ಡಾ. ಎಚ್. ನರಸಿಂಹಯ್ಯ
(ಜನ್ಮದಿನದ ನೆನಪಿಗಾಗಿ)
ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ. ಬದುಕು ಹಲವು ಬಾರಿ ನಾವೆಲ್ಲಿದ್ದೇವೆ ಎಂಬ ಬಗ್ಗೆ ಭಯ ಹುಟ್ಟಿಸುತ್ತದೆ. ಒಮ್ಮೆ ಒಂದು ಸಿರಿವಂತ ಕುಟುಂಬದ ವಿವಾಹ ಮಹೋತ್ಸವಕ್ಕೆ ಹೋಗಿದ್ದೆ. ಆ ಸಮಾರಂಭದಲ್ಲಿ ನೆರೆದಿದ್ದ ಊಹಿಸಲಸಾಧ್ಯವಾಗಿದ್ದ ಶ್ರೀಮಂತಿಕೆಯ ಪ್ರದರ್ಶನದಲ್ಲಿ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಅಯ್ಯೋ ನನ್ನಂತಹವನು ಇಲ್ಲಿ ಬರಬಾರದಿತ್ತು ಎಂಬ ಪ್ರಜ್ಞೆ ಇನ್ನಿಲ್ಲದಂತೆ ಭಾದಿಸತೊಡಗಿತು. ಇನ್ನೇನು ಹೊರಬಂದುಬಿಡೋಣ ಎಂದು ಬಾಗಿಲಕಡೆ ಮುಖ ಮಾಡಿದಾಗ ಅಲ್ಲಿ ಬರುತ್ತಿದ್ದರು ಹಳೆಯ ಖಾದಿ ಬಟ್ಟೆ ಧರಿಸಿದ್ದ ಸಂತರಂತೆ ಕಂಡ ಎಚ್. ನರಸಿಂಹಯ್ಯನವರು. ಒಬ್ಬ ಸೀದಾ ಸಾದಾ ವ್ಯಕ್ತಿ ನಮ್ಮ ಆಡಂಭರದ ನಡುವಿನ ಬದುಕಿನಲ್ಲಿ ಕೊಡುವ ಭರವಸೆಯ ಆ ಕ್ಷಣ ನನ್ನೊಡನೆ ಇನ್ನೂ ನಿರಂತರವಾಗಿ ಹಸಿರಾಗಿದೆ.
ಡಾ. ಎಚ್ ನರಸಿಂಹಯ್ಯನವರು 6 ಜೂನ್ 1920ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ. ತಂಗಿ ಗಂಗಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್.ಸಿ (ಆನರ್ಸ್) ಮತ್ತು ಎಂ.ಎಸ್.ಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
1946ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಹನ್ನೆರಡು ವರ್ಷಗಳು ಪ್ರಿನ್ಸಿಪಾಲರಾಗಿದ್ದರು. 1972ರಿಂದ 1977ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆಯಾಯಿತು. ಮುಂದಿನ ದಿನಗಳಲ್ಲಿ ಎಚ್. ಎನ್ ಅವರು ಕರ್ನಾಟಕದಲ್ಲಿನ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ಎಚ್. ಎನ್ ಅವರ ಇಡೀ ಜೀವನ ಶಿಕ್ಷಣಕ್ಕೆ ಮೀಸಲು. ಅವರು ಸರ್ವಸ್ವವನ್ನೂ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಕೊಟ್ಟಿದ್ದಾರೆ. ಆ ಸಂಸ್ಥೆಗಳಿಗೆ ಲಕ್ಷಾಂತರ ಹಣವನ್ನು ಸಾರ್ವಜನಿಕರಿಂದ ಸಂಗ್ರಹಮಾಡಿದ್ದಾರೆ. ಎಚ್. ಎನ್ ಅವರ ವಿಶೇಷ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಹಾ ಶಿಕ್ಷಣ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ.
ಎಚ್. ಎನ್. ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ 1946ರಿಂದ ಅವರು ನಿಧನರಾದ ದಿನ 31-ಜನವರಿ 2005ರವರೆಗೆ ನ್ಯಾಷನಲ್ ಕಾಲೇಜು ಹಾಸ್ಟಲ್ಲೇ ಅವರ ಮನೆ. ಒಟ್ಟು 62 ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ದಾಖಲೆ.
ತಮ್ಮ ವಿದ್ಯಾರ್ಥಿಗಳ ಪ್ರೀತಿಯ ‘ಎಚ್. ಎನ್’ ಪವಾಡಗಳನ್ನು ನಂಬಿರಲಿಲ್ಲ. ಆದರೆ ಅವರ ಬದುಕೇ ಒಂದು ಪವಾಡ. ಅವರ ಬದುಕು ಪ್ರತಿಭೆ, ಪರಿಶ್ರಮ ಮತ್ತು ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ ಶಿಲ್ಪಿ. ಕರ್ನಾಟಕದ ಪ್ರಮುಖ ಶಿಕ್ಷಣವೇತ್ತರೂ, ಗಾಂಧೀವಾದಿಗಳೂ, ಮಾನವೀಯ ಸಮಾಜಸುಧಾಕರೂ ಆಗಿ ಎಚ್. ಎನ್ ಮಾಡಿರುವ ಕೆಲಸ ಅಪಾರವಾದದ್ದು. ಅವರದು ನುಡಿದಂತೆ ನಡೆದ, ನಡೆದಂತೆ ನುಡಿದ ಜೀವನ.
