ವಿಚಾರಪತ್ನಿ ನೀಲಮ್ಮನವರು ಕಂಡ ಬಸವಣ್ಣನವರು

ವಿಚಾರಪತ್ನಿ ನೀಲಮ್ಮನವರು ಕಂಡ ಬಸವಣ್ಣನವರು”

ಸದುವಿನಯದ ತುಂಬಿದ | ಕೊಡ ತಂದಳು ನೀಲಾಂಬಿಕೆ ||
ಕಲ್ಯಾಣದ ಅಂಗಳದಲ್ಲಿ | ತಳಿ ಹೊಡೆದರು ಚೆಂದಕೆ ||
ಸಮಚಿತ್ತದ ರಂಗೋಲಿಯು | ಒಳಹೊರಗೂ ಧೂಪವವು ||
ಹಾದಾಡುವ ಹೊಸ್ತಿಲಲಿ | ಹೊಯ್ದಾಡದ ದೀಪವು ||
(ಧಾರವಾಡದ ಸಮನ್ವಯ ಕವಿ ಶ್ರೀ ಚೆನ್ನವೀರ ಕಣವಿಯವರ ಒಂದು ಕವನ)

ಬಸವಣ್ಣನವರ ಜೀವನದ ಅವಿಭಾಜ್ಯ ಅಂಗವಾಗಿ ಬಹುದೊಡ್ಡ ಪಾತ್ರ ನಿರ್ವವಹಿಸಿದ ನೀಲಮ್ಮನವರು ‘ಸಂಗಯ್ಯ’ ಎನ್ನುವ ವಚನಾಂಕಿತದಿಂದ 288 ವಚನಗಳನ್ನು ರಚಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ವಚನಗಳೂ ಬಸವಣ್ಣನವರನ್ನೇ ಕುರಿತು ಬರೆದ ವಚನಗಳಾಗಿವೆ. “ಬಸವನ ಅನುಭವ ಕಂಡು ವಿಚಾರ ಪತ್ನಿಯಾದೆನಯ್ಯ” ಎಂಬುದು ಬಹಳ ಶ್ರೇಷ್ಠ ಮಾತು. ಹೆಂಡತಿ ಗಂಡನಿಗೆ ವಿಚಾರಪತ್ನಿಯಾಗಬೇಕು ಎಂಬ ಇದು ಜಾಗತಿಕ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಅಭಿಪ್ರಾಯ. ತಮ್ಮ ವಚನಗಳಿಂದ ನೀಲಮ್ಮನವರು ಕರ್ನಾಟಕದ ಸ್ತ್ರೀ ವಚನಕಾರ್ತಿಯರಲ್ಲಿ ಎದ್ದು ಕಾಣುವ ವ್ಯಕ್ತಿ ಎನಿಸಿದ್ದಾರೆ.

ಕಾಯಕ ಮತ್ತು ದಾಸೋಹದಲ್ಲಿ ತಮ್ಮನ್ನು ತಾವೇ ಮರೆತು, ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು, ಅವರ ಸಮಾಜೋ-ಧಾರ್ಮಿಕ ಕಾರ್ಯದಲ್ಲಿ ಸಮರ್ಪಣಾಭಾವದಿಂದ ಸಹಕರಿಸುತ್ತಾರೆ. ತಾಯಿ ನೀಲಮ್ಮನವರು ತಮ್ಮ ಶುದ್ಧ ನಡೆ, ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರರಾದರು. ನೀಲಮ್ಮನವರ ಭಕ್ತಿ, ತಾಳ್ಮೆ, ಕಾಯಕ ನಿಷ್ಠೆ, ಜ್ಞಾನ, ವೈರಾಗ್ಯಗಳು ಅವರ ವಚನಗಳಲ್ಲಿ ಮೂಡಿಬಂದಿವೆ.

