ನಾನು ಓದಿದ ಪುಸ್ತಕ- ಪುಸ್ತಕ ಪರಿಚಯ
” ತಂತಿ ತಂತಿಗೆ ತಾಗಿ…..”
ಕೃತಿ ಕರ್ತೃ: ಶ್ರೀಮತಿ ದೀಪಾ ಗೋನಾಳ
” ಹೃದಯ ತಂತುವಿಗೆ ತಾಕುವ ಕಾವ್ಯದ ಬೆಳಕು “
ವಿದ್ಯುತ್ ಹರಿಯುವ ತಂತಿಗೆ, ತಂತಿ ತಾಕಿದಾಗ ಹೇಗೆ ಬೆಂಕಿಯ ಕಿಡಿ ಚಿಮ್ಮುತ್ತದೇಯೋ, ಹಾಗೆ ದೀಪಾ ಗೋನಾಳ್ ಅವರ ಕಾವ್ಯ ತಂತಿಗಳು ಒಂದಕ್ಕಿಂತ ಒಂದು ಸ್ವಾವಲೋಕನದ ಕಿಡಿಯನ್ನು ಹೊರಸೂಸುತ್ತವೆ. ಅಂತೆಯೇ ವಿದ್ಯುತ್ ತಂತಿ ತಂತಿಗೆ ತಾಕಿದಾಗ ಹೇಗೆ ಬೆಳಕಿನ ದೀಪ ಹೊತ್ತುತ್ತದೆಯೋ ಹಾಗೆ ದೀಪಾ ಗೋನಾಳ್ ಆವರ ಕಾವ್ಯದೊಳಗಿವ ಭಾವದ ತಂತಿಗಳಿಗೆ ಓದುಗನ ಭಾವನೆಗಳ ತಂತಿ ತಾಗಿದಾಗ ಹೊಸದಂದು ಪ್ರಭೆ ಮನದ ಕತ್ತಲಿಗೆ ಬೆಳಕ ನೀಡುತ್ತದೆ. ಒಂದೆಡೆ ಕಿಡಿ ಮತ್ತೊಂದೆಡೆ ಬೆಳಕು ಎರಡನ್ನೂ ಒಂದೇ ನೆಲೆಗಟ್ಟಿನಲ್ಲಿ ನೋಡುವ ಸ್ವೀಕರಿಸುವ ಮತ್ತು ಅದಕ್ಕೆ ಕಾವ್ಯ ರೂಪ ಕೊಡುವ ಕವಯಿತ್ರಿಯವರ “ತಂತಿ ತಂತಿಗೆ ತಾಗಿ… ” ಕೃತಿ ಪ್ರಸ್ತುತ ಕಾಲಮಾನಕ್ಕೆ ತಕ್ಕುದಾಗಿದೆ. ಪ್ರಸ್ತುತ ಸಮಾಜದ ಕನ್ನಡಿಯೂ ಹೌದು.
ಕಾವ್ಯವನ್ನು ಆಸ್ವಾದಿಸುವವನಿಗೆ ವಿವಿಧ ಪ್ರಕಾರದ ಕಾವ್ಯ ಒಂದೆಡೆ ಸಿಗುವ ಸಂತೆ ಈ “ತಂತಿ ತಂತಿಗೆ ತಾಗಿ…”. ಕವನಗಳು, ಹನಿಗವಿತೆಗಳು ಮತ್ತು ಗಜಲ್ಗಳುಳ್ಳ ಈ ಕೃತಿ ಓದುಗನಿಗೆ ಮೆಚ್ಚಾಗುತ್ತದೆ. ಗಂಡು ಹೆಣ್ಣಿನ ಭಾವದ ತಂತಿ, ಸಾಮಾಜಿಕ ಮೌಲ್ಯಗಳ ತಂತಿ, ಮನುಷ್ಯನ ಕ್ರೌರ್ಯವನ್ನು ವಿರೋಧಿಸುವ ಕರುಣೆಯ ತಂತಿ… ಹೀಗೆ ಅನೇಕ ಸ್ವಾರಸ್ಯಕರ ತಂತಿಗಳು ತಾಕುತ್ತಲೇ ಮನದಲ್ಲಿ ವಿಭಿನ್ನ ಬೆಳಕಿನ ಹರಿವನ್ನು ನೂಕುತ್ತಲೇ ಹೋಗುವ ಕೆಲವು ಕವನಗಳನ್ನು ಅವಲೋಕಿಸಿ ಕವಯಿತ್ರಿಯವರ ಕಾವ್ಯದ ಹಿಂದಿನ ಭಾವದ ತಂತಿಗೆ ಅನುಭಾವದ ತಂತಿಯನ್ನು ತಾಗಿಸಲು ಇಚ್ಛಿಸುತ್ತೇನೆ.
ಪ್ರೇಮವೆಂದರೆ ಕೇವಲ ಸರಸ ಸಲ್ಲಾಪವಷ್ಟೇ ಇರುವುದಿಲ್ಲ, ಒಂದಿಷ್ಟು ಜಗಳ, ಕೋಪ, ತಾಪ,
ಮಾತು ಬಿಟ್ಟು ಮೌನಕ್ಕೆ ಶರಣಾಗುವುದು, ಕೆಲವೊಮ್ಮೆ ಅತಿರೇಕವೆಂದಾಗ ವಸಂತಗಳ ಕಾಲ ದೂರ ಉಳಿಯುವುದೂ ಉಂಟು. ಹಾಗೊಂದು ಸಂದರ್ಭಕ್ಕೆ ಸಿಲುಕಿ ಮುಂದೊಂದು ದಿನ ಅದಕ್ಕೆ ಕಾರಣ ಅರಸುವ ಮನಸಿನ ವೇದನೆಯ ಕುರಿತಾಗಿ ದೀಪಾ ಅವರು ಒಂದು ಕವಿತೆ ಕಟ್ಟುತ್ತಾರೆ, ಅದಕ್ಕೊಂದು ಕಾರಣವನ್ನೂ ಗುರುತಿಸಿಕೊಂಡು ಪ್ರಶ್ನಾತೀತವಾಗಿ ಹೀಗೆ ಕೇಳುತ್ತಾರೆ…..
” ನನ್ನೆದೆಯಲ್ಲಿ ಹೆಪ್ಪುಗಟ್ಟಿದ ಪ್ರೀತಿಗೆ
ನಿನ್ನ ಮೂರಕ್ಷರದ ‘ಕ್ಷಮಿಸು..!’
ಕಾವು ನೀಡಿ ಸಂಚಲಿಸುವಂತೆ ಮಾಡಿದ್ದು ಮಾತ್ರ
ನನ್ನ ಬದುಕಿನ ಅಮೃತ ಗಳಿಗೆ….
ಹಾಗಾದರೆ ನಾನೂ ಕಾಯ್ದದ್ದು ಈ
ಪದಕ್ಕಾಗಿಯಾ?
ಊಹೂಂ
ನೀನು ಮೌನ ಮುರಿಯುವ ಕ್ಷಣಕ್ಕಾಗಿ..?
… ಎಂದು ” ಮೌನಕ್ಕೆ ನನ್ನ ಧಿಕ್ಕಾರ..! ” ಕವಿತೆಯಲ್ಲಿ, ಈ ಮೌನದಲ್ಲೂ ನನಗೆ ಜೊತೆಯಾದದ್ದು ನಿನ್ನ ಮಾತುಗಳಾಚೆಗಿನ ಪ್ರೀತಿ, ಅಕ್ಕರೆ ಎನ್ನುತ್ತಾರೆ.