ನರಸಿಂಹಯ್ಯನವರಂತಹ ಸತ್ಯನಿಷ್ಠರ ಬದುಕನ್ನು ಅವಲೋಕಿಸುವುದು ಭಯದ ವಿಚಾರ! ಸತ್ಯವಾದಿಗಳು ನಮ್ಮನ್ನು ನಾವೇ ನೋಡಿಕೊಳ್ಳಲು ಉಂಟುಮಾಡುವಷ್ಟು ಭಯ ಯಾವುದೇ ತೀವ್ರವಾದಿಯ ಬಂದೂಕಿನ ಭಯವನ್ನೂ ಮೀರಿಸುವಂತದ್ದು. ಅವರನ್ನು ನಾವು ಇಷ್ಟಪಟ್ಟಿದ್ದೇವೆ ಎಂದು ಹೇಳಬಹುದು. ಕೇವಲ ಎಚ್. ನರಸಿಂಹಯ್ಯನವರನ್ನು ಅಲ್ಲಲ್ಲಿ ನೋಡಿ, ಅವರ ಮಾತುಗಳನ್ನು ಕೇಳಿ ಅವರ ಬಗ್ಗೆ ಓದಿದ್ದೇನೆ ಅವು ನನ್ನ ಮನಸೆಳೆದಿವೆ ಎಂಬ ಮಾತ್ರಕ್ಕೆ ಅವರ ಬಗ್ಗೆ ನಾನೇ ಏನು ಹೇಳುವುದು ಎಂಬ ಚಿಂತನೆಯಲ್ಲಿ ‘ತೆರೆದ ಮನ’ ಪುಸ್ತಕವನ್ನು ಮತ್ತೊಮ್ಮೆ ಅವಲೋಕಿಸುತ್ತಿದ್ದಾಗ ಸ್ವಯಂ ಡಾ. ಎಚ್. ನರಸಿಂಹಯ್ಯನವರೇ ‘ಬದುಕು ನನಗೇನು ಕಲಿಸಿದೆ?” ಎಂದು ಹೇಳಿರುವುದು ಮನಸೆಳೆಯಿತು. ಅದನ್ನು ಇಲ್ಲಿ ಪ್ರಸ್ತುತಪಡಿಸುವುದು ಸಮಂಜಸವೆನಿಸಿತು. ಹಾಗಾಗಿ ಸ್ವಯಂ ಎಚ್. ಎನ್ ಅವರೆ ಹೇಳಿರುವ ‘ಬದುಕು ನನಗೇನು ಕಲಿಸಿದೆ?’ ಎಂಬ ಲೇಖನ ಇಲ್ಲಿ ತೆರೆದಿಡುತ್ತಿದ್ದೇನೆ.
“ಬದುಕು ನನಗೇನು ಕಲಿಸಿದೆ?” – ಡಾ. ಎಚ್ ನರಸಿಂಹಯ್ಯ.
ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಎಲ್ಲ ಕಲಿಕೆ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು, ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು.
ಸಿದ್ಧಾರ್ಥನ ಸಂದರ್ಭದಲ್ಲಿ ಆದದ್ದು ಹೀಗೆಯೇ. ಒಬ್ಬ ಮುದುಕ, ರೋಗಿ ಮತ್ತು ಒಂದು ಹೆಣ ಆತನಿಗೆ ಅರ್ಥಪೂರ್ಣ ಸಂದೇಶ ನೀಡಿತು. ಅಂತಿಮವಾಗಿ ಆತ ಬುದ್ಧನಾದ. ನಾವಾದರೋ ಮುದುಕರು, ರೋಗಿಗಳ ನಡುವೆಯೇ ಸಾವಿನಿಂದ ಆವೃತ್ತರಾಗಿದ್ದರೂ, ಪ್ರಭಾವಿತರಾಗದೆ ಬದುಕುತ್ತಿದ್ದೇವೆ.
ಮೂವತ್ತೈದು ವರ್ಷಗಳಿಗೂ ಮಿಕ್ಕಿ, ವಿದ್ಯಾರ್ಥಿಗಳ ಜೊತೆ ಕಾರ್ಯ ನಿರ್ವಹಿಸಿ, ಹಲವಾರು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ನನ್ನ ಅನುಭವದಂತೆ, ನಮಗೆ ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.
ಮೂವತ್ತು ವರ್ಷಗಳ ಹಿಂದೆ ನಾನು ನ್ಯಾಷನಲ್ ಕಾಲೇಜಿನ ಹಾಸ್ಟಲ್ ವಾರ್ಡನ್ ಆಗಿ, ಕಡ್ಡಾಯವಾಗಿದ್ದ ಮುಂಜಾನೆಯ ಪ್ರಾರ್ಥನೆಗೆ ಬೇಗ ಎಚ್ಚರಗೊಳ್ಳದ ಹಾಸ್ಟೆಲ್ ನಿವಾಸಿಗಳಿಗೆ ನಾಲ್ಕಾಣೆ ದಂಡ ವಿಧಿಸಿದ್ದೆ. ತನಗೆ ಖಂಡಿತ ಬೀಳಬಹುದಾದ ದಂಡದ ಮೊದಲ ಕಂತಾಗಿ ಹಾಸ್ಟಲ್ ನಿವಾಸಿಯೊಬ್ಬ ಪ್ರಾಮಾಣಿಕವಾಗಿ ನನಗೆ ಒಂದು ರೂಪಾಯಿ ಮುಂಗಡ ಕೊಟ್ಟಿದ್ದ. ದಂಡನಾಕ್ರಮಗಳ ಬಗ್ಗೆ, ಯೋಚಿಸದಾಗಲೆಲ್ಲಾ ಈ ಸರಳ ಘಟನೆ ನನ್ನನ್ನು ನಿಯಂತ್ರಿಸುತ್ತಿತ್ತು.
ಸಾಧಾರಣವಾಗಿ ಜನ ನಿರ್ಲಕ್ಷಿಸುವ ಒಂದು ಸಾಮಾನ್ಯ ದೃಶ್ಯ ನನ್ನನ್ನು ದಶಕಗಳಿಂದ ಕಾಡುತ್ತಿದೆ. ಕಸದ ತೊಟ್ಟಿಯ ಹಿಡಿ ಎಂಜಲಿಗಾಗಿ ಬೀದಿ ನಾಯಿಯ ಜೊತೆಗಿನ ಮನುಷ್ಯನ ಜಗಳ ನನ್ನ ಮನಸ್ಸಿನ ಮೇಲೆ ತೀವ್ರವಾದ ಕಳವಳಕಾರಿ ಪರಿಣಾಮವನ್ನು ಬೀರುತ್ತಲೇ ಇದೆ. ಕಡು ಬಡತನದ ಇಂಥ ದೃಷ್ಯಗಳು ನನ್ನಲ್ಲಿ ಯಾವಾಗಲೂ ಅಪರಾಧಿತ್ವದ ಭಾವನೆ ಬೆಳೆಸುತ್ತವೆ.
ನಾನು 13 ವರ್ಷದವನಾಗಿದ್ದಾಗ ಖಾದಿ ತೊಡಲು ಪ್ರಾರಂಭಿಸಿದೆ ಮತ್ತು ಈಗಲೂ ತೊಡುತ್ತಿರುವೆ. ರಾಷ್ಟ್ರೀಯತೆ ಕುರಿತು ನನ್ನ ವಿಚಾರಗಳಿಗೆ ಕುಮ್ಮಕ್ಕು ದೊರೆತದ್ದು ನಾನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ನನ್ನ ಬದುಕಿನ ಮೊದಮೊದಲ ವರ್ಷಗಳಲ್ಲಿ ತಮ್ಮ ಸರಳತೆ ಹಾಗೂ ದೃಢ ದೇಶ ಪ್ರೇಮಗಳಿಂದಾಗಿ ಗಾಂಧೀಜಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದರು. 1942 ನನ್ನ ಬದುಕಿಗೆ ತಿರುವು ತಂದ ವರ್ಷ.
ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಬಿ.ಎಸ್ಸಿ. (ಆನರ್ಸ್)ದ ಕಡೆಯ ವರ್ಷದಲ್ಲಿ ಓದುತ್ತಿದ್ದೆ. ಆಗಸ್ಟ್ 9, 1942 ರಂದು ತಾನು ತೊಡಗಬೇಕೆಂದಿದ್ದ `ಕ್ವಿಟ್ ಇಂಡಿಯಾ` ಚಳವಳಿಗೆ ಒಂದು ದಿನ ಮುಂಚೆ ಗಾಂಧೀಜಿ ಮತ್ತು ಉಳಿದ ಧುರೀಣರನ್ನು ಮುಂಬೈಯಲ್ಲಿ ಬಂಧಿಸಲಾಯಿತು. ದೇಶಾದ್ಯಂತ ಸ್ವಯಂ ಸ್ಪೂರ್ತಿಯ, ವ್ಯಾಪಕ ಚಳವಳಿ ಹರಡಿತ್ತು. ವ್ಯಾಸಂಗಕ್ಕೆ ಧಕ್ಕೆ ಒದಗಬಹುದು ಮತ್ತು ನನ್ನ ಭವಿಷ್ಯಕ್ಕೆ ಸಂಬಂಧಿಸಿದಂತೆ ಕತ್ತಲಾಳಕ್ಕೆ ಧುಮುಕುತ್ತಿರುವೆನೆಂದು ತಿಳಿದಿದ್ದರೂ ಸ್ವಾತಂತ್ರ್ಯ ಸಂಘರ್ಷದಲ್ಲಿ ತೊಡಗವುದೆಂದು ಬಲು ಹಿಂದೇಯೇ ನಿಶ್ಚಯಿಸಿದ್ದೆ. ಕಡು ಬಡತನದಿಂದ ಸೆಂಟ್ರಲ್‌ಕಾಲೇಜಿನ ಪ್ರಾಂಗಣವನ್ನು ನನ್ನ ಹಾದಿಯ ಅಂಗುಲ ಅಂಗುಲ ಹೋರಾಡುತ್ತಾ ತಲುಪಿದ್ದೆ. ಇಡಿ ದೇಶವೇ ಅಸಾದೃಶ್ಯವಾದ ಸಂಘರ್ಷದ ಹಿಡಿಯಲ್ಲಿರುವಾಗ ನನ್ನ ವೈಯಕ್ತಿಕ ಹಿತಸಾಧನೆಗಿಂತ ದೇಶಕ್ಕೆ ನಾನು ಸಲ್ಲಿಸಬೇಕಾದ ಕರ್ತವ್ಯವೇ ಮುಖ್ಯ ಎಂಬ ತೀರ್ಮಾನ ಕೈಗೊಂಡಿದ್ದು ಆಳವಾಗಿ ಯೋಚಿಸಿದ ನಂತರವೇ. ನನ್ನನ್ನು ಬಂಧಿಸಿ ಸೆಂಟ್ರಲ್ ಕಾಲೇಜು ರಸ್ತೆಯಾಚೆಗಿದ್ದ ಸೆಂಟ್ರಲ್ ಜೈಲಿನಲ್ಲಿ ಕೂಡಿಹಾಕಲಾಯಿತು.
