ಗಡಿನಾಡು ಸೊಲ್ಲಾಪುರದ
ಡಾ. ಜಯದೇವಿ ತಾಯಿ ಲಿಗಾಡೆ
ಗಡಿನಾಡ ಧೀರೋದಾತ್ತ ಮಹಿಳೆ ಜಯದೇವಿಯವರು ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳಿಗೆ ಪ್ರಸಿದ್ಧಿ ಪಡೆದಿದ್ದ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ೧೯೧೨ ರ ಜೂನ್ ೨೩ ರಂದು ಚೆನ್ನಬಸಪ್ಪ ಮಡಕಿ ಹಾಗೂ ಸಂಗವ್ವನವರ ಮೂರನೆಯ ಮಗಳಾಗಿ ಜನಿಸಿದರು.
ಇವರ ಮಾತೃಭಾಷೆ ಮರಾಠಿ. ೫ ನೆಯ ತರಗತಿಯವರೆಗೆ ಮರಾಠಿಯಲ್ಲಿ ಕಲಿತ ನಂತರ ಕನ್ನಡ ಕಲಿತು, ಮೆಟ್ರಿಕ್ನಲ್ಲಿ ಉತ್ತೀರ್ಣರಾಗಿ ನಂತರ ಕನ್ನಡ ಸಾಹಿತ್ಯ ಅದರಲ್ಲೂ ಶರಣರ ವಚನಗಳ ಅಧ್ಯಯನದಿಂದ ಶರಣ ಸಾಹಿತ್ಯವನ್ನೂ ಆಳವಾಗಿ ಅಧ್ಯಯನ ಮಾಡಿದರು. ವ್ಯವಹಾರಕ್ಕೆ ತಕ್ಕಂತೆ ಇಂಗ್ಲಿಷ್ ಭಾಷಾ ಜ್ಞಾನವನ್ನೂ ಸಂಪಾದಿಸಿದರು. ತಾಯಿ ಸಂಗವ್ವನವರಿಂದ ಕಲಿತ ಭಜನೆ-ಕೀರ್ತನೆ ಹಾಡುಗಳನ್ನು ಇವರು ತಮ್ಮ ಓರಗೆಯವರಿಗೆ ಇಂಪಾದ ಕಂಠದಿಂದ ಕಲಿಸಿದರು. ೧೪ ನೆಯ ವಯಸ್ಸಿಗೇ ಸೊಲ್ಲಾಪುರದ ಪ್ರತಿಷ್ಠಿತ ಶ್ರೀಮಂತ ಕುಟುಂಬವಾದ ಲಿಗಾಡೆ ಮನೆತನದ ಚೆನ್ನಮಲ್ಲಪ್ಪನವರೊಡನೆ ಮದುವೆಯಾಗಿ ಹೋದ ನಂತರ ಜಯದೇವಿ ಲಿಗಾಡೆ ಎನಿಸಿಕೊಂಡರು. ತಮ್ಮ ತಾಯಿಯಂತೆಯೇ ಹಲವಾರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಇವರ ವಿಚಾರ ಸರಣಿಯು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದವು.
ಸಾಹಿತ್ಯ ಹಾಗೂ ಸಮಾಜ ಸೇವೆಯೇ ಇವರ ಧ್ಯೇಯವಾಗಿದ್ದು ಹೈದರಾಬಾದಿನ ರಜಾಕರ ಹಾವಳಿಯಿಂದ ನಿರಾಶ್ರಿತರಾದವರಿಗೆ ಆಶ್ರಯ ನೀಡಿ ಅಶನ-ವಸನಗಳ ವ್ಯವಸ್ಥೆ ಮಾಡಿದರು. ೧೯೪೬ ರಲ್ಲಿ ಪತಿ ಚೆನ್ನಮಲ್ಲಪ್ಪನವರು ನಿಧನರಾದಾಗ, ರಜಾಕರ ಹಾವಳಿ ತಡೆಯಲು ತಮ್ಮ ದುಗುಡವನ್ನು ಬದಿಗೊತ್ತಿ ಮಾತೃ ಸ್ವರೂಪಿಣಿಯಾಗಿ ನೊಂದವರನ್ನೂ ಸಂತೈಸಿದ್ದರಿಂದ ‘ತಾಯಿ’ ಎನಿಸಿಕೊಂಡು ಜಯದೇವಿ ತಾಯಿ ಲಿಗಾಡೆ ಎಂದೇ ಪ್ರಸಿದ್ಧರಾದರು. ಮಾನವೀಯತೆಯ ಗುಣಗಳು ‘ತಾಯಿ’ ಯವರಲ್ಲಿ ತುಂಬಿಕೊಂಡಿದ್ದವು. ಮೂರು ಮಕ್ಕಳ ತಾಯಿಯಾದ ನಂತರ ವ್ರತದಂತೆ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುತ್ತಾ ಅದರಲ್ಲೂ ವಚನ ಸಾಹಿತ್ಯದ ತ್ರಿಪದಿಗಳ ಅಧ್ಯಯನದಲ್ಲಿ ನಿರತರಾಗಿ ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ನಿಜಗುಣ, ಚೆನ್ನಬಸವಣ್ಣ ಮುಂತಾದವರ ಜೀವನಚರಿತ್ರೆ, ವಚನಗಳನ್ನು ಅಭ್ಯಸಿಸಿದರು.ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕನ್ನಡನಾಡು-ನುಡಿಗಾಗಿ ದುಡಿದರು.
