ನಾನು ಓದಿದ ಪುಸ್ತಕ -ಪುಸ್ತಕ ಪರಿಚಯ
” ಧಣೇರ ಬಾವಿ”
( ಕಥಾ ಸಂಕಲನ )
ಕೃತಿ ಕರ್ತೃ: ಶರಬಸವ ಕೆ ಗುಡದಿನ್ನಿ
ಶಿಕ್ಷಕರು ಮತ್ತು ಆತ್ಮೀಯ ಸಹೃದಯಿ ಗೆಳೆಯರೂ ಆದ ಶರಣಬಸವ ಕೆ ಗುಡದಿನ್ನಿ, ಮ್ಯಾಡಿ ಸರ್ ಎಂದೇ ಖ್ಯಾತಿಯಾದ ಶ್ರೀಯುತರು; ಒಬ್ಬ ಅದ್ಭುತ ಲೇಖಕರು. ವಿಭಿನ್ನ ಕಥೆಗಳ ಸರದಾರರು. ಖಡ್ಗದ ಮೊನಚಿನಂತ ಮಾತುಗಾರರೂ ಹೌದು. ಕಾವ್ಯ ಕಟ್ಟುವಿಕೆಯಲ್ಲಿ ಮತ್ತು ವಾಚಿಸುವುದರಲ್ಲಿ ಎದುರಿಗಿದ್ದವರನ್ನು ಮೂಕವಿಸ್ಮಿತರನ್ನಾಗಿಸುತ್ತಾರೆಂಬುದು ಹಳೆಯ ಮಾತು.
ಸಿರಿಗನ್ನಡ ವೇದಿಕೆ ಲಿಂಗಸುಗೂರು ಘಟಕದ ಅಧ್ಯಕ್ಷರಾಗಿಯೂ ಗುರುತಿಸಿಕೊಂಡ ಇವರು ಸಾಹಿತ್ಯಿಕ ಚಟುವಟಿಕೆಯಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮ್ಯಾಡಿ ಅವರ ಭಾಷಾ ಶೈಲಿಯೇ ಆಕರ್ಷಣೀಯ, ಪದಗಳನ್ನು ಜೋಡಿಸುವ ಪರಿ ಅದಮ್ಯವಾದದ್ದು. ಸದಾ ಗಡ್ಡಧಾರಿಯಾಗಿ ಮುಗುಳ್ನಗುತ್ತ, ಎಲ್ಲರನ್ನು ನಗಿಸುತ್ತಲೇ ಚಿಂತನಾಶೀಲ ನುಡಿಗಳನ್ನು ಉದುರಿಸುತ್ತ ಸುತ್ತಲಿರುವವರಲ್ಲಿಯೇ ಕೇಂದ್ರ ವ್ಯಕ್ತಿಯಾಗುವ ಅವಿಚ್ಛಿನ್ನವಾದ ಒಂದು ಸೆಳೆತ ಆ ಕಣ್ಣುಗಳಲ್ಲಿದೆ ಎಂಬುದು ವಿಶ್ವಾಸನೀಯ ಅನಿಸಿಕೆ. ಅನೇಕ ವರ್ಷಗಳಿಂದ ಬರವಣಿಗೆಯಲ್ಲಿ ಗುರುತಿಸಿಕೊಂಡಿದ್ದರೂ ಸಂಕಲನ ತರುವಲ್ಲಿ ವಿಳಂಬವಾದದ್ದು ಓದುಗರ ದೌರ್ಭಾಗ್ಯ,
ಹೌದು, ಪ್ರಸ್ತುತ ಅವರ ಪ್ರಥಮ ಕಥಾ ಸಂಕಲನ
” ಧಣೇರ ಬಾವಿ ” ಓದಿ ನನಗನಿಸಿದ ಪ್ರಾಮಾಣಿಕ ಮಾತು. ಇದಕ್ಕೆ ಸಾಕ್ಷಿ ಈಗಾಗಲೇ ಈ ಸಂಕಲನದಲ್ಲಿರುವ ಕಥೆಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತ ಮತ್ತು ಮೆಚ್ಚುಗೆ ಪಡೆದವುಗಳೆಂಬುದು.
