ಬಾಳಿನಡೆಗೆ
ಕವನ ಸಂಕಲನದ ಒಂದು ವಿಮರ್ಶೆ
ಒಬ್ಬ ಪ್ರಬುದ್ಧ ಕವಿಗಳಾಗಿ, ಬರಹಗಾರರಾಗಿ ಗುರುತಿಸಿಕೊಂಡ ಕೆ .ಶಶಿಕಾಂತವರು ಕಷ್ಟ ಕೋಟಲೆಗಳ ಸಂಘರ್ಷದಲ್ಲಿ ಉಂಡ ನೋವಿನ ಹಸಿಹಸಿ ಅನುಭವಗಳನ್ನು ,ಮಾನವೀಯ ಮಿಡಿತಗಳನ್ನ ಅತ್ಯಂತ ಹೃದಯ ಸ್ಪರ್ಶಿ ಆಗಿ ಇಲ್ಲಿ ವ್ಯಕ್ತಪಡಿಸಿದ್ದಾರೆ. ವ್ಯವಸ್ಥೆಯ ಹೀನ ಮುಖವನ್ನು ಕಾವ್ಯದಲ್ಲಿ ಹದವಾಗಿ ಒಡಮೂಸಿದ್ದು ಅವು ಸಾಮಾನ್ಯರ ಬದುಕಿನ ಭಾಗವೇ ಆಗಿದ್ದರಿಂದ ಹೃದಯದ ಕದವನ್ನು ಸಹಜವಾಗಿ ತಟ್ಟುವವು. ಶರಣ ಸಾಹಿತ್ಯವು ಇವರ ಅಧ್ಯಯನದ ನೆಲೆಯೂ ಆಗಿರುವುದರಿಂದ , ವಚನಗಳ ವೈಚಾರಿಕ ಅಂಶಗಳು ಅಲ್ಲಲ್ಲಿ ಮಿಂಚಿ ಮಾಯವಾಗುತ್ತವೆ. ಇವರ ಕಾವ್ಯದ ಲಯ, ಗತ್ತು ಹಾಗೂ ಒಳನೋಟಗಳು ಪ್ರಜ್ಞೆಯ ನೆಲೆಯಲ್ಲಿ ವಿಸ್ತಾರವನ್ನು ಕಾಣುವವು. ಅಂಥವಲ್ಲಿ ಕೆಲವನ್ನು ಇಲ್ಲಿ ವಿಮರ್ಶಿಸಬಯಸುವೆ.
(ಕವಿ-ಡಾ.ಕೆ. ಶಶಿಕಾಂತ ಲಿಂಗಸುಗೂರು)
“ಹೊಟ್ಟೆ ಹಸಿವಿಗೆ ತಿಂದವರು ರಟ್ಟೆಯ ಕಸುವನು ತಿಳಿಯದವರು ಬೆಟ್ಟದ ಕಲ್ಲುಗಳನ್ನು ಹೇಗೆ ಎತ್ತಿ ಎಸೆದರು”. ಎಂಬ ಸಾಲುಗಳು ಯಾವ ಭಾರಿ ಭಕ್ಷ್ಯ ಭೋಜನಗಳನ್ನು ಕಂಡರಿಯದವರು ಬಾಯಿ ರುಚಿಸುವ ಊಟೋಪಚಾರ ಇಲ್ಲದವರು ಹಸಿವನ್ನು ನೀಗಿಸಿಕೊಳ್ಳಲು ಉಣ್ಣುವವರಾದ ಶ್ರಮಿಕರು, ಬಡತನವನ್ನೇ ಹಾಸಿಕೊಂಡು ಹೊದ್ದುಕೊಂಡಿರುವ ಜೀವಗಳಲ್ಲಿ ಅದೆಂಥ ದೈತ್ಯ ಶಕ್ತಿ ಅಡಗಿರುವುದು ಬಂಡೆಗಲ್ಲುಗಳನ್ನು ಸಹಜವಾಗಿ ಎತ್ತಿ ಎಸೆವ ಇವರು ತಮ್ಮ ಶಕ್ತಿಯ ಬಗ್ಗೆ ತಾವೇ ಅರಿಯರು. ಗೊತ್ತಿಲ್ಲ ಗುರಿಯಿಲ್ಲ ಕೆಲಸ ಬಂದತ್ತ ಸಾಗುವ ಅಲೆಮಾರಿಗಳು ಇವರು. ಮೈಮುರಿಯುವಷ್ಟು ಕೆಲಸ ಅದರಿಂದ ಒಂದು ತುತ್ತು ಅನ್ನ ಅಷ್ಟೇ ಇವರ ಬದುಕು. ಅಸಾಧ್ಯವಾದ ಬಂಡೆಗಲ್ಲುಗಳನ್ನು ಸರಿಸಿ ಸರಳ ದಾರಿ ಮಾಡುವ ಇವರು ತಮ್ಮ ದಾರಿಯನ್ನೇ ಅರಿಯರು. “ಬಾಳ ದಾರಿ ತಿಳಿಯದವರು ಬಂಡಿ ದಾರಿ ತಿಳಿಗೊಳಿಸಿದವರು” ಎನ್ನುವ ಸಾಲುಗಳು ಶ್ರಮಿಕರ ಶ್ರಮದ ಬದುಕಿನ ಕಥೆ ವ್ಯಥೆಯನ್ನು ಮನಮುಟ್ಟುವಂತೆ ಬಿಚ್ಚಿಡುವವು. ಅವರ ಸೂಕ್ಷ್ಮ ನೋಟ, ಮಾನವೀಯ ತಲ್ಲಣಗಳ ಅಭಿವ್ಯಕ್ತಿ ಕಂಡು ಮನ ದ್ರವಿಸಿ ಹೋಗುವದು.
“ಲೋಕದ ವಾಡಿಕೆಯಂತೆ …..ನೀ ಹೂವೆ ಆಗು, ನಾನು ನಿನ್ನನ್ನು ಮಾಲೆಯಾಗಿಸುವ ದಾರವಾಗುತ್ತೇನೆ”.
ನೀ ದೀಪವೇ ಆಗು
ನಾನು ಉರಿ ಹೊತ್ತಿಸುವ ಬತ್ತಿ ಆಗುತ್ತೇನೆ
ನೀ ರೂಪವೇ ಆಗು
ನಾನು ನಿನ್ನನ್ನು ನಿನಗೆ ತೋರಿಸುವ ಕನ್ನಡಿ ಯಾಗುತ್ತೇನೆ…..
ಒಟ್ಟಿನಲ್ಲಿ ನೀನು
ಲೋಕದ ಕಣ್ಣಿನಲ್ಲಿ ಏನೇ ಆಗು ಅದಕ್ಕೆಲ್ಲ ಮೂಲ ನಾನೇ ಆಗುತ್ತೇನೆ ನಿನ್ನ ಅಸ್ತಿತ್ವಕ್ಕೆ ಶಕ್ತಿಯಾಗುತ್ತೇನೆ”
ಈ ಕವನವು ಎರಡು ನೆಲೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವದು. ಲೋಕದ ಕಣ್ಣಲ್ಲಿ ವಾಡಿಕೆಯಂತೆ ಕಾಣುವ ಹುಡುಗಿ ಒಂದೆಡೆ ಆದರೆ ಕವಿಯ ಭಾವನೆಯಲ್ಲಿ ಒಬ್ಬ ಪ್ರೇಮಿ ಕಾಣುವ ಹುಡುಗಿಯೇ ಬೇರೆ. ಲೋಕದ ಕಣ್ಣಲ್ಲಿ ಆಕೆ ಬರೀ ಹೂವು ಆದರೆ ಆ ಹೂವನ್ನು ಸುಂದರ ಮಾಲೆಯಲ್ಲಿ ಪೋಣಿಸಿ ಸಾರ್ಥಕತೆ ಪಡೆಯುವವ ಪ್ರೇಮಿ. ಅವಳು ದೀಪವೇ ಆಗಿದ್ದರು ದೀಪದ ಬೆಳಕಿಗೆ ಕಾರಣವಾಗುವ ಬತ್ತಿ ಆತನಾಗುವ , ಅವಳು ರೂಪವೇ ಆದರೂ ಅವಳ ನಿಜವಾದ ರೂಪವನ್ನು ಅವಳಿಗೆ ತೋರುವ ಕನ್ನಡಿ ಆತನಾಗುವ . ಹೀಗೆ ಅವನೊಬ್ಬ ಒಲವಿನ ಖನಿ,ಹೃದಯವಂತ. ಹೀಗೆ ಹೇಳುತ್ತಾ ಸಾಗುವ ಕವನ ಕೊನೆಗೆ ನೀನು ಲೋಕದ ಕಣ್ಣಿನಲ್ಲಿ ಏನೆ ಆಗು ಅದಕ್ಕೆಲ್ಲ ಮೂಲ ನಾನೇ. ನಿನ್ನ ಅಸ್ತಿತ್ವಕ್ಕೆ ಶಕ್ತಿಯಾಗುತ್ತೇನೆ ಎನ್ನುವ ಮಾತು ಪ್ರೀತಿಯ ಕಡಲಿಗೆ ವ್ಯಾಪ್ತಿಯ ನ್ನು ಒದಗಿಸಿಬಿಡುವುದು. ಈ ಜಗತ್ತು ಬಹಿರಂಗದ ರೂಪದ ಹಿಂದೆ ಓಡುವುದು ಅದು ವಾಡಿಕೆ ಆದರೆ ಅದರ ಹಿಂದಿನ ಅಂತಃಸತ್ವವನ್ನು ಅರಿತು ಅದನ್ನು ಪುಷ್ಟಿ ಗೊಳಿಸುವುದು ನಿಜವಾದ ಪ್ರೇಮಿಯ ಅಂತರಾಳ.
“ದುಃಖ ದುಮ್ಮಾನಗಳ
ನೆಲದ ಮರೆಗೆ ಸರಿಸಿ
ಸುಖ ಸಂತೃಪ್ತಿಯ ಒಲವ
ಎಲ್ಲೆಡೆ ಸುರಿಸಿ
ಅಕ್ಷರದಲ್ಲಿ ಅದಕ್ಕೆ
ಅಕ್ಕರೆಯನ್ನು ಮಿಗಿಲಾಗಿಸಿ
ದಿಕ್ಕು ದಿಕ್ಕುಗಳಿಗೆ
ಪ್ರೀತಿಯನ್ನು ಉಣಿಸಿ
ನಿರುತವು ಸಲಹುವರು “
ತಾಯಿ-ತಂದೆಗಳೇ ಸರ್ವಸ್ವ ಅವರ ಪ್ರೀತಿ ತ್ಯಾಗಗಳು ಅಕ್ಷರಕೆ ನಿಲುಕವು. ಅದೆಂಥದೇ ದುಃಖ ಇದ್ದರೂ ಅದನ್ನು ತೋರದೆ ಪ್ರೀತಿಯನ್ನು ಉಣಬಡಿಸಿ ಬದುಕಿಸಿದ ಅವರ ಪ್ರೀತಿಗೆ ಎಣೆಯೇ ಇಲ್ಲ. ಒಡಲಾಳದಲ್ಲಿ ನಿಶ್ಯಬ್ದವಾಗಿ ತಾಯಿ ತಂದೆಗಾಗಿ ಮಿಡಿವ ಕರುಳಿನ ಹಂಬಲ ಕವಿತೆಗೆ ಧ್ವನಿಯಾಗಿದೆ.
“ನನ್ನೆದೆಯ ಕವಾಟಗಳೊಳಗೆ
ಕಾವ್ಯ ಮತ್ತು ಕೋವಿಗಳೆರಡನ್ನೂ ಅನವರತ ಕಾಪಿಟ್ಟುಕೊಂಡಿದ್ದೇನೆ.”..
“ಈ ಮಣ್ಣು ಮಳೆ ನೀರಿಗಿಂತಲೂ ಮಿಗಿಲಾಗಿ ….ಕೆಂಡದಂಥ ನೂರು ಸಂಕಟಗಳನ್ನು ಕುಡಿಯುತ್ತಲೇ ಇರುವುದನ್ನು ಕಂಡು ನನ್ನೆದೆಯೊಳಗಿನ ಕೋವಿ ಚಡಪಡಿಸುತ್ತಾ ಆಗಾಗ ಆರ್ಭಟಿಸುತ್ತದೆ”..
