e-ಸುದ್ದಿ ಮಸ್ಕಿ
ಮಸ್ಕಿ ಕ್ಷೇತ್ರ ಒಳಗೊಂಡಂತೆ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಕುಡಿವ ನೀರಿನ ಯೋಜನೆಗೆ 1988 ಕೋಟಿ ರೂ. ಹಣವನ್ನು ಸÀರ್ಕಾರ ಬಿಡುಗಡೆ ಮಾಡಿದ್ದು ಜನರ ಪರವಾಗಿ ಕೃತಜ್ಞತೆ ಹೇಳುವೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಮಸ್ಕಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಲಜೀವನ್ ಮೀಷನ್ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಈ ಅನುದಾನ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ಹಲವು ಗ್ರಾಮಗಳಿಗೆ ಈ ಯೋಜನೆಯಲ್ಲಿ ಶುದ್ಧ ಕುಡಿವ ನೀರಿನ ಭಾಗ್ಯ ದೊರೆತಿದೆ. ಹಲವು ವರ್ಷಗಳಿಂದ ಇಲ್ಲಿನ ಹಳ್ಳಿಗಳಿಗೆ ಶುದ್ಧ ಕುಡಿವ ನೀರಿನ ಸೌಕರ್ಯವಿರಲಿಲ್ಲ. ಆದರೆ ಈಗ ಬಹುಕೋಟಿ ಮೊತ್ತ ಬಿಡುಗಡೆಯಿಂದ ಇನ್ನು ಮೂರು ವರ್ಷದಲ್ಲಿಯೇ ಈ ಭಾಗದಲ್ಲಿ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿವ ನೀರು ದೊರೆಯಲಿದೆ ಎಂದು ಹೇಳಿದರು.
ಅಗತ್ಯ ಕ್ರಮ: ಮಸ್ಕಿಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಈಗಾಗಲೇ ಅಧಿಕಾರಿಗಳ ಸಭೆ ಮಾಡಲಾಗಿದ್ದು, ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವುದು ಸೋಂಕಿತರ ಆರೈಕೆ, ಸೂಕ್ತ ಚಿಕಿತ್ಸೆಗಾಗಿ ನಿರ್ದೇಶನ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿ ಕರೊನಾ ಹಬ್ಬದಂತೆ ಗ್ರಾಮ ಮಟ್ಟದಲ್ಲೂ ಟಾಸ್ರ್ಕ್‍ಫೋರ್ಸ್ ಸಮಿತಿ ರಚನೆ ಮಾಡಲಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ಎಲ್ಲ ಕಡೆ ಸ್ಯಾನಿಟೈಸರ್ ಮಾಡುವುದು ಸೇರಿ ಎಲ್ಲ ರೀತಿಯಿಂದಲೂ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಸ್ಕಿ ತಾಲೂಕು ಕೇಂದ್ರ ಸೇರಿ ಕೆಲವು ಕಡೆಗಳಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜತೆ ಚರ್ಚೆ ಮಾಡಿದ್ದು ಕೂಡಲೇ ವೈದ್ಯರ ನೇಮಕದ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ಸಮಸ್ಯೆ: ಸ್ಪೀಕರ್ ಮತ್ತು ಉಪ ಸ್ಪೀಕರ್ ಅವರಿಗೆ ಕೋವಿಡ್-19 ಪಾಸಿಟಿವ್ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕಾರಕ್ಕೆ ವಿಳಂಬವಾಗಿದೆ. ಇನ್ನು ಕೆಲ ದಿನಗಳ ಬಳಿಕ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಸಿಗಲಿದೆ. ಆದರೆ ಪ್ರಮಾಣ ವಚನ ಸ್ವೀಕಾರದವರೆಗೂ ಕಾಯದೇ ಈಗಾಗಲೇ ಕ್ಷೇತ್ರದಲ್ಲಿ ಹಲವು ರೀತಿ ಕೆಲಸ ಮಾಡಲಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಶ್ರೀಶೈಲಪ್ಪ ಬ್ಯಾಳಿ, ಬಸವಂತರಾಯ ಮಟ್ಟೂರು ಸೇರಿ ಹಾಗೂ ಇತರರು ಇದ್ದರು.
———————————————————-
ಬಿತ್ತನೆ ಬೀಜಕ್ಕೆ ವ್ಯವಸ್ಥೆ
ಮುಂಗಾರು ಮಳೆ ಆರಂಭವಾಗಿದ್ದು ಈಗಾಗಲೇ ಕೃಷಿ ಚಟುವಟಿಕೆ ಆರಂಭವಾಗಿವೆ. ಮಸ್ಕಿ ತಾಲೂಕಿನಲ್ಲಿ ಯಾವುದೇ ರೀತಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಸಕಾಲದಲ್ಲಿ ಬಿತ್ತನೆ ಬೀಜ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಆರ್.ಬಸನಗೌಡ ತುರುವಿಹಾಳ ಹೇಳಿದರು.