* ದಾಂಪತ್ಯವೆಂಬುದು ಒಂದು ಪವಿತ್ರ ಅನುಬಂಧ, ಸತಿಯ ಸುಖಕ್ಕಾಗಿ ಪತಿ, ಪತಿಯ ಕಷ್ಟಕ್ಕೆ ಮರುಗುವ ಸತಿ ಇದ್ದರೇನೆ ಸುಖ. ಅಂತಹ ದಂಪತಿಗಳ ಒಂದು ಸಂಭಾಷಣೆಯ ಮಾತುಗಳನ್ನು ನವಿರಾಗಿ ಕೊಟ್ಟು, ಹೃದಯಾಂತರಾಳದಲ್ಲಿ ರಾಗ ಹುಟ್ಟಿಸುವ ಪರಿ ನಿಜಕ್ಕೂ ಮೈ ಮನಸನ್ನು ಸ್ವಾದಿಷ್ಟಗೊಳಿಸುತ್ತದೆ
” ಮುನಿಸಲ್ಲ, ಬ್ಯಾಸರ..! ” ಕವಿತೆ. ಇದರ ಸಾಲುಗಳು ಓದುಗನಲ್ಲಿ ರೋಮಾಂಚನವನ್ನು ಮೂಡಿಸುತ್ತವೆ. ಹಮಾಲಿ ಮಾಡುವ ಗಂಡ ಹಬ್ಬ ಮಾಡೋಣು ಅಂದಾಗ ಹೆಂಡತಿ….
” ಹಬ್ಬ ಬ್ಯಾಡ- ಹಣವೀ ಬ್ಯಾಡ
ಇದ್ದಕ್ಕಿದ್ದಂಗ ಎದ್ದ ಹೋಗತಿ ಎಲ್ಲೋಗತಿ,
ಏನ ಮಾಡತಿ, ಮುದ್ಯಾಗಿ ಒಳಗ ಬರತಿ… “
….ಎಂದು ಗಂಡ ದುಡಿದು ದಣಿದು ಬರುವ ಪರಿಯನ್ನು ಕಂಡು ಯಾವ ಹಬ್ಬನೂ ಬ್ಯಾಡ ಎನ್ನುತ್ತಾಳೆ… ಅದಕ್ಕೆ ಪ್ರತ್ಯುತ್ತರವಾಗಿ ಗಂಡ ಅತ್ಯಂತ ಸೊಗಸಾಗಿ ಸತಿಯ ಮನ ಒಲಿಸುತ್ತಾನೆ. ಖಂಡಿತವಾಗಿಯೂ ಒಂದಿಷ್ಟು ಮುದ ಮತ್ತು ಮಜ ಎನಿಸುವ ಕವಿತೆ ಇದನ್ನು ಓದಿಯೇ ಆನಂದಿಸಬೇಕು.
ದೀಪಾ ಗೋನಾಳ ಅವರ ಇಂತಹ ಕವಿತೆಗಳು ಕವಿಯ ಕಾವ್ಯ ಕಟ್ಟುವ ತನ್ಮಯತೆಗೆ ಕನ್ನಡಿಯೇ.
* ಆಪ್ತತೆ ಎನ್ನುವುದು ಒಮ್ಮೆ ಹುಟ್ಟಿಕೊಂಡರೆ ಆಯ್ತು… ಭಾವನೆ ಮತ್ತು ಬದುಕಿನಾಳಕ್ಕೆ ಸ್ನೇಹ ಬೆಳೆದುಬಿಡುತ್ತದೆ. ಅಂತಹ ಸ್ನೇಹಿತೆ ತನ್ನ ಮನದಾಳದ ಯುದ್ಧವನ್ನು ಹಂಚಿಕೊಳ್ಳಲು ಬಂದು ಕಿಂಚಿತ್ತನ್ನೂ ಹೊರಹಾಕದೆ ಎದ್ದು ಹೋದದ್ದನ್ನು ಅರಿತ ಗೆಳತಿಯ ನಿವೇದನೆ, ಪ್ರಶ್ನೆ, ಅಂತರಂಗದ ವೇದನೆಯ ಕವಿತೆಯೇ “ಎದ್ದು ಹೋಗಿದ್ದಕ್ಕೆ..”. ಇದು ಒಂದು ಮನ ಹಿಂಡುವ ಕವಿತೆ. ತನ್ನ ಗೆಳತಿ ಏನು ಹೇಳದಿದ್ದರೂ ನಾನು ಅರ್ಥಮಾಡಿಕೊಳ್ಳಬಲ್ಲೆ ಎಂಬ ಆಪ್ತ ಗೆಳತಿಯ ಪ್ರತಿ ಅರಹುಗಳು ಮನ ಮಿಡಿಯುತ್ತವೆ.
” ಆತ್ಮೀಯತೆಯ ತೋರಿಸದ ಔಪಚಾರಿಕ
ಭೇಟಿಗೆ ಸಿಟ್ಟಿಲ್ಲ;
ಎದುರಿಗಿದ್ದವರ ತಲ್ಲಣ ತಿಳಿದುಕೊಳ್ಳದೇ
ನಿನ್ನ ನೋವಿಗೆ ಹುಡಿಯಾಗುವ
ಮಡಿದು ಬಿಡುವ ಜೀವಕ್ಕೂ
ನೋವು ಬಿಟ್ಟುಕೊಡದ್ದಕ್ಕೆ ..! “
….. ನಿನ್ನ ಜೀವದ ಗೆಳತಿಗೆ ನಿನ್ನ ನೋವನ್ನು ಹಂಚಿಕೊಡಲಿಲ್ಲವೇಕೇ ಎಂಬ ಕವಯಿತ್ರಿ, ಮುಂದೆ….
” ನೀ ಕುಳಿತ ಬೆತ್ತದ ಕುರ್ಚಿಯ ಮುಖಕ್ಕೆ
ಮುಖವಿಟ್ಟು ಹಾಗೇ ಉಳಿದಿದ್ದೇನೆ;
ನೀನು ಮರಳಿ ಬಂದು
ಉಳಿದ ಮಾತು ಆಡಿ ಮುಗಿಸುವಿಯೆಂಬ
ಆಸೆ ಹೊತ್ತು..! “
…… ಬಾಂಧವ್ಯ ಎಂಬುದನ್ನು ಅರ್ಥವತ್ತಾಗಿ ತಿಳಿಸುವ ಕವಿತೆಯನ್ನು ವಿವರಿಸುವದಕ್ಕಿಂತ ಹೆಚ್ಚು ಮನಸಲ್ಲುಳಿಯುತ್ತದೆ ಎಂಬುದು ಸತ್ಯ.
” ನಿನ್ನೊಳಗಣ ನೋವು
ಹೂವಾಗುವ ಪರಿ ಹುಡುಕು
ನಾರೇ ಸ್ವರ್ಗ ಏರುವಾಗ
ಹೂವಿನ ದಾರಿ ಸುಗಮ “
….. ಹೂವಿನೊಂದಿಗೆ ನಾರೂ ಸ್ವರ್ಗ ಸೇರುತ್ತದೆ ಎಂಬ ಮಾತು ಕೇಳಿದ್ದೇವೆ. ಆದರೆ ಕವಯಿತ್ರಿ ನಾರೇ ಸ್ವರ್ಗದ ಹಾದಿ ಹಿಡಿದಾಗ ಹೂವಿಗೇನು ಕಷ್ಟ ಎಂಬುದನ್ನು ತಿಳಿಸಿ, ಬದುಕಿನಲ್ಲಿ ನೋವುಗಳೆಂಬುವವು ಸಹಜವಾಗಿ ಅನುಭವಿಸಲೇಬೇಕಾದ ಅನಿವಾರ್ಯತೆಯ ಒಡನಾಡಿಗಳು. ಆದರೆ ಆ ನೋವಲ್ಲಿ ಹೂವಾಗುವ ಪರಿ ಅಂದರೆ, ನೋವಲ್ಲಿಯೂ ನಗುವನ್ನು, ಸುಖವನ್ನು ಹುಡುಕವ ಪರಿಯನ್ನು ಕೊಂಡುಕೊಳ್ಳಬೇಕೇ ವಿನಃ ಎಂದಿಗೂ ” ನೀ ಅಳಕೂಡದು ” … ಎನ್ನುತ್ತಾರೆ.
