ಶಮಾ ಗಜಲ್ ಗಳು

ಪುಸ್ತಕ ಪರಿಚಯ

 


ಕೃತಿ……..ಶಮಾ ಗಜಲ್ ಗಳು

ಲೇಖಕರು…..ಶಮಾ ಜಮಾದಾರ
ಪ್ರಕಾಶಕರು……ಎಂ ಕೆ ಪ್ರಕಾಶನ ಯರಗಟ್ಟಿ ಜಿಲ್ಲಾ ಬೆಳಗಾವಿ *
ಮೊ ೯೧೦೮೬೯೫೩೨೦

ಗಜಲ್ ಇದು ಉದು೯ಸಾಹಿತ್ಯದಲ್ಲಿ ಹೆಚ್ಚು ಪ್ರಚಲಿತವಾಗಿರುವ ಕಾವ್ಯ ಸಾಹಿತ್ಯ, ಉದು೯:ಕಾವ್ಯದ ರಾಣಿ ಎನಿಸಿ ಕೊಂಡಿದೆ .ಈಗ ಕನ್ನಡದಲ್ಲಿಯೂ ಹೆಚ್ಚಾಗಿ ಗಜಲ್ ಗಳನ್ನು ಬರೆಯುತ್ತಿದ್ದಾರೆ. ಗಜಲ್ ಎಂದರೆ ಮೃದು ಮಧುರ ಭಾವನೆಗಳನ್ನು ಹೃದಯವು ನಿವೇದಿಸಿ ಕೊಳ್ಳುವ ಸುಂದರ ಗೇಯತೆ, ಲಯವುಳ್ಳ ಹಾಡುವ ಕಾವ್ಯ ಪ್ರಕಾರವಾಗಿದೆ.

ಹೃದಯವು ತನ್ನ ನೋವು ನಲಿವುಗಳನ್ನು ತನ್ನ ಸುತ್ತ ಹೆಣೆದು ಕೊಳ್ಳುವಂತಹ ಮನ ಮೋಹಕವಾದ ಇನಿದನಿಯ ಪ್ರೇಮಿಗಳ ಪಿಸುಮಾತಾಗಿದೆ ,ಇನ್ನೊಂದು ಹೃದಯ ತಟ್ಟುವ ಕಾವ್ಯ. ಗಜಲ್ ಒಂದು ಧಾನ್ಯ ತನ್ನನ್ನು ತಾ ಅರಿತು ಕೊಳ್ಳುವ ಪರಿ ,ಭಕ್ತಿಯಲಿ ಪರವಶಹೊಂದಿ ಅವನನ್ನು ಕಾಣುವ ದಾರಿ,ಮೊದಲಿಗೆ ಗಜಲ್ ಗಳನ್ನು ಪ್ರೇಮ ಪ್ರೀತಿ ವಿರಹ ಮೋಹ ವ್ಯಾಮೋಹ ಅನುರಾಗ ಆಧ್ಯಾತ್ಮಿಕ ಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಿದ್ದರು. ಈಗ ಎಲ್ಲಾ ವಿಷಯಗಳ ಬಗ್ಗೆ ಗಜಲ್ ಗಳನ್ನು ಬರೆಯುತ್ತಿದ್ದಾರೆ.

ಶಮಾ ಎಂ ಜಮಾದಾರ ಇವರು ಬಾಲ್ಯದಿಂದಲೇ ಓದುವ ಬರೆಯುವ ಹವ್ಯಾಸ ಹೊಂದಿದವರಾಗಿದ್ದು ಕಾಲೇಜಿನ ಮಿಸ್ಲೇನದಲ್ಲಿ ಲೇಖನಗಳು ಪ್ರಕಟವಾದರೆ ಚುಟುಕು ಕಥೆಗಳು ಧಾರವಾಡದ ಆಕಾಶವಾಣಿ ರೇಡಿಯೋದ ಯುವ ವಾಣಿ ಕಾರ್ಯ ಕ್ರಮದಲ್ಲಿ ಪ್ರಸಾರ ವಾಗಿವೆ .ಅನೇಕ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ .

ಶಮಾ ಅವರು ಇಂಗ್ಲಿಷ್ ವಿಷಯ ಮೇಜರ್ ತೆಗೆದುಕೊಂಡು ಪದವೀಧರೆ ಯಾಗಿದ್ದಾರೆ.ಉದು೯ ಹಿಂದಿ ಕನ್ನಡ ಭಾಷೆಗಳಲ್ಲಿಯೂ ಪ್ರೌಢತ್ವ ಹೊಂದಿದ್ದಾರೆ.ಈಗಾಗಲೇ “ಬಿಂಬ “ಎಂಬ ಕವನ ಸಂಕಲನವನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತ ರಾಗಿದ್ದಾರೆ ಈಗ ಇವರ ಎರಡನೇ ಕೃತಿ “ಶಮಾ ಗಜಲ್” ಸಂಕಲನವನ್ನು ಲೋಕಾರ್ಪಣೆ ಗೊಳಿಸಿ ಪ್ರೌಢ ಗಜಲ್ ಕಾರರ ಗುಂಪಿಗೆ ಸೇರಿದ್ದಾರೆ.