” ಧಣೇರ ಬಾವಿ” ಕಥಾ ಸಂಕಲನದಲ್ಲಿ ಒಟ್ಟು ೮ ಕಥೆಗಳಿವೆ. ಎಂಟು ಕಥೆಗಳು ನಮ್ಮನ್ನು ಎಂಟು ದಿಕ್ಕಿಗೆ ಮುಖಮಾಡಿ ಚಿಂತನೆಗೆ ಹಚ್ಚುತ್ತವೆ. ಹೆಣ್ಣಿನ ಮತ್ತು ಗಂಡಿನ ತುಮುಲಗಳು, ಉನ್ಮಾದಕತೆ, ಜವಾಬ್ದಾರಿ, ಪ್ರಕೃತಿಗೆ ಹೊಂದಿಕೊಳ್ಳುವ ಅನಿವಾರ್ಯತೆ, ಪ್ರಗತಿಪರ ಚಿಂತನೆ, ತಪ್ಪಿಗೆ ಪ್ರಾಯಶ್ಚಿತ್ತ, ಬದುಕನ್ನು ಸಾಗಿಸಲು ಪಡುವ ಹೆಣಗಾಟ ಎಲ್ಲವನ್ನೂ ಕಥಾ ಸಾರಾಂಶದಲ್ಲಿ ಹಿಡಿದಿಟ್ಟಿದ್ದಾರೆ. ಮ್ಯಾಡಿಯವರ ಭಾಷೆ ಮತ್ತು ನಿರೂಪಣಾ ಶೈಲಿ ಓದುಗರ ಮೇಲೆ ಪ್ರಭಾವಿತವಾಗುತ್ತದೆ. ವಿಭಿನ್ನ ಮತ್ತು ವಿಶೇಷ ವಿಷಯ ವಸ್ತುಗಳ ಎಂಟೂ ಕಥೆಗಳ ಮೇಲೆ ಒಂದಷ್ಟು ಕಣ್ಣಾಡಿಸೋಣ. ಕಥೆಗಳ ಪೂರ್ತಿ ಸ್ವಾರಸ್ಯವನ್ನು ಸವಿಯಲು ಕೃತಿ ಓದಿದಾಗ ಮಾತ್ರವೇ ಸಾಧ್ಯ….
* ” ಉದುರಿದ ಹೂವೊಂದರ ಕಥೆ ” ಕೃತಿಯ ಮೊದಲ ಕಥೆ. ಎಲ್ಲ ಓದುಗರಿಗೂ ಮೆಚ್ಚಾಗುವ ಕಥೆ. ಕಥೆ ಅನ್ನುವುದಕ್ಕಿಂತ ಹದಿಹರೆಯ ವಯಸ್ಸಿನ ಎಲ್ಲ ಹುಡುಗಿಯರ ಮನಸಿನ ಪ್ರತಿಬಿಂಬ ಇದು. ಪ್ರತಿ ಹೆಣ್ಣಿಗೂ ಹದಿಹರೆಯದ ವಯಸ್ಸಲ್ಲಿ ಪ್ರಥಮವಾಗಿ ಬೀಜೋತ್ಪತ್ತಿ ಆಗಬೇಕಾದುದು ಪ್ರಕೃತಿ ದತ್ತ ಕ್ರಿಯೆ. ಆ ಕ್ರಿಯೆಯಲ್ಲಿ ವೈಫಲ್ಯ ಕಂಡರೆ, ಬಹುತೇಕ ಹುಡುಗಿಯರ ಅಂಗ ರಚನೆಯಲ್ಲಿ ವ್ಯತ್ಯಾಸ ಕಾಣುವುದಿಲ್ಲ, ಅಂತಹ ಹುಡುಗಿಯ ಮನಸ್ಥಿತಿಯನ್ನು ಮತ್ತು ಅವಳು ಅನುಭವಿಸುವ ನೋವಿಗಿಂತ ಪರರ ಮಾತುಗಳಿಂದ ಆಗಬಹುದಾದ ಇಡೀ ಕುಟುಂಬದ ಖಿನ್ನತೆ ತೊಳಲಾಟವನ್ನು ಯಥಾವತ್ತಾಗಿ ನಮ್ಮೆದೆಗೆ ನಾಟುವಂತೆ ಬರೆದಿದ್ದಾರೆ ಕಥೆಗಾರರು. ವಯಸ್ಸು ತುಂಬಿ ಮನಸ್ಸು ಬಲಿತು, ದೇಹ ಬದಲಾಗುವ ಸಮಯಕ್ಕೆ ಸರಿಯಾಗಿ ಹುಡುಗಿ ಮಾಗಲೇ ಬೇಕು. ಹಾಗೆ ಋತುಮತಿಯಾಗದೇ ಉಳಿದ ‘ನೇತ್ರವತಿ’ಯ ಬದುಕನ್ನು ಓದುಗರು ಓದಿಯೇ ಮರುಗಬೇಕು. ಲೇಖಕರು ಕೊನೆಯಲ್ಲಿ ನೇತ್ರಾವತಿ ಬಾಳಿಗೆ ಒಂದು ತಿರುವನ್ನು ಕೊಡುತ್ತಾರೆ. ಹೊಲ ಮನಿ ಮಾರದರೂ ಸರಿ ನನ್ನ ಮಗಳು ದೊಡ್ಡವಳಾಗ ಬೇಕು ಎಂದು ವೈದ್ಯರಲ್ಲಿ ಕರೆತಂದ ಆಕೆಯ ತಂದೆಗೆ ಸತ್ಯದ ದರ್ಶನವನ್ನು ವೈದ್ಯರು ಮಾಡಿಸುತ್ತಾರೆ. ನಂತರ ಪ್ರಕೃತಿಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಮಗಳನ್ನು ಸಿದ್ಧಗೊಳಿಸಿ ಆಕೆಯನ್ನು ದಾದಿಯನ್ನಾಗಿ ಮಾಡಲು ತಂದೆ ನಿರ್ಧರಿಸುತ್ತಾನೆ. ಈ ಬದಲಾವಣೆಯೇ ಓದುಗನಿಗೆ ಲೇಖಕರ ಮೇಲೆ ವಿಶ್ವಾಸವನ್ನು ಹುಟ್ಟಿಸುತ್ತದೆ. ಸ್ವಾರಸ್ಯಕರವಾದ ಈ ಕಥೆ ಓದಿದರೆ ಖಂಡಿತವಾಗಿ ಭಾವನೆಗಳು ಆದರ್ಶವಾಗಿ ಬದಲಾಗುತ್ತವೆ.
