ರಾಜಕುಮಾರ
ಇವರಪ್ಪನೇನು
ಕತ್ತಿ ಹಿಡಿದು ರಾಜ್ಯ ಕಟ್ಟಿದ
ಸಾಮ್ರಾಟನಲ್ಲ.
ರಂಗಸಜ್ಜಿಕೆಯ ಹೊರಗೆ
ಹರಿದ ಅಂಗಿ,ಕೊಳಕು ಪಂಚೆ ಉಟ್ಟು
ಬಣ್ಣದ ಕನಸಿನಲ್ಲಿ
ಬಾಳಿದ ರಂಗ ನಾಯಕ….!
ಆದರೂ ಈತನ ಮಗ
ರಾಜಕುಮಾರ….!
ಅಂದರೆ ರಾಜನ ಕುಮಾರ…..
ಹೌದ್ಹೌದು ದಂಡು ಕಟ್ಟಿಕೊಂಡು,
ಅರಮನೆಯಲಿ ಉಂಡುಟ್ಟವನೇ
ರಾಜ ಎಂದೇನಲ್ಲವಲ್ಲ…
ಮಣ್ಣನ್ನು ,ಮಣ್ಣಲ್ಲಿ ದುಡಿದವರನ್ನೂ ಆಳಿ
ಕಿರೀಟವನಿಟ್ಟುಕೊಂಡ
ಕೀಚಕನಂಥ ರಾಜನಿಗೆ ಮಗನಾಗಲಿಲ್ಲ….
ಶಿವನ ಸೆಜ್ಜೆಗೆ ಸೆಡ್ಡು ಹೊಡೆವ
ರಂಗಸಜ್ಜಿಕೆಯನಾಳಿದ
ನಟರಾಜನ ಕುವರ ಈ
ಮುತ್ತುರಾಜ…..
ದೇವಾಧಿದೇವತೆಗಳೋ,
ಸುರಾಸುರಾಧಿಪತಿಯೋ,
ಆಳಿಹೋದ ಸಾರ್ವಭೌಮ
ಚಕ್ರವರ್ತಿಯೋ,
ಅಧಿಕಾರಿಯೋ, ಸೇವಕನೋ,
ಸೈನಿಕನೋ, ಕಾರ್ಮಿಕನೋ,
ಕವಿ-ಕಲಾವಿದ, ರಸಿಕ ಚಕ್ರಿಯೋ,
ಪಾಪಿಯೋ, ಅಪರಾಧಿಯೋ,
ತಾಪಕಳೆವ ಶರಣ,ಸಂತ,ದಾಸ,ಯತಿ
ಪುಂಗವನೋ ,
ವೇಷಕಟ್ಟಿ ,ಬೆಳ್ಳಿತೆರೆಗೆ ಕಳೆಕಟ್ಟಿ
ಜಗದ ಕಣ್ಣು ಮನಕೆ
ತೋರಣವ ಕಟ್ಟಿ ,
ರಸಿಕರೆದೆಯ ಗೆದ್ದು
ಮೆರೆದ ಚಿರಂಜೀವ
ಸಾರ್ವಭೌಮ….
ರಂಗಗೀತ, ಚಿತ್ರಗೀತ
ಶರಣ,ದಾಸ ಭಕ್ತಿ ಸಂಗೀತ
ಎಲ್ಲದರೊಳೂ ಸರ್ವಶಕ್ತ
ಅನಭಿಷಕ್ತ ರಾಜನೀತ…..
ಬರೀ ಮುತ್ತುರಾಜನೆನಬೇಕೆ?
ಕನ್ನಡದ ಮುತ್ತೆನಬೇಕೆ?
ನುಡಿದೇವಿಗೆ ಮೀಸಲಾದ
ನಾಡಸಿರಿ ಎನಬೇಕೆ?
ಕನ್ನಡದ ಮುತ್ತು ನಮ್ಮ ರಾಜ
ನಾಡದೇವಿಯ ಕುವರ ತೇಜ
ನೀನೇ ನೀನೇ ನಮ್ಮ ರಾಜ
ಗಾನಗಂಧರ್ವ ಸುರತೇಜ
ಇದೋ ನಿನಗೆ ವಂದನ
ಕನ್ನಡದ ಅಭಿನಂದನ.
–
-ಕೆ.ಶಶಿಕಾಂತ.ಲಿಂಗಸುಗೂರು
ರಾಜಕುಮಾರ ರ ಕುರಿತಾದ ಅರ್ಥಪೂರ್ಣ ಕವಿತೆ. ವೈವಿಧ್ಯಮಯವಾಗಿದೆ.