ಹರ ಮುನಿದರೆ ಗುರು ಕಾಯುವನು, ಗುರು ಹಸಿದರೆ ಕಾಯುವವರು ಯಾರು?

ಹರ ಮುನಿದರೆ ಗುರು ಕಾಯುವನು, ಗುರು ಹಸಿದರೆ ಕಾಯುವವರು ಯಾರು?

ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಹರ ಕಾಯಲಾರ… ಎಂಬುದು ಗುರುವಿನ ಮಹತ್ವ ಸಾರುವ ಜನಜನಿತವಾದ ಮಾತು. ಇದೀಗ ಹೊಸ ಮಾತೊಂದು ಸೃಷ್ಟಿಯಾಗಿದೆ. ಹರ ಮುನಿದರೆ ಗುರು ಕಾಯುವನು, ಗುರು ಹಸಿದರೆ ಸರ್ಕಾರ ಕಾಯಲಾರದು? ಎಂಬುದು.

ಬಹುಶಃ ಸ್ವಾತಂತ್ರ್ಯಭಾರತದ ಇತಿಹಾಸದಲ್ಲಿ ಗುರುವಿಗೆ ಇಂತಹ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲವೇನೋ. ಕೊರೋನಾ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟು ವಿದ್ಯಾರ್ಥಿಗಳ ಭವಿಷ್ಯವೇ ತೂಗುಯ್ಯಾಲೆಯಲ್ಲಿರುವ ಈ ಸಮಯದಲ್ಲಿ, ಅವರ ಭವಿಷ್ಯ ರೂಪಿಸುವ ಗುರುಗಳ ಬದುಕೂ ಮೂರಾಬಟ್ಟೆಯಾಗಿದೆ. ಕಳೆದ ಎರಡು ವರ್ಷಗಳಿಂದ ಜೀವನ್ಮರಣದ ಶರಶಯ್ಯೆಯಲ್ಲಿ ಮಲಗಿರುವ ಅವರ ನಿತ್ರಾಣ ಬದುಕು ಸಾವಿನಲ್ಲಿ ಕೊನೆಗೊಳ್ಳುವಂತೆ ಕಾಣುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ರಾಜ್ಯ ಸರ್ಕಾರದ ನಿರ್ಲಕ್ಷ ಮತ್ತು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ.

ಸರ್ಕಾರಿ ಶಾಲೆಗಳು ತೆರೆಯಲೀ, ಮುಚ್ಚಲೀ ಅಲ್ಲಿನ ಶಿಕ್ಷಕರಿಗೆ ಸಂಬಳದ ಚಿಂತೆಯಿಲ್ಲ. ಆದರೆ ಖಾಸಗಿ ಶಾಲಾ ಶಿಕ್ಷಕರ ಗತಿ ಹಾಗಲ್ಲ. ಶಾಲೆಗಳು ತೆರೆದು, ಪಾಠ ಪ್ರವಚನಗಳು ನಡೆದು, ಪೋಷಕರು ಶುಲ್ಕ ಪಾವತಿಸಿದರೆ ಮಾತ್ರ ಅವರ ಬದುಕು ಹಸನು, ಇಲ್ಲದಿದ್ದರೆ ಬರೀ ಅವಸಾನ. ಕಳೆದ ಎರಡು ವರ್ಷಗಳಿಂದ ಅವಸಾನದ ಅಂಚಿನಲ್ಲಿ ಬದುಕುತ್ತಿರುವ ಈ ನಿಷ್ಪಾಪಿ ಶಿಕ್ಷಕರ ದಾರುಣಬದುಕು ಮತ್ತು ಆಕ್ರಂದನದಕೂಗು, ಶಿಕ್ಷಣ ಮಂತ್ರಿಗಳ ಜಾಣಕುರುಡಿಗೆ ಕಾಣಿಸುತ್ತಿಲ್ಲ, ಕಿವುಡುಕಿವಿಗೂ ಕೇಳಿಸುತ್ತಿಲ್ಲ. ಬರೀ ಕಣ್ಣೊರೆಸುವ ವಾಗ್ದಾನ ಬಿಟ್ಟರೆ ಬೇರೇನೂ ಈಡೇರುತ್ತಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಮಾತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

