆ ಅಣುರಣನ ಬಸವಾ||
–ಸವಿತಾ. ಮಾಟೂರ. ಇಲಕಲ್ಲ.