e-ಸುದ್ದಿ, ಮಸ್ಕಿ
ಕರೊನಾ ಭೀತಿಯ ನಡುವೆ ರೈತರು ಮುಂಗಾರು ಬಿತ್ತನೆಗಾಗಿ ತಮ್ಮ ಹೊಲಗಳನ್ನು ಹದಗೊಳಿಸುತ್ತಿದ್ದಾರೆ.
ತಾಲೂಕಿನ ಬಹುತೇಕ ಕಡೆ ರೈತರು ತಮ್ಮ ತಮ್ಮ ಹೊಲಗಳನ್ನು ಹದ ಮಾಡಿ ಮುಂಗಾರು ಬಿತ್ತನೆಗಾಗಿ ಸಜ್ಜುಗೊಳಿಸುತ್ತಿದ್ದಾರೆ. ಸುರ್ಯಕಾಂತಿ, ಸಜ್ಜಿ ಮತ್ತು ಹತ್ತಿ ಮುಂಗಾರಿನ ಪ್ರಮುಖ ಬೆಳೆಯಾಗಿದ್ದು ಬಿತ್ತನೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಜೂನ್ ಮೊದಲ ವಾರದಿಂದ ಜುಲೈ ಮದ್ಯದವರೆಗೆ ಸೂರ್ಯಕಾಂತಿ ಬಿತ್ತಲು ಸಹಾಯಕವಾಗುತ್ತದೆ. ಮಳೆ ಸರಿಯಾದ ಅವಧಿಯಲ್ಲಿ ಬಂದರೆ ರೈತರಿಗೆ ಅನುಕೂಲವಾಗುತ್ತದೆ. ಮಳೆ ಬರುವದು ತಡವಾದರೆ ರೈತರು ಸಜ್ಜಿಯ ಜತೆಗೆ ತೊಗರಿಯನ್ನು ಅಂತರ ಬೆಳೆಯಾಗಿ ಬಿತ್ತುತ್ತಾರೆ.
ತಾಲೂಕಿನಲ್ಲಿ ಬಹುತೇಕ ಖುಷ್ಕಿ ಭೂಮಿಯಿದ್ದು ಸರಾಸರಿ ವಾಡಿಕೆಯಂತಯೆ 80 ರಿಂದ 100 ಮಿ.ಮೀ ಮಳೆಯ ಅಗತ್ಯತೆ ಇದ್ದು ಮಳೆ ಬಂದರೆ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತದೆ.
ಈಗಾಗಲೇ ಕೃಷಿ ಇಲಾಖೆ ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ಗೊಬ್ಬರಗಳ ದಾಸ್ತಾನು ಮಾಡಲು ತಯಾರಿ ನಡೆಸಿದ್ದು. ಹೊಲಗಳು ಸ್ವಚ್ಚಾವಾಗಿದ್ದು ಮಡಕೆ ಹೊಡೆದು ಮಣ್ಣು ಸಾಕಷ್ಟು ಬಿಸಿಲುಂಡಿದೆ. ಮಳೆ ಬಂದರೆ ಸಾಕು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.
—————————
ಕರೊನಾ ಭಯ ಇದೆ ಎಂದು ಮನೆಯಲ್ಲಿ ಕುಳಿತರೆ ಹೊಟ್ಟೆಗೆ ಹಿಟ್ಟು ಬೇಕಲ್ಲ. ರೈತರು ಸುಮ್ಮನೆ ಕುಳಿತರ ಜಗತ್ತು ನಡೆಯಬೇಕಲ್ಲ ಸ್ವಾಮಿ. ಬಂದದ್ದು ಬರಲಿ ಹೊಲ ಸ್ವಾಚ್ಛ ಮಾಡಿಕೊಂಡಿದ್ದೇವೆ. ಮಳೆ ಬಂದರೆ ಬಸವ ಎಂದು ಬಿತ್ತುತ್ತೇವೆ.
-ನಾಗಪ್ಪ ಬೆಳಿಗ್ಗನೂರು ರೈತ