* ” ನೀಲಿ ಕಣ್ಣಿನ ಹುಡುಗ “. ಈ ಕಥೆಯನ್ನು ಓದಿ ಮುಗಿಸುವ ಹೊತ್ತಿಗೆ, ಕಂಬನಿ ತುಂಬಿಕೊಳ್ಳುವುದು ಖಂಡಿತ. ಆರ್ದತೆಯಲ್ಲಿಯೇ ಕಥೆಯ ಬಗ್ಗೆ ಬರೆಯುತ್ತಿರುವೆ. ಮನಸು ಕಸಿವಿಸಿಯಾಗಿ, ಪದಗಳೆಲ್ಲ ಅಸಹನೀಯ ಸ್ಥಿತಿಯಲ್ಲಿ ನಿಂತುಬಿಟ್ಟಿವೆ. ಪಾಪದ ಹುಡುಗ ಎನ್ನಬೇಕೇ? ಪಾಪದ ಹುಡುಗಿ ಎನ್ನಬೇಕೇ? ಸಂಪೂರ್ಣ ಹೃದಯವನ್ನಾವರಿಸುವ ಕಥೆ. ಕಥೆಗಾರರ ಅನುಭವವಿದು ಎಂದೇ ಭಾವಿಸುವಷ್ಟು ಆಪ್ತತೆಯ ರಚನೆ. ಎಲ್ಲಿಯೂ ಚಿತ್ತ ಚಾಂಚಲ್ಯವಾಗುವುದಿಲ್ಲ. ಕಂಡಕ್ಟರ್ ಹುದ್ದೆಯ ನಿರೂಪಕನಿಗೆ, ಪ್ರತಿನಿತ್ಯ ಎದುರುಗೊಳ್ಳುವ ನೀಲಿ ಕಣ್ಣಿನ ಹುಡುಗನ ಮುಖಭಾವ ಕಾಣುವ ಪರಿಯನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ. ನೀಲಿ ಕಣ್ಣಿನ ಹುಡುಗನಲ್ಲಿ ಹುಟ್ಟುವ ಪ್ರೇಮಭಾವವನ್ನು ಹೊರಹಾಕುವ ಪದಗಳಿಗೆ ಮಾತಿಲ್ಲ. ಅವನಿಗಾಗಿ ಕಾಯುವ ಬೆಳದಿಂಗಳ ಚೆಲುವೆಯು ತನ್ನ ಹುಡುಗನನ್ನು ಕಂಡ ಕ್ಷಣ, ಕಾಲುಬೆರಳಿಂದ ಅಂಗಳದಲ್ಲಿ ರಂಗೋಲಿ ತೀಡುವ ಉಲ್ಲಾಸಕ್ಕೆ ಸಿಕ್ಕಾಗ ಮನಸು ಪ್ರೇಮವನ್ನು ಧ್ಯಾನಿಸತೊಡಗುತ್ತದೆ. ಈ ನೀಲಿ ಕಂಗಳ ಹುಡುಗ ಮತ್ತು ಆ ಬೆಳದಿಂಗಳ ಮೈ ಹುಡುಗಿಯ ಪ್ರೇಮ; ಕಥಾ ನಿರೂಪಕನಿಗೆ(ಕಂಡಕ್ಟರ್) ತಮ್ಮ ಭಗ್ನ ಪ್ರೇಮವನ್ನು ನೆನಪಿಸುತ್ತದೆ. ಇವರ ಪ್ರೇಮವಾದರೂ ಸಫಲಗೊಳ್ಳಲಿ ಎಂಬ ನಿರೂಪಕನ ಧೊರಣೆ ಓದಗನಿಗೆ ಖುಷಿಕೊಡುತ್ತದೆ. ನಾಳೆ ಏನಾಗುತ್ತದೆ ಎಂಬ ಹಂತಕ್ಕಿರುವ ಕಂಡಕ್ಟರ್ಗೆ ಊರಿಂದ ತಂಗಿಯ ಪತ್ರ ಬರುತ್ತದೆ. ತಂಗಿಗೆ ಹುಷಾರಿಲ್ಲ ಬೇಗ ಬಾ ಎಂಬ ತಂಗಿಯ ಹಸ್ತಾಕ್ಷರ ಇರುವ ತಂದೆಯ ಆಹ್ವಾನಕ್ಕೆ ಊರಿಗೆ ಹೋಗುವ ಕಂಡಕ್ಟರ್ ಮರಳಿ ಬರುವ ಹೊತ್ತಿಗೆ ಅವನ ಡೇಲಿ ಟ್ರಿಪ್ ಬಸ್ ಅಪಘಾತವಾಗಿರುತ್ತದೆ. ಬೇರೆ ಬಸ್ ನೊಂದಿಗೆ ಹೊರಟ ಕಂಡಕ್ಟರ್ ನ ಮನಸಲ್ಲಿನ ತಳಮಳ ಓದುಗನ ತಳಮಳವೂ ಆಗುತ್ತದೆ. ಆ ನೀಲಿ ಕಣ್ಣಿನ ಹುಡುಗ ಆ ಬಸ್ ಅಪಘಾತದಲ್ಲೇ ಮರಣ ಹೊಂದಿದ ಎಂದು ಡ್ರೈವರ್ ರಾಮಣ್ಣನ ಮಾತುಗಳಂತೂ ಓದುಗನನ್ನು ವಿಚಲಿತನನ್ನಾಗಿಸುತ್ತದೆ. ಅವನ ಪ್ರೇಮ ಫಲಿಸಿ ಎರಡು ಹಕ್ಕಿಗಳು ಒಂದಾಗದೇ ಇರುವುದು, ಆ ಹುಡುಗಿ ನೀಲಿ ಕಂಗಳ ಹುಡುಗನನ್ನು ಬಸ್ ಕಿಟಕಿಗಳಲ್ಲಿ ಹುಡುಕುವ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಓದುಗನಿಗೆ ಕಥೆಯಲ್ಲಿಯ ಆ ಹುಡುಗನನ್ನು ಮರೆಯಲು ಸಾಧ್ಯವೇ ಇಲ್ಲ. ತುಂಬಾ ದಿನ ಕಾಡುವ ಕಥೆ… ಇದಾಗಿದೆ.
* ” ಖಂಡದ ಸಾರು “ ಗ್ರಾಮ್ಯ ಭಾಷೆಯ ಕಥೆ. ನಿರ್ಮೋಹಿ ಮುಕ್ತುಂಬಿ; ಖಂಡದ ಸಾರನ್ನು ಪುಟ್ಟಿ ಮೇಲೆ ಹೊತ್ತು ಹೊಲ, ಮನೆಗೆ ಅಂತ ಅಲೆದಾಡಿ ತನ್ನ ಬದುಕಿಗೆ ನೆಲೆ ಕಟ್ಟಿಕೊಳ್ಳುವ ಕಥೆ. ಬಹಳ ಜನರಿಂದ ದೊಡ್ಡಮ್ಮನೆಂಬ ಅಂಕಿತ ಪಡೆದು ಅದಕ್ಕೆ ಸಾಮ್ಯವಾಗಿ ಮಾತೃ ಹೃದಯವನ್ನು ಬೆಳೆಸಿಕೊಂಡು ಅಂತೆಯೇ ಕೊನೆಯಲ್ಲೂ ತಾಯಿಯನ್ನು ಕಳೆದುಕೊಂಡ ಮಗುವಿಗೆ ತಾಯಿ ಸ್ಥಾನ ಕೊಟ್ಟು ಓಡಿ ಹೋದ ತನ್ನ ಮಗ ಅಕ್ಬರನನ್ನು ಅವನಲ್ಲಿ ಹುಡುಕುತ್ತಾಳೇನೋ ಅನ್ನಿಸುವಷ್ಟು ಪಾತ್ರಕ್ಕೆ ಜೀವ ತುಂಬುತ್ತಾಳೆ.
” ನಾ ಏಟು ರಕ್ಕಕ ಅಂತ ಮಾಡಿದ್ರು ಉಂಡೋರು ಬೇಸ್ ಮಾಡಿದಿ ಅಂದ್ರ ಮನಸಿಗೆ ಸಿಗಾ ಸಮಾಧಾನನ ಬ್ಯಾರೆ “. ಎಷ್ಟೋ ಜನ ಕೊಂಡ ಖಂಡದ ಸಾರಿಗೆ ತಕ್ಕ ಬೆಲೆಗಿಂತ ಕಡಿಮೆ ರೊಕ್ಕ ಕೊಟ್ರೂ, ಪರವಾಗಿಲ್ಲ
” ನನಗರ ಏನು ಅರಮನಿ ಕಟ್ಟದೈತಿ ” ಅಂತ ಸುಮ್ನಾಗಾಕಿ. ಇಂತಹ ಮನಸ್ಥಿತಿಯ ಮುಕ್ತುಂಬಿ ಎಂದೂ ಹಣಕ್ಕೆ ಜೋತು ಬೀಳುವುದೇ ಇಲ್ಲ. ಈ ಗುಣವೇ ಕಥೆಗೆ ಜೀವಾಳವಾಗುತ್ತದೆ.