ಮಡದಿ ಎನಲಾಗದು | ಬಸವಂಗೆ ಎನ್ನನು ||
ಪುರುಷನೆನಲಾಗದು | ಬಸವನ ಎನಗೆ ||
ಉಭಯದ ಕುಳವ ಹರಿದು | ಬಸವಂಗೆ ಶಿಶುವಾನಾದೆನು ||
ಬಸವನೆನ್ನ | ಶಿಶುವಾದನು ||
ಪ್ರಮಥರು ಪುರಾತರು | ಸಾಕ್ಷಿಯಾಗಿ ||
ಸಂಗಯ್ಯನಿಕ್ಕದ ದಿಬ್ಬವ | ಮೀರದೆ ಬಸವನೊಳಗಾನಡಗಿದೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-894 / ವಚನ ಸಂಖ್ಯೆ-1023)

ಶಿಶುವಾದೆನು ಅಂದರೆ ನಿರ್ಮಲತೆಯ ಪ್ರತೀಕ. ಹೆಣ್ಣು-ಗಂಡು, ಪತಿ-ಪತ್ನಿ ಗಂಡು ಹೆಚ್ಚು, ಹೆಣ್ಣು ಕಡಿಮೆ ಇಂತಹ ಎಲ್ಲಾ ಅಸಮಾನತೆಗಳನ್ನು ತೊಡೆದು ಹಾಕಿದಂತಹ ಒಂದು ನಿರ್ಮಲವಾದ ಸಂಬಂಧ ಅದು ಶಿಶು ಸಂಬಂಧ. ಒಬ್ಬರ ಆಶೋತ್ತರಗಳು ಇನ್ನೊಬ್ಬರಿಗೆ ಪೂರಕ ಮತ್ತು ಪ್ರೇರಕ. ಇಂತಹ ಒಂದು ನಿಜವಾದಂತಹ ಸಂಬಂಧ ಇಬ್ಬರಲ್ಲಿ ಎಲ್ಲ ಶಿಷ್ಟ ಸಂಪ್ರದಾಯಗಳನ್ನೂ ಮೀರಿದಂತಹ ಒಂದು ಅಪರೂಪದ ಅನುಭಂಧ. ಇದು ಎಲ್ಲ ಆಚಾರ ವಿಚಾರ ಸದಾಚಾರಗಳಾಚೆ ಇರುವ ನಿರ್ಮಲವಾದ ಸಂಬಂಧ.

ಆಡದ ಭಾಷೆಯ ನುಡಿವಳಲ್ಲ | ನಾನು ಬಸವಾ ||
ಆ ನುಡಿಯ ಭಾಷೆಯ | ಕೇಳುವಳಲ್ಲ ನಾನು ಬಸವಾ ||
ರೂಪಳಿದ | ನಿರೂಪಿಯಾನು ಬಸವಾ ||
ಅಂಗವಳಿದ | ನಿರಂಗಿಯಾನು ಬಸವಾ ||
ದ್ವಯವಳಿದ | ಪ್ರಸಾದಿಯಾನು ಬಸವಾ ||
ಪರಿಣಾಮವರತ ಹೆಣ್ಣೆಂದು | ಎಮ್ಮವರೆನ್ನ ಹೆಸರಿಡಲು ||
ನಾನು ಬಸವನ | ಪಾದದಲ್ಲಿ ||
ತಲ್ಲೀಯವಾದೆನಯ್ಯಾ | ಸಂಗಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-879 / ವಚನ ಸಂಖ್ಯೆ-837)

ಕಿವಿ ಚುಚ್ಚುವ ಚಾಡಿ ಮಾತಿಗೆ ನಮ್ಮ ಜನಪದರು ಇಟ್ಟ ಪದವೇ “ಆಡದ ಭಾಷೆ”. ಗೃಹಿಣಿಯಾದವಳು ಇಂಥ ನುಡಿಗಳನ್ನು ಮಾತನಾಡಲೂಬಾರದು ಮತ್ತು ಕೇಳಲೂಬಾರದು ಎನ್ನುವ ದೊಡ್ಡ ತತ್ವವನ್ನು ಇಲ್ಲಿ ತಾಯಿ ನೀಲಮ್ಮನವರು ನಮಗೆ ತಿಳಿಸುತ್ತಾರೆ. ಬಸವಣ್ಣನವರಿಗೆ ಭಾಷೆ ಕೊಟ್ಟು ಹೇಳುತ್ತಾರೆ ನಾನು ಯಾವ ಚುಚ್ಚು ಮಾತುಗಳನ್ನೂ ಆಡುವುದಿಲ್ಲ ಮತ್ತು ಕೇಳಿಸಿಕೊಳ್ಳುವುದಿಲ್ಲ ಎಂದು.

ಬಹಿರಂಗದ ರೂಪ ಮತ್ತು ಅಂಗವೆಲ್ಲವೂ ಬಸವಣ್ಣನಿಗೆ ಅರ್ಪಿಸುವ ಆಧ್ಯಾತ್ಮಿಕ ಮಾತು ಮತ್ತು ಬಸವಣ್ಣನೇ ಎನಗೆ ಆನಂದದ ಪ್ರಸಾದವೆಂಬ ವಚನದ ಸಾಲುಗಳು ನೀಲಮ್ಮನವರು ವಿಚಾರ ಪತ್ನಿಯ ಸ್ಥಾನದ ಮಹತ್ವವನ್ನು ತಿಳಿಸುತ್ತವೆ.

“ಎಮ್ಮವರು” ಇದು ವಚನ ಸಾಹಿತ್ಯದಲ್ಲಿ ಬರುವ ಸಾಮಾಜಿಕ ವ್ಯವಸ್ಥೆಯ ಕುರುಹು. ಇದರಲ್ಲಿ ಬಂಧು-ಬಳಗ, ಸುತ್ತ ಮುತ್ತಲಿನ ಸಮಾಜ ಒಟ್ಟಾರೆಯಾಗಿ ಹೇಳುವುದಾದರೆ ಇಡೀ ಸಮಷ್ಠಿಯನ್ನು ಪ್ರತಿನಿಧಿಸುವಂಥಾ ಒಂದು ಶಬ್ದ. “ಎಮ್ಮವರು ಹೆಣ್ಣೆಂದು ಹೆಸರಿಟ್ಟರು” ಎನ್ನುವಲ್ಲಿ ಲಿಂಗ ಅಸಮಾನತೆಯನ್ನು ಪ್ರತಿನಿಧಿಸುತ್ತದೆ. ಇಂಥ ಲಿಂಗ ಅಸಮಾನತೆಯನ್ನು “ನಾನು ಬಸವನ ಪಾದದಲ್ಲಿ ತಲ್ಲೀಯವಾದೆನಯ್ಯಾ” ಎನ್ನುವ ಒಂದೇ ಒಂದು ಪದದಿಂದ ಅಸಮಾನತೆಯನ್ನು ಬೇರುಸಹಿತ ಕಿತ್ತು ಹಾಕುವ ಮನೋಧರ್ಮವನ್ನು ಇಲ್ಲಿ ನಿರೂಪಿಸಿದ್ದಾರೆ ತಾಯಿ ನೀಲಮ್ಮನವರು.

ನಮ್ಮ ಊಹೆಗೂ ನಿಲುಕದ ಅಂದಿನ ಕಾಲಘಟ್ಟದಲ್ಲಿದ್ದ ಲಿಂಗ ಅಸಮಾನತೆಯನ್ನು ಬಸವನ ಪಾದದಲ್ಲಿ ತಲ್ಲೀಯವಾದೆನು ಎನ್ನುವುದರ ಮೂಲಕ ಬಸವಣ್ಣನವರಲ್ಲಿ ಅತ್ಯುನ್ನತ ಗೌರವವನ್ನು ತಾಯಿ ನೀಲಮ್ಮನವರು ಈ ವಚನದ ಮೂಲಕ ನೀಡಿದ್ದಾರೆ.