” ತೇಲಿ ಬರುವ ತಿಳಿಗಾಳಿಯೊಂದು
ನಿನ್ನ ಸೋಕಲಿ;
ತೆರೆದ ಕಣ್ಣ ಮಂಜ ಸರಿಸಿ
ಬೆಳಗಲಿ..! “
ಸಾಧನೆಗೆ ಸ್ಪೂರ್ತಿಯೂಗುವ ” ಅಲ್ಲಿಂದಲೇ ” ಕವಿತೆಯ ಸಾಲುಗಳು. ಆದರೆ ಎಷ್ಟು ತುಳಿದರೂ, ಎಳೆದರೂ ಮತ್ತೆ ಬೆಳೆಯುತ್ತೇನೆ ರಬ್ಬರಾಗಿ ಹಿಗ್ಗುತ್ತೇನೆ., ಕಷ್ಟಗಳನ್ನು ಸಮಾಧಾನವಾಗಿ ಸಹಜವಾಗಿಸಿಕೊಳ್ಳುತ್ತೇನೆ ಎನ್ನುವ ಭಾವ ಭದ್ರತೆಯನ್ನು ಬಿಂಬಿಸುತ್ತದೆ. ಮತ್ತು ಸಮಾಜಕ್ಕೆ ಧೈರ್ಯ ತುಂಬುವ ಇಂತಹ ಸಾಲುಗಳು ಕವಿಯ ಸಮಾಜಮುಖಿ ವ್ಯಕ್ತಿತ್ವವನ್ನು ತೋರಿಸುತ್ತವೆ.
(ಕವಯತ್ರಿ-ದೀಪಾ ಗೋನಾಳ-9108330893)
ಕವಯಿತ್ರಿ ಅದೆಷ್ಟು ಅದ್ಭುತವಾಗಿ ಖಂಡನಿಯ ಕವಿತೆಯನ್ನು ಕಟ್ಟಿದ್ದಾರೆಂದರೆ, ಪ್ರಸ್ತುತ ಕಣ್ಣ ಮುಂದೆಯೇ ವಸ್ತು ಸ್ಥಿತಿ ಗೋಚರವಾಗವಂತೆ ಮಾಡುತ್ತಾರೆ. ಕವಿತೆ ಓದಿಯೇ ಆ ಮನಸ್ಥಿತಿಯನ್ನು ಅನುಭವಿಸಬೇಕು. ಒಂಥರಾ ತಿರಸ್ಕಾರಕ್ಕೋ, ಪ್ರಬುದ್ಧ ಮನದ ತನ್ನಿನಿಯನ ಸಣ್ಣ ತನಕ್ಕೋ, ತನ್ನ ತಪ್ಪಿಲ್ಲದೇ ಬಲಿಯಾದ ಬೇಸರಕ್ಕೋ ಪದಗಳು ಎದೆಗೆ ಇರಿಯುವಂತೆ ಬಿತ್ತರವಾಗಿವೆ… ಅಂತಹ ಪದಗಳುಳ್ಳ ಕೆಲವು ಸಾಲುಗಳನ್ನು ತಮ್ಮ ಮುಂದೆ ಇಡುತ್ತೇನೆ…
” ಪ್ರೇಮದ ಮೊದಲಧ್ಯಾಯವೇ ತಿಳಿಯದ
ಆ ನಿನ್ನ ಸಾಲು ಸಾಲು ಸ್ನಾತಕೋತ್ತರಗಳಿಗೆ
ನನ್ನ ಧಿಕ್ಕಾರವಿರಲಿ “
ಅಡಿಗಡಿಗೆ ಎಡಬಿಡದೆ ಮುದ್ದಿಸಿ
ಮಥಿಸಿದ ಗಡಸು ಎದೆ
ಮಾಗದ ಮನಸಿನ ಮುನಿಸು
ಮಕ್ಕಳ ಹೆರದ ದೇಹದ ಸೂಕ್ಷ್ಮ ತಿಳಿಯದ
ಆ ನಿನ್ನ ಅಷ್ಟುದ್ದದ ಓದಿನ
ಪ್ರವಚನದನುಭವಕ್ಕೆ ನನ್ನ ಧಿಕ್ಕಾರವಿರಲಿ! “
…. ಜ್ಞಾನ, ಪಾಂಡಿತ್ಯ, ಪದವಿಗಳು ಎಷ್ಟಿದ್ದರೇನು..? ಮನಸನ್ನು ಅರ್ಥೈಸಿಕೊಳ್ಳದ, ತನ್ನವಳ ದೈಹಿಕ ಸ್ಥಿತಿಯನ್ನು ಅರಿಯಲಿಚ್ಛಿಸದ ಮನೋವಿಕಾರತೆಗೆ ಧಿಕ್ಕಾರ ಹಾಕುವ ಪರಿಗೆ, ಈ ಕಾವ್ಯ ಒಂದು ಸಾಮಾಜಿಕ ಕವಿತೆಯಾಗಿ ಗುರುತಿಸಿಕೊಳ್ಳುತ್ತದೆ.
ಕವನ ಸಂಕಲನದ ಶೀರ್ಷಿಕೆ ಉಳ್ಳ ಕವಿತೆ ” ತಂತಿ ತಂತಿಗೆ ತಾಗಿ… ” ಮಾರ್ಮಿಕವಾಗಿದ್ದು, ನಮ್ಮ ಆಡಂಬರದ ಬದಲಾವಣೆಯತ್ತ ಸಾಗುತ್ತಿರುವ ಮಾನವ ತೋರುತ್ತಿರುವ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ವಿಭಿನ್ನವಾಗಿ ಕವಯಿತ್ರಿ ತೋರಿಸುತ್ತಾರೆ.
ಸಾಲು ಸಾಲು ಮರಗಳ ನಡುವೆ, ಹಸಿರು ಹಾಸಿನ ಮೇಲಿನ ಪಯಣ, ಆ ಹಕ್ಕಿಗಳ ಚಿಲಿಪಿಲಿ, ಸುಗಂಧ ಸಿಹಿಗಾಳಿಯಲಿ ನಡೆಯುತ್ತಿದ್ದರೆ ಹೆಜ್ಜೆಯೂ ನಿಧಾನವಾಗಬೇಕು, ಅಷ್ಟು ಅದ್ಭುತ ಸೌಂದರ್ಯದ ಪ್ರಕೃತಿ ಈಗ ನೆನಪಲ್ಲಿ ಮಾತ್ರ; ಬಿಟ್ಟರೆ ಕಾಣಬೇಕು ಕನಸಲ್ಲಿ ಎಂಬ ಖೇದದೊಂದಿಗೆ ಕೊನೆಗೆ…
” ಆ ದಾರಿ ಕಳೆದು ದಶಕದ ಮೇಲಾಯಿತೆ..?
