ಪುಸ್ತಕ ಪರಿಚಯ
ಕೃತಿ….ಬಯಲೊಳಗೆ ಬಯಲಾಗಿ
ಕಾಂತ ಗಜಲ್ ಗಳು
ಲೇಖಕರು…ಲಕ್ಷ್ಮಿಕಾಂತ ಮಿರಜಕರ
ಪ್ರಕಾಶಕರು..ನೇತಾಜಿ ಪ್ರಕಾಶನ ಶಿಗ್ಗಾಂವ,ಜಿ.ಹಾವೇರಿ
ಗಜಲ್ ಉದು೯ ಕಾವ್ಯ ರಾಣಿ ಯಾಗಿದ್ದರೂ ಈಗೀಗ ಕನ್ನಡ ಕವಿಗಳಿಗೆ ಒನಪು ವೈಯ್ಯಾರ ತೋರಿಸುತ್ತಾ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶಿಸಿ ಯುವ ಸಾಹಿತಿಗಳಿಗೆ ಮೋಡಿ ಮಾಡಿ ತನ್ನ ಹರವು ಹೆಚ್ಚಿಸಿಕೊಳ್ಳುತ್ತಾ ಹೃದಯ ಆಳುತ್ತಿದ್ದೆ. ಅನೇಕ ಯುವ ಸಾಹಿತಿಗಳಿಗೆ ಗಜಲ್ ಬರೆಯುವ ಉತ್ಸಾಹ ಹೆಚ್ಚಾಗಿದ್ದು ಕೃತಿಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ.
ಯುವ ಉತ್ಸಾಹಿ ಬರಹಗಾರರಾದ ಕವಿ ಲಕ್ಷ್ಮಿಕಾಂತ ಮಿರಜಕರ ಅವರ ಚೊಚಲ ಕೃತಿ *ಬಯಲೊಳಗೆ ಬಯಲಾಗಿ * ಗಜಲ್ ಕೃತಿ ಓದಲು ನನ್ನ ಕೈ ಸೇರಿದೆ.”ಬಯಲೊಳಗೆ ಬಯಲಾಗಿ ” ಗಜಲ್ ಸಂಕಲನದ ಶೀಷಿ೯ಕೆಯು ಬಹಳ ಅರ್ಥಪೂರ್ಣ ವಾಗಿದ್ದು ನಮ್ಮ ಶರಣ ಸಂಸ್ಕೃತಿಯಲ್ಲಿ,ಶರಣ ರ ವಚನಗಳಲ್ಲಿ “ಬಯಲು “ಶಬ್ದ ಕ್ಕೆ ವಿಶಾಲವಾದ ಅರ್ಥವಿದೆ.ಬಯಲು ಅಂದರೆ ಸೃಷ್ಟಿ, ನಿರಾಕಾರ,ನಿರಂಜನ,ಶಿವತ್ವ,ಸಾಕ್ಷತ್ಕಾರ,ಶೂನ್ಯ ಹೀಗೆ ಶರಣರು ತಮ್ಮ ವಚನಗಳಲ್ಲಿ ಬಳಿಸಿದ್ದಾರೆ,ಎಲ್ಲರ ಮನ ಗೆಲ್ಲುವ ಶೀಷಿ೯ಕೆ ಯಾಗಿದೆ.
ಲಕ್ಷ್ಮಿಕಾಂತ ಮಿರಜಕರ ಅವರು ವೃತ್ತಿಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿದ್ದಾರೆ.ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಕವಿಗಳಾಗಿ ,ಕಥೆಗಾರರಾಗಿ,ಪತ್ರಿಕೆಗಳಲ್ಲಿ ತಮ್ಮದೇ ಆದ ಛಾಪ ಮೂಡಿಸಿದ್ದಾರೆ.ಇವರು ಗಜಲ್ ರಾಣಿ ಮೋಡಿಗೆ ಸಿಲುಕಿ,ಧ್ಯಾನಿಸಿ,ಶ್ರದ್ಧೆಯಿಂದ ಗಜಲ್ ಲಕ್ಷಣಗಳ ಬಗ್ಗೆ ,ಛಂದಸ್ಸು ಬಗ್ಗೆ ಆಳ ವಾಗಿ ಅಭ್ಯಾಸಿಸಿ ಛಂದೋಬ್ದವಾಗಿ ಗಜಲ್ ರಚಿಸಿದ್ದಾರೆ.