ಆನಳಿದೆನು ನೀನಳಿದೆನೆಂಬ | ಶಬ್ದವಡಗಿ ನಿಃಶಬ್ದವಾಗಿ ||
ನಿಃಶೂನ್ಯ ಮಂಟಪದಲ್ಲಿ | ನಿಂದು ||
ನಾನು ಉರಿಯುಂಡ | ಕರ್ಪೂರದಂತಾದೆನಯ್ಯ ||
ಕರ್ಪೂರ ಉರಿಯುಂಡು | ಕರವಳಿದು ||
ಸುಖವ | ಉಡುಗಿದೆನಯ್ಯ ||
ಸುಖವಡಗಿ | ದುಃಖ ನಿರ್ದ್ವಂದ್ವವಾಗಿ ||
ನಿರೂಪು ಸ್ವರೂಪುವಾಯಿತ್ತಯ್ಯ | ಸಂಗಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-881 / ವಚನ ಸಂಖ್ಯೆ-844)

ಈ ವಚನದಲ್ಲಿ ನೀಲಮ್ಮನವರು ಅಂಹಕಾರವನ್ನು ಅಳಿಯಬೇಕು ಎನ್ನುವ ತತ್ವವನ್ನು ಎಷ್ಟು ಅದ್ಭುತವಾಗಿ ಚಿತ್ತಿಸಿದ್ದಾರೆ. ಉರಿಯುಂಡ ಕರ್ಪೂರದಂತಾದೆನಯ್ಯಾ ಎನ್ನುವಲ್ಲಿ ಎಂಥ ನಿದರ್ಶನ. ಎಲ್ಲ ಬಿಸಿಯ ಬೇಗೆಯನ್ನು ತಡೆದುಕೊಂಡ ಕರ್ಪೂರ ಅನಂತದಲ್ಲಿ ಲೀನವಾಗಿ ತನ್ನ ಉಸಿರಿನ ಪರಿಮಳವನ್ನು ಮಾತ್ರ ಬಿಟ್ಟು ಹೋಗುತ್ತದೆ. ಹಾಗೆಯೆ ಅನುಭೂತಿ ಚರಿತ್ರೆಯಲ್ಲಿ ಅಹಂಕಾರವನ್ನು ತ್ಯಜಿಸಬೇಕು ಎಂಬ ತತ್ವವನ್ನು ಎಷ್ಟು ಕಲಾತ್ಮಕವಾಗಿ ಹೇಳಿದ್ದಾರೆ. ಎಲ್ಲ ಅಹಂಕಾರ, ಸಿಟ್ಟು, ಸೆಡವುಗಳನ್ನು ಕರ್ಪೂರದಂತೆ ಉರಿಸಿ ಕಳೆದುಕೊಂಡು ದೂಃಖ ನಿವಾರಣೆಯನ್ನು ಬಸವಣ್ಣ ಮಾಡಿ ಅದಕ್ಕೆ ಸಾಕಾರ ಸ್ವರೂಪವನ್ನು ನೀಡುತ್ತಾನೆ ಎನ್ನುವುದನ್ನು ಈ ವಚನ ಸಾರಿ ಹೇಳುತ್ತದೆ. ಇದು ವಚನ ಸಾಹಿತ್ಯದ ಶಕ್ತಿ. ಎಲ್ಲ ಕಾಲಕ್ಕೂ ನಿಲ್ಲಬಲ್ಲ ಸಾಹಿತ್ಯ ಪ್ರಾಕಾರ.

ಕೋಪದ ತಾಪದ ಸಂಗವ ಕಳೆದು | ವಿರೂಪ ನಿರೂಪವಾಗಿತ್ತಯ್ಯಾ ||
ನಿರಾಲಂಬ ನಿರಾಭಾರಿಯಾಗಿರಲು | ಆನು ಅನುವರಿದು ||
ಹೆಣ್ಣೆಂಬ ನಾಮವ ಕಳೆದು | ಸುಖ ವಿಶ್ರಾಂತಿಯನೆಯ್ದುವೆನಯ್ಯಾ ||
ಸಂಗಯ್ಯಾ | ಬಸವನ ರೂಪವಡಗಿತ್ತೆನ್ನಲ್ಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-888 / ವಚನ ಸಂಖ್ಯೆ-949)

