ಬಯಲಲ್ಲಿ ಬಯಲಾದ ಪ್ರೊ.ಹಸನಬಿ ಬೀಳಗಿ

ಬಯಲಲ್ಲಿ ಬಯಲಾದ ಪ್ರೊ.ಹಸನಬಿ ಬೀಳಗಿ

ಪ್ರೊ: ಹಸನಬಿ ಬೀಳಗಿ ಯವರು ತಮ್ಮ 85 ಇಳಿವಯಸ್ಸಿನಲ್ಲಿ ವಯೋಸಹಜ ಮಾನಸಿಕ ಆಘಾತದಿಂದ ದೈವಾಧೀನರಾದರೆಂದು ತಿಳಿ‌ಸಲು ದುಃವೆನಿಸುತ್ತದೆ.

ಸನ್ 1936 ಜನೆವರಿ 23ರಂದು ಇಂದಿನ ಬೀಳಗಿ ಪಟ್ಟಣದಲ್ಲಿ ಜನಿಸಿದರು. ಹಿಂದೀ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಗಾಯಕನಟಿ ದಿ:ಅಮೀರ್ ಬಾಯಿ ಕನಾ೯ಟಕಿ, ಗೋಹರಬಾಯಿ ಕನಾ೯ಟಕಿ, ಹಾಗೂ ಅಂದಿನ ಸುಪ್ರಸಿದ್ಧ ಹಿಂದುಸ್ತಾನಿ ಸಂಗೀತಜ್ಞೆ ಪ್ಯಾರಾಬಾಯಿ(ಪ್ಯಾರಾಮಾ) ಇವರ ಅಜ್ಜಿಯಂದಿರು. ಸನ್ 1956ರಲ್ಲಿ ಇಂಡಿ ತಾಲೂಕಿನ ಚಡಚಣ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಹಸನಬಿಯವರು ನಂತರದಲ್ಲಿ ಉನ್ನತ ಶಿಕ್ಷಣಪಡೆದು ಸನ್ 1970ರಲ್ಲಿ ಕನಾ೯ಟಕ ಕಾಲೇಜ್ ನ ಉಪನ್ಯಾಸಕಿಯರಾಗಿ ಸೇವೆಗೆ ಸೇರಿಕೊಂಡದ್ದು ಅಸಾಮಾನ್ಯ ಪ್ರಯತ್ನವೇ ಸರಿ.

ಅತ್ಯುತ್ತಮ ಉಪನ್ಯಾಸಕರು ಎಂಬ ಖ್ಯಾತಿಗೂ ಪ್ರಾಪ್ತರಾದರು. ‘ಕೇಶಿರಾಜನ ಶಬ್ದ ಮಣಿ ದಪ೯ಣ’ ಎಂಬ ವಿಷಯ ಬಂದಾಕ್ಷಣ ಅಲ್ಲಿ ಪ್ರೊ:ಹಸನಬಿ ಬೀಳಗಿ ಯವರ ಹೆಸರು ಸಹಜವಾಗಿ ಸೇಪ೯ಡೆಯಾಗುವ ಮಟ್ಟಕ್ಕೆ ಅವರು ವಿಷಯ ಉಣಬಡಿಸುತ್ತಿದ್ದರು ಎಂಬುದು ಜನಜನಿತ. ಸನ್ 1996ರಲ್ಲಿ ನಿವೃತ್ತಿ ಹೊಂದುವ ವೇಳೆಯಲ್ಲಿ ಅವರು ತಮ್ಮದೆಯಾದ ಅಭಿಮಾನಿ ಶಿಷ್ಯಬಳಗ ಸೃಷ್ಟಿಸಿಕೊಳ್ಳುವ ಜೊತೆಗೆ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ರಿವಾಯತಪದ್ಯಗಳ ಕುರಿತು ವಿಶೇಷ ಅಧ್ಯಯನ ಮಾಡಿದ ಅವರು ‘ರಿವಾಯತಗಳ ಅನುಸಂಧಾನ’ಎಂಬ ಮಹತ್ತರ ಕೃತಿರಚಿಸಿದರು. ‘ಜಾನಪದ ದೃಷ್ಟಿ-ಸೃಷ್ಟಿ’, ‘ಅರವಿಂಗೆ ಬೇರೊಂದೊಡಲುಂಟೆ’, ‘ಮುಕ್ತ ಚಿಂತನ’, ‘ಅನುಶೀಲನ’ ಹಾಗೂ ಇನ್ನೂ ಹಲವಾರು ಕೃತಿಗಳನ್ನು ಬರೆದಿರುವರು. ‘ಕನಾ೯ಟಕ ಸಾಹಿತ್ಯ ಅಕಾಡೆಮಿ’ ಸದಸ್ಯರಾಗಿ, ಕನಾ೯ಟಕ ಸಕಾ೯ರದ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ.