ಸೆಂಟ್ರಲ್ ಕಾಲೇಜಿನಲ್ಲಿದ್ದಷ್ಟೇ ಖುಶಿಯಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದೆ. ಮೈಸೂರು ಜೈಲಿನಲ್ಲಿ ಖೈದಿಯಾಗಿ ಮೂರು ತಿಂಗಳು ಕಳೆದ ಮೇಲೆ ಡಿಸೆಂಬರ್‌ನಲ್ಲಿ ನನ್ನನ್ನು ಬಿಡುಗಡೆ ಮಾಡಿದರು. ಸೆರೆಮನೆವಾಸ ನನ್ನ ದೇಶಪ್ರೇಮದ ಭಾವನೆಗಳನ್ನು, ಗಾಂಧೀಜಿ ಮತ್ತು ಇತರ ನಾಯಕರ ಬಿಡುಗಡೆಯಾಗುವತನಕ ಹೋರಾಟವನ್ನು ಮುಂದುವರಿಸಬೇಕೆಂಬ ನಿರ್ಧಾರವನ್ನು ಬಲಗೊಳಿಸಿತು. ಬಹುತೇಕ ವಿದ್ಯಾರ್ಥಿಗಳು ಮತ್ತು ನನ್ನ ಸಹಕಾರಾಗೃಹವಾಸಿಗಳು ತಮ್ಮ ವ್ಯಾಸಂಗವನ್ನು ಪುನರಾರಂಭ ಮಾಡಿದರೂ ನಾನು ಕಾಲೇಜಿಗೆ ಹೋಗಲು ನಿರಾಕರಿಸಿದೆ.
1943 ಫೆಬ್ರವರಿಯಲ್ಲಿ ಪೂನಾದಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಐತಿಹಾಸಿಕ ಉಪವಾಸಕ್ಕೆ ಬೆಂಬಲವಾಗಿ, ಸರಕಾರದ ದಮನ ನೀತಿಯ ವಿರುದ್ಧವಾಗಿ, ನನ್ನ ಏಳು ಜನ ಗೆಳೆಯರೊಂದಿಗೆ 144ನೇ ವಿಧಿಯನ್ನುಲ್ಲಂಘಿಸಲೆಂದು ಪೂನಾಕ್ಕೆ ತೆರಳಿದೆ. ನಿರೀಕ್ಷಿಸಿದಂತೆ ನಮ್ಮೆಲ್ಲರನ್ನು ಬಂಧಿಸಿ ಗಾಂಧೀಜಿಯವರ ಎರಡನೇ ಮನೆಯಂತಿದ್ದ ಯರವಾಡ ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಿದರು. ಆ ಪ್ರಖ್ಯಾತ ಜೈಲಲ್ಲಿ 5 ತಿಂಗಳ ಬಂಧನ ಕಠಿಣಕರವಾಗಿತ್ತು. ಆದರೆ ಅದಕ್ಕೆ ಅದರದೇ ಆದ ಪ್ರತಿಫಲವಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸತ್ಯಾಗ್ರಹಿಗಳ ಒಡನಾಟದಿಂದ ನನ್ನ ದೃಷ್ಟಿಕೋನ ಹೆಚ್ಚು ದೃಢವಾಯಿತು. ಆಗ ನಾವು ನಡೆಸುತ್ತಿದ್ದ ಅರ್ಥಪೂರ್ಣ ಚರ್ಚೆಯಲ್ಲಿ, ನನ್ನ ಇತರ ಆಧ್ಯಯನದಲ್ಲಿ, ಹಿಂದಿಯಲ್ಲಿ ಪ್ರೇಮಚಂದರ, ಸಾಮಾಜಿಕ ಪ್ರಸ್ತುತತೆಯ ಅನೇಕ ಕಾದಂಬರಿಗಳ ಓದನ್ನು ಈಗಲೂ ನಾನು ನಿಚ್ಚಳವಾಗಿ ಸ್ಮರಿಸುತ್ತೇನೆ. ಸೆರೆಮನೆವಾಸ ಖೈದಿಗಳ ಮೇಲೆ ಯಾವಾಗಲೂ ತನ್ನದೇ ಆದ ವಿಶಿಷ್ಟ ಪರಿಣಾಮ ಬೀರುತ್ತದೆ.
ನನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ ಎರಡು ವರ್ಷಗಳ ನಂತರ 1944ರಲ್ಲಿ ಬಿ.ಎಸ್ಸಿ. (ಆನರ್ಸ್) ಯನ್ನು ಸೇರಿಕೊಂಡೆ. ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ತ್ಯಾಗೀಶಾನಂದಜೀ ಅವರು ನನ್ನ ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್‌ಸಿ. ಪದವಿ ಪೂರ್ಣಗೊಳಿಸುವವರೆಗೆ ಎರಡು ವರ್ಷಕಾಲ ಆಶ್ರಮದಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟರು. ಸ್ವಾಮೀಜಿಯವರು ಅಪಾರ ದೇಶಪ್ರೇಮಿ, ವಿಚಾರಪರ, ಕರುಣಾಮಯಿ ಹಾಗೂ ಸಹಾನುಭೂತಿಪರ ವ್ಯಕ್ತಿಯಾಗಿದ್ದರು. ಆಶ್ರಮದಲ್ಲಿ ನಾನು ಒಂದು ತರದ ‘ನಾನ್-ಕನ್‌ಫಾರ್ಮಿಸ್ಟ್’ ಆಗಿದ್ದರೂ ಸ್ವಾಮೀಜಿಯವರ ಪ್ರವಚನಗಳು ಮತ್ತು ಆಶ್ರಮ ಜೀವನ ನನ್ನ ಮೇಲೆ ಗಣನೀಯ ಪರಿಣಾಮ ಬೀರಿತು.
ಸ್ವಾಮೀಜಿಯವರ ಜೊತೆಗಿನ ಚರ್ಚೆಯಲ್ಲಿ ನಾನವರಿಗೆ ತುಂಬ ಕಸಿವಿಸಿಯುಂಟು ಮಾಡುವ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅತಾರ್ಕಿಕ ಊಹೆಗಳನ್ನಾಧರಿಸಿದ ಕೆಲವೊಂದು ಧಾರ್ಮಿಕ ತತ್ವಗಳ ವಿಚಾರದಲ್ಲಿ ಅವರೊಂದಿಗೆ ಭಿನ್ನಮತವಿರುತ್ತಿತ್ತು. ಬಡವರು ಮತ್ತು ಪತಿತರಿಗಾಗಿ ಮಿಡಿದ, ಉಸಿರುಗಟ್ಟಿಸುವ ಅರ್ಥಹೀನ ಆಚರಣೆ ಮತ್ತು ಮೂಢನಂಬಿಕೆಗಳನ್ನು ನಿಸ್ಸಂಯವಾಗಿ ತಿರಸ್ಕರಿಸಿದ, ವಿವೇಕಾನಂದರ ಉಪದೇಶಗಳ ನಿಕಟ ಪರಿಚಯವಾದದ್ದು ಆಶ್ರಮದಲ್ಲಿಯೇ.
11 ವರ್ಷಗಳ ಕಾಲ ಕಾಲೇಜಿನಲ್ಲಿ ಅಧ್ಯಾಪನ ಮಾಡಿದ ನಂತರ 1960ರಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಪಿ.ಎಚ್‌ಡಿ. ಪಡೆಯಲೆಂದು ನಾನು ಯು.ಎಸ್.ಎ ದಲ್ಲಿ ಮೂರು ವರ್ಷ ಇದ್ದೆ. 7 ವರ್ಷಗಳ ನಂತರ ಈ ದೇಶಕ್ಕೆ ಮತ್ತೊಮ್ಮೆ ಒಂದು ವರ್ಷದ ಮಟ್ಟಿಗೆ ವಿಸಿಟಿಂಗ್ ಪ್ರೊಪೆಸರ್ ಆಗಿ ಭೇಟಿಕೊಟ್ಟೆ. ಕುಂದುಕೊರತೆಗಳಿದ್ದಾಗ್ಯೂ ಅಮೇರಿಕಾದ ಶಿಕ್ಷಣ ಪದ್ಧತಿ ನನಗೆ ಹಿಡಿಸಿತು. ಪಠ್ಯಕ್ರಮದ ರೂಪಿಸುವಿಕೆ, ಬೋಧನೆ ಮತ್ತು ಮೌಲ್ಯಮಾಪನ ಆಯಾ ಅಧ್ಯಾಪಕರಿಂದಲೇ ನಡೆಯುತ್ತಿತ್ತು. ಪಠ್ಯಕ್ರಮ ಹೆಚ್ಚು ಪ್ರಸ್ತುತವೂ ಅರ್ಥಪೂರ್ಣವೂ ಆಗಿರುವುದರ ಜೊತೆಗೆ, ಮೇಲೆ ಹೇಳಿದ ಅಂಶ ಅಮೇರಿಕನ್ ಶಿಕ್ಷಣ ಪದ್ಧತಿಯ ವಿಶಿಷ್ಟ ಗುಣಗಳಲ್ಲೊಂದಾಗಿತ್ತು.