ಈ ಕಥೆ ಪೂರ್ತಿ ಒಂದೇ ಭಾಷಾ ಶೈಲಿಯನ್ನು ಕಾಪಿಟ್ಟು ಕೊಳ್ಳುವ ಮ್ಯಾಡಿ ಸರ್, ಆ ಕಾರಣಕ್ಕಾಗಿಯೇ ವಿಶೇಷವೆನಿಸಿ ಭೇಷ್ ಎನಿಸಿಕೊಳ್ಳುತ್ತಾರೆ. ಕಥೆಯ ಮುಕ್ಕಾಲು ಭಾಗ ಮುಕ್ತುಂಬಿಯ ಕಥೆ ಇದ್ದು, ಕೊನೆಯಲ್ಲಿ ಮಲ್ಲಮ್ಮನ ಆಗಮನ ಅವಳ ಆತ್ಮಹತ್ಯೆ ಮನನೋಯಿಸುತ್ತದೆ.
ಒಂದೋ, ಎರಡೋ ಎಕರೆ ಹೊಲ ಇದ್ದರೂ, ರೈತನೊಂದಿಗೆ ಪರಿಸರ ಆಡುವ ಜೂಜಾಟಕ್ಕೆ ಬಲಿಯಾಗಿ, ಬರ ಅಥವಾ ನೆರೆಗೆ ತುತ್ತಾಗಿ ಕೈಯಿಗೆ ಬಂದದ್ದು ಬಾಯಿಗೆ ಬರದೇ ಮಾಡಿದ ಸಾಲ ತೀರಿಸಲಾಗದೆ, ಹಣಕ್ಕಾಗಿ ಮಟ್ಗಾ ದಂಧೆ ಹಿಡಿಯುವ ರೈತನ ಕಥೆ. ಯಾವಾಗಲೋ ಒಮ್ಮೆ ಲಕ್ಕಿ ನಂಬರ್ ಹತ್ತಿ ಕೈಯಿಗೆ ದುಡ್ಡು ಬಂದಿದೆ ಅನ್ನುವಷ್ಟರಲ್ಲಿ ದುಪ್ಪಟ್ಟು ಕಳೆದುಕೊಂಡು ಮನೆ ಸೇರುವುದು ಅಥವಾ ಪೋಲೀಸರ ಕೈಗೆ ಸಿಕ್ಕು ಬಳಲಿ ಖಾಲೀ ಜೇಬಿನೊಂದಿಗೆ ಕಣ್ಣೀರನ್ನು ಇನಾಮಾಗಿ ಪಡೆದು ಬರುವುದು ಎಲ್ಲರಿಗೂ ಗೊತ್ತು. ಅಂತಹ ಮಟ್ಕಾ ಆಟದ ಸುತ್ತ ಸುತ್ತುವ ಕಥೆಯಲ್ಲಿ, ಕಥಾ ನಾಯಕ ಬೀರಪ್ಪನ ಬದುಕನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತ ಮನಸನ್ನು ಕಥೆಯಲ್ಲಿ ಲೀನವಾಗಿಸುತ್ತಾರೆ ಕಥೆಗಾರರು. ದೇವರೆ ನಮ್ಮ ಪರವಾಗಿ ಇಲ್ಲದ ನಿನಗೆ ಆ ಹೆಸರು ಹೊಂದುವುದಿಲ್ಲ. ” ದೇವರೇ ನಿನ್ನೆಸರ ಬದಲಿಸಿಕೊ ” ಎಂಬ ಅಂತರ್ಧ್ವನಿ ನಮ್ಮ ಮನ ತುಂಬಿಸುವ ಕಥೆ ರೋಚಕವಾಗಿಯೂ, ತಲ್ಲಣವನ್ನು ಹುಟ್ಟಿಸುವಂತೆಯೂ ಮೂಡಿಬಂದಿದೆ.