ನೆನಪಿಲ್ಲ… ದುಬಾರಿ ಕಾಂಕ್ರೀಟಿನ
ಬೇನ್ನುಬಿದ್ದ ರಭಸಕ್ಕೆ ಕಾಲದ ಮಿತಿಯ
ನೆನಪಿಲ್ಲ;
ಹಸಿರಿನ ನೆನಪು ಹಚ್ಚ ಹಸಿರು… “
ಎಂಬ ನೆನಪಿನ ಬುತ್ತಿಯ ಜೊತೆಗೆ ಅಂದಿನ ಹಸಿರ ಹಾಸು, ನೆರಳು ಇಂದಿಲ್ಲ ಎಂದು ಹೇಳುತ್ತ…
” ಕತ್ತೆತ್ತಿದೆ, ಕಾಣಲಿಲ್ಲ ಗಿಡ-ಮರ;
ತಂತಿಗೆ ತಂತಿ ತಾಗಿ ಬುಗಿಲೆದ್ದ ಧಗೆ
ಎದೆಝಲ್..!
ಛಳಕ್ ನೆ ಮುರಿದ ತಂತು
ಮತ್ತೆ ಕೂಡಿಕೊಳಲಾರದು
ಹೊತ್ತುರಿಯುವ ನಭದಲ್ಲೀಗ
ಹಕ್ಕಿಗಳ ರೆಕ್ಕೆ ಸುಟ್ಟರೆಂಬ ಭಯ..! “
……. ಹೌದು ವಿದ್ಯುತ್ ತಂತಿಗೆ ತಂತಿ ತಾಗಿದಾಗ ಏಳುವ ಕಿಡಿಗೆ ಹೇಗೆ ಪ್ರಕೃತಿ ಸುಟ್ಟು ಬೂದಿಯಾಗುತ್ತದೆಯೋ; ಹಾಗೆ ಮಾನವನ ದುರ್ಬುದ್ಧಿಯ ಕಿಡೆಗೆ ಪರಿಸರ ನಾಶವಾಗುತ್ತಿದೆ ಎಂಬ ಅಳಲನ್ನು ಹೊರಹಾಕುತ್ತಾರೆ.
” ಉಸಿರು ಬಿಟ್ಟರೂ ಸಾಕು ಹೆಡೆಯೆತ್ತಿ
ಬುಸುಗುಡುತ್ತೀ
ಪ್ರೇಮ ಸರಸ ಸಮರಸ ಕಲ್ಪಿಸಿದವಳಿಗೆ ಸಿಕ್ಕಿದ್ದು
ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು”
ಕರುಣೆ ಕಕ್ಕಲಾತಿಗಳೇನು ಬೇಡ
ಆದರೆ ಸಹಿಸುತ್ತ ಸವರುತ್ತ ಬಂದಿರುವುದು
ಬೆನ್ನ ಮೇಲಿನ ಬಾಸುಂಡೆಗಳನೇ “
….ಗಂಡ ಹೆಂಡಿರ ನಡುವೆ ಇರಬೇಕು ಸಾಮರಸ್ಯ, ಹೊಂದಾಣಿಕೆ ಮತ್ತು ಸಮಾನತೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಗಂಡಸಾದವನು ನಿಜವಾದ ಗಂಡನಾಗದೆ ಹೆಂಡತಿಯ ಮೇಲೆ ತನ್ನ ದೌರ್ಜನ್ಯವನ್ನೆಸಗಿದ ಗಂಡನ ಕ್ರೌರ್ಯತೆಯನ್ನು ಸಹಿಸಿದ ಹೆಣ್ಣು ಸಹಿಸಿದ ” ಅಷ್ಟು ದಿನಗಳನ್ನ.. ” ಕಣ್ಣಿಗೆ ಕಟ್ಟುವಂತೆ ಮತ್ತು ಮೈ ಉರಿಯುವಂತೆ ಬರೆಯುತ್ತಾ….
” ಗಂಡಬಿಟ್ಟವಳೆಂದು ಅವರಿವರೆಂದಾರೆಂದು
ನಿನ್ನ ಸಹಿಸುವುದು ದಂಡವೇ ಸರಿ
ಗಂಡನಿಲ್ಲದಿದ್ದರೂ ಅದೆಂಥ ವೈನಾಗಿ
ಬದುಕಿದಳೆನ್ನುವಂತೆ ಕಳೆಯುವೆ ಇನ್ನುಳಿದ
ಅಷ್ಟು ದಿನಗಳನ್ನ…. “
….. ಎಂದು ರೋಸಿಹೋದ ಹೆಂಡತಿ ಕಡೆಯ ಆಯ್ಕೆಯಾಗಿ ಈ ಕವಿತೆ ದಾರಿ ತೋರುತ್ತದೆ. ಒಂದು ವಾಸ್ತವತೆಯನ್ನು ಪ್ರತಿಬಿಂಬಿಸುವ ಕವಿತೆ ವಾತ್ಸಲ್ಯವಿರದ ಸಂಸಾರಕ್ಕಿಂತ ಒಂಟಿ ಪಯಣವೇ ಲೇಸೆನ್ನುವುದನ್ನು ತಿಳಿಸುತ್ತದೆ.
” ದಾರಿಯ ಇಕ್ಕೆಲಗಳಲಿ ಹರಡಿಕೊಂಡಿರುವ
ಗದ್ದೆಗಳೇ ಗದ್ಯ;
ಇನ್ನುಳಿದಂತೆ ಅಲ್ಲಲ್ಲಿ ಸಿಗುವ ತೋಟ
ಪಟ್ಟಿಗಳೇ ಪದ್ಯ”
ಕೆರೆ ಕಟ್ಟೆ ಝರಿ ಕಾಲುವೆಗಳು
ಬಂಧಮುಕ್ತ ಪ್ರಬಂಧ;
ಹುಳು ಹುಪ್ಪಟೆ ಹಕ್ಕಿ ಪಿಕ್ಕಿ ಅಳಿಲು
ಜೀವ ಸರಪಳಿಯ ನಾಟಕ “
….. ವ್ಹಾ.. ಎಷ್ಟು ಸೊಗಸಾದ ಅರ್ಥಗರ್ಭಿತ ಕವಿತೆ…. ಕವಯಿತ್ರಿಯ ವಿಭಿನ್ನ ದೃಷ್ಟಿಕೋನದ ಕೂಸು… ಒಬ್ಬ ಕವಿಯ ವಿವೇಚನಾ ಶಕ್ತಿ, ದೃಷ್ಟಿಕೋನದ ವ್ಯಾಪ್ತಿಯೇ ಒಂದು ಉತ್ತಮ ಕವಿತೆಯ ಹುಟ್ಟಿಗೆ ಕಾರಣವಾಗುತ್ತದೆ. ಅಂತಹದ್ದೊಂದು ಕಾವ್ಯ ಶಕ್ತಿ ದೀಪಾ ಅವರಲ್ಲಿರುವುದು ಈ ಕವಿತೆಯ ಮೂಲಕ ಗೋಚರವಾಗುತ್ತದೆ
ಅಕ್ಷರದ ಬಹುಮುಖ ವ್ಯಕ್ತಿತ್ವಕ್ಕೆ ತಳಪಾಯ ಎಂಬುದಕ್ಕೆ ಈ ಕೆಳಗಿನ ಕವಿತೆ ಸಾಕ್ಷಿಯಾಗುತ್ತದೆ. ಅಕ್ಷರ ವಿದ್ಯೆ, ಜ್ಞಾನವಾದರೆ ಅದು ಬದುಕನ್ನು ಕಟ್ಟಿಕೊಡುತ್ತದೆ. ಮಾತು ಬರಹಕ್ಕೆ ಸೀಮಿತವಾದರೆ ಭಾಷಣ ಸಾಹಿತ್ಯದಲ್ಲಿ ಕಾಣಸಿಗುತ್ತದೆ… ಪರವಾಗಿಲ್ಲ ಆದರೆ
” ಅಕ್ಷರ ಬರೀ
ಪದವಿಯಾದರೆ,
ಪೆಟ್ಟಿಯೊಳಗಿನ
ಕಾಗದವಷ್ಟೇ”
…. ಎಂದು ಪ್ರಸ್ತುತ ಶಿಕ್ಷಣದ ವ್ಯವಸ್ಥೆಯ ಕುರಿತಾಗಿ ನವಿರಾಗಿಯೇ ವ್ಯಂಗ್ಯ ಮಾಡುತ್ತಾರೆ. ಮತ್ತು ಪದವಿಗೆ ಸೀಮಿತವಾದವರನ್ನು ವಿಡಂಬಿಸುವ ಮೂಲಕ ಅಕ್ಷರಕ್ಕೆ ಅದು ದ್ರೋಹ ಬಗೆದಂತೆ ಎಂಬ ಒಳಮರ್ಮವನ್ನು ” ಅಕ್ಷರ ಆಕಾರ ” ಕವಿತೆಯಲ್ಲಿ ಚಿತ್ರಿಸಿದ್ದಾರೆ.