“ಶಮಾ ಗಜಲ್ “ಸಂಕಲನದಲ್ಲಿ ಒಟ್ಟು ೭೩ ಗಜಲ್ ಗಳಿದ್ದು ಇವುಗಳನ್ನು ಓದುತ್ತಾ ಹೋದಂತೆ ಗಜಲ್ ಗಳಲ್ಲಿ ಅನಾವಶ್ಯಕ ಪದ ಗಳ ಬಳಿಕೆಗಳಿಲ್ಲದೆ ಹಿತ ಮಿತವಾದ ಪದ ಗಳನ್ನು ಬಳಿಸಿ ಚಿಕ್ಕ ಸಾಲುಗಳಲ್ಲಿಯೇ ಅರ್ಥಪೂರ್ಣ ವಾದ ಭಾವತೀವ್ರತೆಯನ್ನು ತುಂಬಿ ಗಜಲ್ ರಚಿಸಿದ್ದಾರೆ.

ಹಿಂದಿ ಉದು೯ ಭಾಷಾ ಜ್ಞಾನ ವಿದ್ದ ಕಾರಣ ಹೇರಳವಾಗಿ ಹಿಂದಿ ಉದು೯ ಪದಗಳನ್ನು ಬಳಿಸಿದ್ದಾರೆ.ಗಜಲ್ ಗಳು ಲಯ ,ಗೇಯತೆ ,ಒಳ್ಳೆಯ ರೂಪಕಗಳು ,ಪ್ರತಿಮೆಗಳನ್ನು ದಿನ ಬಳೆಕೆಯ ಕಾಣುವ ವಸ್ತುಗಳಾಗಿವೆ. ಗ್ರಾಮೀಣ ಭಾಷೆಯ ಪದಗಳನ್ನು ಗಜಲ್ ದಲ್ಲಿ ಉಪಯೋಗಿಸಿದ್ದಾರೆ ಮೃದು ಕೋಮಲ ಭಾವವನ್ನು ಪ್ರೀತಿ, ವಿರಹದಲ್ಲಿ ನಿವೇದಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿ ,ಮಹಿಳಾ ಸಂವೇದನೆ ,ಧರ್ಮ ಆಚಾರ ,ವಿಚಾರ,ಮನುಷ್ಯನ ನಡೆ ನುಡಿ,ಜೀವನ ಶ್ರದ್ಧೆ, ಮಾನವೀಯತೆ ಧರ್ಮ ಹೀಗೆ ಎಲ್ಲಾ ವಿಷಯ ದ ಮೇಲೆ ಗಜಲ್ ಗಳನ್ನು ರಚಿಸಿದ್ದಾರೆ.

ಗಜಲ್ ರಚನಾ ನಿಯಮಕ್ಕೆ ಧಕ್ಕೆಯಾಗದಂತೆ ಮತ್ಲಾ,ಕಾಫಿಯಾ,ರದೀಫ್ ಮಕ್ತಾ ತಖಲ್ಲುಸ(ಕಾವ್ಯ ನಾಮ) ,ಛಂದಸ್ಸು ಬಳಿಸಿ ಉತ್ತಮ ಗಜಲ್ ಗಳನ್ನು ರಚನೆ ಮಾಡಿದ್ದಾರೆ.ಕೆಲವು ಕಡೆ ರದೀಫ್ ಗಳು ಪುರ್ನಬಳಿಕೆಯಾಗಿವೆ.(ಗೆಳೆಯಾ,ಗೆಳತಿ,ಸಖ ಸಖಿ ,ಸಾಕಿ,ನಾನು ನೀನು ಹೀಗೆ…)ಕನ್ನಡ ಗಜಲ್ ಸಂಕಲನವಾದ ಕಾರಣ ಹಿಂದಿ,ಉದು೯ ಪದಗಳ ಬಳಿಕೆ ಕಡಿಮೆ ಮಾಡಬಹುದಿತ್ತು.ಕನ್ನಡದಲ್ಲಿ ಸಿಗಲಾರದ ಪದಗಳನ್ನು ನಾವು ಕನ್ನಡ ಗಜಲ್ಗೆ ಸಹಜವಾಗಿ ಹೊಂದಿಕೆಯಾಗುತ್ತಿದ್ದರೆ ಉದು೯,ಹಿಂದಿ ಪದಗಳನ್ನು ಬಳಿಸಿ ಗಜಲ್ ದ ಕೊನೆಗೆ ಅದರ ಅರ್ಥ ಬರೆದರೆ ಓದುಗರಿಗೆ ಅನುಕೂಲವಾಗುವುದು.ಒಟ್ಟಿನಲ್ಲಿ ಹೇಳುವುದಾದರೆ “ಶಮಾ ಗಜಲ್”ಸಂಕಲನ ಓದಿಸಿಕೊಂಡು ಹೋಗುತ್ತದೆ,ಓದುಗರಿಗೆ ತೃಪ್ತಿಕೊಡುತ್ತದೆ.

