ಮುಪ್ಪಿನ ಷಡಕ್ಷರಿ

ಮುಪ್ಪಿನ ಷಡಕ್ಷರಿ

(ಸುಬೋಧ ಸಾರ -ಸಂಕ್ಷಿಪ್ತ ಅವಲೋಕನ)

ದಕ್ಷಿಣ ಕರ್ನಾಟಕದ ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳ ಅರಣ್ಯಾವೃತ ಜಾಗಗಳನ್ನು ಕತ್ತಲ ಪ್ರದೇಶ ಎಂದು ಪರಿಗಣಿಸಲಾಗಿದೆ. ಇಲ್ಲಿಗೆ ಉತ್ತರ ಭಾರತದ ಹಿಮಾಲಯದಿಂದ ಸಾಧುಸಂತರು ಸಂದರ್ಶನ ನೀಡುತ್ತಿದ್ದರು. ಉತ್ತರ ಕರ್ನಾಟಕದ ಮಲೆ ಮಹದೇಶ್ವರ, ಮಂಟೇಸ್ವಾಮಿ ಭಕ್ತರೂ ಬರುತ್ತಿದ್ದರು. ಹೀಗಾಗಿ ಇಲ್ಲಿ ಅಧ್ಯಾತ್ಮದ ಪರಿಸರ ಉಂಟಾಗಿತ್ತು.
ಕನ್ನಡ ನಾಡಿನಲ್ಲಿ ಮುಪ್ಪಿನ ಷಡಕ್ಷರಿ, ದೊಡ್ಡ ಷಡಕ್ಷರ ಸ್ವಾಮಿ, ಷಡಕ್ಷರದೇವ, ವಿರಕ್ತ ಷಡಕ್ಷರಿ, ಷಡಕ್ಷರಾಮಾತ್ಯ ಎನ್ನುವ ಐವರು ಕವಿಗಳಿದ್ದರು. ಇವರ ಪೈಕಿ ಪ್ರಸ್ತುತ ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದ ಮುಪ್ಪಿನ ಷಡಕ್ಷರಿಯ ಬಗ್ಗೆ ಕೆಲವು ವಿಚಾರಗಳನ್ನು ನಾವು ಗಮನಿಸಬಹುದು. ಈತನ ಕಾಲ
ಕ್ರಿಸ್ತಶಕ ಸುಮಾರು ೧೫೦೦.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಯರ ಗಂಬಳ್ಳಿ ಗ್ರಾಮದಲ್ಲಿದ್ದ ಸಿದ್ಧಲಿಂಗ ಸ್ವಾಮೀಜಿಯವರು ಮುಪ್ಪಿನ ಷಡಕ್ಷರಿಗೆ ಶಿವಶಾಸ್ತ್ರದ ಅನುಭವ ಅರುಹಿದ ದೀಕ್ಷಾ ಗುರುಗಳು.

‘ಓಂ ನಮಃ ಶಿವಾಯ’ ಇವು ಷಡಕ್ಷರಗಳು. ಶಿವಶರಣ ಕವಿಯಾದುದರಿಂದ ಷಡಕ್ಷರಿ ಅಥವಾ ಜ್ಞಾನವೃದ್ಧನಾದ ಕಾರಣ ಮುಪ್ಪಿನ ಷಡಕ್ಷರಿ ಎಂದೂ ಕರೆಯುತ್ತಿದ್ದಿರಬೇಕು.

ಕೊಳ್ಳೇಗಾಲದ ಸಮೀಪ ಶಂಭುಲಿಂಗ ಬೆಟ್ಟದಲ್ಲಿ ಮುಪ್ಪಿನ ಷಡಕ್ಷರಿಯು ತಪಗೈದ ಗವಿಯಿದೆ. ನಿಜಗುಣ ಶಿವಯೋಗಿಯ ನಂತರ ಕೈವಲ್ಯ ಪದ್ಧತಿಯಲ್ಲಿ ಹಾಡುಗಬ್ಬಗಳನ್ನು ರಚಿಸಿದ ಶರಣಕವಿಗಳಲ್ಲಿ ಇವನಿಗೆ ಎರಡನೇ ಸ್ಥಾನ.

ಮುಪ್ಪಿನ ಷಡಕ್ಷರಿಯು ಎಪ್ಪತ್ತನಾಲ್ಕು ಕೈವಲ್ಯ ಪದ್ಧತಿ ತಿಳಿಸುವ ‘ಸುಬೋಧ ಸಾರ’ ವನ್ನಲ್ಲದೆ ಕಂದ ಪದ್ಯಗಳಲ್ಲಿ ‘ಶಿವಪೂಜಾಷ್ಟಕ’ ಹಾಗೂ ‘ಶಿವಯೋಗಾಷ್ಟಕ’ ಗಳನ್ನು ರಚಿಸಿದ್ದಾನೆ.