ಕನ್ನಡ, ಹಿಂದಿ, ಮರಾಠಿ, ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಜಯದೇವಿ ತಾಯಿಯವರು ರಚಿಸಿದ ಮೊದಲ ಕೃತಿ ಜಯಗೀತ (೧೯೫೨) ಕವನಗಳ ಸಂಗ್ರಹ. ಇದರಲ್ಲಿನ ‘ಹಿಗ್ಗುತಿದೆ ವಿಶ್ವ’ ಕವನವು ಅಕಾಡಮಿಯ ನೆರವಿನಿಂದ ೧೪ ಭಾಷೆಗಳಿಗೆ ತರ್ಜುಮೆಯಾಗಿದೆ. ರವೀಂದ್ರನಾಥ ಠಾಕೂರರ ಭಕ್ತಿಗೀತೆಯಂತೆ ಬರೆದ ಗೀತೆಗಳು ಈ ಕೃತಿಯಲ್ಲಿವೆ. ಇಲ್ಲಿನ ಕೆಲವು ಗೀತಗಳು ‘ಭಾರತೀಯ ಕವಿತಾ’ ಪುಸ್ತಕದಲ್ಲೂ ಸೇರ್ಪಡೆಯಾಗಿದೆ. ಇವರ ಈ ಕೃತಿಯಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅಧ್ಯಾತ್ಮಿಕ ಭಾವವೂ ತುಂಬಿದೆ. ನಂತರ ಪ್ರಕಟಗೊಂಡ ಸಾವಿರದ ಪದಗಳುಳ್ಳ ಕೃತಿ ತಾಯಿಯ ಪದಗಳು (೧೯೫೯ರಲ್ಲಿ) ಸಾವು ಇರದ ಪದಸಂಗ್ರಹವೆನ್ನಬಹುದು.
“ಸಾವಿರ ಗುಡಿಯ ಸರಗೊಳಿಸಿದೆನವ್ವಾ, ಸಾವೆಷ್ಟು ಅದಕ ಬದುಕೆಷ್ಟು ಅದನಾನರಿಯೆ, ಸಾವು ಬದುಕಿನ ದೊರೆಯ ಧರಿಸೇನಾ”- ಎಂದಿದ್ದಾರೆ ಈ ಕೃತಿಯಲ್ಲಿ. ೧೯೬೫ರಲ್ಲಿ ಪ್ರಕಟಗೊಂಡದ್ದು ‘ಸಿದ್ಧರಾಮೇಶ್ವರ ಪುರಾಣ’. ಕನ್ನಡದಲ್ಲಿ ಇದೊಂದು ಕಳಶ ಪ್ರಾಯವಾದ ಕೃತಿಯಾಗಿದ್ದು ಲೇಖಕಿಯರ ಕೃತಿಗಳಲ್ಲೇ ಅತ್ಯುತ್ತಮ ಕೃತಿ ಎನಿಸಿದೆ. ೧೨ನೆಯ ಶತಮಾನದ ಪ್ರಮುಖ ವಚನಕಾರರಲ್ಲೊಬ್ಬರಾದ ಸಿದ್ಧರಾಮನ ಜೀವನ, ಸಾಧನೆ, ಸಿದ್ಧಿಗಳನ್ನೊಳಗೊಂಡ ಪುರಾಣವು ತ್ರಿಪದಿಯಲ್ಲಿದ್ದು ೪೧ ಸಂಧಿಗಳ ೪೧೦೦ ಪದಗಳ ಮಹಾಕಾವ್ಯ. ಇದಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯೂ ದೊರೆತಿದ್ದು (೧೯೬೮), ಮೂರು ಮುದ್ರಣಗಳನ್ನು ಕಂಡ ಕೃತಿ (೧೯೬೫, ೬೬, ೬೭). ಈ ಕೃತಿಯನ್ನು ಪ್ರಾರಂಭಿಸಿದ ನಂತರ ಅನಾರೋಗ್ಯವೂ ಕಾಡ ತೊಡಗಿದ್ದರ ಜೊತೆಗೆ ಕೌಟುಂಬಿಕ ಜಟಿಲತೆ, ವ್ಯಾವಹಾರಿಕ ಅಡ್ಡಿ ಆತಂಕಗಳು, ಆಸ್ಪತ್ರೆ ವಾಸ-ಇವುಗಳನನ್ನು ಅನುಭವಿಸಿದ ತಾಯಿಯವರು –
