ಸತತ ಮಳೆ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಮಸ್ಕಿಯ ಬಸವೇಶ್ವರ ನಗರದ ಮುಖ್ಯ ರಸ್ತೆ ಹಾಳಾಗಿದ್ದು ಮಂಗಳವಾರ ಹಲವರು ರಸ್ತೆಯ ಗುಂಡಿಯಲ್ಲಿ ಬಿದ್ದ ಘಟನೆ ನಡೆಯಿತು.
ಪುರಸಭೆಯ 1 ನೇ ವಾರ್ಡ್ ನ ಬಸವೇಶ್ವರ ನಗರದ ರಸ್ತೆ ಸಂಪೂರ್ಣ ಹಾಳಾಗಿದ್ದು ಸ್ಥಳೀಯ ನಿವಾಸಿಗಳು ಪುರಸಭೆ ಸದಸ್ಯ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕಿದರು.
ಈ ರಸ್ತೆ ಮಾರ್ಗವಾಗಿ ಓಡಾಡುವ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ರಸ್ತೆಯಲ್ಲಿ ಬಿದ್ದ ಅನುಭವವಾಯಿತು.ಕಾರುಗಳು ಸಿಕ್ಕಿ ಹಾಕಿಕೊಂಡವು, ಕೆಲವರು ಗುಂಡಿಗಳಲ್ಲಿ ಬಿದ್ದರು, ಬೈಕ್ ಸವಾರರು ರಸ್ತೆ ದಾಟಲು ಪರದಾಡುವಂತಾಯಿತು.
ಸುದ್ದಿ ತಿಳಿದು ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಪುರಸಭೆ ಎಂಜಿನಿಯರ್ ಮೀನಾಕ್ಷಿ ತಾತ್ಕಾಲಿಕ ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ರಸ್ತೆ ಪಕ್ಕದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣವಾಗಿ ನೀರು ಮುಂದಕ್ಕೆ ಹೋಗದ ಕಾರಣ ರಸ್ತೆ ಹಾಳಾಗಲು ಮೂಲ ಕಾರಣವಾಗಿದೆ. ಈ ಬಗ್ಗೆ ವಾರ್ಡ್ ಸದಸ್ಯರ ಹಾಗೂ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.