* ಮತ್ತೊಂದು ಮನ ಹಿಂಡುವ ಕಥೆ
” ತಬ್ಬಲಿ ಮರ ”. ಸಾಂತವ್ವನ ಸುಂದರ ಸಂಸಾರ ಪಡೆದು ಕೊಂಡಿದ್ದು ಕಡಿಮೆ, ಕಳೆದುಕೊಂಡದ್ದೇ ಬಹಳ. ತನ್ನ ಡಬಲ್ ವಯಸ್ಸಿನ ಸಿದ್ದಪ್ಪನೊಂದಿಗೆ ಪ್ರೇಮದಲ್ಲಿ ಸಿಲುಕಿ ಅವನೊಂದಿಗೆ ಸುಖ ಬಾಳು ಕಂಡುಕೊಂಡರೂ, ಅದೇ ಮಹಾನ್ ತಪ್ಪು ಎಂಬ ಮಾತುಗಳು ಕೊನೆಯವರೆಗೂ ಸಾಂತವ್ವನ ಬೆನ್ನಿಗಂಟಿದ್ದವು. ಮೂರು ಮಕ್ಕಳೊಂದಿಗೆ ಬದುಕನ್ನು ಕಟ್ಟಿಕೊಂಡಾಕೆ ಕೊನೆಗೆ ಒಂಟಿಯಾಗುವುದೆಂದರೆ ಯಾವ ಓದುಗನ ರಕ್ತವಾದರೂ ಹೆಪ್ಪುಗಟ್ಟದೇ ಇರದು. ಕರುಳು ಹಿಂಡುವ ಕಥೆ ಓದಿಯೇ ಅನುಭವಿಸಬೇಕು.
* ನಾಯಿಯಿಂದ ಕಡಿಸಿಕೊಂಡು ಲೂಯಿ ಪಾಶ್ಚರ್ ಕಂಡುಹಿಡಿದ ಚುಚ್ಚುಮದ್ದನ್ನು ಹೊಕ್ಕಳ ಸುತ್ತ ಚುಚ್ಚಿಸಿಕೊಂಡು, ಬದುಕಿದೆ; ಹೊಸ ಹೆಸರೇ ಇರಲಿ ಎಂದು ತನ್ನ ಹೆಸರನ್ನು ” ಲೂಯಿ ಪಾಶ್ಚರ್ ” ಎಂದು ಹೊಸ ನಾಮಕರಣ ಮಾಡಿಕೊಂಡು, ತಂದೆ ತಾಯಿಯ ಬೇಜವಾಬ್ದಾರಿಗೆ ನೊಂದು, ಅವರಿಟ್ಟ ಹೆಸರಿಗೆ ಎಳ್ಳು ನೀರು ಬಿಟ್ಟ ನತದೃಷ್ಟನ ಕಥೆ. HIV +ve ಎಂಬುದು ಪಕ್ಕಾ ಆದೊಡನೆ ಅದಕ್ಕೆ ಕಾರಣರಾದವರೊಂದಿನ ಪಲ್ಲಂಗದ ಸುಖವನ್ನು ನೆನಪಿಸಿಕೊಳ್ಳುತ್ತ ಸಾಗುವ ಲೂಯಿಯ ಅಂತರಂಗದ ದುಗುಡವನ್ನು ಓದುಗನ ನಾಡಿ ಬಡಿತ ಹೆಚ್ಚಿಸುವಂತೆ ಬರೆಯುತ್ತಾರೆ ಲೇಖಕರು. ಲೂಯಿಯ ಹೆಂಡತಿ ಗರ್ಭಿಣಿ, ತನ್ನ ರೋಗವೆಲ್ಲಿ ಅವಳಿಗೆ ಮತ್ತು ಭ್ರೂಣಕ್ಕೆ ತಗಲಿ ಬಿಟ್ಟಿದೆಯೇ ಎಂದು ಹೆರಿಗೆ ದಿನದವರೆಗೂ ತಳಮಳದಿಂದ ಒದ್ದಾಡುವ ಲೂಯಿ ದೇವರನ್ನು ನೆನೆಯದ ಕ್ಷಣಗಳಿಲ್ಲ. ತೆಪ್ಪಗೆ ಮನೆ ಊಟ ಮಾಡಿಕೊಂಡಿದ್ದರೆ ಈ ತಾಪತ್ರಯ ಇರುತ್ತಿರಲಿಲ್ಲ ಎಂದು ಯೋಚಿಸುವ HIV ಸೋಂಕಿತನ ಸಂಪೂರ್ಣ ಮನಸಿನ ತುಮುಲಗಳನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಅಂತೂ ಹೆರಿಗೆ ದಿನ ಬಂದು ಹೆಂಡತಿಯ ರಕ್ತವನ್ನು ಪರೀಕ್ಷೆಗೆ ಒಯ್ದಿದ್ದೇ ತಡ ಲೂಯಿ ನಿಂತಲ್ಲಿ ನಿಲ್ಲಲಾಗದೆ, ರಿಪೋರ್ಟ್ ನೆನೆದು ಊಹಾಪೋಹದೊಂದಿಗೆ ಮರ್ಯಾದೆ ಮೂರಾಬಟ್ಟೆ ಆಗುವ ಕಲ್ಪನೆಯಲ್ಲಿ ಮುಳುಗುತ್ತಾನೆ. ರಿಪೋರ್ಟ್ ಸಿದ್ಧವಾಗಿ ಅದನ್ನು ತರುತ್ತಿರುವ ನರ್ಸ್, ‘ಎಮ್ಮೆಯ ಮೇಲೆ ಹಗ್ಗ ಹಿಡಿದು ಬರುವ ಯಮ’ನಂತೆ ಕಾಣುತ್ತಾಳೆ ಲೂಯಿಗೆ. ರಿಪೋರ್ಟ ಏನು ಹೇಳುತ್ತದೆ ಎಂಬುದೇ ಕಥೆಯ ಸ್ವಾರಸ್ಯಕರ ಅಂತ್ಯ. ಅದರಲ್ಲೇ ಲೂಯಿಯ ನೆಮ್ಮದಿಯ ಗುಟ್ಟನ್ನು ಕಥೆಗಾರರು ಅಡಗಿಸಿಟ್ಟಿದ್ದಾರೆ. ಎಲ್ಲಿಯೂ ಓದುಗನನ್ನು ವಿಮುಖನನ್ನಾಗಿಸದ ಕಥೆಯ ನಿರೂಪಣೆ ಉತ್ತಮವಾಗಿದೆ.
