ಸೋಲು….!

ಸೋಲು….!

ನಿರಂತರ ಸಂಘರ್ಷದಲಿ
ಪ್ರಕೃತಿಯ ಸಹನೆ ಸಿಟ್ಟಿಗೆದ್ದಾಗ
ಅದರ ಅಗಾಧ ಶಕ್ತಿಯ ಅರಿವು
ಮನುಕುಲಕ್ಕೆ ಮತ್ತೊಮ್ಮೆ ಆಗಿದೆ…

ಅಭಿವೃದ್ಧಿಯ ಮೆಟ್ಟಿಲುಗಳು
ಜಾರುತಿವೆ ಅವನತಿಯತ್ತ
ಎಲ್ಲವೂ ‘ನನಗಾಗಿ’ಎನ್ನುವ
ಅಹಂಕಾರದ ಕಿರೀಟ ನೆಲಕ್ಕುರುಳಿದೆ…
ಭೋಗ-ದುರಾಸೆಯ ಬದುಕಿನಾಚೆ
ದಯೆ- ದಾಸೋಹ- ಸೇವೆಯಂಥ
ಮೌಲ್ಯಗಳು ಗೋಚರಿಸುತ್ತಿವೆ…

ಗಡಿಬಿಡಿಯ ಉದ್ವೇಗದ ಬದುಕು
ಪ್ರಶಾಂತತೆಯಲ್ಲೂ ಭಯಭೀತಗೊಂಡಿದೆ…
ಪ್ರಕ್ಷುಬ್ಧ ಸಮಾಜ ಸ್ತಬ್ಧವಾಗಿ
ಭವಿಷ್ಯದ ಆತಂಕ ಸೃಷ್ಟಿಸಿದೆ
ಸಂಬಂಧಗಳ ಸಂತೃಪ್ತಿ ಇದ್ದರೂ
ನೆಮ್ಮದಿಯ ನಿಟ್ಟುಸಿರಿಲ್ಲ .

ಸಹನೆಗೆಟ್ಟ ಪ್ರಕೃತಿ ಎದಿರು
ಗಡಿ-ಭಾಷೆ-ಧರ್ಮಗಳ ವ್ಯಾಖ್ಯಾನವಿಲ್ಲ….
ಮಾನವೀಯತೆ ಎಲ್ಲಕ್ಕೂ ಮಿಗಿಲು
ಸಾವಿನ ದಿಗ್ಭ್ರಮೆಯಲ್ಲೂ
ಎಡವಿದ ಕಲ್ಲಿನ ಗಂಭೀರ ಚಿಂತನೆ
ಸತ್ಯ ಶೋಧನೆ ನಡೆದಿದೆ….

ಅಮೂಲ್ಯ ಜೀವಗಳ ಮಣ್ಣಾಗಿಸಿದ
ಕಾಣದ ನಿರ್ಜೀವ ಶತೃವಿನ
ರಣಕೇಕೆ ಎದಿರು
ತನ್ನ ಸಾಮರ್ಥ್ಯ-ಪ್ರತಿಷ್ಠೆಯನು
ಬದಿಗಿಟ್ಟು ಜಗತ್ತು ಮಂಡಿಯೂರಿದೆ ….

ತನ್ನದಲ್ಲದ ತಪ್ಪಿಗೆ
ಕನಸುಗಳಿಗೆ ರೆಪ್ಪೆ ಹೊದಿಸಿ
ಅಸಹಾಯಕ ಚಡಪಡಿಕೆಯಲಿ
ನೆಮ್ಮದಿ-ಘನತೆ-ಸಂವೇದನೆ ಇರದ
ಸಾವಿನ ಹಿಂದೆ ಸಾಲುಗಟ್ಟಿ ಸುಮ್ಮನೆ ಹೊರಟು ನಿಂತವರ
‘ಬದುಕುವ ಹಕ್ಕ’ನು ಕಸಿದವರು ಯಾರು….?

-ಪ್ರೊ ಜಯಶ್ರೀ.ಎಸ್.ಭಮಸಾಗರ (ಶೆಟ್ಟರ)
ಇಳಕಲ್ಲ.

Don`t copy text!