ನನಗೆ ಇಷ್ಟವಾದ ಕೆಲವು ಗಜಲ್ ಗಳ ದ್ವಿಪದಿಗಳು

ಬಣ್ಣ ಬೆಂಬತ್ತುವ ಪತಂಗಕೇನು ಗೊತ್ತು ಕ್ಷಣದ ಸುಖವೆಂದು
ಮನ ಸೋಲುವ ವೈಯಾರಿಗೇನು ಗೊತ್ತು ಮೋಸದ ಬಲೆಯೆಂದು”( ಗಜಲ್ ೬)

“ಮಬ್ಬು ಕಣ್ಣಿನ ಕನಸುಗಳೊಂದಿ ರೆಪ್ಪೆಗಳೆಲ್ಲಾ ತಣ್ಣಗಾದವು ಅವ್ವ
ತಗ್ಗು ದಿನ್ನೆಯ ದಿನಗಳೇ ಕಟ್ಟ ಕಡೆಗೆ ಉಸಿರಾದವು ಅವ್ವಾ ” (ಗಜಲ್ ೧೪)

“ಕರುಳು ಬಳ್ಳಿಗಳು ಯಶಸ್ಸಿಗೆ ತೊಡಕಾಗುವ ಕಾಲವಿದು
ನೆಟ್ಟ ಗಿಡಗಳು ಭೂತವಾಗಿ ಹೆದರಿಸುವ ಸಮಯವಿದು” (ಗಜಲ್ ೧೯)

“ಕಿಲಬುವ ಸಂಬಂಧಿಗಳ ಗೊಂದಲದಲ್ಲಿ ಸಿಕ್ಕು ಕೊನೆಯಾಗ ಬೇಕು
ಹಲಬುವ ಹಸಿವೆಯ ಸಂಕಟದ ಬಿಕ್ಕು ಕೊನೆಯಾಗ ಬೇಕು” (ಗಜಲ್ ೨೨)

“ನೀ ಬರದಿದ್ದರೆ ನಮ್ಮಿಬ್ಬರ ಮನದಲ್ಲಿ ನೆಮ್ಮದಿ ಎಲ್ಲಿದೆ
ಈ ಬಂಧ ಉಳಿಯದಿರೆ ಈ ಬಾಳಿನಲ್ಲಿ ನೆಮ್ಮದಿ ಎಲ್ಲಿದೆ” (ಗಜಲ್ ೨೬)

“ಬದುಕು ಬಂಧಿಖಾನೆ ಯಾಗಿರಲು ಮಜವೆಲ್ಲಿಹುದು ಗೆಳೆಯ
ಜೀವದಿಂದಿಟ್ಟು ಕೊಲ್ಲುವವರಿಗೆ ಸಜೆಯಲ್ಲಿಹುದು ಗೆಳೆಯ “( ಗಜಲ್ ೨೭)

“ಬಾಳ ಕಡಲ ತಡಿಯಲಿ ಬೆಳಕನರಿಸಿ ಕಾಯುತ್ತಿರುವೆ ನಿನಗಾಗಿ
ಕರಾಳ ರಾತ್ರಿಯಲಿಮನಗೆ ಮಿಂಚನಗಲಿ ಅಳುತ್ತಿರುವೆ ನಿನಿಗಾಗಿ” (ಗಜಲ್ ೩೪)

“ಬಾಲಬಡುಕರ ದುನಿಯಾದಲ್ಲಿ ಬಡವರಿಗೆ ನ್ಯಾಯ ಎಲ್ಲಿದೆ
ಕಾಲದ ತಿರುಗುಣಿಯಲ್ಲಿ ತಿರುಗುವವರಿಗೆ ನ್ಯಾಯ ಎಲ್ಲಿದೆ” (ಗಜಲ್ ೪೨)