ಎಂದೂ ಒಬ್ಬ ಅಧ್ಯಾಪಕ ತರಗತಿಗೆ ತಡವಾಗಿ ಬರುವುದಿಲ್ಲ. ತರಗತಿಯನ್ನು ಬೇಗ ಬಿಡುವಂತಿಲ್ಲ. ಅಮೇರಿಕನ್ ಅಧ್ಯಾಪಕ ನನಗೆ ಕಂಡದ್ದು ಹೀಗೆ: “ಆತ್ಮಸಾಕ್ಷಿಗೆ ನಿಷ್ಠವಾಗಿರುವ ಆತ್ಮಗೌರವ ಮತ್ತು ಸ್ವಯಂಶಿಸ್ತಿಗೆ ಬೆಲೆ ಕೊಡುವ ತನ್ನ ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಸಮರ್ಥ ವ್ಯಕ್ತಿ.” ಟೆಲಿವಿಶನ್ ಸಂದರ್ಶನದಲ್ಲಿ ಪ್ರತಿಕಾ ವರದಿಗಾರನೊಬ್ಬ, ತತ್ತ್ವಶಾಸ್ತ್ರದ ಪ್ರೊಫೆಸರ್ ಒಬ್ಬರನ್ನು ‘ನಿಮ್ಮ ಅಭಿಪ್ರಾಯದಲ್ಲಿ ಅಮೇರಿಕಾದ ಹಿರಿಮೆ ಯಾವುದು?’ ಎಂದು ಪ್ರಶ್ನಿಸಿದಾಗ ತತ್‌ಕ್ಷಣವೇ ಬಂದ ಉತ್ತರ : ‘ಅಮೇರಿಕಾದ ಹಿರಿಮೆ, ಮೇಲ್ವಿಚಾರಣೆಯಿಲ್ಲದೆ ಕೆಲಸ ಮಾಡುವುದರಲ್ಲಿದೆ’. ಎಂಥ ವಿಶಿಷ್ಟ, ಅರ್ಥಪೂರ್ಣ ಉತ್ತರ! ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಕೆಲಸಗಾರರಿಗಿಂತ ಹೆಚ್ಚಿಗೆ ಮೇಲ್ವಿಚಾರಕರಿದ್ದಾರೆ.
ಸೋವಿಯತ್ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕಾಗಿ ಕೊಲಂಬಸ್‌ನ ಓಹಿಯೋ ಸ್ಟೇಟ್ ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಪ್ರೊ ಎಚ್. ಎಚ್ ನೀಲ್ಸನ್ ಅವರು ಅಮೆರಿಕನ್ ನಿಯೋಗದ ಸದಸ್ಯರಾಗಿ ಸೋವಿಯತ್ ರಷ್ಯಾಕ್ಕೆ ಭೇಟಿನೀಡಿ ಮರಳಿದ ನಂತರ ಕೊಟ್ಟ ಒಂದು ಹೇಳಿಕೆ ನನ್ನ ನೆನಪಿಗೆ ಬರುತ್ತದೆ. ರಷ್ಯನ್ನರ ಮಿಲಿಟರಿ ಶಕ್ತಿಗಿಂತ ಅವರ ಶಿಕ್ಷಣ ವ್ಯವಸ್ಥೆಗೆ ಅಮೇರಿಕನ್ನರು ಹೆಚ್ಚು ಹೆದರಬೇಕಾಗಿದೆ ಎಂದು ಹೇಳಿದರು. ಈ ಎರಡು ಭೀಮಶಕ್ತಿಗಳು ಶಿಕ್ಷಣಕ್ಕೆ ಕೊಟ್ಟಿರುವ ಅಪ್ರತಿಮ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಾದರೋ ಶಿಕ್ಷಣ ಅತ್ಯಂತ ನಿರ್ಲಕ್ಷಕ್ಕೆ ತುತ್ತಾದ ವಿಷಯ.
ಜೊತೆಗೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಧ್ಯಾಪಕ ಅತ್ಯಂತ ದುರ್ಬಲ ಕೊಂಡಿ ಎಂಬ ದೃಢ ಅಭಿಪ್ರಾಯ ನನ್ನದು. ಹಾಗೆಂದು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಪಣಾ ಮನೋಭಾವದ, ಉತ್ಸಾಹ ತುಂಬುವ ಮಹಾನ್ ಶಿಕ್ಷಕರ ಬಗ್ಗೆ ನನಗೆ ತಿಳಿದಿಲ್ಲವೆಂದಲ್ಲ. ಆದರೆ ಇಂಥ ಶಿಕ್ಷಕರ ಸಂಖ್ಯೆ ತುಂಬ ಚಿಕ್ಕದು ಮತ್ತು ಬೇಗನೆ ಮಾಯವಾಗುತ್ತಿರುವಂಥದು. ಅನೇಕ ಶಿಕ್ಷಕರು ನಿರ್ಲಕ್ಷ ಮನೋಭಾವದವರು, ಅಸಮರ್ಥರು ಮತ್ತು ಸ್ವಾರ್ಥಿಗಳು. ಇಂಥ ಅಯೋಗ್ಯ ಶಿಕ್ಷಕರಿಂದಾಗಿ ಎಂಥ ಒಳ್ಳೆಯ ಶಿಕ್ಷಣ ಪದ್ಧತಿಯೂ ಹಾಳಾಗುತ್ತದೆ.