“ಬಯಲೊಳಗೆ ಬಯಲಾಗಿ”ಕಾಂತನ ಗಜಲ್ ಗಳಕೃತಿಯಯಂಕಲನಕ್ಕೆ ಶ್ರೇಷ್ಠ ಗಜಲ್ ಕಾರರೆಂದು ಹೆಸರು ವಾಸಿಯಾದ ಅಲ್ಲಗಿರಿರಾಜ್ ಕನಕಗಿರಿ ಯವರು ಮುನ್ನುಡಿ ಯಲ್ಲಿ ಹೀಗೆ ಹೇಳಿದ್ದಾರೆ. ಈ ಸಂಕಲನದ ಗಜಲ್ ಗಳು ಕೇವಲ ಮರ ಸುತ್ತುವ ಕಾವ್ಯವಾಗಿರದೆ ,ಇಲ್ಲಿರುವ ಗಜಲ್ ಶೇರ್ ಗಳು ವರ್ತಮಾನದ ಗಂಭೀರ ಘಟವಾವಳಿಯ ಸುತ್ತ ಒಂದು ಸವಾಲ್ ನ್ನು ಕೇಳುವ ಲಕ್ಷ್ಮಿಕಾಂತ ಮಿರಜಕರ ನೆಲದೊಳಗನ ಬೀಜದ ಸೂಕ್ಷ್ಮತೆಯನ್ನು ಗಜಲ್ ಮೂಲಕ ಹೇಳಿದ್ದು ,ಹಾಗೇ ಧರ್ಮ ಅನೇಕ ಜಾತಿಗಳ ನಡುವಿನ ಸಂಘರ್ಷ ವಿಚಾರವಾಗಿ ಅವರ ಗಜಲ್ ಶೇರ್ ಗಳು ಎದ್ದು ಕಾಣುತ್ತವೆ.ಒಬ್ಬ ಕವಿಗೆ ಇರಬೇಕಾದ ಸೂಕ್ಷ್ಮ ಸಂವೇದನ ಶೀಲತೆ ಲಕ್ಷ್ಮಿಕಾಂತ ಮಿರಜಕರ ಅವರಿಗೆ ಇರುವುದರಿಂದ ಅವರೊಳಗೊಬ್ಬ ಗಜಲ್ ಕವಿ ಇದ್ದು ಉತ್ತಮ ಕೃತಿ ಹೊರಬಂದಿದೆಂದು ಹೇಳಿ ಗಜಲ್ ಕೃತಿಯ ಮೌಲ್ಯ ವನ್ನು ಹೆಚ್ಚಿಸಿದ್ದಾರೆ.
ಬೆನ್ನುಡಿ ಯನ್ನು ಶ್ರೇಷ್ಠ ಗಜಲ್ ಕಾತಿ೯ ಪ್ರೇಮ ಹೂಗಾರ ಅವರು,ಲಕ್ಷಿಕಾಂತ ಅವರ ಪ್ರಥಮ ಗಜಲ್ ಸಂಕಲನವು ಭರವಸೆ ಮೂಡಿಸಿದೆಂದು ಬೆನ್ನು ತಟ್ಟಿದ್ದಾರೆ.