“ಏನೊಂದು ಸೂಜಿ! ಸೋಸಿ ನೋಡುವಿ ತನುವನು-ಸಿದ್ಧರಾಮ, ನಸುನಗುತ ನಿನ್ನನೆ ನೆನೆವೆನು” ಎಂದಿದ್ದಾರೆ. ರೋಗದಿಂದ ನರಳುತ್ತಿದ್ದರೂ ಸಿದ್ಧರಾಮೇಶ್ವರನ ಕೆಲಸವನ್ನು ನಿಲ್ಲಿಸದೆ ನರಳಿತೆಯಲ್ಲಿಯೂ ವಚನಗಳು ಅರಳ ತೊಡಗಿದವು.
ತಾಳುವೆನು ಯಾತನೆಯ, ಬಾಳುವೆನು ನಿನಗಾಗಿ, ಕಾಳ ಬಂದರೂ ಹೆದರೇನು-ಸಿದ್ಧರಾಮ, ದಾಳಿ ತಂದಿರುವೆ ಈ ದೇಹಕೆ -ಎಂದು ಹೇಳುತ್ತಲೇ, ಬಲವಿಲ್ಲದ ಕೈಯನ್ನೊಮ್ಮೆ ನೋಡಿದ ಜಯದೇವಿಯವರು ಈ ಕಣ್ಣಕುಕ್ಕುವ ಚಿನ್ನದ ಬಳೆ ಏಕೆ ಎಂದು ಅದನ್ನೂ ತೆಗೆದಿರಿಸಿ ರುದ್ರಾಕ್ಷಿ ಕಂಕಣ ಧರಿಸಿದರು. ಹತ್ತು ವರುಷಗಳ ನಿರಂತರ ಪರಿಶ್ರಮದಿಂದ ಕೃತಿಯ ರಚನೆಯನ್ನೂ ಪೂರೈಸಿದರು. ನಂತರ ಇವರು ಹೊರತಂದ ಕೃತಿಗಳೆಂದರೆ ‘ಬಂದೇವು ಕಲ್ಯಾಣಕೆ’, ‘ಸಾವಿರ ಪದಗಳು’ ಮತ್ತು ಅರಿವಿನಾಗರದಲ್ಲಿ (ಸಂಪಾದಿತ) ಮುಂತಾದವು ಪ್ರಕಟವಾದವು. ಮಹಾರಾಷ್ಟ್ರಿಯರಿಗೂ ಕನ್ನಡನಾಡಿನ ಶರಣರನ್ನೂ ಪರಿಚಯಿಸಲು ಕೃತಿ ರಚಿಸಿದ್ದು ಮರಾಠಿ ಭಾಷೆಯಲ್ಲಿ. ಸಿದ್ಧವಾಣಿ, ಬಸವದರ್ಶನ, ಸಮೃದ್ಧ ಕರ್ನಾಟಕಾಂಚಿ ರೂಪ-ರೇಷಾ, ಮಹಾಯೋಗಿನಿ, ಸಿದ್ಧರಾಂ ಚಿತ್ರಿವಧಿ, ಬಸವವಚನಾಮೃತ, ಶೂನ್ಯ ಸಂಪಾದನೆ ಮುಂತಾದವುಗಳು. ಮರಾಠಿ ಭಾಷೆಯಲ್ಲಿಯೇ ಬಸವಣ್ಣನವರ ವಚನಗಳು, ನೀಲಮ್ಮನ ವಚನಗಳು, ೨೧೫೦ ಪದ್ಯಗಳ ಸ್ವತಂತ್ರಕೃತಿ, ಅಕ್ಕಮಹಾದೇವಿ ಪುರಾಣ, ಮರಾಠಿ ಅನುಭಾವ ಪದಗಳು ಮುಂತಾದ ೧೦ಕ್ಕೂ ಹೆಚ್ಚು ಕೃತಿಗಳು ಪ್ರಕಟಣೆಯಾಗಬೇಕಿದೆ. ಉತ್ತಮ ಕವಯಿತ್ರಿಯೂ ಆಗಿದ್ದ ಜಯದೇವಿ ತಾಯಿಯವರು ಹುಬ್ಬಳ್ಳಿಯಲ್ಲಿ, ತುಮಕೂರಿನಲ್ಲಿ ನಡೆದ ಅಖಿಲಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ, ಉಡುಪಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್ತಿನ ಮಹಿಳಾಗೋಷ್ಠಿಯ ಅಧ್ಯಕ್ಷೆಯಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನಾಧ್ಯಕ್ಷೆಯಾಗಿ, ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನದ (೧೯೫೧) ಮಹಿಳಾಗೋಷ್ಠಿಯ ಅಧ್ಯಕ್ಷೆಯಾಗಿದ್ದರು. ಜೊತೆಗೆ ಮಂಡ್ಯದಲ್ಲಿ ನಡೆದ ೪೮ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗಾದಿ ಏರಿ, ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಮೊದಲಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮಹಿಳೆ ಎಂಬ ಗೌರವಕ್ಕೂ ಪಾತ್ರರಾದರು. ಕರ್ನಾಟಕ ವಿಶ್ವವಿದ್ಯಾಲಯವು ಸೆನೆಟ್ ಸದಸ್ಯೆಯಾಗಿ ಆಯ್ಕೆ ಮಾಡಿದ್ದಲ್ಲದೆ ಡಿ.ಲಿಟ್ ಪದವಿಯನ್ನೂ ನೀಡಿ ಗೌರವಿಸಿತು. ‘ತಾಯಿ’ಯವರ ಸಾಹಿತ್ಯ ಸೇವೆಯನ್ನೂ ಗುರುತಿಸಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಜಯದೇವಿ’ (೧೯೭೨). ಜನಪದ ಸಾಹಿತ್ಯದ ಜೀವಾಳದಂತಿದ್ದ ಈ ತ್ರಿಪದಿ ರಚನಕಾರ್ತಿಯು ೧೯೮೬ರ ಜುಲೈ ೨೪ ರಂದು ಲಿಂಗೈಕ್ಯರಾದರು.
ಅವರು ಒಟ್ಟು ಹದಿನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.
ಕನ್ನಡ ಕೃತಿಗಳು
ಜಯಗೀತೆ,
ತಾಯಿಯ ಪದಗಳು,
ಶ್ರೀ ಸಿದ್ಧರಾಮ ಪುರಾಣ,
ತಾರಕ ತಂಬೂರಿ,
ಬಂದೇವು ಕಲ್ಯಾಣಕೆ,
ಸಾವಿರದ ಪದಗಳು,
ಅರುವಿನಾಗರದಲ್ಲಿ.
ಮರಾಠಿ ಕೃತಿಗಳು
ಸಿದ್ಧವಾಣಿ,
ಬಸವದರ್ಶನ,
ಸಮೃದ್ಧ ಕರ್ನಾಟಕಾಂಬೆ ರೂಪರೇಷೆ,
ಮಹಾಯೋಗಿನಿ,
ಸಿದ್ಧರಾಮಾಂ ಚಿ ತ್ರಿವಧಿ,
ಬಸವವಚನಾಮೃತ,
ಶೂನ್ಯ ಸಂಪಾದನೆ.