ವರ್ಗಗಳ ಮಧ್ಯದ ಅಗಾಧವಾದ ಅಂತರದಿಂದ ಬಡತನದಲ್ಲೇ ಬದುಕು ಕಟ್ಟಿಕೊಂಡು ನಲಗುತ್ತಿರುವ ಮನಸುಗಳ ಆಂತರಿಕ ಪ್ರತಿಭಟನೆಯ ಜ್ವಾಲೆಯನ್ನು ಒಳಗಿನ ಕೋವಿಯಾಗಿ ಬೆಂಕಿಯನ್ನುಗುಳುವದು, ಆರ್ಭಟಿಸುವದು ಎನ್ನುವ ಮಾತು ವ್ಯವಸ್ಥೆಯ ಕರಾಳ ಮುಖವನ್ನು ಹೇಳುತ್ತಾ ಆಂತರಿಕ ಪ್ರತಿಭಟನೆಯ ಭಾವವನ್ನು ಅಷ್ಟೇ ಸಮರ್ಥವಾಗಿ ದರ್ಶಿಸುವದು.
“ನಮ್ಮ ನಾಳೆಗಳ
ಬಯಕೆಗಾಗಿ
ಕನಸುಗಳ ಹೆಣೆಯುತ್ತ
ತೆರಣಿಯ ಹುಳುವಿನಂತಾಗಲು ನಾನು ಬಯಸಲಾರೆ……
ಕಲ್ಲಿನ ಗದ್ದುಗೆಗೆ
ನೂರು ಹರಕೆಯ ಹೊತ್ತು
ಕತ್ತೆ ಆಗಲಾರೆ….
ದಾರಿದ್ರ್ಯದ ತಮದಲ್ಲೇ ಕರಗಿ ಹೋಗಲಾರೆ ……
ಮರ್ತ್ಯವನು
ಮಹಾಮನೆ ಆಗಿಸುವ
ಮಣಿಹವನ್ನು ಹಿಡಿದು ಬಾಳುತ್ತೇನೆ…
ತನ್ನ ಸುತ್ತಲೂ ಬಲೆಯನ್ನು ಹೆಣೆದು ಕೊಂಡು ಅದರಲ್ಲೇ ಬಂಧಿಯಾಗಿ ಅಂತ್ಯವಾಗುವ ರೇಷ್ಮೆ ಹುಳುವಿನಂತೆ ನಾನೂ ದುರಾಸೆಗಳೆಂಬ ಬಲೆಯಲ್ಲಿ ಬಂಧಿ ಆಗಲಾರೆ, ಕಲ್ಲಿಗೆ ಬೇಡಿಕೊಳ್ಳಲಾರೆ. ಈ ಲೋಕದಲ್ಲಿ ವಿಶ್ವಕುಟುಂಬಿಯಾಗಿ ಬಾಳುವ ಕನಸನ್ನು ಹೊತ್ತ ಕವಿಮನ ಬಸವಾದಿ ಶರಣರ ಮೌಲಿಕ ನೆಲೆಯ ಆಳವನ್ನು ಹೇಳುತ್ತಾ ಕವಿಯ ಹೃದಯ ವೈಶಾಲ್ಯತೆ ಗೆ ಸಾಕ್ಷಿಯಾಗಿ ನಿಲ್ಲುವುದು.
“ನನ್ನ ಪ್ರಸಾದವೆಲ್ಲ ನಂಜಾಯಿತೆಂದು ನನ್ನನ್ನೇಕೆ ಕಟಕಟೆಗೆ ತಂದಿದ್ದೀರಿ …
ನಿಮ್ಮ ಮನವೆಲ್ಲ ನಂಜಾಗಿ
ಅದು ಮೈಗೆಲ್ಲಾ ತಾಗುವುದು..