“ಖಾಸಗಿ ಶಾಲೆಗಳ ಮೇಲೆ ಹತ್ತಾರು ನಿಯಮಗಳನ್ನು ಏರಿ ಸಂಪೂರ್ಣ ಮಗ್ಗುಲುಮಲಗುವಂತೆ ಮಾಡಿದ ಶಿಕ್ಷಣ ಇಲಾಖೆ, ಅವರನ್ನೇ ಭಿಕ್ಷೆ ಬೇಡುವ ಹಂತಕ್ಕೆ ತಂದು ನಿಲ್ಲಿಸಿದೆ. ಹಾಗಿರುವಾಗ ಶಿಕ್ಷಕರಿಗೆ ಸಂಬಳ ಪಾವತಿಸಲು ಹೇಗೆ ಸಾಧ್ಯ” ಎಂಬುದು ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿಗಳಾದ ಡಿ. ಶಶಿಕುಮಾರ್ ರವರ ಪ್ರಶ್ನೆ.

ಸರ್ಕಾರದಲ್ಲಿ ಆರ್ ಟಿ ಐ ಮರುಪಾವತಿಯ ಹಣವಿದ್ದರೂ ಬಿಇಓ, ಡಿಡಿಪಿಐ ಗಳು ಕಮಿಷನರ್ ರಂತಹ ಮೇಲಧಿಕಾರಿಗಳ ಆದೇಶಗಳಿಗೂ ಕಿಮ್ಮತ್ತು ಕೊಡದೆ, ಯಾರ ಅಂಕೆಗೂ ಸಿಲುಕದೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಕಾರಣವೇ ಆರ್ ಟಿ ಐ ಹಣ ಬಿಡುಗಡೆಗೊಳಿಸದಿರುವ ಹಿಂದಿನ ಹಕೀಕತ್ತು ಎಂಬ ಮಾತು ಚಾಲ್ತಿಯಲ್ಲಿದೆ. ಇವತ್ತು ಶಿಕ್ಷಣ ಇಲಾಖೆಯು ಮಂತ್ರಿಗಳಿಗಿಂತಲೂ ಹೆಚ್ಚು ನಿಯಂತ್ರಣಕ್ಕೊಳಪಟ್ಟಿರುವುದು ಇವರಿಂದಲೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಜನಜನಿತವಾಗಿದೆ. ಮಂತ್ರಿಗಳ ನಿಯಂತ್ರಣವನ್ನು ಮೀರಿ ಬೆಳೆದಿರುವ ಅಧಿಕಾರಶಾಹಿ 700 ಕೋಟಿ ರೂ ಮರುಪಾವತಿ ಹಣವನ್ನು ತಮ್ಮ ಕಾಲಡಿ ಹಾಕಿಕೊಂಡು ಕುಳಿತಿದ್ದಾರೆ. ಇದಕ್ಕೆ ಕಾರಣ ನೀವೇ ಬಲ್ಲಿರಿ. ವಸೂಲಿಯೇ ಇದರ ಹಿಂದಿನ ನಿಜವಾದ ಕಾರಣ. ಇದರ ಜೊತೆಯಲ್ಲಿ ಮಂತ್ರಿಗಳು ಮತ್ತು ಅವರ ಕುಟುಂಬಸ್ಥರ ಹಸ್ತಕ್ಷೇಪವೇ ಇಲಾಖೆಯ ಇವತ್ತಿನ ಅವ್ಯವಸ್ಥೆಗೆ ಕಾರಣ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಇದು ಮಂತ್ರಿಗಳ ದ್ವಿಮುಖ ನೀತಿಗೆ ಸಾಕ್ಷಿ ಎಂಬ ಗುಸುಗುಸು ಕೂಡ ಇದೆ. ಹಾಗೆಯೇ ಎರಡು ತಿಂಗಳಿಂದ ಆರ್ ಆರ್ ಮಾಡದೆ ಫೈಲುಗಳನ್ನು ತಡೆಹಿಡಿದಿರುವುದಾದರೂ ಏತಕ್ಕೆ? ಎಂಬುದು ಇವರ ಇನ್ನೊಂದು ಪ್ರಶ್ನೆ.

