ಲಸಿಕೆ ಹೆಚ್ಚು ಹಾಕಿಸಲು ಅಧಿಕಾರಿಗಳು ಮುಂದಾಗಿ–ಎಸಿ.ರಾಜಶೇಖರ ಡಂಬಳ


e-ಸುದ್ದಿ, ಮಸ್ಕಿ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಗಳು ಎಲ್ಲರೂ ಹಾಕಿಸಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳು ಹೆಚ್ಚು ಹೆಚ್ಚು ಪ್ರಚಾರ ಮಾಡಿ ಲಸಿಕೆ ಹಾಕಿಸಲು ಮುಂದಾಗಿ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಬೇಟಿ ನೀಡಿದ ಅವರು ಆಸ್ಪತ್ರೆಯನ್ನು ಪರಿಶೀಲಿಸಿದರು. ವಾಕ್ಸಿನ್ ಹಾಕುವ ಕೋಣೆಗೆ ತೆರಳಿದ ಎಸಿ ರಾಜಶೇಖರ ಡಂಬಳ ಇದುವರೆಗೆ ಎಷ್ಟು ಜನರಿಗೆ ವಾಕ್ಸಿನ್ ಹಾಕಲಾಗಿದೆ ಎಂದು ವಿಚಾರಿಸಿದರು.
ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಲಸಿಕೆ ಹಾಕಿಸಿಕೊಂಡ ಬಗ್ಗೆ ಮಾಹಿತಿ ಪಡೆದುಕೊಂಡರು. ಇದುವರೆಗೆ ಲಸಿಕೆ ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗುತ್ತಿರುವದರಿಂದ ತೊಂದರೆ ಆಗುತ್ತಿತ್ತು. ಇನ್ನು ಮೇಲೆ ಹೆಚ್ಚಿನ ಲಸಿಕೆ ಸರಬರಾಜು ಆಗುತ್ತಿರುವದರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆ ಎಂದರು.
ಪಟ್ಟಣದಲ್ಲಿ ಹೆಚ್ಚಿನ ಜನರು ಲಸಿಕೆ ಹಾಕಿಸಲು ಪ್ರಚಾರ ಮಾಡಿ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ಹಾಗೂ ಡಾ.ಮೌನೇಶ ಅವರಿಗೆ ಸೂಚಿಸಿದರು.
ಈಗಾಗಲೇ ಪಟ್ಟಣದಲ್ಲಿ ಪುರಸಭೆಯ ವಾಹನದಲ್ಲಿ ಪ್ರಚಾರ ಮಾಡಲಾಗಿದ್ದು ಪ್ರತಿ ವಾರ್ಡನ ಸದಸ್ಯರಿಗೆ ತಮ್ಮ ತಮ್ಮ ವಾರ್ಡನಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿಸಲು ಮುಂದಾಗಬೇಕೆಂದು ತಿಳಿಸಿರುವುದಾಗಿ ಪುರಸಭೆಯ ಮುಖ್ಯಾಧಿಕಾರಿ ಹನುಮಂತಮ್ಮ ಹೇಳಿದರು.
ಸರ್ಕಾರಿ ಆಸ್ಪತ್ರೆಯ ಜತೆಗೆ ಪಟ್ಟಣದ ನಡು ಮದ್ಯದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಅಥವಾ ಪುರಸಭೆಯ ಹಳೇ ಕಟ್ಟಡದಲ್ಲಿ ಹೆಚ್ಚುವರಿಯಾಗಿ ಲಸಿಕೆ ಹಾಕುವ ಕೇಂದ್ರ ತೆರೆಯುವಂತೆ ಎಸಿ ರಾಜಶೇಖರ ಡಂಬಳ ಸೂಚಿಸಿದರು.
ತಹಸೀಲ್ದಾರ ಬಲರಾಮ ಕಟ್ಟಿಮನಿ ಮತ್ತು ಮುಖ್ಯಾಧಿಕಾರಿ ಹನುಮಂತಮ್ಮ ಸ್ಥಳ ಪರಿಶೀಲನೆ ಮಾಡಿ ನಾಳೆಯಿಂದ ಹೆಚ್ಚುವರಿ ಕೇಂದ್ರ ತೆರೆಯುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

Don`t copy text!