ನಿಮ್ಮ ನಾಲಿಗೆ ಚಪಲಕ್ಕಾಗಿ
ನನಗೆ ನೈವೇದ್ಯ ಮಾಡಿ
ನಿಮ್ಮ ಪಾಪಕ್ಕೆ
ಭಕ್ತಿಯ ಸೀರೆ ಉಡಿಸಲಿಲ್ಲವೇ”…
ಪ್ರಜ್ಞೆಯ ನೆಲೆಯಾದ ಆತ್ಮಸಾಕ್ಷಿ ಯನ್ನು ಮರೆಮಾಚಿ ಬಣ್ಣ ಬಳಿದುಕೊಂಡು ಬಾಳುವ ನೀವು ಮಾರಮ್ಮ ಉಳಿಸಲಿಲ್ಲವೆಂದು ಗೂಬೆ ಕೂರಿಸುವದೇಕೆ ? ಎಂಬ ಪ್ರಶ್ನೆ ಎಲ್ಲರ ಆಂತರ್ಯದ ಅವಲೋಕನವೇ ಆಗಿದೆ. ನಮ್ಮೊಳಗಿನ ಪ್ರಜ್ಞೆಯೆ ಮಾರಮ್ಮಳಾಗಿ ಮಾನವನ ಮಿತಿ ಮೀರಿದ ಸ್ವಾರ್ಥ, ವ್ಯಾಮೋಹಕೆ ನಿಮ್ಮ ಮನ ನಂಜಾಗಿದೆ ಎಂಬ ಮಾತು ಇಂದಿನ ಮಾನವನ ಅಧೋಗತಿಯನ್ನು ತೆರೆದಿಡುತ್ತಾ, ಬಾಯಿ ಚಪಲಕ್ಕಾಗಿ ನೈವೇದ್ಯ, ಪಾಪಕ್ಕೆ ಲಂಚವಾಗಿ ಸೀರೆ ಭಕ್ತಿ ಎಂಬ ಸೆರಗಿನಲ್ಲಿ ಮಾಡುವ ಆಚರಣೆಗಳನ್ನು ಉಲ್ಲೇಖಿಸುತ್ತಾ ಕವನ ಪ್ರಜ್ಞೆಯ ನೆಲೆಯನ್ನ ವಿಸ್ತಾರವಾಗಿಸುತ್ತ ತನ್ಮೂಲಕ ಆತ್ಮಾವಲೋಕನಕ್ಕೆಡೆ ಮಾಡುವದು.
“ಎಷ್ಟೊಂದು ಕಾಲದಿಂದ
ಹೀಗೆ ಧುಮ್ಮಿಕ್ಕಿದರೇನು
ಕೃಷ್ಣೆ ಆಳುವ ಶಕ್ತಿಯ ಮುಂದೆ ..
ಇಲ್ಲಿ ಸಮಾಧಿಯಾದವು ಅದೆಷ್ಟೊ ಕಾಫಿರನ ಶವಗಳು…
ಆಳುವಪ್ರಭುಗಳ ಆತ್ಯಾಸೆಗೆ ನಲುಗುವ ಸೃಷ್ಟಿಯನ್ನು ಬಿಂಬಿಸುತ್ತಾ ಎಷ್ಟು ಮೆರೆದರೇನು , ಮೆರೆದವರೆಲ್ಲರೂ ಮಣ್ಣಾಗಲೇಬೇಕು ಎಂಬ ಆತ್ಯಂತಿಕ ಸತ್ಯವನ್ನು ಹೇಳುವ ಕವನ ಪಾರಮಾರ್ಥಿಕತೆಯ ಮನೋ ಭೂಮಿಕೆಯತ್ತ ಗಮನಸೆಳೆವದು.
“ಬನ್ನಿ ಸಂಗಾತಿಗಳೇ…
ಸುಗ್ಗಿಗಾಗಿ ದಿನ ಕಾಯುವದು ಬೇಡ ಹಿಗ್ಗಿಗಾಗಿ ಕಾಲ ಗುಣಿಸುವುದೂ ಬೇಡ ……
ಈ ಆಲದ ಮರ ಮನದುಂಬಿ ಕರೆಯುತಿದೆ ಜಗದ ಜೀವನವನೆಲ್ಲ..
ಎಲ್ಲರೂ ಇಲ್ಲಿ ಕೂಡೋಣ …..
ಬಾಳ ಬಗೆಯ ಅಕ್ಕರವ ಬರೆಯೋಣ….
ಎಲ್ಲರೂ ಇಲ್ಲಿ ಗೂಡು ಕಟ್ಟೋಣ..