ಜಯಗೀತೆ ೪೦ ಸುಂದರ ಸುಮಧುರ ಗೀತೆಗಳ ಗೊಂಚಲು. ‘ಮಂಗಳದ ಮಹಿಮೆ’ ಎಂಬ ಕವಿತೆಯಲ್ಲಿ –
ಮನದ ಮದವೆಲ್ಲ
ಮುರಿದು ತಾ ಎಲ್ಲ ಪೃಥಿವಿಯಲ್ಲಿ ಅಣುವಿನೊಳು ಒಂದು ಅಣುವು
ಅಳಿಸಿ ಜೀವವ್ಯಾಪ ತನ್ನ
ತಾಪಲೋಪ
ಅಣು ಅಣುವಿನೊಡಗೂಡಿ ಒಂದಾಗಿ ಹೊಸೆದ ಮಹತ್ತು ಭಕ್ತಿಯಾಗಿ ಪರಿಣಮಿಸುವಂತೆ ಅವರ ಭಾವ ಭಕ್ತಿಮಯವಾಗಿದೆ ಎನ್ನುತ್ತಾರೆ.
ತಾರಕ್ಕ ತಂಬೂರಿಯ, ನಾನದಕೆ ನುಡಿಸುವೆ. ತಾರ ತಂಬೂರಿಯ
ಗುರುವಿನ ಅಗಣಿತ ಮಹಿಮೆಯ ಸಾರುವೆ. ತಾರ ತಂಬೂರಿಯ ಎಂದು ಹಾಡಿದ ತಾಯಿಯವರ ‘ತಾರಕ ತಂಬೂರಿ’ ಕೃತಿಯು ‘ಜಯಸಿದ್ಧರಾಮಾ’ ಅಂಕಿತದಲ್ಲಿ ಪಲ್ಲವಿಸಿದ ಅನುಭವಜನ್ಯ ಕವನಗಳ ಭಾವತೀವ್ರತೆಯ ಸಂಕಲನವಾಗಿದೆ.
ನಿತ್ಯದಾಸೋಹದ ಮನೆಯ ತೊತ್ತು ಕೆಲಸದಿ ಮನವ
ಅತ್ತಿತ್ತ ಸುಳಿಯದಂತೆ ಸಲವು ಸಿದ್ಧರಾಮ.
ಕುಲಭೇದವ ಬಿಡಿಸಿ ಛಲ ಸತ್ಯಾಚಾರದ ಹಿಡಿಸಿ
ಶೀಲದ ಮರ್ಮವ ತಿಳಿಸಿ ಸಲವು ಸಿದ್ಧರಾಮ.
ಇಲ್ಲಿ ತಾಯಿಯವರ ಅಂತರಾಳದ ಆರ್ತಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದಾಗಿದೆ.
೧೯೮೬ರಲ್ಲಿ ‘ಸಾವಿರದ ಪದಗಳು’ ಸಂಕಲನದ ರೂಪದಲ್ಲಿ ಪ್ರಕಟಗೊಂಡಿದೆ. ತಾಯಿಯವರು ರಚಿಸಿದ ನಾಲ್ಕುಸಾವಿರ ಪದ್ಯಗಳಲ್ಲಿ ಸಾವಿರ ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಈ ಸಂಕಲನವನ್ನು ರೂಪಿಸಲಾಗಿದೆ. ಇಲ್ಲಿ ದೈವದ ಕುರಿತಾಗಿ ಭಕ್ತಿಗೀತೆಗಳು, ಶಿವಶರಣ-ಶರಣೆಯಾರ ಕುರಿತು ಭಾವಗೌರವ ನುಡಿಗಳು ಮತ್ತು ಶ್ರೇಷ್ಠ ಜೀವಿಗಳ ಪುಣ್ಯಸ್ಮರಣೆಗಳು ಹೀಗೆ ಮೂರುವಿಧದಲ್ಲಿ ಇದು ಮುಪ್ಪುಗೊಂಡಿದೆ. ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.
ಬಸವ ತುಳಿದ ದಾರಿ
ವಸುಧೀಗೆ ಉಪಕಾರಿ
ದೆಸೆದಿಕ್ಕುಗಳಲ್ಲಿ ಕೀರುತಿ ಹರಡಿತ್ತು
ಶಶಿಧರನ ಹೊತ್ತ ಬಸವಣ್ಣ
ಎಂದು ಮನದುಂಬಿ ಬಸವಣ್ಣನವರನ್ನು ತಾಯಿ ಕೊಂಡಾಡುತ್ತಾರೆ. ತಾಯಿಯವರ ವ್ಯಕ್ತಿತ್ವದ ಅನೇಕ ಆಯಾಮಗಳಲ್ಲಿ ಅವರ ಮಾತೃಭಾಷೆಯ ಅಭಿಮಾನವು ಒಂದು. ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಅವರು ಬದುಕನ್ನೇ ಮುಡಿಪಾಗಿಟ್ಟರು.