* ” ಒಂದು ಚಹಾ ಮತ್ತೇನಿಲ್ಲ “ ಸುಮಧುರ ಹೃದಯದ ಒಂಟಿ ದಾರಿಯ ಪ್ರೇಮ ವೈಫಲ್ಯದ ಕಥೆ ಅನ್ನಬಹುದಾದರೂ, ಕಾಲೇಜಲ್ಲಿ ಕಪ್ಪು ಬುರ್ಖಾದೊಳಗ ಹುಟ್ಟಿಕೊಂಡ ಹಚ್ಚ ಹಸಿರಿನ ಪ್ರೇಮ ಕೆಂಪು ಗುಲಾಬಿಯ ಮೇಲೆ ಚಿಗುರಲಿಲ್ಲ ಎನ್ನುವುದು ಓದುಗನಿಗೆ ಅನ್ನಿಸದೇ ಇರದು. ಹೌದು, ಎಷ್ಟೋ ಇಂತಹ ಪ್ರೇಮಗಳು ಹೊರ ಬಂದು ಪ್ರೇಮಿಗಳು ಸಂಧಿಸುವ ಮುನ್ನವೇ ಕತ್ತಲಲ್ಲಿ ಉಳಿದುಬಿಡುತ್ತವೆ. ಜಾತಿ ಕಾರಣಕ್ಕೋ, ಮನೆಯ ಮಾನಕ್ಕೋ ಮತ್ಯಾವುದಕ್ಕೋ ತಮ್ಮ ಪ್ರೇಮವನ್ನು ಮುಂದುವರೆಸಲಾಗದೆ ಹೃದಯದಲ್ಲಿ ಮರುಗಟ್ಟಿಸಿಕೊಂಡು ಒದ್ಯಾಡುವುದು ಇದ್ದೇ ಇರುತ್ತದೆ.
ವಲಿಯೊಂದಿಗೆ ಮದುವೆ ಆಗಿ ‘ಖಬೂಲ್’ ಹೇಳಿದ ಮೇಲೆ ಪರಪುಷನನ್ನು ಮಾತನಾಡಿಸುವುದು ರೌರವ ನರಕದಂತೆ ಎಂಬ ಕಥಾ ನಾಯಕಿಯ ಮಾತು ಭಾರತೀಯ ನಾರಿಯ ಮನಸ್ಥಿತಿಯನ್ನು ತೋರಿಸುತ್ತದೆ. ಮದುವೆ ಮುಂಚೆ ಮ್ಯಾಡಿ
(ಮಂಜುನಾಥಸ್ವಾಮಿ)ಯನ್ನೊಮ್ಮೆ ಸಂಧಿಸಿ ತನ್ನ ಪ್ರೇಮದ ಇತಿಹಾಸವನ್ನು ಹೇಳಿಬಿಡಬೇಕೆಂಬುದಷ್ಟೇ ಉದ್ದೇಶದಿಂದ ಮ್ಯಾಡಿ ಊರಿಗೆ ಬಂದಿದ್ದಳು. ಕ್ಷಣಗಳು ಕಳೆದಂತೆ ಚಹಾದೊಂದಿಗೆ ಮಾತಿಗಿಳಿದ ಆಕೆ, ಅವನ ಪ್ರಸ್ತತ ಗಾಂಭೀರ್ಯತೆ, ಮಾತು ನಡೆ ನುಡಿ, ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ಕಂಡವಳಿಗೆ ಇವನನ್ನೇ ನಾ ಇಷ್ಟು ದಿನ ಪ್ರಿತಿಸಿದ್ದು ಎನಿಸಿಬಿಡುತ್ತದೆ. ಚಹಾ ಮುಗಿಯುತ್ತಿದ್ದಂತೆ ಮರಳಿ ಊರಿಗೆ ಹೊರಡಲಣಿಯಾದವಳನ್ನು ಕಂಡ ಮ್ಯಾಡಿ ಮೂಕನಾಗುತ್ತಾನೆ. ರಾತ್ರಿ ಇಡೀ ಪ್ರಯಾಣಿಸಿ ಚಹಾ ಕುಡಿಯಲು ಬಂದದ್ದಾ ಇಲ್ಲಿಗೆ, ನಮ್ಮ ನಡುವೆ ಚಹಾದ ಹೊರತಾಗಿ ಏನು ಇಲ್ಲವಾ! ಎಂಬ ಭಾವದೊಂದಿಗೆ ಬೀಳ್ಕೊಡುತ್ತಾನೆ.
