ಪ್ರತಿಯೊಬ್ಬ ವ್ಯಕ್ತಿ ಬದುಕಿನಲ್ಲಿ ಆನಂದ ಮತ್ತು ಸಾರ್ಥಕತೆ ಕಾಣಬೇಕಾದರೆ ಆಧ್ಯಾತ್ಮವನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ವಿಜ್ಞಾನದ ಮುಂದುವರೆದ ಘಟ್ಟವೇ ಆಧ್ಯಾತ್ಮವಾಗಿದೆಂದು ದೂದರ್ಶನ ಮಾಜಿ ಹೆಚ್ಚುವರಿ ಮಹಾ ನಿರ್ದೇಶಕ ಮಹೇಶ ಜೋಶಿ ಹೇಳಿದರು.
ನಗರದ ಕುಷ್ಟಗಿ ರಸ್ತೆಯ ಬಸವಕೇಂದ್ರದಲ್ಲಿ ಭಾನುವಾರ ಸ್ನೇಹ-ತನು ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ ಬಳಗದಿಂದ ಹಮ್ಮಿಕೊಂಡಿದ್ದ ವಕೀಲ ಪ್ರಹ್ಲಾದ ಗುಡಿಯವರ ಚಿನ್ನೂರು ಸಂದ್ಯಾಗ ಹಾಸ್ಯ ರಸಾಯನ ಚೊಚ್ಚಿಲ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ವಿಜ್ಞಾನದಿಂದ ಸತ್ಯವನ್ನು ಕಂಡುಕೊಳ್ಳಬಹದು ಸತ್ಯದ ಆಚೆಗೂ ಬದುಕಿನ ನಿಜವಾದ ಆನಂದವಿದೆ. ಅದೇ ಆಧ್ಯಾತ್ಮ. ಈ ಕೃತಿಯು ಆಡುಭಾಷೆಯಲ್ಲಿದ್ದರೂ ವಿಶಿಷ್ಟವಾಗಿದೆ. ದಿನ ನಿತ್ಯ ನಡೆಯುವ ಚರ್ಚೆಗಳು ಅನಾವರಣಗೊಳಿಸಲಾಗಿದೆ ಎಂದರು.
ಕೃತಿ ಬಿಡುಗಡೆಗೊಳಿಸಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಮಾಧ್ಯಮಗಳು ರಾಜಕಾರಣಿಗಳು ಸೇರಿದಂತೆ ಯಾವುದೇ ಸಾರ್ವಜನಿಕ ರಂಗದ ವ್ಯಕ್ತಿಗಳ ಲೋಪದೋಷಗಳ ಮೇಲೆ ಬೆಳಕು ಚೆಲ್ಲುವ ಸಮಯದಲ್ಲಿ ವ್ಯಕ್ತಿಗಳ ತೇಜೋವಧೆಯಾಗದಂತೆ ಭಾಷೆಯ ಚೌಕಟ್ಟು ಮೀರದಂತೆ ಪರಿವರ್ತನೆಗೆ ಪ್ರಯತ್ನಿಸುವುದು ಸಕಾರತ್ಮಕ ಪತ್ರಿಕೋದ್ಯಮ ಔಚಿತ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಕ್ಕಳ ತಜ್ಞ ಡಾ.ಕೆ.ಶಿವರಾಜ ಮಾತನಾಡಿ, ಸಿಂಧನೂರಿನ ಹೋಟೇಲ್, ಚಹಾದ ಅಂಗಡಿ, ವಸತಿ ಗೃಹ, ಜ್ಯೂಸ್ ಅಂಗಡಿ, ಔಷಧಿ ಅಂಗಡಿ ಮತ್ತಿತರ ವ್ಯವಹಾರದ ಕೇಂದ್ರಗಳನ್ನು ಪುಸ್ತಕದಲ್ಲಿ ಪರಿಚಯಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಪುಸ್ತಕ ಕುರಿತು ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಭೀರಪ್ಪ ಶಂಬೋಜಿ, ಅಶೋಕಗೌಡ ಗದ್ರಟಗಿ, ಶಂಕರಗುರಿಕಾರ, ಮಧುಮತಿ ದೇಶಪಾಂಡೆ, ವೀರಭದ್ರಪ್ಪ ಕುರುಕುಂದಿ, ಗ್ರಂಥದಾನಿ ಎ.ರಾಮಬಾಬು, ಪ್ರಾಣೇಶರಾವ್ ದೇಸಾಯಿ, ಪ್ರಕಾಶಕ ಪಂಪಯ್ಯ ಸಾಲಿಮಠ ಇದ್ದರು. ವೀರೇಶ ಗೋನವಾರ ನಿರೂಪಿಸಿದರು.