ನೆಲದ ನಿಧಾನ

ನೆಲದ ನಿಧಾನ

ಬಸವ ಪಥದ
ದಿಟ್ಟ ನಿಲುವಿನ
ಅಡೆತಡೆಗಳ ಮೆಟ್ಟಿ ನಿಂತು
ವೈಚಾರಿಕ-ವೈಜ್ಞಾನಿಕ ಬೆಳಕಲ್ಲಿ
ಮೌಢ್ಯ ಕಳೆದ ಧೀಮಂತ..!

ಬಸವ ನುಡಿಯನು
ಮನೆ-ಮನಕೆ ಒಪ್ಪಿಸಿ
ಜೋಳಿಗೆಯಲಿ
ಕಲ್ಯಾಣ ಭಾರತದ
ಕನಸು ಕಂಡ ಹೃದಯವಂತ…!

ಸಂವಿಧಾನ ಧರ್ಮವ
ತಲೆಯ ಮೇಲೆ ಹೊತ್ತು
ಸಮತೆ-ಸಾಮರಸ್ಯಕೆ
ಮತ್ತೆ ಧ್ವನಿಯಾದ
ಆಧ್ಯಾತ್ಮಿಕ ರಾಷ್ಟ್ರ ಪ್ರೇಮಿ…!

ನಿಷ್ಠುರ ಶಬ್ದಗಳ
ವಾತ್ಸಲ್ಯದ ತವರು
ನಡೆ-ನುಡಿಗಳ ಪರಿಶುದ್ಧತೆ
ಪ್ರಶಸ್ತಿಗಳೇ ಸನ್ಮಾನಗೊಂಡ ಅಚ್ಚರಿ
ಸಮಚಿತ್ತದ ಗುಣವಂತ….!

ಬಸವ ಭಾವಕೆ
ಅನ್ವರ್ಥಕವಾಗಿ
ಸಾರ್ಥಕ-ಸಂತೃಪ್ತ ಬದುಕಿನ
ಎಲ್ಲ ಹಂತಗಳನು
ಮೀರಿ ನಿಂತ ಸಂತ….!

ಬಸವ ಮಹಾಬೆಳಗಿನ
ಬಯಲಿನತ್ತ
ನಿರಾಳ-ನಿರ್ಲಿಪ್ತ ಹೆಜ್ಜೆಗಳಲಿ
ನಡೆದು ಹೋದ………
ಈ ನೆಲದ ಮಣ್ಣನ್ನು
ಮಡಿ ಮಾಡಿ ಮಹಾಂತ…..!

(ಪರಮಪೂಜ್ಯ ಡಾ.ಮಹಾಂತ ಅಪ್ಪ ಅವರ ಸ್ಮರಣೆಯಲಿ….)

ಪ್ರೊ.ಜಯಶ್ರೀ.ಎಸ್.ಭಮಸಾಗರ
(ಶೆಟ್ಟರ) ಇಳಕಲ್ಲ.

Don`t copy text!