ಜಗದ ಜೀವಂತಿಕೆಗೆ ಸಾಕ್ಷಿಯಾಗೋಣ
ಎನ್ನುವ ಸಾಲುಗಳು ವಿಶ್ವಕುಟುಂಬ ಜೀವನಕೆ ದ್ಯೋತಕವಾಗಿ ಎಲ್ಲರೂ ಗೂಡು ಕಟ್ಟೋಣ ಸುಖವಾಗಿ ಬಾಳೋಣ ಎನ್ನುತ್ತಾ ಜಗದ ಜೀವಂತಿಕೆಗೆ ಸಾಕ್ಷಿಯಾಗೋಣ ಎಂಬ ಸಾಲುಗಳು ಹೃದಯದ ಬಾಗಿಲನ್ನು ಮತ್ತೆ ಮತ್ತೆ ತಟ್ಟುವವು. ಕವಿಯ ಅಂತಃಸತ್ವವನ್ನು ಬಿಚ್ಚಿಡುತ್ತಾ ಅನಿಕೇತನವಾಗುವ ವಿಶ್ವಪ್ರಜ್ಞೆಗೆ ಮುನ್ನುಡಿಯಾಗಿಬಿಡುವದು.
“ಲೋಕದಂತೆ ತಾನೂ ಅಂತ್ಯದೆಡೆಗೆ ಸಾಗುತ್ತಿದ್ದಾನೆ ಸೂರ್ಯ….ಆತನಿಗೆ ಹರೆಯ ಬರಲಿ …ಎಂದು ವಿಡಂಬಿಸುತ್ತಾ , ಸಕಲ ಜೀವಾತ್ಮರಿಗೆ ಲೇಸಾಗುವ ಗೊಡವೆಯೇಕೆ ಈ ನೆಲದ ತುಂಬೆಲ್ಲ ಗುಡಿಗಳಾಗಲಿ,
ದಿನವಿಡೀ ಕಣ್ಣು ಕಿವಿ ತುಂಬಲಿ , ಯಾರ ಹೊಟ್ಟೆ ಹಸಿದರೇನು , ಲೆಕ್ಕದ ಜಮಾ ಹಾಳಿ ತುಂಬುತ್ತಲೇ ಇರಲಿ ”
ಎಂಬ ವ್ಯವಸ್ಥೆಯ ಹೀನ ಮುಖವನ್ನು ವಿಡಂಬಿಸುತ್ತಾ ಹೋಗುವ ಕವನ ಹಸಿ ಗೋಡೆ ಮೇಲೆ ಹರಳು ಹಚ್ಚಿದಂತೆ ಆಂತರ್ಯಕ್ಕೆ ತಟ್ಟೇಬಿಡುವವು.
ಹೀಗೆ ಇನ್ನೂ ಅನೇಕ ಅರ್ಥಪೂರ್ಣ ಕವನಗಳು ಬಾಳಿನೆಡೆಗೆ ಕವನ ಸಂಕಲನದ ಭಾಗವಾಗಿದ್ದು , ಪ್ರತಿ ಕವನವೂ ವಿಚಾರಕ್ಕೆಡೆ ಮಾಡಿ ಬದುಕಿನ ವಿವಿಧ ಆಯಾಮಗಳನ್ನು ಕಾವ್ಯಾತ್ಮಕ ವಾಗಿ ಬಿಂಬಿಸುವಲ್ಲಿ ಕೆ. ಶಶಿಕಾಂತವರು ಸಫಲರಾಗಿದ್ದಾರೆ. ವಿಭಿನ್ನ ವಿಷಯಪ್ರಧಾನ ಕವನಗಳು ಓದುಗನನ್ನು ವಿಚಾರಕ್ಕೆ ಹಚ್ಚುವಲ್ಲಿ ಸಾರ್ಥಕ ತೆಯನ್ನ ಪಡೆವವು.
ಕೆ ಶಶಿಕಾಂತ ಅವರಿಗೆ ಅಭಿನಂದಿಸುತ್ತಾ, ಮತ್ತೆ ಮತ್ತೆ ಇಂಥ ಕವನ ಸಂಕಲನಗಳು ಬರಲೆಂದು ಮನದುಂಬಿ ಹಾರೈಸುವೆ.
–ಸುನಿತಾ ಮೂರಶಿಳ್ಳಿ
ಧಾರವಾಡ
9986437474
ಬಹಳ ಉತ್ತಮವಾಗಿ ಮತ್ತು ಅರ್ಥಪೂರ್ಣವಾಗಿ ಪುಸ್ತಕದ ಕುರಿತಾಗಿ ಮಾತಾಗಿದ್ದಿರಿ….. ಅಭಿನಂದನೆಗಳು ರಿ