ಅಪರೂಪದ ಸಂತ ಇಳಕಲ್ಲ ಮಹಾಂತ

“ಅಪರೂಪದ ಸಂತ ಇಳಕಲ್ಲ ಮಹಾಂತ”

ಇಳಕಲ್ಲ ಮಠದೊಳಗೆ
ಬೆಳಕೊಂದು ಮೂಡಿತು
ಸುತ್ತ ಮುತ್ತ
ಎತ್ತೆತ್ತಲು ಬಸವ ಕಾರುಣ್ಯ ಹರಿಯಿತು!

ಪದವಿ ಪಲ್ಲಕ್ಕಿಗಳ ಬದಿಗಿರಿಸಿ
ಬಿದ್ದ ಜನಗಳನೆತ್ತಲೆಂದೆ
ಎದ್ದು ಬಂದ
ತತ್ವಬದ್ಧ ಸಿದ್ಧಪುರುಷ!

ನುಡಿಯೆ ಕಾಯಕ
ನಡೆಯೆ ನಿರ್ಮಲ
ಬೇಡಿ ದುರ್ವ್ಯಸನ ಭಿಕ್ಷೆಯ
ನೀಡಿ ಮಂದಹಾಸಕೆ ರಕ್ಷೆಯ!

ಬದುಕತುಂಬ ಬಸವ ಯಜ್ಞವ ಹೂಡಿ
ಮೌಢ್ಯ ಕಂದಾಚಾರಗಳ ಆಹುತಿ ಮಾಡಿ
ನರರ ಮಡಿಲಿಗೆ ಅರಿವಿನ ಫಲ ನೀಡಿ
ಸಮಾಜ ಶಿವನನ್ನೇ ವೀಣೆಯಾಗಿಸಿದ ಆತ್ಮವೈಣಿಕ!

ಊರುಕೇರಿಗಳ ಸಂಚರಿಸಿ
ಬಸವನಾಡಳಿತ ಬಿತ್ತರಿಸಿ
ವಸುಧೆ ಕೊಳೆಯ ಹಸನುಗೈಯಲು
ತೂಗಿತೆಲ್ಲರೆದೆಯಲಿ ಲಿಂಗಗೊಂಚಲು!

ಅಂದು,
ನೀ ನೆಟ್ಟ ವಿಮೋಚನೆಯ ಬೀಜ
ಇಂದು ಹೆಮ್ಮರವಾಗಿ
ಸಾವಿರಾರು ಮುಗುದೆ ಮಕ್ಕಳ
ಬಾಳಿಗೆ ನೀಡಿದೆ ತಂಪು ನೆರಳು!

ಜಾತಿಜಂಗಮದ ಪೊರೆ ಹರಿದು
ಜ್ಞಾನ ಜಂಗಮಕೆ ಸಾಕಾರವಾದೆ
ಸತ್ಯ ಪ್ರತಿಪಾದನೆಯಲ್ಲಿ
ಕಬ್ಬಿಣದ ಕಾಠಿಣ್ಯ ಮೆರೆದೆ
ನಿಮ್ಮ ಕ್ರಿಯಾಶಕ್ತಿಗೆ
ಜಗವೇ ತೂಗಿ ಬಾಗಿದೆ ತಂದೆ!

ವಿರಕ್ತ ಪದಕೆ ನೀವೆ
ಶಾಶ್ವತ ರೂಪ
ಮನೆ ಮನವ ಬೆಳಗಿರಲು
ನಿಮ್ಮ ನೆನಹಿನ ನಂದಾದೀಪ
ಜಗದಗಲ ಮಿಗೆಯಗಲ
ಬೆಳೆದುನಿಂತ ಮಹಾಂತ!

ಇಳೆಯ ಮಕ್ಕಳೆಲ್ಲ
ನಮಿಸಿ ಶರಣೆನ್ನುತಿವೆ
ನೀ ಅಪರೂಪದ ಸಂತ
ಶ್ರೀ ವಿಜಯ ಮಹಾಂತ!

ಇಂದುಮತಿ ಅಂಗಡಿ ಇಲಕಲ್ಲ

Don`t copy text!