ಬಸವ ನಿನ್ನ ನೆನಪು

ಬಸವ ನಿನ್ನ ನೆನಪು

ವಿಶ್ವ ಗುರು ಜಗದ ಜ್ಯೋತಿ
ಬಸವ ನಮ್ಮಯ ವಿಭೂತಿ
ನಿನ್ನ ನೆನಪಲಿ ನಿತ್ಯ ಪುರಾಣ
ಚರ್ಚೆ ವಾದ ನಡೆದಿವೆ .

ಎಲ್ಲೋ ಇತ್ತು ಹಾರಿ ಬಂತು
ದೇಶ ನಲುಗಿ ಹೋಗಿದೆ
ರೋಗ ಸೋಂಕು ಕೆಮ್ಮುದಮ್ಮು
ಸಾವು ಕೇಕೆ ಹಾಕಿದೆ .

ಎಲ್ಲ ಗುಡಿ ಮಠ ಆಶ್ರಮ
ಭಿಕೋ ಎನ್ನುತ ಮಲಗಿವೆ
ಅಂಗ ಲಿಂಗ ಭಕ್ತ ಜಂಗಮ
ಸ್ಥಾವರಗಳು ನಡುಗಿವೆ

ಅಂತರಜಾಲದ ವಚನ ಚಿಂತನೆ
ಮೂರು ಹೊತ್ತು ನಡೆದಿದೆ
ಪುರಷ ಮಹಿಳೆ ಮುದುಕರೆಲ್ಲರೂ
ನಿನ್ನ ಸ್ಮರಣೆ ಮೊಳಗಿದೆ

ಶತಮಾನಗಳು ಉರುಳಿದವು
ಬಸವ ನಿನ್ನ ನೆನೆಯಲಿಲ್ಲ
ಈಗ ಮನೆಯಲಿ ಖಾಲಿ ಖಾಲಿ
ನಿನ್ನ ನೆನಹು ಹಾಡು ಲಾಲಿ

ಲಸಿಕೆ ಸಿಕ್ಕು ರೋಗ ಹೋದರೆ
ಮತ್ತೆ ವ್ಯಸನದ ಚಿಂತೆಯು
ಪಬ್ಬು ಬಾರು ಕ್ಲಬ್ಬಿನಲ್ಲಿ
ನಮ್ಮ ಸಂತಸ ಮುಕ್ತಿಯು

ಸೋಂಕು ಬಂದರೆ ನಿನ್ನ ನೆನಪು
ಗುಣಗೊಂಡರೆ ಅದೇ ಒನಪು
ಸಾಯಲಾರೆವು ಬದುಕಲಾರೆವು
ಬಸವ ನಿನ್ನ ಸ್ಮರಣೆ ಮರೆತು

ಡಾ.ಶಶಿಕಾಂತ ಪಟ್ಟಣ ಪುಣೆ 

Don`t copy text!