” ಬಯಲೊಳಗೆ ಬಯಲಾಗಿ” ಗಜಲ್ ಸಂಕಲನದಲ್ಲಿ ೬೩ ಗಜಲ್ ಗಳಿದ್ದು ಇವುಗಳನ್ನು ಓದುತ್ತಾ ಹೋದಂತೆ ಯುವ ಬರಹಗಾರರು ಬರೆಯುವ ಪ್ರೀತಿ, ಪ್ರೇಮ ,ವಿರಹದ,ಸುತ್ತ ಗಿರಕಿ ಹೊಡೆಯುವ ಗಜಲ್ ಗಳು ಕಡಿಮೆ ಇದ್ದು ವೈಚಾರಿಕ ನೆಲೆಯಲ್ಲಿ ಚಿಂತನಕ್ಕೆ ಹಚ್ಚುವ ಗಜಲ್ ಗಳೇ ಬಹಳ ಇವೆ.ಸಮಾಜ ಮುಖಿಯಾದ ರಾಜಕೀಯ ವ್ಯವಸ್ಥೆ, ಧರ್ಮದ ದಬ್ಬಾಳಿಕೆ,ಮಾನವೀಯತೆ,ಸೌಹಾರ್ದದ ಬಗ್ಗೆ ಶೀತಲ ಸಮರಸಾರುವ ಗಜಲ್ ಗಳೇ ಹೆಚ್ಚಾಗಿವೆ.ಇದರ ಜೊತೆಗೆ ತಾಯಿ,ತಂದೆ,ಮಗಳು,ಪ್ರೀಯಸಿ,ಹೆಂಡತಿ ಮೋಹ ,ವಿರಹ,ಗಳ ಬಗ್ಗೆ ಕೆಲವು ಗಜಲ್ ಗಳೂ ಸಹ ಬರೆದಿದ್ದಾರೆ. ಎಲ್ಲಾ ಗಜಲ್ ಗಳು ಛಂದಸ್ಸು ದಲ್ಲಿದ್ದು ಗಜಲ್ ರಚನಾ ಅಂಗಗಳನ್ನು ನಿಯಮಿತವಾಗಿ ಬಳಿಸಿ ಪದ ಲಾಲಿತ್ಯ ಗೇಯತೆ ಮೃದತ್ವ ,ರೂಪಕಗಳಿಂದ ,ಪ್ರೌಢತೆಯ ಗಜಲ್ ಗಳಿದ್ದು ನುರಿತ ಗಜಲ್ ಕಾರರ ಗಜಲ್ ಗಳಂತೆ ಓದುಗರ ಮನ ಗೆಲ್ಲುತ್ತವೆ. ಕವಿಗೆ ಇರಬೇಕಾದ ಸೂಕ್ಷ್ಮ ಸಂವೇದನಾ ಶೀಲತೆ ,ವರ್ತಮಾನದ ಸವಾಲುಗಳ ಗ್ರಹಿಕೆ,ಸಮಾಜದಲ್ಲಿ ನಡೆಯುವ ದೌರ್ಜನ್ಯ, ರಾಜಕೀಯ ವ್ಯವಸ್ಥೆ, ಪ್ರಜೆಗಳ ಕರ್ತವ್ಯ, ಹಸಿವು ,ನಿರುದ್ಯೋಗ,ರೈತರ ಸಂಕಟ,ಅಸಮಾನತೆ ಅಸ್ಪೃಶ್ಯತೆ, ಅತ್ಯಾಚಾರ,ಶೋಷಣೆ,ದೌರ್ಜನ್ಯ ಗಳನ್ನು ಶೀತಲ ಸಮರ ವನ್ನು ಗಜಲ್ ಮೂಲಕ ಸಾರುತ್ತಾರೆ.