ಶಿಕ್ಷಣ ಮಂತ್ರಿಗಳು ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲು ಅನುಮತಿ ನೀಡುವ ನಾಟಕವಾಡಿ, ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ಪರೀಕ್ಷೆ ಇಲ್ಲದೆ ಪಾಸು ಮಾಡುತ್ತೇವೆಂದು ಘೋಷಣೆ ಮಾಡಿ, ಪೋಷಕರು ಹಣ ಪಾವತಿಸದಂತೆ ಷಡ್ಯಂತ್ರ ಹೂಡಿ, ಖಾಸಗಿಶಾಲೆಗಳ ಇಂದಿನ ದಾರುಣಸ್ಥಿತಿಗೆ ನೇರ ಕಾರಣಕರ್ತರಾಗಿದ್ದಾರೆ “ಎಂಬುದು ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ, ಶಿಕ್ಷಕೇತರ ಸಂಘಟನೆಗಳ ವ್ಯಾಖ್ಯಾನ. ‘ಹಾವಿನ ದ್ವೇಷ ಹನ್ನೆರಡು ವರ್ಷ’ ಎಂಬ ಮಾತಿನಂತೆ, ‘ಶಿಕ್ಷಣ ಮಂತ್ರಿಗಳ ದ್ವೇಷ, ಖಾಸಗಿ ಶಾಲೆಗಳ ಸರ್ವನಾಶ’ ಎಂಬಂತೆ ಶಿಕ್ಷಣ ಸಚಿವರು ವರ್ತಿಸುತ್ತಿದ್ದಾರೆ ಎಂಬುದು ಅವರ ಆರೋಪ.

“ನಮ್ಮ ಸಹಾಯಕ್ಕೆ ಬರುವಂತೆ ಅನೇಕ ಬಾರಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದೇವೆ, ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಮಾರುತ್ತಾ ಬದುಕುತ್ತಿರುವ ನಮ್ಮ ಯಾತನಾಮಯ ಬದುಕನ್ನು ಜಗಜ್ಜಾಹೀರು ಮಾಡಿದ್ದೇವೆ, ನೇರವಾಗಿ ಶಿಕ್ಷಣ ಮಂತ್ರಿಗಳಿಗೇ ನಮ್ಮ ಅಹವಾಲನ್ನು ಹೇಳಿಕೊಂಡಿದ್ದೇವೆ, ನಮ್ಮ ಕಷ್ಟ ಕಾರ್ಪಣ್ಯಗಳನ್ನು ಅವರ ಮುಂದೆಯೇ ಅವಲತ್ತುಕೊಂಡಿದ್ದೇವೆ. ಆದರೂ ಅವರ ಹೃದಯ ಕರಗಲಿಲ್ಲವೆಂದರೆ ಇನ್ನೆಂತಹ ಕಲ್ಲು ಹೃದಯ ಅವರದು” ಎಂಬುದು ಸಾವಿರಾರು ಶಿಕ್ಷಕರ ನೋವಿನ ನುಡಿಗಳಾಗಿವೆ. “ಸಮಾಜದ ಎಲ್ಲಾ ನೊಂದವರ್ಗಗಳು ಇವರ ಕಣ್ಣಿಗೆ ಕಾಣಿಸುತ್ತವೆ, ಆದರೆ ನಮ್ಮ ಮೇಲೇಕೆ ಮಲತಾಯಿ ಧೋರಣೆ? ನಾವು ಈ ದೇಶದ ಪ್ರಜೆಗಳಲ್ಲವೆ?” ಎಂಬುದು ಇವರ ಬೇಸರದ ನುಡಿಗಳು. “1250 ಕೋಟಿ ರೂಗಳ ಕೋವಿಡ್ ಪರಿಹಾರ ಪ್ಯಾಕೇಜ್ನಲ್ಲಿ ನಮಗೂ ಒಂದಷ್ಟು ನೆರವು ನೀಡಿದ್ದರೆ ನಾವು ಇತರರಂತೆ ಹೇಗೋ ಬದುಕುತ್ತಿರಲಿಲ್ಲವೇ” ಎಂಬುದು ಇವರ ಕಣ್ಣೀರಿನ ಕಥೆ.