ಕೋಪ ತಾಪಗಳು ಶರಣರ ವ್ಯಕ್ತಿತ್ವವನ್ನು ವಿರೂಪಗೊಳಿಸುತ್ತವೆ. ಕೋಪ ತಾಪಗಳನ್ನು ತ್ಯಜಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಬಸವಣ್ಣನವರ ಸಾಂಗತ್ಯದಿಂದ ಬಂದಿತು ಎನ್ನುವುದನ್ನು ವಿಶ್ಲೇಷಣೆ ಈ ವಚನದಲ್ಲಿದೆ. ಅಂತರಂಗದ ಅರಿವನ್ನು ಮೂಡಿಸಿ ಸಮಾಜದಲ್ಲಿ ಮಡುಗಟ್ಟಿದ್ದಂಥ ಲಿಂಗ ತಾರತಮ್ಯವನ್ನು ಅಡಗಿಸಿ ಮಹಿಳೆಯರನ್ನು ಎತ್ತರಕ್ಕೆ ಬೆಳೆಸಿದವರು ಬಸವಣ್ಣನವರು. ಅಂಥ ಬಸವಣ್ಣನವರಲ್ಲಿ ಲೀನವಾದೆ ಎಂದು ಈ ಮೂಲಕ ತನ್ನನ್ನು ತಾನು ಅರಿಯಬೇಕೆಂದು ಸದಾಶಯದ ನುಡಿ ಉತ್ಕೃಷ್ಠತೆಯನ್ನು ಸಾರುತ್ತದೆ.

ತತ್ವದ ಹಂಗೇನೋ | ಶರಣ ಬಸವಂಗೆ? ||
ಭಕ್ತಿಯ ಹಂಗೇನೋ | ಶರಣ ಬಸವಂಗೆ? ||
ಮುಕ್ತಿಯ ಹಂಗೇನೋ ಶರಣ ಬಸವಂಗೆ? ||
ಇಹಪರ ಸಂಸಿದ್ಧಿಯಿಲ್ಲವಯ್ಯಾ | ಸಂಗಯ್ಯಾ ||
ನಿಮ್ಮ ಶರಣಬಸವ | ನಿರಾಭಾರಿಯಾದ ಬಳಿಕ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-889 / ವಚನ ಸಂಖ್ಯೆ-957)

ತತ್ವ, ಭಕ್ತಿ ಮತ್ತು ಮುಕ್ತಿಯ ಪರಿಧಿಗಳನ್ನು ಮೀರಿ ಬೆಳೆದ ಶಿವನ ಪ್ರಕಾಶವೆನ್ನುವುದನ್ನು ತಾಯಿ ನೀಲಮ್ಮನವರು ಬಸವಣ್ಣನವರಲ್ಲಿ ಕಂಡಿದ್ದಾರೆ. ಯಾವ ತೂಕ ಅಳತೆಗೂ ಸಿಗಲಾರದ ಮತ್ತು ಇಹಲೋಕ ಪರಲೋಕವನ್ನು ಮೀರಿ ಸಿದ್ಧಿಯನ್ನು ಸಾಧಿಸಿದವರು ಬಸವಣ್ಣನವರೆಂದು ಹೇಳುವಲ್ಲಿ ಬಸವಣ್ಣನವರ ಅಗಾಧ ವ್ಯಕ್ತಿತ್ವದ ಪರಿಚಯವನ್ನು ಈ ವಚನದ ಮೂಲಕ ಸಾದರ ಪಡಿಸುತ್ತಾರೆ.

ಕರಣಂಗಳ ಹಂಗ ಹರಿದು | ಕರಣಂಗಳ ಮುಖವನಳಿದು ||
ಶರಣರ ಪರಿಣಾಮದಲ್ಲಿ | ಮುಕ್ತಿಯನರಿದೆನಯ್ಯಾ ||
ಬಸವನ ಕುರುಹು ಕಂಡು | ಪ್ರಸನ್ನೆಯಾದನಯ್ಯಾ ||
ಪ್ರಸನ್ನ ಪರಿಣಾಮವಿಡಿದು | ಆನು ಬದುಕಿದೆನಯ್ಯಾ ಸಂಗಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-887 / ವಚನ ಸಂಖ್ಯೆ-933)