ಹೆಂಡತಿ ತವರಿಗೋದಾಗ ಪ್ರೇಮದ ಉತ್ಕಟತೆ ಜಾಸ್ತಿ ಎಂಬುದಕ್ಕೆ ಪೂರಕ ಕವಿತೆ ” ಬಿಟ್ಟಿರಲಾರದ್ದು ” ಉನ್ಮಾದವಾಗಿದೆ.
ಮಾತು-ಮೌನಗಳ ಹೋಲಿಕೆ ಮತ್ತು ಯಾವುದು ಶ್ರೇಷ್ಠವೇಂಬ ಚಿಂತನೆಗೆ ಉತ್ತರವಾಗಿ ಕೊನೆಗೆ
” ಮೌನದ ಕರಿತು ಮಾತನಾಡುವೆನೆಂದು
ಹೊರಟಾಗೆಲ್ಲ
ಸುಮ್ಮನುಳಿದು ಬಿಡುವೆ..! “
…. ಎಂದು ಮೌನವೇ ನಮಗೆ ಆಭರಣ, ಕೈ ಹಿಡಿಯುವುದು, ಕಾಯುವುದು ಎಂಬುದಾಗಿ ಮೌನದ ಬಂಗಾರತೆಯನ್ನು ನೇರವಾಗಿ ಸರಳವಾಗಿ ಅನುಭವಕ್ಕೆ ನಿಲುಕಿಸುವ
” ಮಾತು-ಮೌನ ತನನನ… ” ಕವಿತೆ ಚೆನ್ನಾಗಿದೆ.
* ಇಲ್ಲಿ ಮತ್ತೊಂದು ಕವಿತೆ ಇದೆ…
” ಪೂಜ್ಯನೀಯ ” ಎಂಬುದು. ವಿಶೇಷವಾಗಿದೆ, ಬಿರುಸಾಗಿದೆ ಶೀರ್ಷಿಕೆಯಂತೆ ಯಾರು ಪೂಜ್ಯನೀಯ ಎಂಬುದನ್ನು ಕವಯಿತ್ರಿ ನೇರವಾಗಿ ಹೇಳಿದ್ದಾರೆ.
” ರಾಜನೆಂಬ ಪಟ್ಟ ಮನಸ್ಸಿಗೆ ಸಂಬಂಧಿಸಿದ್ದು;
ಕಾಲಾಳು ಕುದುರೆ ಲಾಯಗಳ ರಾಜ್ಯಕ್ಕಲ್ಲ..!
……. ಇದು ಖಂಡಿತವಾಗಿಯೂ ಒಪ್ಪತಕ್ಕದ್ದು. ರಾಜನಾದವನಿಗೆ ಆಸ್ಥಾನ ಮತ್ತು ಬಡವನ ಮನೆ ಎಲ್ಲವೂ ಸಮಾನವಾಗಿ ಕಾಣಬೇಕು. ಅಂತಹ ಮನಸಿನವನು ಪೂಜ್ಯನೀಯ ಎಂಬ ಮಾತು ಸತ್ಯದ್ದು.
ಆದರೆ….
“ಮಡಿ ಉಟ್ಟು ಹೊರಟವರೆಲ್ಲರೂ
ಅವರ ಸುತ್ತ ಮೈಲಿಗೆಯ ಮೂಡಿಸುವ
ಮೂಢರೆಂದು ತಿಳಿಸಿದ
ಮಡಿವಂತ ಮನಸ್ಸಿನ ಮನುಜ ನೀ..!”
…… ಇಲ್ಲಿ ಸತ್ಯಾಸತ್ಯತೆಗಳ ಬಗ್ಗೆ ಕವಯಿತ್ರಿಯವರು ಯೋಚಿಸಬೇಕಿತ್ತೆನಿಸುತ್ತದೆ. ಮೂಢರು ಎಲ್ಲ ಕಡೆಯಲ್ಲೂ ಸಿಗುತ್ತಾರೆ. ಮಡಿವಂತರಲ್ಲೂ ಮೂಢತೆ ಎಂಬುದು ಮನೆ ಮಾಡಿರುತ್ತದೆ. ಆದರೆ ಎಲ್ಲ ಮಡಿವಂತರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಾಮಾಜಿಕ ಜವಾಬ್ದಾರಿ ಸಾಹಿತಿಗಳದ್ದಲ್ಲ ಅಲ್ಲ ಎನ್ನುವುದು ನನ್ನ ಅನಿಸಿಕೆ.
” ಬಿಳುಪಾದ ಮೈ ಬಣ್ಣ ಹೊಳಪಿನ ಉಡುಗೆ
ಹಣೆಗೆ ಭಸ್ಮ-ನಾಮ-ಗಂಧ
ಇಟ್ಟೊಡನೆ ಪೂಜ್ಯನೀಯ ಅಲ್ಲ..
ಹೂ ಒಂದು ಕೀಳಲು ಹೋಗಿ
ಬಳ್ಳಿ- ಹೂ ಅಗಲುವ ನೋವು ನಖಕ್ಕೆ ತಾಗಿದ
ಪಾಪವ ಅರಿತು ಉದುರಿದ ಪಾರಿಜಾತವಷ್ಟೇ
ಎತ್ತಿ ತಂದು ಪೂಜೆಗೈವ ನೀನು ಪೂಜ್ಯನೀಯ”
…….. ಎಂಬ ಸಾಲುಗಳು ಬರುತ್ತವೆ. ಹೌದು ಇದು ಸತ್ಯ. ಓದುಗನು ಓದಿ ಭೇಷ್ ಎನ್ನಬಹುದು. ಪೂಜ್ಯನೀಯ ಯಾರು? ಯಾರು ಅಲ್ಲ, ಎಂಬುದನ್ನು ಧಾರ್ಮಿಕ ನೇಲೆಗಟ್ಟಿನಲ್ಲಿ ಬರೆಯುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು, ತಮ್ಮ ಸಾಹಿತ್ಯಕ್ಕೆ ಪ್ರತ್ಯೇಕವಾಗಿ ಒಂದು ವರ್ಗವನ್ನು ಆಯ್ಕೆ ಮಾಡಿಕೊಳ್ಳಬಾರದೆಂಬುದು ನನ್ನ ಅಂಬೋಣ. ಕಾರಣ ಒಂದು ಧರ್ಮಕ್ಕೆ ಸೀಮಿತವಾಗಿ ರಚಿಸಿದ ಸಾಹಿತ್ಯ ಆ ಧರ್ಮದವರ ವಿರೋಧವನ್ನು ಎದುರಿಸಬೇಕಾಗುತ್ತದೆ.