‘ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಆಡಳಿತಪಕ್ಷದ ಅಭ್ಯರ್ಥಿಗಳೇ ಅತಿಹೆಚ್ಚು ಸ್ಥಾನ ಜಯಗಳಿಸಿದರೂ, ನಮ್ಮ ದಯನೀಯ ಸ್ಥಿತಿಯನ್ನು ಸುಧಾರಿಸಲಿಲ್ಲ’ ಎಂಬುದು ಶಿಕ್ಷಕರ ಆರೋಪವಾಗಿದೆ. ಹಾಗಾಗಿಯೇ ಅವರುಗಳು ಶಿಕ್ಷಕರ ಕ್ಷೇತ್ರದಿಂದ ಗೆದ್ದು ಹೋದ ಎಲ್ಲಾ ಎಂ ಎಲ್ ಸಿಗಳ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ. ‘ನಮ್ಮ ಹಿತ ಕಾಯದ ನೀವು ಇದ್ದರೆಷ್ಟು ಹೋದರೆಷ್ಟು’ ಎಂಬುದು ಅವರ ಪ್ರಶ್ನೆಯಾಗಿದೆ. “ಪಡೆದಿದ್ದೀರಿ ನಮ್ಮ ಮತ, ಕಾಯಿರಿ ನಮ್ಮ ಹಿತ, ಇಲ್ಲದಿದ್ದರೆ ಹಾಕಿರಿ ರಾಜೀನಾಮೆಗೆ ನಿಮ್ಮ ಅಂಕಿತ” ಎಂಬುದು ಎಲ್ಲಾ ಸಂಘಟನೆಗಳ ಕೊತಕೊತ. ಹೀಗಾಗಿಯೇ ಬಸವರಾಜ ಹೊರಟ್ಟಿ ಅವರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಪುಟ್ಟಣ್ಣನವರು ರಾಜೀನಾಮೆಗೆ ಮುಂದಾಗಿದ್ದಾರೆ. ಉಳಿದವರು ಇನ್ನೂ ಮೌನವ್ರತದಲ್ಲಿದ್ದಾರೆ.

“ಶಿಕ್ಷಣ ಮಂತ್ರಿಗಳು ರಾಜೀನಾಮೆಯ ಮಾತನಾಡಿದ್ದಾರೆ. ಈ ನಾಟಕವೇತಕ್ಕೆ? ನಿಜವಾಗಿಯೂ ನಿಮಗೆ ಶಿಕ್ಷಕರ ಬಗ್ಗೆ ಕಳಕಳಿಯಿದ್ದರೆ ರಾಜೀನಾಮೆ ಕೊಟ್ಟುಬಿಡಿ ಪ್ಲೀಸ್” ಎಂಬುದು ಇವರೆಲ್ಲರ ಕೋರಿಕೆಯಾಗಿದೆ. ಬರಿಯ ಬಾಯಿ ಮಾತಲ್ಲಿ ಶಿಕ್ಷಕರಿಗೆ ಏನೆಲ್ಲ ಮಾಡಿದ್ದೀನಿ ಎಂದು ಕೊಚ್ಚಿಕೊಳ್ಳುವ ಶಿಕ್ಷಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಯಾವುದಾದರೂ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬರಲಿ ನೋಡೋಣ ಎಂಬುದು ಇವರ ಸವಾಲು. ಇಲ್ಲಿಯವರೆಗೂ ಅನೇಕ ಭರವಸೆಗಳನ್ನು ನೀಡಿ ಮಾತು ತಪ್ಪಿರುವ ಶಿಕ್ಷಣ ಸಚಿವರು ರಾಜೀನಾಮೆ ವಿಷಯದಲ್ಲೂ ಮಾತು ತಪ್ಪಿದ್ದಾರೆ ಎಂಬುದು ಇವರೆಲ್ಲರ ವಾದ. ಅವರೆಂದಿಗೂ ರಾಜೀನಾಮೆ ನೀಡುವುದಿಲ್ಲ, ಸುಮ್ಮನೆ ಸಿಂಪಥಿಗೆ ಈ ರೀತಿ ನಾಟಕವಾಡುತ್ತಾರೆ ಎಂಬುದು ಇವರುಗಳ ಅಂಬೋಣ. ಇವರ ಮೇಲಿನ ಮತ್ತೊಂದು ಗುರುತರ ಆರೋಪ, ತಾವು ಮುಗ್ಧರಂತೆ, ಮೌನಿಯಂತೆ ವರ್ತಿಸುತ್ತಾ ತಮ್ಮ ಸಂಪರ್ಕದಲ್ಲಿರುವ ಅನೇಕ ಸಂಘಟನೆಗಳ ಮುಖಾಂತರ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಸುವ ಅತೀ ಬುದ್ಧಿವಂತಿಕೆ ತೋರಿಸುತ್ತಾರೆ ಎಂಬುದು.