‘ಉತ್ತರ ಕನಾ೯ಟಕ ಲೇಖಕಿಯರ ಸಂಘ’ದ ಪ್ರಧಾನ ಕಾಯ೯ದಶಿ೯ಯಾಗಿ ತಮ್ಮನ್ನು ಸಾಹಿತ್ಯಸೇವೆಯಲ್ಲಿ ಇವತ್ತಿಗೂ ತೊಡಗಿಸಿಕೊಂಡಿದ್ದರು. ಕನ್ನಡ ಸಂಶೋಧನೆಯಲ್ಲಿ(ಪಿ.ಎಚ್.ಡಿ) ತೊಡಗಿಕೊಂಡಿದ್ದ ಹಲವಾರು ವಿದ್ಯಾಥಿ೯ಗಳಿಗೆ ಮಾಗ೯ದಶ೯ಕರೂ ಆಗಿದ್ದರು. ಹಲವಾರು ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಶಿವಮೊಗ್ಗ-ಕನಾ೯ಟಕ ಸಂಘದಿಂದ ಪಿ. ಲಂಕೇಶ್ ಪ್ರಶಸ್ತಿ(2005), ಕನ್ನಡ ಸಾಹಿತ್ಯ ಅಕಾಡೆಮಿಯ -2008ನೆಯ ಸಾಲಿನ ಗೌರವ ಪ್ರಶಸ್ತಿ, ಡಾ:ಸಿಂಪಿ ಲಿಂಗಣ್ಣ ಜಾನಪದ ಸಾಹಿತ್ಯ ಪ್ರಶಸ್ತಿ, ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಧಾರವಾಡದ ಸಪ್ತಾಪುರದ ನಿವಾಸಿಯಾಗಿದ್ದರು. ಬಂಧುಗಳ ಭೇಟಿಗೆ ಮೇಲಿಂದ ಮೇಲೆ ಬಾಗಲಕೋಟೆ ಹಾಗೂ ಬಾದಾಮಿಗೆ ಭೇಟಿ ಕೊಡುತ್ತಿದ್ದರು, ಬಾದಾಮಿಯಲ್ಲಿ ದ್ದಾಗ ಒಮ್ಮಿಂದೊಮ್ಮೆ ಕೋಮಾವಸ್ಥೆಗೆ ಒಳಗಾದರು ಹಾಗೂ ಕೊನೆಯುಸಿರೆಳೆದರು. ಬಾಗಲಕೊಟೆಯಲ್ಲಿ  14-5-2021ರಂದು ಸಂಜೆ ವೇಳೆ ಅಂತಿಮ ವಿಧಿವಿಧಾನಗಳು ಜರುಗಿದವು. ದೇವರು ಅವರ ಆತ್ಮಕ್ಕೆ ಶಾಂತಿಯನ್ನೀಯಲಿ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಭಿಮಾನಿ ಶಿಷ್ಯಬಳಗ ಅನಾಥವಾಗಿದೆ. ವ್ಯಕ್ತಿಗತವಾಗಿ ಅವರು ನನಗೆ ತಾಯಿ ಸ್ಥಾನದಲ್ಲಿದ್ದಂತೆ ಇದ್ದರು. ಸಾಹಿತ್ಯ ಸೇವೆಯಲ್ಲಿ ನನ್ನ ಮಾಗ೯ದಶ೯ಕರಾಗಿದ್ದರು. ನನ್ನ ಪ್ರಥಮ ಕವನ ಸಂಕಲನ ‘ಪ್ರೀತಿ ನೀತಿ ನೆರಳಲ್ಲಿ’ ಪುಸ್ತಕಕ್ಕೆ ಅತೀವ ಅಕ್ಕರೆಯಿಂದ ಬೆನ್ನುಡಿ ಬರೆದುಕೊಟ್ಟರು ಹಾಗೂ ಪುಸ್ತಕ ಲೋಕಾಪ೯ಣೆಮಾಡಿ ಕನಾ೯ಟಕ ವಿದ್ಯಾವಧ೯ಕ ಸಂಘದ ಧಾರವಾಡದಲ್ಲಿ ನನಗೆ ನುಡಿಮುತ್ತುಗಳೊಂದಿಗೆ ಆಶೀವ೯ದಿಸಿದ್ದರು. ಆ ಘಟನೆ ನೆನಪಾಗಿ ನನ್ನ ಹೃದಯ ಭಾರವಾಗಿದೆ. ಮಾತೃವಾತ್ಸಲ್ಯದ ಈ ಮಹಾತಾಯಿ ಮತ್ತೆ ಹುಟ್ಟಿ ಬರಲಿ.
ಎ.ಎ.ದರ್ಗಾ. ಸಾಹಿತಿಗಳು. ಧಾರವಾಡ.

Don`t copy text!