ಶರಣ ಸಂಕುಲಕ ಮಣಿಹಾರ
ಬಸವನೆಂದರೆ ಭಕ್ತಿ ಬಸವನೆಂದರೆ ಮುಕ್ತಿ
ಬಸವ ಮನುಕುಲದ ಧೀಶಕ್ತಿ ಬಸವಣ್ಣ
ಶರಣ ಸಂಕುಲಕ ಮಣಿಹಾರ!
ಹೊನ್ನು ಬೇಡೆಂದಾತ ಮಣ್ಣು ಬೇಡೆಂದಾತ
ಅಸನ ವ್ಯಸನಗಳಿಂದ ದೂರಾದ/ಬಸವಣ್ಣ
ಭಕ್ತಿ ಪಥವ ತೋರಬಂದಾತ!
ಅಜ್ಞಾನ ಅಳಿಸಿದವ ಮೌಢ್ಯತೆಯ ಬಿಡಿಸಿದವ
ಜಾತಿಮತಗಳ ಗೋಡೆ ಕೆಡಹಿದ/ ಬಸವಣ್ಣ
ನೀತಿಮಾರ್ಗದಿ ಜಗವ ಕರೆದೊಯ್ದ!
ಎಂಟೆದೆಯ ಬಂಟನಿವ ಬಿದ್ದವರ ನೆಂಟನಿವ
ಅಂತಃಕರಣಕೆ ಹೆಸರು ಬಸವಣ್ಣ/ ಜಗಕೆಲ್ಲ
ಲೇಸನ್ನೇ ಬಯಸಿದ ವಿಶ್ವಾತ್ಮ!
ಹೆಣ್ಣೀಗೆ ಮನ್ನಣೆಯಿತ್ತ ಕನ್ನಡಕೆ ಕಣ್ಣಿತ್ತ
ಕಾಯಕವೇ ಕೈಲಾಸ ನಿಜವೆಂದ/ಬಸವಣ್ಣ
ಸಗ್ಗವನೇ ತಂದಿಟ್ಟ ಭುವಿಗೆಲ್ಲ!
ಮಾರಿಮಸಣಿಗಳನ್ನು ದೂರಮಾಡಿದ ಧೀರ
ಅರಿವಿನರಮನೆಯ ತೋರಿದ/ಬಸವಣ್ಣ
ಮರಣದಲೆ ಮಹಾನವಮಿ ನಿಜವೆಂದ!
ಗುಡಿಯ ಹುಚ್ಚನು ಬಿಡಿಸಿ ಅರಿವನ್ನೆಚ್ಚರಗೊಳಿಸಿ
ಒಡಲೇ ದೇಗುಲ ಎಂದಾತ/ಬಸವಣ್ಣ
ಲಿಂಗದಲಿ ದೃಢಭಕ್ತಿ ಇಡಿರೆಂದ!
ಅನುಭವ ಮಂಟಪವ ಕಟ್ಟಿದನು ಬಸವಣ್ಣ
ಅನುಭಾವದ ಹಣತೆ ಹೊತ್ತಿಸಿದ/ಗುರುಬಸವ
ಮಾನವಧರ್ಮ ಬೆಳಗಿದ!
ಮುದ್ದಿಸಿದ ತಾಯಾಗಿ ಬುದ್ದಿ ಹೇಳಿದ ತಂದೆ
ಜಗವ ತಬ್ಬಿದ ಹಿರಿಯಣ್ಣ/ಬಸವಣ್ಣ
ಜಂಗಮ ಪ್ರೇಮಿ ನೀನಣ್ಣ!
ಬಸವನೆಂದರೆ ಪುಣ್ಯ ಬಸವನೆಂದರೆ ಧನ್ಯ
ಬಸವನೆಂದರೆ ಜಗಮಾನ್ಯ/ಗುರುಬಸವ
ನಿನ್ನಿಂದ ಭುವನ ಕಲ್ಯಾಣ!
–ಇಂದುಮತಿ ಅಂಗಡಿ ಇಳಕಲ್ಲ