ರಾಜಾಜಿನಗರದ ತಮ್ಮ ಮನೆಯಿಂದ ಮುಖ್ಯಮಂತ್ರಿಗಳ ಕಚೇರಿಗೆ ತೆರಳಲು ಇವರಿಗೆ ಎಷ್ಟು ಸಮಯ ಬೇಕು? ನೇರವಾಗಿ ತೆರಳಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಪ್ಯಾಕೇಜ್ ಘೋಷಿಸುವ ಬದಲಿಗೆ ಪತ್ರ ಬರೆಯುವ ನಾಟಕವೇತಕ್ಕೆ? ಎಂಬುದು ಸಂಘಟನೆಗಳ ಆಕ್ರೋಶ. ರಾಜಾಜಿನಗರ ಇರುವುದು ಬೆಂಗಳೂರಿನಲ್ಲಿಯೊ? ಅಥವಾ ದೂರದ ಬೀದರ್ ನಲ್ಲಿಯೊ? ಎಂಬುದು ಇವರ ತರ್ಕಬದ್ಧ ವಾದ. ಒಂದು ವೇಳೆ ದೂರದ ಬೀದರ್ ನಲ್ಲಿದ್ದರೆ ಪತ್ರ ಬರೆಯುವುದರಲ್ಲಿ ತಪ್ಪಿಲ್ಲ, ಆದರೆ ಕಾಲ್ನಡಿಗೆಯ ದೂರದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆಯುವುದು ಇವರ ಸೋಗಲಾಡಿತನದ ಸಂಕೇತ ಎಂಬುದು ಅವರ ಆರೋಪ. ಅಷ್ಟಕ್ಕೂ ಮಂತ್ರಿಮಂಡಲದಲ್ಲಿ ಚರ್ಚಿಸಿಯೇ ಈ ಪ್ಯಾಕೇಜ್ ತೀರ್ಮಾನ ಜಾರಿಗೆ ಬಂದಿರುತ್ತದೆ.ಆಗ ಖಾಸಗಿ ಶಾಲಾಶಿಕ್ಷಕರ ಸಮಸ್ಯೆಯ ಬಗ್ಗೆ ಸೊಲ್ಲೆತ್ತದೆ, ಇದೀಗ ಪತ್ರ ಬರೆಯುವ ನಾಟಕ ಏತಕ್ಕೆ? ಎಂಬುದು ಇವರ ಆರೋಪದ ಹಿಂದಿನ ಸತ್ಯಾಸತ್ಯತೆ.