ಪಂಚಭೂತಗಳ ಅರಿವಿನ ಸುಖದಲ್ಲಿನ ಭವಂಗಳನ್ನು ಪರಿಹರಿಸಿ ಅಂತರಂಗದ ಜ್ಞಾನವನ್ನು ಬೆಳಗಿಸಿದವರು ಬಸವಣ್ಣನವರೆಂದು ಹೇಳುತ್ತಾರೆ ತಾಯಿ ನೀಲಮ್ಮನವರು. ಬಸವಣ್ಣನೆಂಬ ಸಾಕಾರ ಮೂರ್ತಿಯಲ್ಲಿ ಪ್ರಸಾದದ ಆನಂದವನ್ನು ಕಂಡ ತಾಯಿ ನೀಲಮ್ಮನವರು “ಬದುಕಿದೆನು” ಎನ್ನುವ ಧ್ವನಿ ಪ್ರಸ್ತಾನದ ಮೂಲಕ ನಿರೂಪಿಸುತ್ತಾರೆ.

“ಬದುಕಿದೆನು” ಎನ್ನುವುದು ವಚನ ಸಾಹಿತ್ಯ ಲೋಕದ ಅತ್ಯುನ್ನತ ಧ್ವನಿ ಪ್ರಸ್ಥಾನ. ಎಲ್ಲ ಆಶೆ, ಆಕಾಂಕ್ಷೆ, ಇಂದ್ರಿಯಗಳನ್ನು ನಿಗ್ರಹಿಸಿ ಪಡೆಯುವ ಆನಂದದ ಮಹಾ ಪ್ರಸಾದದ ತದ್ಭವವೇ ಈ “ಬದುಕಿದೆನು” ಎನ್ನುವ ಪ್ರಸ್ಥಾನ. ಈ ಪದಪುಂಜವನ್ನು ನಮ್ಮ ವಚನ ಸಾಹಿತ್ಯಕಾರರು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆ ಇಂಥ ಅನುಭಾವದ ಹಿನ್ನೆಲೆಯಲ್ಲಿ ನೀಲಮ್ಮನವರು ಬಸವಣ್ಣನವರ ಅಗಾಧ ವ್ಯಕ್ತಿತ್ವವನ್ನು ಸಮಾಜಕ್ಕೆ ಸಾರಿ ಹೇಳಿದವರಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ.

ಹಂದೆಯಲ್ಲ | ನಾನು ||
ಹರುಷದ ಧೈರ್ಯವುಳ್ಳ | ಹೆಣ್ಣು ನಾನು ||
ಕಾಮವನಳಿದವಳಾನಾದ | ಕಾರಣ ||
ಬಸವನ | ಹಂಗೆನಗಿಲ್ಲವಯ್ಯಾ ||
ಭ್ರಮೆಯಡಗಿ ಕಲೆ | ನಷ್ಟವಾಗಿ ಮುಖವರತು ||
ಮನವಿಚಾರವ | ಕಂಡೆನಯ್ಯ ಸಂಗಯ್ಯ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-898 / ವಚನ ಸಂಖ್ಯೆ-1078)

ನಾನು ಹೆದರುವುದಿಲ್ಲ. ಧೈರ್ಯದಿಂದ ಮತ್ತು ಅಷ್ಟೇ ಆನಂದದಿಂದ ಮುಂದೆ ಬರುವ ಎಲ್ಲ ಕಷ್ಟ ನಿಷ್ಠೆಗಳನ್ನು ಎದಿರುಸುತ್ತೇನೆ. ಇದಕ್ಕೆ ಬಸವಣ್ಣನವರ ಸಹಾಯ ಬೇಕಾಗುವುದಿಲ್ಲ. ಅವರಿಗೆ ಎನಿತೂ ಭಾರವಾಗುವುದಿಲ್ಲ ಎನ್ನುವಲ್ಲಿ ಸ್ವತಂತ್ರ ವಿಚಾರಧಾರೆಯನ್ನು ಪ್ರಕಟಿಸುತ್ತಾರೆ ಈ ವಚನದಲ್ಲಿ ತಾಯ ನೀಲಮ್ಮನವರು.

