ಲಿಂಗ ಕಳೆಯ ಶಿವಯೋಗ ಬೆಳಕು
ಕೊಳೆಯಿಲ್ಲದ ಬೆಳಕುಂಡರೂ
ಕಳೆಯಿಲ್ಲದ ಬಾಳು ಕಳವಳಿಸುತಿರಲು,
ಬಂದವನು ಬಸವಯ್ಯ
ಇಳೆಯನು ನಳನಳಿಸಲು…
ಸಕಲ ಜೀವರಾಶಿಗೆಲ್ಲ ಹಸನ ಬಾಳು ತೋರಲು,
ಅಕಲಂಕ ದೇವ ನಮ್ಮ ಅಂಗೈಯೊಳು ನೆಲೆಸಲು,
ಕುಲಛಲದ ಹಮ್ಮು ಬಿಮ್ಮು ಅಳಿದು ಪ್ರೀತಿ ಅರಳಲು,
ಕಲ್ಯಾಣವಾಯ್ತು ನೆಲದ ಬಾಳು
ಕಾಯಕವು ಮೆರೆಯಲು.
ಜಗದ ಎಲ್ಲ ಹೊಲ್ಲನಳಿದ
ಅಲ್ಲಯ್ಯನು ಮೈದಾಳಲು,
ಶರಣಗಣದ ಶೂನ್ಯ ಪೀಠ
ಆತನಿಗಾಗಿ ಹಂಬಲಿಸಲು,
ಹಲವು ಶಂಕೆಯಳಿದ ಚಿತ್ತದಿಂದ
ಶೂನ್ಯ ಭಾವ ತುಂಬಲು,
ಬಾನಕಾಯ ರೂಪಿ ಪ್ರಭುವು
ಶರಣರಿಗೆ ಹಿರಿಯನಾಗಲು,
ಮೈಯ ತುಂಬ ಯೋಗ ಬಲವು
ಕೈಯೊಳ್ಹಿಡಿದ ಜೋಳಿಗೆ
ಲಿಂಗ ಕಳೆಯ ಶಿವಯೋಗ ಬೆಳಕು
ಹರಡಿತು ಜಗದ ಬಾಳಿಗೆ..
ಜಗದ ದುಃಖ ಅಳಿಯಲೆಂದು
ಬಸವ ಕೊಟ್ಟ ಜೋಳಿಗೆ
ಅಲ್ಲಯ್ಯನು ಹಿಡಿದು ಹೊರಟ
ಆಯಿತು ಜೀವದೇಳಿಗೆ….
ಕಾಲ ಉರುಳಿ ಋತುವು ಮರಳಿ
ಜೀವ ನರಳಿತು ಹೊರಳಿ ಹೊರಳಿ
ಬಸವ ಬಸವ ಎಂದು ಒರಲಿ
ಬಸವಳಿಯಿತು ಬಾಳಲಿ..
ಜಗದ ಜೀವ ಬಾಳಲೆಂದು
ಬಸವನೊಸೆದ ಅಲ್ಲಮಗೆ ಅಂದು
ಕೃಷ್ಣ ತಟದ ಚಿತ್ತರಗಿಗೆ
ಚಿತ್ತಜಾರಿಯೊಲಿದು ಬಂದು
ಚಳಿಗೆ ಮಳಿಗೆ ಅಳುಕದಂತೆ
ಕೊಳಕುತನಕೆ ಎಳಸದಂತೆ
ಲಿಂಗ ನಿಲುವು, ಶಿವಯೋಗ ಬಲವು
ಮೈದಾಳಿತು ಅಲ್ಲಮನ ಒಲವು..
ಕಾಯಬಳಲಿದವರ ಕಾಡಿ
ಅನ್ನ ಹೊನ್ನಿನ ಆಸೆ ದೂಡಿ
ಹಾಳು ಮಾಡ್ವ ವ್ಯಸನ ಬೇಡಿ
ಬಂದ ಮಹಾಂತ ಓಡಿ ಓಡಿ
ಅಲ್ಲಯನಿತ್ತ ಜೋಳಿಗೆ
ತುಂಬಿತೀಗ ನೋಡಿ ನೋಡಿ…..
ಬಾಳಬವಣೆಯ ದೂಡಲೆಂದು
ಬೆತ್ತವಿಡಿದು ನಡೆದಾಡಿದರಂದು
ಪಾದವಿಟ್ಟ ನೆಲದ ತುಂಬಾ
ಕಲ್ಯಾಣವೇ ತುಂಬಿಕೊಂಡು
ಕಸವು ಕೊಚ್ಚಿ ತಿಳಿಯಾಯ್ತು ನೀರು
ಲಿಂಗನಿಲುವಿನೇ’ಕಾಂತ’ಕೊಲಿದು
ಬಿಸಿಲ ಬಾಳಿಗಾಯ್ತು ಸೂರು…
ಎಲ್ಲಾ ಅಂತೆ ಕಂತೆಯಳಿದು
ಬರುವ ‘ಮಹಾಂತ’ಜಗದ ಗುರುವು
ಕುಲಛಲಗಳನಳಿದು ನಾವು
ಬಾಗುವೆವು ಈ ಬಸವಗೊಲಿದು
ನಮೋ ವಿಜಯ ಮಹಾಂತ
ಚಿತ್ತರಗಿಯ ಮಹಾಸಂತ
ನಮ್ಮ ಶ್ರೀ ಗುರು ಮಹಾಂತ.
-ಕೆ.ಶಶಿಕಾಂತ
ಲಿಂಗಸೂಗೂರ
ಶ್ರೀ ಮಹಾಂತರ ಕುರಿತಾದ ಅರ್ಥಪೂರ್ಣ ಕವಿತೆ ಸರ್