*ಲಕ್ಷ್ಮಿಕಾಂತ ಅವರ ಗಜಲ್ ಗಳಲ್ಲಿ ನನಗೆ ಇಷ್ಟವಾಕೆಲವು ಗಜಲ್ ಗಳ ದ್ವಿಪದಿಗಳು*
“ಮನೆಯಲ್ಲಿ ದೇವರಿರುವಾಗ ಗುಡಿಗೆ ಹೋಗುವ ಜರೂರು ಏನಿದೆ”
“ಜನ್ಮದಾತೆ ಅಮ್ಮನಿರುವಾಗ ಮಸೀದಿಗೆ ಹೋಗುವ ಜರೂರು ಏನಿದೆ” (ಗಜಲ್ ೨)
“ಅರಿವೆಂಬ ಬಯಲೊಳಗೆ ಬಯಲಾಗ ಬೇಕಿದೆ ಸಾಕಿ”
“ಭಕ್ತಿ ಯೆಂಬ ಬಯಲೊಳಗೆ ಶರಣನಾಗಬೇಕಾಗಿದೆ ಸಾಕಿ”(ಗಜಲ್ ೪)
” ಗೆಳೆಯ ನಿನ್ನ ಎದೆಯಲ್ಲಿ ಸೌಹಾರ್ದದ ದೀಪ ಹಚ್ಚುತ್ತೇನೆ”
“ಎಂದಿಗೂ ಆರದೆ ಉರಿಯುವ ವಿವೇಕದ ದೀಪ ಹಚ್ಚುತ್ತೇನೆ” (ಗಜಲ್ ೯)
“ಕಷ್ಟ ಸುಖ ನೋವು ನಲಿವು ನೀರ ಮೇಲಿನ ಗುಳ್ಳೆಯಂತೆ ” ಕಾಂತ”
“ಸಮುದ್ರದ ಅಲೆಗಳ ಅಬ್ಬರ ಕಡಿಮೆಯಾಗಲೇಬೇಕು ಒಂದಲ್ಲ ಒಂದು ದಿನ” (ಗಜಲ್೨೦)
“ಅನಾಥ ಭಾವದಲಿ ಸಿಲುಕಿ ಒದ್ದಾಡುತಿರುವೆ ಬಾನ ನಕ್ಷತ್ರವಾಗಿದ್ದಾನೆ ಅಪ್ಪ”
“ಕಳೆದುಕೊಂಡ ನೋವಿನಲಿ ಕೊರಗುತ್ತಿರುವೆ ಬಾನ ನಕ್ಷತ್ರ ವಾಗಿದ್ದಾನೆ ಅಪ್ಪ”(ಗಜಲ್ ೩೫)
” ಕಣ್ಣಂಚಿನ ಕಾಡಿಗೆ ನಮ್ಮ ಒಲವಧಾರೆಯ ಕಥೆ ಹೇಳುತಿದೆ”
“ಕೆಂಪಾದನಿನ್ನ ಗುಳಿಕೆನ್ನೆ ಮೇಲೆ ಮುತ್ತಿನ ಮಳೆ ಸುರಿಸಲೇ” (ಗಜಲ್ ೪೮)
“ನಿನ್ನ ಮಡಿಲಲ್ಲಿ ಮಗುವಾಗಿ ಚಿಂತೆ ಮರೆಯಬೇಕು ಸಾಕಿ”
“ಅಪ್ಪುಗೆಯಲ್ಲಿ ಕಳೆದು ಹೋಗಿ ಲೋಕ ಮರೆಯಬೇಕು ಸಾಕಿ” (ಗಜಲ್ ೫೭)
ಈ ಮೇಲೆ ತಿಳಿಸಿದ ದ್ವಿಪದಿಗಳಲ್ಲದೆ ಇನ್ನು ಅನೇಕ ಗಜಲ್ ಗಳು ಓದುಗರ ಮನ ಗೆಲ್ಲುತ್ತವೆ.
ಲಕ್ಷ್ಮಿಕಾಂತ ಮಿರಜಕರ ಅವರು ಭವಿಷ್ಯದಲ್ಲಿ ಒಳ್ಳೆಯ ನುರಿತ ಗಜಲ್ ಕಾರರಾಗುವ ಲಕ್ಷಣಗಳು ಇದ್ದು ಇವರ ಗಜಲ್ ಕೃಷಿ ನಿರಂತರವಾಗಿ ಸಾಗಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
ಪ್ರಭಾವತಿ ಎಸ್ ದೇಸಾಯಿ
ವಿಜಯಪುರ.
೮೪೦೮೮೫೪೧೦೮.