ಅಷ್ಟಕ್ಕೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಅವಶ್ಯಕತೆ ಏನಿತ್ತು ಎಂಬುದು ಇನ್ನೊಂದು ಗುಂಪಿನ ವಾದ. ವಾರ್ಷಿಕವಾಗಿ ಸುಮಾರು 25 ಸಾವಿರ ಕೋಟಿಗೂ ಹೆಚ್ಚು ಅನುದಾನ ಪಡೆಯುವ ಶಿಕ್ಷಣ ಇಲಾಖೆಯಲ್ಲಿ, ಮನಸ್ಸಿದ್ದರೆ ಮಾರ್ಗ ಎಂಬ ರೀತಿಯಲ್ಲಿ, ಮಾನವೀಯತೆ ದೃಷ್ಟಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲವೇ? ಎಂಬುದು ಈ ಗುಂಪಿನ ವಾದ. ಎರಡು ವರ್ಷಗಳಿಂದ ಬಿಸಿಯೂಟ, ಕ್ಷೀರಭಾಗ್ಯ,ಮೊಟ್ಟೆ ವಿತರಣೆ, ಶಾಲಾ ಬ್ಯಾಗ್, ಶೂಗಳು, ಸಾಕ್ಸ್ ವಿತರಣೆಯ ಜೊತೆಗೆ ಹತ್ತು ಹಲವಾರು ಯೋಜನೆಗಳು, ತರಬೇತಿಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅವುಗಳ ಹಣ ಏನಾಯಿತು? ಇವುಗಳೆಲ್ಲದರ ಮೊತ್ತದಲ್ಲಿ ಸ್ವಲ್ಪ ಭಾಗವನ್ನಾದರೂ ನೀಡಿದ್ದರೆ ಖಾಸಗಿ ಶಾಲಾ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಯ ಬದುಕು ಹಸನಾಗುತ್ತಿತ್ತು ಎಂಬುದು ಎಲ್ಲರ ಬಾಯಿಂದ ಹೊರಡುವ ಮಾತಾಗಿದೆ. ಆದರೆ ಈ ಎಲ್ಲಾ ಯೋಜನೆಗಳಲ್ಲಿ ಸಿಗಬಹುದಾದ ಕಮಿಷನ್ ಹಣ, ಶಿಕ್ಷಕರಿಗೆ ಸಹಾಯ ಮಾಡುವುದರಿಂದ ಸಿಗುವುದಿಲ್ಲವೆಂಬ ಒಂದೇ ಒಂದು ಕಾರಣವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬುದು ಇವರೆಲ್ಲರ ವಾದ.

ಮೋದಿಜಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾತಿನ ಅರ್ಥ ಇದೇನಾ? ಎಂಬುದು ಇವರ ಪ್ರಶ್ನೆ. ನಾವೆಲ್ಲ ಶಿಕ್ಷಕರಾಗಿದ್ದೇ ತಪ್ಪೆ? ಶಿಕ್ಷಣದ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದೇ ತಪ್ಪೆ? ತಪ್ಪೆಂದು ಶಿಕ್ಷಣ ಮಂತ್ರಿಗಳು ಸ್ಪಷ್ಟನೆ ನೀಡಿದರೆ ಈ ಕೂಡಲೇ ಶಿಕ್ಷಕ ವೃತ್ತಿಯನ್ನು ತೊರೆದು ಕೂಲಿನಾಲಿ ಮಾಡಿ ಬದುಕಿಕೊಳ್ಳುತ್ತೇವೆ ಎಂಬುದು ಇವರ ನಿಲುವು. ಸಹಸ್ರಾರು ವರ್ಷಗಳಿಂದ, ಋಷಿಮುನಿಗಳ ಕಾಲದಿಂದ, ಗುರುಕುಲಗಳ ಪದ್ಧತಿಯಿಂದ ನಮ್ಮ ನಾಡು ಕಟ್ಟಿಕೊಂಡು ಬಂದಿದ್ದ ಗುರುವಿನ ಬಗೆಗಿನ ಅಪಾರ ಗೌರವವನ್ನು ಸಂಪೂರ್ಣ ಮಣ್ಣು ಪಾಲು ಮಾಡಿದ ಶ್ರೇಯಸ್ಸು ಈಗಿನ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರಿಗೆ ಸಲ್ಲುತ್ತದೆ ಎಂಬುದು ಇವರ ನೇರಾನೇರ ಖಡಕ್ ಮಾತು.