“ನಗುವ ತುಟಿಯನು ದಾರ ವಿರದೆ ಹೊಲೆದೆಯಲ್ಲ
ಮಿಗುವ ಸುಖವ ದಯೆಯಿಲ್ಲದೆ ಹುಗಿದೆಯಲ್ಲ” (ಗಜಲ್ ೪೮)

“ಗಾಢ ಅಂಧಕಾರದಲಿ ನರಿಯೊಂದು ಊಳಿಡುತ್ತಿತ್ತು
ಅಮವಾಸ್ಯೆ ಯಲ್ಲಿ ಮೂಳೆ ತಡಿಕೆಯೊಂದು ಬೆತ್ತಲಾಗುತ್ತಿತ್ತು” (ಗಜಲ್ ೬೪)

“ದಾರ್ಶನಿಕ ನಾಮಾವಶೇಷ ಗಳ ಮುಂದೆ ಕುಳಿತು ಬಿಕ್ಕುತಿರುವೆ
ಬದ್ಧತೆಯಿಂದ ಸಮಾಜದಲ್ಲಿ ಎದೆಯ ಮಾತನು ಹುಡುಕುತಿರುವೆ” ( ಗಜಲ್ ೭೨)

ಇಂತಹ ಅನೇಕ ಮಿಸ್ರಾಗಳು ಓದುಗರ ಹೃದಯ ತಟ್ಟುತ್ತವೆ.ಚಿಂತನೆಗೆ ಹಚ್ಚುತ್ತವೆ,ಎಲ್ಲಾ ಮಿಸ್ರಾಗಳನ್ನು ವಿವರಿಸುತ್ತಾ ಹೋದರೆ ಲೇಖನ ಬಹಳ ದೊಡ್ಡ ದಾಗುತ್ತದೆ,ಉಳಿದಿದ್ದನ್ನು ಓದುಗರಿಗೆ ಬಿಟ್ಟಿದೆ.

ಶಮಾ ಗಜಲ್” ಸಂಕಲನದ ಮುಖ ಪುಟ ಚಿತ್ರ ಸೊಗಸಾಗಿದೆ.ಸಂಕಲನದ ಮುನ್ನುಡಿಯನ್ನು ಕವಿಗಳು ,ಕಾವ್ಯ ವಿಮರ್ಶತರು,ಗಜಲ್ ಕಾರರು,ಮತ್ತು ಕಾವ್ಯ ಮನೆ ಪ್ರಕಾಶಕರು ಆದ ಅಬ್ದುಲ್ ಹೈ ತೋರಣಗಲ್ಲು ಬಳ್ಳಾರಿ ಇವರು ಮೌಲಿಕವಾದ ಮುನ್ನುಡಿಯನ್ನು ಬರೆದು ಗಜಲ್ ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ.
ಬೆನ್ನುಡಿಯನ್ನು ಡಾ.ವೈ.ಎಂ. ಯಾಕೊಳ್ಳಿ ಸಾಹಿತಿಗಳು ಸವದತ್ತಿ ಯವರು ಬರೆದು ಬೆನ್ನು ತಟ್ಟಿದ್ದಾರೆ.ಅನೇಕ ಗಜಲ್ ಕಾರರು ಗಜಲ್ ಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. “ಶಮಾ ಗಜಲ್” ಸಂಕಲನವು ಎಲ್ಲರೂ ಓದುವ ಮತ್ತು ಸಂಗ್ರಹಣೆಗೆ ಯೋಗ್ಯವಾಗಿದೆ.ಶಮಾ ಜಮಾದಾರ ಇವರು ಭಾವ ತೀವ್ರತೆ ತುಂಬಿದ ,ಸಮಾಜಕ್ಕೆ ಪ್ರಜ್ಞೆ ಯನ್ನು ಮೂಡಿಸುವ ಮತ್ತು ಪ್ರೌಢತೆಯ ಗಜಲ್ ಗಳ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಹೆಚ್ಚು ಹೆಚ್ಚು ಕೊಡಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಹೇಳುವೆ.

ಪ್ರಭಾವತಿ ಎಸ್ ದೇಸಾಯಿ ವಿಜಯಪುರ
ಮೊ.೮೪೦೮೮೫೪೧೦೮

One thought on “ಶಮಾ ಗಜಲ್ ಗಳು

  1. ಪ್ರಭಾವತಿ ಅಮ್ಮನವರು ನನ್ನ ಗಜ಼ಲ್ ಸಂಕಲನದ ಬಗ್ಗೆ ಅತೀವ ಕಾಳಜಿಯಿಂದ ತಮ್ಮ ಹೃದಯದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು..

Comments are closed.

Don`t copy text!