” ಮೈ ಕೊಡವದಿರು “ ಬಹಳ ಅರ್ಥಗರ್ಭಿತ ಮತ್ತು ಸೂಕ್ಷ್ಮ ಸಂವೇದನೆಯ ಕವಿತೆ. ತನ್ನ ನಲ್ಲನ ಸ್ಪರ್ಶಾನುಭವದ ಸುಖವನ್ನು ಹೇಳುತ್ತ. ನೆನಪಿನ ಲೋಕಕ್ಕೆ ಜಾರಿ….
” ಇಂಚಿಗೊಂದು ಹೊಂದಿಕೊಂಡು ಕುಂತ
ದಾರದೆಳೆ ಹಿಡಿದೆಳೆದಂಗs ಚರ್ಮದೊಳಗಿನ
ಖಂಡಮಾಂಸಕೂ ಪರಿಚಿತ ನವಿರು ಅವನ ಸ್ಪರ್ಶ “
….. ದಾರದೆಳೆಯ ಬಂಧನದಂತೆ ನಮ್ಮ ಕೂಡುವಿಕೆ, ಒಂದೆಳೆ ಹಿಡಿದೆಳೆದರೆ, ಹೇಗೆ ಅಷ್ಟುದ್ದದ ಬಟ್ಟೆಗೆ ತಾಗುತ್ತದೆಯೋ! ಹಾಗೆ ನನ್ನ ಚರ್ಮದೊಳಗಿನ ಖಂಡ ಮಾಂಸಕೂ, ಪ್ರತೀ ಅಣುವಿಗೂ ನಿನ್ನ ಸ್ಪರ್ಶವಿದೆ… ಮರೆಯದಿರು….
” ಎಲ್ಲಿದ್ದೀಯೋ ಅಲ್ಲೇ ಉಂಡು ಕೈ ತೊಳಿ,
ಮೈಗಡರಿದ ಚಳಿಗೆ
ಮೈ ಕೊಡವದಿರೋ
ಅಲ್ಲೆಲ್ಲೋ..! “
…. ಇದ್ದಲ್ಲಿಯೇ ನಿನ್ನ ಹಸಿವನ್ನು ನೀಗಿಸಿಕೊ, ಉಪವಾಸ ಬೇಡ. ಆದರೆ ಮೈ ಚಳಿಗೆ ಎಲ್ಲೆಲ್ಲೋ ” ಮೈ ಕೊಡವದಿರು ” ಬಂದು ಬಿಡು ನನ್ನಲ್ಲಿ.. ಎಂದು ಮಧುರವಾಗಿ ಮತ್ತು ಎಚ್ಚರಿಕೆಯನ್ನು ನೀಡುವಂತೆ ಕಾವ್ಯ ಕಟ್ಟುವುದು ಪುಳಕಿತ ಮತ್ತು ಜವಾಬ್ದಾರಿಯನ್ನು ಓದುಗನಿಗೆ ನೀಡುತ್ತದೆ.
ಮತ್ತೊಂದು ಅದ್ಭುತ ಕಾವ್ಯ ವಸ್ತುವಾಗಿ ಗುರುತಿಸಿಕೊಳ್ಳುವ ಕವಿತೆ ” ಏನು ಹೇಳಲಿ “… ಚಿಕ್ಕ ಕವಿತೆಯೆನೀಸಿದರೂ ದೊಡ್ಡದಾದ ಸಮಂಜಸ ಸಂದೇಶವನ್ನು ನೀಡುತ್ತದೆ, ಜಾತಿ ಅಂತಸ್ತಿಗೆ ಕಟಿಬಿದ್ದ ಕೀಳು ಮನದ ರೋದನೆ ಎಂದರೆ ತಪ್ಪಾಗಲಾರದು. ಅದಕ್ಕೆ ಸಾಕ್ಷಿಯಾಗಿ ಈ ಕವಿತೆಯ ಸಾಲುಗಳು ತಮ್ಮ ಮುಂದೆ….
” ರೋಧಿಸುವ ಮಗುವ ದನಿಯ
ಹಾಲು-ತುಂಬಿದೆದೆಗೆ ಅಪ್ಪಳಿಸುತ್ತಿದೆ
ಎತ್ತಿತಂದು ಸೆರಗ ಮರೆಮಾಚಿ
ಹಾಲುಣಿಸಲಾಗದ ವೈಫಲ್ಯಕ್ಕೆ ಕಾರಣ ಹುಡುಕುವ
ಕೀಳು ಜಾತಿ ಬಾಳಿಗೆ ಏನು ಹೇಳಲಿ ..!?
ಸಂಜೆಗತ್ತಲಿನಲಿ ದಾರಿತಪ್ಪಿ ತಿರುತಿರುಗಿ
ತುಂಬ ಸನಿಹದಲ್ಲೇ ಪರದಾಡುವ ಕರುವ,
ಹಸುವಿನ ಬಳಿಗೆ ಸೇರಿಸಲಾಗದ
ವೈಫಲ್ಯಕ್ಕೆ ಕಾರಣ ಹುಡುಕುವ
ಅಂತಸ್ತಿನ ಹಾಳು ಬಾಳಿಗೆ ಏನು ಹೇಳಲಿ..!? “
…. ಅಲ್ವಾ!! ಜಾತಿ ಮತ್ತು ಅಂತಸ್ತುಗಳ ಮಧ್ಯೆ ಒಣ ಅಭಿಮಾನಕ್ಕೆ ಸಿಲುಕಿ ನಾವು ಯಾವ ಉಪಕಾರವನ್ನೂ ಯಾರಿಗೂ ಮಾಡದಂತಹ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದನ್ನು ಕವಯಿತ್ರಿ ದೀಪಾ ಗೋನಾಳ ಅವರು ಸಂದರ್ಭ ಸೂಚಿಸಿ ಅರ್ಥೈಸಿದ್ದಾರೆನಿಸುತ್ತದೆ.
” ರಾತ್ರಿಯ ಕನಸುಗಳಿಗೆ ಅವನ ಹೊರತು
ದಾಸ್ತಾನು ಮತ್ತೇನಿದೆ ಈ ಕಂಗಳಿಗೆ..!?
( ಕಣ್ಣು ಮತ್ತು ರೆಪ್ಪೆ )
” ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡ ಹಚ್ಚಿ
ಉಜ್ಜಿಕೊಂಡವನಲ್ಲವೇ ನೀನು;
ಎದೆ ಒಳಗಿನ ಇವಳನ್ನ ತೆಗೆದ ಹಾಕಲೆತ್ನಿಸಿ
ಸೋತವನಲ್ಲವೇ ನೀನು!
” ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ
ತೊಡಗಿದ್ದ ಕುಸುಮ ಪ್ರೇಮಿ;
ಅಂಥದೇ ಸುಮದ ಪರಿಮಳಕ್ಕೆ ಸೋತು
ಬಿಗಿದಪ್ಪಿದ ದಿನಗಳ ಮರೆತವನಲ್ಲವೇ ನೀನು! “
….ಇಲ್ಲಿ, ಕವಯಿತ್ರಿ ದೀಪಾ ಅವರ, ಶಬ್ದ ಬಳಕೆ ಓದುಗನನ್ನು ಸೆರೆ ಹಿಡಿಯುತ್ತದೆ. ಕನಸುಗಳಿಗೆ ತನ್ನ ಪ್ರೇಮಿಯ ನೆನಪುಗಳೇ ದಾಸ್ತಾನು ಎನ್ನುವ ಪರಿ ಅಮೋಘವೆನಿಸುತ್ತದೆ. ಸಾಕಷ್ಟು ಪದ ಭಂಡಾರ ನಮ್ಮ ಬಳಿ ಇದ್ದರೂ ಅದನ್ನು ಸೂಕ್ತವಾಗಿ ಬಳಸಿಕೊಂಡರೆ ಕಾವ್ಯ ರೋಚಕವಾಗಿ ಮನಸೆಳೆಯುತ್ತದೆ. ಅಂತಹ ಗಟ್ಟಿತನ ಈ ಕವಯಿತ್ರಿಯಲ್ಲಿ ಇದೆ ಎನ್ನುವುದರ ಪ್ರತಿಫಲವೇ ಈ ಕೃತಿ ಅನಿಸುತ್ತದೆ.
ಸಿಟ್ಟಿನಲ್ಲಿ ನಾವು ಆಡುವ ಮಾತುಗಳು ನಮ್ಮ ಹಿಡಿತದಲ್ಲಿರುವುದಿಲ್ಲ. ಆ ಮಾತುಗಳು ಎಂತಹ ಸಂಬದ್ಧಕ್ಕಾದರೂ ತಕ್ಷಣವೇ ಕೊಳ್ಳಿ ಇಟ್ಟುಬಿಡುತ್ತವೆ. ಮೊದಲಿದ್ದ ಸ್ನೇಹ, ಪ್ರೀತಿ, ವಾತ್ಸಲ್ಯಗಳೆಲ್ಲವನ್ನು ಸಿಟ್ಟಿನ ಮಾತುಗಳು ತನ್ನ ತೆಕ್ಕೆಗೆ ಹಾಕಿಕೊಂಡು ಬಿಡುತ್ತವೆ. ಅಂತಹ ಭಾವದ ಗಜಲ್ ನ ಸಾಲುಗಳು ಇಂತಿವೆ…
” ಒಂದೆರಡು ಸಿಟ್ಟು ಹೊರಹಾಕಿದೆ,
ಕೂಡಿ ಕಲೆತ ಲಕ್ಷೋಪಲಕ್ಷ ಕ್ಷಣ ನಿರ್ಲಕ್ಷಿಸಿ
ಹೊರಟೆ ಅಷ್ಟೆ “
…. ನಿಜ ತಾನೆ, ಲಕ್ಷೋಪಲಕ್ಷ ಕೂಡಿ ಕಲಿತ ನಲಿದ ಕ್ಷಣಗಳನ್ನು ಒಂದೆರಡು ಸಿಟ್ಟು ಹೊರಹಾಕಿದ ಮಾತ್ರಕ್ಕೆ ನಶಿಸಿಬಿಡುತ್ತದೆ. ” ಅಷ್ಟೇ ..” ಗಜಲ್, ತನ್ನ ಪ್ರೇಯಸಿಯನ್ನು ಕಳೆದುಕೊಂಡು ಮರುಗುವ ಹೃದಯದ ನೋವುಳ್ಳ ಸಾಲುಗಳುನ್ನು ಹೊಂದಿದೆ.
* ” ನೀ ಮೊದಲು ಹೀಗಿರಲಿಲ್ಲ ” ಗಜಲ್ ಮಾನವನ ಬದಲಾವಣೆಯ ಗುಣವನ್ನು, ಒಳಗೊಂದು ಹೊರಗೊಂದು ಬಣ್ಣವನ್ನು ಹೊಂದಿದ ಊಸರವಳ್ಳಿ ಗುಣದ ಮನುಷ್ಯನ ಸಣ್ಣತನವನ್ನು ತೋರುತ್ತ, ತೋರುತ್ತ, ಮೊದಲಿನ ಮತ್ತು ಸದ್ಯದ ಅವನ ಸ್ವಭಾವವನ್ನು ಹೋಲಿಸುತ್ತಾ, ಸರಿ ತಪ್ಪುಗಳನ್ನು ತೂಗಿ ತೋರಿಸುತ್ತಾರೆ.
” ಬಡತನದ ರಾತ್ರಿಗಳಲ್ಲಿ ದಿಂಬಿನ ಪಕ್ಕದ ದೀಪದ
ಬೆಳಕಲ್ಲು ನನ್ನಂದವ ಹೊಗಳುತ್ತಿದ್ದೆ;
ದೊಡ್ಡ ಬಲ್ಬಿನ ಲೈಟಿನ ಬೆಳಕು ಮನೆ
ತುಂಬುತ್ತಿದ್ದಂತೆ ಬದಲಾದೆ..!
…. ಗಂಡು ಯಾವುದರಲ್ಲಿ ಬದಲಾದರೂ ವ್ಯಥೆ ಪಡದ ಹೆಣ್ಣಿನ ಮನಸು, ಅವನು ತೋರುವ ಪ್ರೀತಿಯ ಉತ್ಕುಟತೆಯಲ್ಲಿ ಒಂದಿಂಚು ವ್ಯತ್ಯಾಸವಾದರೂ ಸಹಿಸುವುದಿಲ್ಲ. ಆ ದಯಬಡತನದಲ್ಲಿ ದೀಪದ ಬೆಳಕಲ್ಲಿ ನನ್ನಂದವ ಹೊಗಳಿ ಮುದ್ದಿಸುತ್ತಿದ್ದ ನೀನು; ಈ ಸಿರಿತನದ ಝಗಝಗಿಸುವ ಬೆಳಕು ಬೀಳುತ್ತಿದ್ದಂತೆ ಬದಲಾದೆ ಎಂದು ದುಃಖಿಸುವ ಗಜಲ್ ಸೊಗಸಾಗಿದೆ. ಇದರಲ್ಲಿ ಮತ್ತಷ್ಟು ಸಾಲುಗಳೂ ನಮ್ಮ ಮನ ಸೇರುತ್ತವೆ. ಅದನ್ನು ಓದುಗರು ಕಣ್ಣಾಡಿಸಿ ಸವಿಯಬೇಕು.
* ” ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ
ನನ್ನ ದೇಹವೂ ಅಲ್ಲ
ಈ ವ್ಯವಸ್ಥೆ ಮೇಲಿದ್ದ ನಂಬಿಕೆ
ಅದೀಗ
ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು “
( ಕೂಗುತ್ತಲೇ ಇದ್ದೆ )
…. ವ್ಯವಸ್ಥೆಯ ಕರಾಳತೆಯನ್ನು ಹೇಳುವ ಕವಿತೆ ತುಂಬಾ ವಿಡಂಬನಾತ್ಮಕವಾಗಿದೆ. ತನ್ನದಲ್ಲದ ತಪ್ಪಿಗೆ ಬಲಿಯಾದದ್ದು ಒಂದೆಡೆ ಯಾದರೆ, ಮಾಧ್ಯಮ , ಪೋಲೀಸು, ಕೋರ್ಟುಗಳಲ್ಲಿ ನಿತ್ಯ ಬೆತ್ತಲಾಗಿಸುವಾಗ ನಾನು ಸತ್ತು ಹೋದೆ. ಏನೋ! ತಪ್ಪಿತಸ್ಥರಿಗೆ ಶಿಕ್ಷೆಯಾಗುವುದೆಂಬ ನಿರೀಕ್ಷೆ ಇತ್ತು. ಆದರಿಲ್ಲಿ ನೇಣುಗಂಬಕ್ಕೇರಿದ್ದು ಮಾತ್ರ ನೈತಿಕ ಮೌಲ್ಯ. ಎಂದು ವ್ಯವಸ್ಥೆಯ ಅವ್ಯವಸ್ಥೆಯನ್ನು ಅದ್ಭುತವಾಗಿ ಟೀಕಿಸುತ್ತಾರೆ ಕವಯಿತ್ರಿ ದೀಪಾ ಗೋನಾಳ ಅವರು.