ನಾನು ಪಾಲ್ಗೊಂಡ ಪ್ರತಿಯೊಂದು ಚಟುವಟಿಕೆಯಿಂದಲೂ ಯಥಾಶಕ್ತಿ ಕಲಿಯಲು ಪ್ರಯತ್ನಿಸಿದ್ದೇನೆ. ಇ.ಎ.ಎಸ್ ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರರೊಂದಿಗೆ ಟೆನಿಸ್‌ಬಾಲ್ ಕ್ರಿಕೆಟ್ ಆಡುವುದರೊಂದಿಗೆ ತೊಡಗಿ ಗಂಭೀರ ಕ್ರೀಡೆಗಳಾದ ಹಾಕಿ ಹಾಗೂ ಬ್ಯಾಸ್ಕೆಟ್ ಬಾಲನ್ನು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದ ತಂಡಗಳೊಂದಿಗೆ ಆಡಿದ್ದೇನೆ. ಯಶಸ್ಸು, ಅಪಯಸ್ಸುಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸಿದ್ದೇನೆ. ನನ್ನ ಶೋಧನೆ ಮತ್ತು ಸಂಕಟಗಳಲ್ಲಿ ಈ ಕ್ರೀಡಾ ಮನೋಭಾವವೇ ನನಗೆ ಬೆಂಬಲವಾಗಿತ್ತು.
ಬುದ್ಧ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಜವಹಾರ್‌ಲಾಲ್ ನೆಹರೂ ಮತ್ತು ಐನ್‌ಸ್ಟೀನ್‌ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಷ್ಟೇ ಸಾಧನೆಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶವಿದೆಯೆ, ಸಾವು ಬದುಕಿನ ಕೊನೆಯೆ, ಮರಣಾನಂತರವೂ ವ್ಯಕ್ತಿತ್ವ ಉಳಿಯಬಲ್ಲುದೆ, ಮುಂತಾದ ತತ್ವಶಾಸ್ತ್ರದ ಕೇವಲ ಇಳಿಗಾಲದ ಆಲೋಚನೆಗಳಲ್ಲ. ಧಾರ್ಮಿಕ ಸಾಹಿತ್ಯವನ್ನು ಸಾಕಷ್ಟು ವಿಸ್ತೃತವಾಗಿ ಅಧ್ಯಯನ ಮಾಡಿದರೂ, ಆಗಿಂದಾಗ್ಗೆ ಧಾರ್ಮಿಕ ವ್ಯಕ್ತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ನಾಸ್ತಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಈ ಮೂಲಭೂತ ಸಮಸ್ಯೆಗಳಿಗೆ ಸಮಾಧಾನಕರ ಉತ್ತರ ನನಗೆ ದೊರೆತಿಲ್ಲ. ಆದರೆ ಧರ್ಮ ಮತ್ತು ದೇವರನ್ನು ಶೋಷಣೆ ಹಾಗೂ ವ್ಯಾಪಾರೀ ಸಿದ್ಧಾಂತಗಳ ಸಾಧನವಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಯಾವುದೇ ಧರ್ಮಗ್ರಂಥ ದೈವೋಕ್ತವೆಂದಾಗಲಿ, ಅಧಿಕೃತವೆಂದಾಗಲಿ ಅಥವಾ ಎಲ್ಲ ಕಾಲಕ್ಕೂ ಪ್ರಸ್ತುತವೆಂದಾಗಲಿ ನಾನು ಪರಿಗಣಿಸುವುದಿಲ್ಲ. ಅತ್ಯಂತ ಅಮಾನವೀಯ ಹಾಗೂ ನ್ಯಾಯ ಬಾಹಿರವಾದ ಜಾತಿ ಪದ್ಧತಿಗೆ ಹಿಂದೂ ಧರ್ಮ ಮನ್ನಣೆ ಕೊಟ್ಟಿರುವುದು ನಾಚಿಕೆಯ ಅಪಮಾನದ ಸಂಗತಿ. ತನ್ನ ಕೆಲವು ತತ್ವಗಳಲ್ಲಿ ಹಿಂದೂ ಧರ್ಮ ತುಂಬಾ ಆಧ್ಯಾತ್ಮಿಕ. ಆದರೆ ಬಹುತೇಕ ಹಿಂದೂ ಆಚರಣೆಗಳು ಹೆಚ್ಚೂ ಕಡಿಮೆ ಭೌತವಾದಿಯಾಗಿವೆ.
ಜನರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ವಿಧಿವಾದದಲ್ಲಿ ಪರಿಣಮಿಸಿದೆ. ಇದನ್ನು ಜನತೆಯ ಮನಸ್ಸಿನಿಂದ ಕಿತ್ತೊಗೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಮನುಷ್ಯನೇ ತನ್ನ ವಿಧಿಯ ಯಜಮಾನ ಮತ್ತು ಭವಿಷ್ಯದ ರೂವಾರಿ ಎಂಬ ಅಂಶವನ್ನು ಜನತೆಗೆ ತಿಳಿಯಹೇಳಬೇಕು. ಬೇರು ಬಿಟ್ಟಿರುವ ವಿಧಿವಾದೀ ಧಾರ್ಮಿಕ ಅಭಿಪ್ರಾಯಗಳು, ಅವೈಚಾರಿಕ ಅಂಧಶ್ರದ್ಧೆಯ ಆಚರಣೆಗಳು ಮತ್ತು ಪೂರ್ತಿ ಅವೈಜ್ಞಾನಿಕವಾಗಿರುವ ಜ್ಯೋತಿಷ್ಯದಲ್ಲಿನ ನಂಬಿಕೆ – ಇವೆಲ್ಲದರ ಹಿಡಿತ ನಮ್ಮ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿನ ಆಮೂಲಾಗ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಅಡ್ಡ ಬಂದಿದೆ.
ಅಪ್ರಿಯವಾದ ಉದ್ಧೇಶಗಳಿಗಾಗಿ ಹೋರಾಡಲು ಮತ್ತು ಪ್ರವಾಹದ ವಿರುದ್ಧ ಈಜಲು ಯತ್ನಿಸಿದ್ದೇನೆ. ಆರ್ಥಿಕ ಬದಲಾವಣೆಯುಂಟುಮಾಡುವುದು, ಅನಾದಿ ಕಾಲದಿಂದ ಬಂದ ಸಾಂಪ್ರದಾಯಿಕ ಆಚರಣೆಗಳು ಮತ್ತು ಆಳಬೇರು ಬಿಟ್ಟ ಮೂಢನಂಬಿಕೆಗಳ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚು ಅಪ್ರಿಯವಲ್ಲ.
ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ. ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ. ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು- ಅಮಾನವೀಯ, ಅಪ್ರಾಮಾಣಿಕ, ಆತ್ಮ ಕೇಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಗಿಂಥ ಉತ್ತಮನೆಂದು ಪರಿಗಣಿಸುತ್ತೇನೆ. ದೇವರಲ್ಲಿ ನಂಬಿಕೆ ವಿನಾಶಕಾರಿಯಲ್ಲ. ದೇವರು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರವೇಶಿಸುತ್ತಾನೆಯೇ ಎಂಬುದು ನಿರ್ಣಾಯಕ ಅಂಶ.
ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ನನಗೆ ದೃಢವಾದ ನಂಬಿಕೆ. ಸಮಾಜವನ್ನು- ಮುಖ್ಯವಾಗಿ ಧರ್ಮವನ್ನು ಪರಿಷ್ಕರಿಸಲು, ರೂಪಾಂತರಿಸಲು ವೈಜ್ಞಾನಿಕ ವಿಧಾನ ಅತ್ಯಂತ ಪ್ರಬಲ ಸಾಧನ ಎಂದು ನನಗನಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಯಾಗಿ ಅದರ ಇತಿಮಿತಿಗಳು ನನಗೆ ಗೊತ್ತು. ಭಯ ಹಾಗೂ ಸ್ಫೂರ್ತಿಯನ್ನು ತುಂಬುವ ವಿಶ್ವದ ಅಗಾಧತೆ, ಅದರ ಸೂಕ್ಷ್ಮಗಳ ನಿಗೂಢತೆಯೂ ನನಗೆ ತಿಳಿದಿದೆ.
ಏಕಕೋಶ ಜೀವಿ ಅಮೀಬಾದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಙ್ಮೂಢಗೊಳಿಸುವಂತದ್ದು ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆಗೊಳಿಸುತ್ತದಾದರೂ ಈ ಎಲ್ಲ ವಿವಾದಗಳ, ನಿಗೂಢಗಳ, ಒಗಟುಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಷ್ಟಿಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದೇ ಕಾಲಾನುಕಾಲದಿಂದ ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಕೆಡುಕುಗಳಿಗೆ ಪರಿಹಾರ ಎಂಬುದು ನನ್ನ ಬಲವಾದ ಅಭಿಪ್ರಾಯ.
ಎಚ್. ನರಸಿಂಹ ಎಂಬ ಮಹಾನ್ ಚೇತನಕ್ಕೆ ನನ್ನ ನಮನ.
– ‘ಕನ್ನಡ ಸಂಪದ’ದಿಂದ
ಖಾದಿ ಸಂತರ ಬದುಕಿನ ಬಗೆಗೆ ತುಂಬಾ ಒಳ್ಳೆಯ ಲೇಖನ.