ಇವನು ಭೋಗ ಷಟ್ಪದಿಯಲ್ಲಿ ಬರೆದ ‘ತಿರುಕನ ಕನಸು’ ಅತ್ಯಂತ ಜನಪ್ರಿಯ.ಇವನು ಭಾಮಿನಿ ಹಾಗೂ ಷಟ್ಪದಿಗಳಲ್ಲೂ ಕೃತಿ ರಚಿಸಿರಬೇಕು.

ಇವನು ರಚಿಸಿದ ಅನೇಕ ತತ್ತ್ವ ಪದಗಳು ಉತ್ತರ ಕರ್ನಾಟಕದ ಗುಲ್ಬರ್ಗಾ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಚಾರಗೊಂಡಿವೆ.

* ಧರೆಯ ಸುಖದ ಭೋಗವೆನಗೆ
ಹರಿದುಹೋಗಲಿ

ಕಾಡಲೇಕೆ ನರರುಗಳನು
ಬೇಡಿ ಬಳಲದೇಕೆ ಮನವೆ

ಎಂಬಲ್ಲಿ ಮುಪ್ಪಿನ ಷಡಕ್ಷರಿಯ ಆಳ ಚಿಂತನೆ ವ್ಯಕ್ತವಾಗಿರುವುದನ್ನು ಗಮನಿಸಬಹುದು.

* ಎನ್ನ ಕರದೊಳಗಿರ್ದು ಎನ್ನೊಳೇತಕೆ ನುಡಿಯೆ
ಇನ್ನೆನಗೆ ಭಯವುಂಟೆ

ಎನ್ನ ಸರ್ವಾಂಗವನು ನಿನ್ನ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ‌ ಲಿಂಗವೆ ಹೀಗೆನ್ನುವಲ್ಲಿ ಮುಪ್ಪಿನ ಷಡಕ್ಷರಿಯ ಪರಿಶುದ್ಧ ಹೃದಯದ ಆಕಾಂಕ್ಷೆ ಹೊರಹೊಮ್ಮಿದೆ.

*ಅವರವರ ದರುಶನಕೆ ಅವರವರ ವೇಷದಲಿ
ಅವರವರಿಗೆಲ್ಲ ದೇವ ನೀನೊಬ್ಬನೆ

ಅವರವರ ಭಾವಕ್ಕೆ
ಅವರವರ ಪೂಜೆಗಂ ಅವರವರಿಗೆಲ್ಲ ದೇವ ನೀನೊಬ್ಬನೆ

*ಹೀಗೆ ಹೃದ್ಯ ಶೈಲಿಯಲ್ಲಿ ತಾತ್ತ್ವಿಕ ವಿಚಾರಗಳು ಷಡಕ್ಷರದೇವನ ‘ಸುಬೋಧ ಸಾರ’ ಕೃತಿಯು ರಚಿತವಾಗಿರುವುದು ಕಂಡುಬರುತ್ತದೆ.

ಧರೆಯ ಭೋಗಭಾಗ್ಯ ತೊರೆದು, ಭವದ ಭೀತಿಯ ಚಿಂತೆಯೇ ಇಲ್ಲದೆ, ಕಂತುಪಿತನಾದ ಶಿವನು ತನ್ನೊಳಗೆ ನಿಶ್ಚಿತವಾಗಿ ನೆಲೆಸಿದ್ದಾನೆ ಎಂಬುದಾಗಿ ತಿಳಿದು, ಸಹಜ ಆನಂದದಲ್ಲಿ ಮುಪ್ಪಿನ ಷಡಕ್ಷರಿಯು ಮಗ್ನನಾಗಿದ್ದ.

ಹೀಗಾಗಿ ಋಷಿಕವಿಯಾಗಿದ್ದ ಈತನ ರಚನೆಗಳಲ್ಲಿ ಭಕ್ತಿಯ ಪಾರಮ್ಯ ಸೂಚಿಸುವ ವಿವಿಧ ತಾನಗಳಿವೆ.
***
ಮುಪ್ಪಿನ ಷಡಕ್ಷರಿಯ ಕೈವಲ್ಯ ಪದ್ಧತಿ
*ನೀನೆ ಅಕಲಂಕ ಗುರು* ( ಕುಸುಮ ಷಟ್ಪದಿ)

ಸಕಲಕೆಲ್ಲಕೆ ನೀನೆ
ಅಕಲಂಕ ಗುರುವೆಂದು
ನಿಖಿಳ ಶಾಸ್ತ್ರವು ಪೇಳುತಿರಲರಿದೆನು|ಪ|

ಎರಗಂಬಳಿಯ ಸಿದ್ಧ
ವರಲಿಂಗ ನಾಮದಿಂ
ಹರನೆ ನೀನೆನಗೆ ದೀಕ್ಷೆಯ ಮಾಡಿದೆ

ವರ ಷಡಕ್ಷರಿಯ ದೇ
ವರ ನಾಮದಿಂದೆನಗೆ
ಅರುಹಿದಿರಿ ಶಿವಶಾಸ್ತ್ರದನುಭವವನು|೧|

ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಶಿವ ನೀನೊಬ್ಬನೆ|೨|

ಹೋರಾಟವಿಕ್ಕಿಸಲು
ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ನೀನಲ್ಲದೆ
ಆರು ಅರಿಯರು ನೀನು
ಬೇರಾದ ಪರಿಗಳನು
ಮಾರಾರಿ ಶಿವಷಡಕ್ಷರಲಿಂಗವೆ
|೩|
***
ಈ ತತ್ತ್ವ ಪದಗಳು ಇಹಲೋಕದ ಐಶ್ವರ್ಯ, ಆಡಂಬರಗಳನ್ನು ನಿರಾಕರಿಸುತ್ತವೆ. ಐಹಿಕದ ತೀವ್ರ ಬಯಕೆ ಅರಸೊತ್ತಿಗೆಗಾಗಿ ಇರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸಾಮ್ರಾಜ್ಯದ ವಿಸ್ತರಣೆ ಮತ್ತು ಭಂಡಾರ ಸೂರೆಯ ಕಾರಣಕ್ಕಾಗಿ ಅದು ಯಾವಾಗಲೂ ಕೈಯಲ್ಲಿ ಖಡ್ಗ ಹಿರಿಯಲು ಪ್ರೇರೇಪಿಸುತ್ತದೆ. ಆ ಖಡ್ಗ ಕಬ್ಬಿಣದ್ದು.

ಏಕತಾರಿಯ ತಂತಿಯೂ ಕಬ್ಬಿಣದಿಂದಲೇ ಮಾಡಲ್ಪಟ್ಟಿದೆ. ಖಡ್ಗ ಕಡಿಯಲು ಬಳಕೆಯಾದರೆ ತಂತಿ ಅಂತರಂಗ ನುಡಿಸಲು ಬಳಕೆ ಆಗುವಂಥಾದ್ದು.

ತಂತಿ ಮೀಟುತ್ತಾ, ಸ್ವರವೆತ್ತಿ ಹಾಡುತ್ತಾ ಸಾಗಿದರೆ ಬೆಳಕಿನ ನೆಲೆ ಗೋಚರಿಸಬಹುದು. ಈ ಸರಳ ಸುಲಭ ಮಾರ್ಗವನ್ನು ಕರ್ನಾಟಕದ ಗ್ರಾಮೀಣ ಪ್ರದೇಶದ ಜನತೆ ಕಂಡುಕೊಂಡು ಶತಶತಮಾನಗಳೇ ಸಂದವು. ಈ ತತ್ತ್ವ ಪದಗಳ ಅರ್ಥವು ಹಾಡುವ ಸಂದರ್ಭದಲ್ಲೇ ಅಂತರಂಗವನ್ನು ಪ್ರವೇಶಿಸುತ್ತದೆ.
ಜನಸಾಮಾನ್ಯರಿಗೆ ಈ ಹೇಳುವ ಕೇಳುವ ಪದ್ಯಗಳು ಅಡೆತಡೆಯಿಲ್ಲದೆ ತಲಪುತ್ತಿತ್ತು. ಈ ತತ್ತ್ವ ಪದಗಳು ವೀರಶೈವ ಪಂಥದ ಹಿನ್ನೆಲೆಯವಾದರೂ ಇವು ಜಾತಿ,ಮತ,ಪಂಥಗಳನ್ನು ನಿರಾಕರಿಸುತ್ತವೆ.
***
(ವಾಹಿನಿ ಕಲಾಸಂಘ, ಪುತ್ತೂರು
ಈ ವಾಟ್ಸಪ್ ಗ್ರೂಪ್‌ ಗಾಗಿ ಬರೆದ ವಿಶೇಷ ಲೇಖನ.)


ಕಾನ ಸುಂದರ ಭಟ್.
ಸನ್ನಾಫ್ ದಿ. ಕಾನ ರಾಮ ಭಟ್.
ನಿವೃತ್ತ ಮುಖ್ಯ ಶಿಕ್ಷಕರು.
ಮೂವಜೆ, ಪಡಿಬಾಗಿಲು
ಅಂಚೆ ಅಳಿಕೆ
ವಯಾ ಸತ್ಯ ಸಾಯಿ ವಿಹಾರ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪಿನ್ 574235
ಫೋನ್ 9686412927

Don`t copy text!