ಗುಡಿ ಚರ್ಚು ಮಸೀದಿಗಳು ಬೇಡ, ಶಿಕ್ಷಣ, ಶಿಕ್ಷಕರು, ವಿದ್ಯಾಸಂಸ್ಥೆಗಳು ಬೇಡ, ಆದರೆ ಇವರಿಗೆ ಬಾರುಗಳ ಕಾರುಬಾರು ಬೇಕು. ಇದು ಸರ್ಕಾರದ ಧ್ಯೇಯ. ಬಹುಶಃ ಸರ್ಕಾರವೊಂದು ತುಳಿಯಬಹುದಾದ ಅದಃಪತನದ ಪಥಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಸರ್ಕಾರ ನಡೆದಿದ್ದೇ ದಾರಿ ಎಂಬಂತಾಗಿದೆ, ಸೂಕ್ಷ್ಮತೆಯನ್ನೇ ಕಳೆದುಕೊಂಡವರು ರಾಜ್ಯವನ್ನು ಆಳುತ್ತಿದ್ದಾರೆ. ‌ ಸರಕಾರದ ನೇತಾರರಿಗೆ ಮಾರ್ಗದರ್ಶಕರು ಇಲ್ಲದಂತಾಗಿದ್ದಾರೆ ಎಂಬುದು ಇವರೆಲ್ಲರ ವಿಶ್ಲೇಷಣೆ.

ಶಾಲಾ ಶುಲ್ಕದಲ್ಲಿ ರಿಯಾಯಿತಿ, ಶುಲ್ಕ ಕಟ್ಟದಿದ್ದರೆ ಒತ್ತಾಯಿಸುವಂತಿಲ್ಲ, ಒತ್ತಾಯಿಸಿದರೂ ಆನ್ಲೈನ್ ತರಗತಿಯಿಂದ ಅವರನ್ನು ತೆಗೆಯುವಂತಿಲ್ಲ. ಅಸಲಿಗೆ ಆನ್ಲೈನ್ ತರಗತಿಗಳು ಮಕ್ಕಳ ಆರೋಗ್ಯಕ್ಕೆ ಹಾನಿಕರ ಎಂಬ ವಾದವನ್ನು ಮಂಡಿಸುತ್ತಲೇ,ನಿಮ್ಮ ಮಕ್ಕಳನ್ನು ಶುಲ್ಕ ಕಟ್ಟಿ ಶಾಲೆಗೆ ಸೇರಿಸುವ ತುಡಿತವಿಲ್ಲದಿದ್ದರೂ ಪರವಾಗಿಲ್ಲ, ನೀವು ದುಡಿದ ಹಣವನ್ನು ಕುಡಿತಕ್ಕೆ ಕೊಟ್ಟು ನಿಮ್ಮ ಇಷ್ಟಬಂದಷ್ಟು ಕುಡಿದು ನಿಮ್ಮ ಬಾಳನ್ನು ಹಾಳು ಮಾಡಿಕೊಳ್ಳಿ ಎಂಬುದು ಸರ್ಕಾರದ ನಿಲುವೇನು? ಎಂಬ ಅಡ್ಡಪ್ರಶ್ನೆ ಇವರದು. ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಿದ ಶುಲ್ಕ ವಿನಾಯಿತಿಯನ್ನು ಕಾಲೇಜು,ಪದವಿ ಮಕ್ಕಳಿಗೆ ಏಕೆ ನೀಡಲಿಲ್ಲ? ಎಂಬುದು ಇನ್ನೊಂದು ತರ್ಕ. ಹಾಗಾದರೆ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಶ್ರೀಮಂತರೇ? ಅವರ ಬಳಿ ಕಾಲೇಜ್ ಶುಲ್ಕ ಪಾವತಿಸುವಷ್ಟು ಹಣವಿದೆಯೆಂದು ಹೇಗೆ ತೀರ್ಮಾನಿಸಿದರು? ಎಂಬುದು ಮತ್ತೊಂದು ಮಹತ್ವದ ಪ್ರಶ್ನೆ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಓದುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಏರಿಸಿದೆಯಲ್ಲ, ಯಾಕೆ ಈ ತಾರತಮ್ಯ? ಎಂಬುದು ಇನ್ನೊಂದು ಅರ್ಥಪೂರ್ಣ ವಾದ.