* ಪ್ರಗತಿಪರ ರೈತನಾಗ್ದೇ ಇದ್ರೂ, ತನ್ನ ತಂದೆಯ ಮಾನವನ್ನುಳಿಸಿದ ಶ್ರೀಧರ ನಿಜಕ್ಕೂ ಸಂಸ್ಕಾರವಂತ ಎಂದು ಓದುಗರಿಗೆ ಅನಿಸುತ್ತದೆ. ಓದಿದವರು ರೈತರಾಗಬಾರದೆಂದೇನು ಇಲ್ಲ. ಓದು ತಲೆಗೆ ಹತ್ಲಿ ಬಿಡ್ಲಿ ಭೂಮ್ತಾಯಿನ ನಂಬಿ ಹಳ್ಳಿಗೆ ಮರಳಿ ಬಂದವರೂ ಆಗಾಗ ಸುದ್ದಿ ಆಗ್ತಿರ್ತಾರೆ. ಇದೇ ದಾರಿಯಲ್ಲಿ ಭೂಮಿಯಲ್ಲಿ ಸಾಧನೆ ಮಾಡ್ತೀನಂತ ಬಂದ ಶ್ರೀಧರ ಕೈ ಸುಟ್ಕೊಂಡ ಪರಿಗೆ ಚಿಂತಿ ಮಾಡ್ತಾ ಮಾಡ್ತಾ ಶಂಕ್ರಪ್ಪ ಸೌಕಾರ್ರು ಎದಿ ಒಡೆದು ಪ್ರಾಣ ಬಿಡ್ತಾರೆ. ಅದನ್ನು ಭೂಮಿಸಾಲಕ್ಕೆ ಆತ್ಮಹತ್ಯೆ ಎಂದು ಪುಕಾರ್ ಎಬ್ಸಿದ್ರೆ ಪರಿಹಾರ ಬರ್ತದ ಹೆಂಗ್ ಮಾಡೋಮು ಎಂಬ ಮಾತಿಗೆ ಉತ್ತರವಾಗಿ ಶ್ರೀಧರ ತೆಗೆದುಕೊಳ್ಳುವ ನಿರ್ಧಾರವೇ ಕಥೆಯ ಶಕ್ತಿ. ” ಧಣೇರ ಬಾವಿ ” ಸಾಮಾಜಿಕ ಕಥೆ ಮತ್ತು ಆದರ್ಶಮಯವಾಗಿ ಮೂಡಿಬಂದಿದೆ.
ಒಟ್ಟ ಎಂಟು ಕಥೆಗಳನ್ನೊಳಗೊಂಡ
“ಧಣೇರ ಬಾವಿ” ಕೃತಿ; ಈಗಾಗಲೇ ರಾಜ್ಯಾದ್ಯಂತ ಪಸರಿಸಿದ್ದು ಅನೇಕರು ಅವಲೋಕಿಸಿದ್ದಾರೆ, ಕೃತಿಯ ಕುರಿತಾಗಿ ವೀಡಿಯೋ ಮೂಲಕ ಮಾತಾಡಿದ್ದೂ ನೋಡಿದ ನೆನಪು. ಏನೋ ಶರಣಬಸವ ಸರ್ ಅವರ ಕಥೆ, ಕವನಗಳು ಎಂದರೆ ಮನಸು ಓದಲು ಕೇಳಲು ಹಾತೊರೆಯುತ್ತದೆ. ಅಂತಹ ವೈಚಾರಿಕ, ವರ್ತಮಾನಿಕ ಬರಹ ಅವರದ್ದು. ಶ್ರೀಯುತರಿಂದ ಮತ್ತಷ್ಟು ಹೊಚ್ಚ ಹೊಸ ವಸ್ತು ವಿಷಯಗಳ ಕಥೆಗಳು ಮೂಡಿಬರಲಿ. ಅನೇಕಾನೇಕ ಕೃತಿಗಳು ಓದುಗರ ಕೈ ಸೇರಲಿ ಎಂದು ಆಶಿಸುತ್ತೇನೆ.
– ವರದೇಂದ್ರ ಕೆ ಮಸ್ಕಿ
9945253030
ಪುಸ್ತಕಕ್ಕಾಗಿ ಸಂಪರ್ಕಿಸಿ
—— ಶರಣಬಸವ ಕೆ ಗುಡದಿನ್ನಿ
82173 37933