ಗುಳೇ ಹೊಂಟಾನ ದೇವ್ರು
ಗುಡಿಯೊಳಗಿನ ದೇವ್ರೇ
ನೀ ಗುಳೆ ಹೊಂಟೀಯೇನು ?
ಬಾಗಿಲಿಗೆ ಹಾಕಿದ ಬೀಗ ಕಂಡು
ಅಂಜಿ ನಿಂತೀಯೇನು ?
ಯಾಕಪಾ ದೇವ್ರ ನಿನ್ನ ತಾಕತ್ತು
ಎಲ್ಲಿ ಹೋಯ್ತು ಎಲ್ಲಾ ? ||
ಸ್ನಾನ ಪೂಜಿ ಒಂದೂ ಇಲ್ಲ
ಮೌನಿಯಾಗಿಯೇನು ?
ಮಾತು ಬರದ ಮಗುವಿನಾಂಗ
ಸುಮ್ನೇ ಕುಂತೀಯೇನು ?
ಯಾಕಪಾ ದೇವ್ರ ನಿನ್ನ ತಾಕತ್ತು
ಎಲ್ಲಿ ಹೋಯ್ತು ಎಲ್ಲಾ ? ||
ಹೂವು ಇಲ್ಲ ಪತ್ರಿ ಇಲ್ಲ
ಮಂತ್ರನೂ ಇಲ್ಲಂತ ಬ್ಯಾಸರ ಮಾಡಕೊಂಡಿಯೇನು?
ಮಾಡಾದೇನು ತಿಳಿವಲ್ದ್ಯಾರಿಗೂ
ನಿನಗ ಗೊತ್ತಿಲ್ಲೇನು ?
ಯಾಕಪಾ ದೇವ್ರ ನಿನ್ನ ತಾಕತ್ತು
ಎಲ್ಲಿ ಹೋಯ್ತು ಎಲ್ಲಾ ? ||
ಕೊಂಕ ಮನಿಸ್ಯಾರು
ಮಾಡಿದ ಮಸಲತ್ತು
ರೋಗ ತಂದೈತಲ್ಲ
ಊರ ತುಂಬ
ಸಾವು ನೋವು ಸೂರೆಗೊಂಡೈತಲ್ಲ
ಯಾಕಪಾ ದೇವ್ರ ನಿನ್ನ ತಾಕತ್ತು
ಎಲ್ಲಿ ಹೋಯ್ತು ಎಲ್ಲಾ ? ||
ಹೆಣದ ಮ್ಯಾಲ ಹೆಣ ಹಾಕ್ತಾರ
ಒಂದಾ ಕುಣಿವಳಗ
ಮಂದಿ ಮಕ್ಕಳ ಕೂನಾ ಇಲ್ಲ
ಮರತಾ ಹೋಯ್ತು ಬಳಗ
ಯಾಕಪಾ ದೇವ್ರ ನಿನ್ನ ತಾಕತ್ತು
ಎಲ್ಲಿ ಹೋಯ್ತು ಎಲ್ಲಾ ? ||
ಇಲ್ಲೀವರಿಗೂ ಸುಮ್ಮ್ನ ಇದ್ದ
ದೇವ್ರು ಮಾತು ಸುರು ಮಾಡಿದ
ನೀವ ಮಾಡಿದ ಕೆಟ್ಟ ಕೆಲಸಕ ಗುಳೇ ಹೊಂಟೀನಂದ
ಮಾಡಿದ ತಪ್ಪ ತಿದ್ದಕೊಂಡಮ್ಯಾಲ
ಮತ್ತ ಬರತೀನಂದ
ಆಯ್ತಪ ದೇವ್ರ ಗೊತ್ತದ ನಮಗ
ನಿನ್ನ ರೆಟ್ಟಿ ತಾಕತ್ತು
ಜಲ್ದಿ ಬಂದಬುಡು ಕ್ಷಮಿಸಿ ನಮ್ಮನ್ನ
ನಾವು ಮಾಡಿದ್ದೆಲ್ಲ ತಪ್ಪು ||
✍️ ಅಯ್ಯಪ್ಪಯ್ಯ ಹುಡಾ ರಾಯಚೂರು