ಕಳೆದ ಬಾರಿಯ ಲೇಖನದಲ್ಲಿ ನಾನು ಶಿಕ್ಷಣ ಮಂತ್ರಿಗಳಿಗೆ ನೇರವಾಗಿ ಪ್ರಶ್ನಿಸಿದ್ದೆ. ಬೇರೆ ಎಲ್ಲಾ ದುಂದುವೆಚ್ಚಗಳಿಗೂ ಸರ್ಕಾರದಲ್ಲಿ ದುಡ್ಡಿದೆ, ಮಂತ್ರಿಗಳು ಹೊಚ್ಚಹೊಸ ಕಾರುಗಳನ್ನು ಕೊಳ್ಳಲು ಇದ್ದ ಹಣದ ಮಿತಿಯನ್ನು ಏರಿಸಲು ನಿಮ್ಮಲ್ಲಿ ದುಡ್ಡಿದೆ. ಆದರೆ ಈ ಸಮಾಜದ ಅತ್ಯಮೂಲ್ಯ ಆಸ್ತಿಯಾದ ಶಿಕ್ಷಕರಿಗೆ ಸಹಾನುಭೂತಿಯ ಕೊಡುಗೆ ನೀಡಲು ಮಾತ್ರ ನಿಮ್ಮಲ್ಲಿ ದುಡ್ಡಿಲ್ಲವೆ? ಎಂದು. ಆದರೆ ಇಲ್ಲಿಯವರೆಗೂ ನೆಪದಲ್ಲೇ ಕಾಲ ಉರುಳಿತೇ ಹೊರತು ಖಾಸಗಿ ಶಾಲಾ ಶಿಕ್ಷಣ ಮಂಡಳಿಗಳ ಹಾಗೂ ಶಿಕ್ಷಕರ ಸಮಸ್ಯೆ ಬಗೆಹರಿಯಲಿಲ್ಲ. ಇದೀಗ ಮತ್ತದೇ ಪ್ರಶ್ನೆ ಕೇಳುತ್ತಿದ್ದೇನೆ. ಸಂಕಷ್ಟದ ಜೀವನ ಸಾಗಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯ ಮಾಡಲು ನಿಮ್ಮಲ್ಲಿ ದುಡ್ಡಿಲ್ಲವೇ ಅಥವಾ ಮನಸ್ಸಿಲ್ಲವೇ? ಈ ಕೂಡಲೇ ಸ್ಪಷ್ಟಪಡಿಸಿ. ಮನಸ್ಸಿದ್ದು ದುಡ್ಡಿಲ್ಲದಿದ್ದರೆ ಯಾವುದಾದರೂ ಮೂಲದಿಂದ ಹಣ ಹೊಂಚಿಸುವುದು ಕಷ್ಟವೇನಲ್ಲ. ಆದರೆ ದುಡ್ಡಿದ್ದು ಮನಸ್ಸಿಲ್ಲದಿದ್ದರೆ ಅದು ವಕ್ರಬುದ್ಧಿ. ಈ ವಕ್ರಬುದ್ಧಿಗೆ ಆಗಲೇಬೇಕು ಮನಃಶುದ್ಧಿ. ಅದನ್ನು ನಿರೀಕ್ಷಿಸೋಣವೆ? ಎಲ್ಲರ ನಿರೀಕ್ಷೆಗಳು ಹುಸಿಯಾದಾಗ ಚುನಾವಣಾ ಸಮಯ ಬಂದೇ ಬರುತ್ತದೆ.
ಕಾಲಾಯ ತಸ್ಮೈ ನಮಃ.

 


ಮಣ್ಣೆ ಮೋಹನ್
ವಿಳಾಸ: ನಂ.9, ಚಂದನ ನಿಲಯ
2 ನೇ ಅಡ್ಡರಸ್ತೆ, ಪ್ರಗತಿ ನಗರ,
ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್,
ಬೆಂಗಳೂರು-560 100
ಫೋನ್: 6360507617
email: mohan68micropower@gmail.com

Don`t copy text!