ಕಲ್ಯಾಣದಲ್ಲಿ ಕ್ರಾಂತಿಯ ಸಮಯದಲ್ಲಾದ ಶರಣರ ಕಗ್ಗೊಲೆ ಅಲ್ಲೋಲ ಕಲ್ಲೋಲವನ್ನುಂಟು ಮಾಡಿದಾಗ ಬಸವಣ್ಣನವರು ಕಲ್ಯಾಣವನ್ನು ತೊರೆದು ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಕೂಡಲ ಸಂಗಮದಲ್ಲೊಮ್ಮೆ ಹಡಪದ ಅಪ್ಪಣ್ಣವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮನವರನ್ನು ಕರೆದುಕೊಂಡು ಬರಲು ಹೇಳುತ್ತಾರೆ. ನೀಲಮ್ಮನವರನ್ನು ಕರೆದುಕೊಂಡು ಬರುವಷ್ಟರಲ್ಲಿ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ಬರುತ್ತದೆ.

ಗುರು ಬಸವಣ್ಣನವರು ಲಿಂಗೈಕ್ಯರಾದ ಮೇಲೆ ನೀಲಮ್ಮನವರು ಬರೆದ ವಚನಗಳಲ್ಲಿ ಅವರ ವೇದನೆ ಪ್ರಕಟವಾಗಿದೆ.

ಲಕ್ಷದ ಮೇಲೆ | ತೊಂಬತ್ತಾರುಸಾವಿರ ಜಂಗಮಕ್ಕೆ ||
ಮಾಡುವ | ಮಾಟವಳಿಯಿತ್ತು ಬಸವಾ ||
ಇಂದಿಗೆ | ಊಟವಳಿಯಿತ್ತು ಬಸವಾ ||
ಇಂದಿಂಗೆ ಅವರ | ಸಂಗವಳಿದು ||
ನಿರಾಲಂಬಮೂರ್ತಿಯ | ಇರವು ಕಾಣಿಸಿತಯ್ಯಾ ಬಸವಾ ||
ಸಂಗಯ್ಯಾ ಬಸವನ ರೂಪು | ಎನ್ನಲ್ಲಿ ಅಡಗಲು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-897 / ವಚನ ಸಂಖ್ಯೆ-1067)

ನೀಲಮ್ಮನವರು ಉನ್ನತ ನಿಲುವಿನ ಹಾದಿಯಲ್ಲಿ ಮುನ್ನೆಲೆಗೆ ಬಂದ ದಿಟ್ಟ ಶರಣೆ. ಕಲ್ಯಾಣದ ಸಾಮಾಜಿಕ ಕ್ರಾಂತಿಯಲ್ಲಿ ಹೊರ ಹೊಮ್ಮಿದ ಮೇರು ಶಿಖರ ಮತ್ತು ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಸಮಾಜೋ-ಧಾರ್ಮಿಕ, ಗುರು-ಲಿಂಗ-ಜಂಗಮ ಜ್ಯೋತಿಗೆ ಅರಿವಿನ ಸಾಕಾರಕ್ಕೆ ಹಚ್ಚಿದ ಅಮರಜ್ಯೋತಿ ನೀಲಮ್ಮನವರು.

ಕಲ್ಯಾಣ ಕ್ರಾಂತಿಯ ಬಹು ಕಾಲಾನಂತರದಲ್ಲಿ ಬೆಳಕಿಗೆ ಬಂದ ಶರಣರ ತತ್ವ ಸಿದ್ಧಾಂತಗಳನ್ನು ಒಳಗಿನ ಎಡಬಿಡಂಗಿ ವೈದಿಕ ಮನಸ್ಸುಗಳು ಹದಗೆಡಿಸಿಬಿಟ್ಟವು. ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಹಾಗೂ ಜನಮಾನಸಕ್ಕೆ ಈ ಸತ್ಯವನ್ನು ಅರ್ಥ ಮಾಡಿಸಿ ಮನದಟ್ಟು ಮಾಡಲು ವಚನಗಳ ಮೊರೆ ಹೋಗಿ ಆಳಕ್ಕೆ ಇಳಿದು ನೋಡುವದು ಇಂದಿನ ಅಗತ್ಯವಾಗಿದೆ.

ಲೇಖನ :
ವಿಜಯಕುಮಾರ ಕಮ್ಮಾರ
ತುಮಕೂರು – 572 104
ಮೋಬೈಲ್ ನಂ: 97413 57132 / 97418 89684
ಈ-ಮೇಲ್ : vijikammar@gmail.com

Don`t copy text!