” ಅವನ ಪ್ರತಿರೂಪ ” ಕವಿತೆ ಎಷ್ಟು ದೊಡ್ಡದಾಗಿದೆಯೋ ಅಷ್ಟೇ ಭಾವಪೂರ್ಣವಾಗಿ ಹೆಣ್ಣಿನ ಅಂತಾರಳವನ್ನು ಪ್ರತಿರೂಪಿಸುತ್ತದೆ. ಹೆಣ್ಣು ಮುತ್ತೈದೆ ಸ್ಥಾನದಲ್ಲಿ ಎಷ್ಟು ವಿಜೃಂಭಣೆಯಿಂದ ಬದುಕುತ್ತಾಳೋ, ಎಷ್ಟು ಸಂತೋಷಮಯವಾಗಿ ಬದುಕನ್ನು ಸವಿಯುತ್ತಾಳೋ; ವೈಧವ್ಯ ಪ್ರಾಪ್ತಿಯಾದರೆ ಅದಕ್ಕೂ ನೂರುಪಟ್ಟು ದುಃಖದ ಬದುಕಲ್ಲಿ ಪ್ರತೀದಿನ ನೊಂದು ಬೆಂದು ಸವೆದು ಹೋಗುತ್ತಾಳೆ. ಆದರೆ ಎದೆಗುಂದುವುದಿಲ್ಲ…. ನಲ್ಲನ ನೆನಪಿನ ದೋಣಿಯಲ್ಲಿ ಸಾಗುತ್ತಲೇ ಬದುಕನ್ನು ವಾಸ್ತವತೆಗೆ ಜೋಡಿಸಿಕೊಂಡು ದಿಟ್ಟವಾಗಿ ಎದುರಿಸಿ ಬಿಡುತ್ತಾಳೆ. ಅಂತಹ ಹೆಣ್ಣಿನ ಕಥೆಯನ್ನು ಕಾವ್ಯವಾಗಿಸಿ ಕಟ್ಟಿಕೊಟ್ಟ ಕೀರ್ತಿಗೆ ದೀಪಾ ಅವರು ಭಾಜನರಾಗುತ್ತಾರೆ.
” ತಂತಿ ತಂತಿಗೆ ತಾಗಿ….. ” 63 ಕವಿತೆಗಳ ಸಂಕಲನವಾಗಿದ್ದು, ಬಹುತೇಕ ಕವಿತೆಗಳ ಕಾವ್ಯವಸ್ತುಗಳು; ಓದುಗನು ಕವಿತೆಯ ಆಳಕ್ಕೆ ಇಳಿಯುತ್ತಿದ್ದಂತೆ ಹೃದಯ ತಂತಿಗೆ ತಾಗುತ್ತವೆಯಾದರೂ; ‘ನಿನ್ನಷ್ಟೇ ದೂರ’, ‘ನೋವು ನುಂಗಿಯೂ’, ‘ಹೊಸರೂಪ’, ‘ಬಂದುಳಿ ನಾಕಾರು ದಿನ’, ‘ತಿಳಿದು ಬಿಡು’, ‘ಎಷ್ಟು ಬರೆದರೂ’, ‘ಏನೆಂದು ಅರ್ಥೈಸಲಿ’- ಕವಿತೆಗಳು ಮತ್ತಷ್ಟು ಕಾವ್ಯಮಯವಾಗಿ ಕಟ್ಟಿಕೊಡಬಹುದಿತ್ತು.
ಹನಿಗವನಗಳಲ್ಲಿ ‘ಕೋಡಿ ನಾ’, ‘ತಲ್ಲೀನತೆ’, ‘ಭೇಷರಮ್’ ಬೇಷ್ ಎನಿಸುತ್ತವೆ.
ಗಜಲ್ ಗಳಲ್ಲಿ ‘ಏನರ್ಥ’, ‘ಇಷ್ಟದ ಕಾರಣ’, ‘ಗೆಳತೀ’, ‘ನೀ ಮೊದಲು ಹೀಗಿರಲಿಲ್ಲ’, ‘ಬದಲಾಗುತ್ತಿವೆ ದಿನಗಳು’ ಇಷ್ಟವಾಗುತ್ತವೆ. ಮೂರು ಕಾವ್ಯ ಪ್ರಕಾರಗಳೂ ಔಚಿತ್ಯ ಪೂರ್ಣವಾಗಿದ್ದು ಓದುಗನನ್ನು ಸೆರೆಹಿಡಿಯುವಲ್ಲಿ, ಮನೋರಂಜಿಸುವಲ್ಲಿ ಗೇದ್ದಿವೆ.
ಅಂದ ಹಾಗೆ ಹನಿಗವನ, ಗಜಲ್ಗಳನ್ನು ಈ ಸಂಕಲನದಲ್ಲಿ ಸೇರಿಸುವ ಅವಶ್ಯಕತೆ ಇತ್ತೇ ಎಂಬ ಆಲೋಚನೆ ಬಂದರೂ, ಪ್ರಸ್ತುತ ಸಾಹಿತ್ಯ ಲೋಕದಲ್ಲಿ ಮೂರು ಪ್ರತ್ಯೇಕ ಸಂಕಲನಗಳನ್ನು ಹೊರತಂದು ಅವುಗಳನ್ನು ಓದುಗರಿಗೆ ಮುಟ್ಟಿಸುವುದನ್ನು ನೆನೆದರೆ! ದೀಪಾ ಅವರು ಮಾಡಿರುವುದೇ ಸರಿ ಎಂದೆನಿಸದೇ ಇರಲಾರದು. ಒಬ್ಬ ಕವಿ/ಕವಯಿತ್ರಿಯ ಪ್ರಯತ್ನ ಗೆಲ್ಲಬೇಕೆಂದರೆ ಅವರ ಸಾಹಿತ್ಯವನ್ನು ಹೆಚ್ಚು ಹೆಚ್ಚು ಜನರು ಓದಬೇಕು. ಅದರ ಕುರಿತಾಗಿ ಮಾತಾಗಬೇಕು ಅಂದಾಗಲೇ ಸಾಹಿತಿಗಳು ಮತ್ತಷ್ಟು ಮಾಗಿದ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದೀಪಾ ಅವರ ಕವನ ಸಂಕಲನ ನಾಡಿನಾದ್ಯಂತ ಓದುಗರಿಗೆ ತಲುಪಲಿ ಮತ್ತು ಅವರ ಸಾಹಿತ್ಯ ಕೃಷಿ ಮತ್ತಷ್ಟು ಬೆಳೆಯಲಿ, ಉತ್ತಮ ಪರಿಪೂರ್ಣ ಬರವಣಿಗೆ ಅವರದಾಗಲಿ ಮತ್ತಷ್ಟು ಕೃತಿಗಳು ನಮ್ಮ ಕೈ ಸೇರಲಿ ಎಂದು ಆಶಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತೇನೆ.
-ವರದೇಂದ್ರ ಕೆ ಮಸ್ಕಿ – 9945253030
–