ಸೊಲ್ಲಾಪುರದೊಳಗ ಸೊಲ್ಲಾ ಅಡಗಿಸಬ್ಯಾಡೋ
ನಿಲ್ಲೆಂದು ತಾಯಿನುಡಿ ನಿಲ್ಲಿಸು. ಸಿದ್ಧರಾಮ
ಅಲ್ಲಗಳೆದವರಿಗೆ ತಿಳಿಹೇಳು.
ಇನ್ನೊಂದು ಕಡೆ
ಕನ್ನಡತಾಯಿ ನುಡಿ, ಮನ್ನಿಸಿ ಮಾತನಾಡು
ಅನ್ಯಕ್ಕೆ ಮರುಳಾಗದಿರು, ಮರುಳೇ ನೀ
ಕನ್ನಡಿಗನೆಂದು ಮರೀಬೇಡ.
ಎಂದು ಕನ್ನಡತನದ ಬಗ್ಗೆ ಕನ್ನಡಿಗನ ಬಗ್ಗೆ ಎಚ್ಚರದ ಮಾತುಗಳನ್ನು ಬಹಳ ಕಳಕಳಿಯಿಂದ ಹೇಳಿದ್ದಾರೆ. ತಾಯಿಯವರು ತಮ್ಮ ‘ಸಿದ್ಧರಾಮ ಪುರಾಣ’ದ ತ್ರಿಪದಿ ಮಾಧ್ಯಮಕ್ಕೆ ಸರ್ವಜ್ಞನೇ ಕಾರಣ ಎನ್ನುತ್ತಾರೆ. ಒಂದು ಭಾಗದಲ್ಲಿ ಅವನನ್ನು ಕುರಿತು
ತಾಯಿಯ ಪದಗಳು, ರಾಯಸಿದ್ಧನ ಕಾವ್ಯ
ಹಾಯಾಗಿ ನಿನ್ನ ಧಾಟಿ ನಡೆಸಿದೆ, ಸರ್ವಜ್ಞ
ಛಾಯೆ ಇರಲಿ ನಿನ್ನ ಕಡೆತನಕ.
‘ತಾಯಿಯ ಪದಗಳು’ ತಾಯ್ತನದ ಹಿರಿಮೆಯಿಂದ ಕೂಡಿದ ಈ ಪದಗಳು ಮಾನವ ಕುಲಕ್ಕೆ ನೀಡಿದ ಸಂಹಿತೆಗಳು. ‘ತಾಯಿಯ ಪದಗಳು’ ರಚನೆಯ ಸಾರಸಂಗ್ರಹವನ್ನೇ ಡಾ. ಚೆನ್ನಾಂಬಿಕ ಪಾವಟೆಯವರ ಮಾತುಗಳು ಹೇಳುತ್ತವೆ:
ವರವಾದ ಪರಸಾದ ಕರೆದು ನಾ ನೀಡುವೆ
ವರಭಕ್ತೀಲಿ ನೀವು ಉಣಬೇಕು. ಅದು ನಿಮಗ
ಪರತರ ಸುಖವ ಕೊಟ್ಟೀತ.
‘ಶ್ರೀಸಿದ್ಧರಾಮ ಪುರಾಣ’ದಲ್ಲಿ ತಾಯಿಯವರು
‘ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ
ಬಲ್ಲವರ ಪಾದ ಹಿಡಿಯುವೆ – ಬಲ್ಲಿದರು
ಕಲಿಸಿರಿ ಮತ್ತೆ ನುಡಿಸಿರಿ’.
ಎಂದು ತಮ್ಮ ವಿನೀತಭಾವವನ್ನೇ ಮೆರೆದಿದ್ದರೂ ಶ್ರೀ ಸಿದ್ಧರಾಮ ಪುರಾಣವು ಕನ್ನಡದ ಅಪರೂಪ ಕೃತಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲ.
– ವಿಜಯ ಕಾನ, ಕಾಸರಗೋಡು